ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳ ಜೀವ ಪಣಕ್ಕಿಡದಿರಿ...

ಕೋವಿಡ್‌ ಸೋಂಕಿನಿಂದ ಮಕ್ಕಳನ್ನು ಪಾರು ಮಾಡಲು ತಕ್ಷಣವೇ ಸರ್ಕಾರ ಯುದ್ಧೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ
Last Updated 3 ಜೂನ್ 2021, 18:46 IST
ಅಕ್ಷರ ಗಾತ್ರ

‘ಕೋವಿಡ್ ಮೂರನೆಯ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ’ ಎಂದು ಕೆಲ ತಜ್ಞವೈದ್ಯರು ಹೇಳುತ್ತಿದ್ದಾರೆ. ಇನ್ನೊಂದೆಡೆ, ‘ಇದು ಮಕ್ಕಳ ಮೇಲೆ ಬೀರುವ ಪರಿಣಾಮ ಕಡಿಮೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳುತ್ತಿದೆ. ಆದರೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ‘ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆಗಳು ನಡೆಯುತ್ತಿದ್ದು ಯಾವುದನ್ನೂ ಅಧಿಕೃತವಾಗಿ ಸ್ಪಷ್ಟಗೊಳಿಸಲಾಗದ ಕಾರಣ, ಕೇಂದ್ರ ಹಾಗೂ ರಾಜ್ಯಗಳು ಮಕ್ಕಳು ಮತ್ತು ಶಿಶುಗಳ ರಕ್ಷಣೆಗೆ ಅಗತ್ಯವಿರುವ ಸಿದ್ಧತೆ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದೆ. ನಿಜಕ್ಕೂ ಆಗಬೇಕಿರುವುದು ಇದೇ!

ಕೋವಿಡ್ ಎರಡನೇ ಅಲೆಯ ತೀವ್ರತೆಯ ಕುರಿತು ತಜ್ಞರು ಎಚ್ಚರಿಸಿದ್ದರೂ ತಕ್ಕಷ್ಟು ವೈದ್ಯಕೀಯ ಸಿದ್ಧತೆ ನಡೆಸದ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೊಡ್ಡ ದುರಂತಕ್ಕೆ ತಲೆಯೊಡ್ಡಿದ್ದೇವೆ. ಸಹಸ್ರಾರು ಜೀವಗಳು ಬಲಿಯಾಗಿವೆ. ಆದರೆ ಇಂತಹ ನಿರ್ಲಕ್ಷ್ಯ ಮತ್ತು ಊಹಾಪೋಹಗಳನ್ನು ಆಧರಿಸಿ ಜೀವವನ್ನು ಪಣಕ್ಕಿಟ್ಟು ಉಡಾಫೆ ಮಾಡುವುದನ್ನು ಈ ಬಾರಿ ಮಕ್ಕಳ ವಿಷಯಕ್ಕಂತೂ ಸಹಿಸಲು ಸಾಧ್ಯವೇ ಇಲ್ಲ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ 18 ವರ್ಷದೊಳಗಿನ ಒಂದು ಲಕ್ಷದಷ್ಟು ಮಕ್ಕಳು ಕೋವಿಡ್ ಸೋಂಕಿಗೂ ಕೆಲವು ಮಕ್ಕಳು ಸಾವಿಗೂ ಈಡಾಗಿದ್ದಾರೆ. ಜೊತೆಗೆ ಸದ್ಯ ರಾಜ್ಯದಲ್ಲಿ ಆರು ವರ್ಷದೊಳಗಿನ 4.43 ಲಕ್ಷ ಮಕ್ಕಳು ಅಪೌಷ್ಟಿಕತೆಯ ಸುಳಿಯಲ್ಲಿರುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶದಿಂದ ತಿಳಿದುಬರುತ್ತದೆ (ಪ್ರ.ವಾ., ಮೇ 21).

ಅಪೌಷ್ಟಿಕತೆ ಸಮಸ್ಯೆ ಹೆಚ್ಚಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಅವರಿಗೆ ಸೋಂಕು ತಗಲುವ ಮತ್ತು ಅಪಾಯಕಾರಿ ಹಂತವನ್ನು ತಲುಪುವ ಸಾಧ್ಯತೆ ಹೆಚ್ಚು ಎಂಬುದ ನ್ನಂತೂ ಎಲ್ಲ ತಜ್ಞರು ದೃಢಪಡಿಸಿದ್ದಾರೆ. ಇದು ನಿಜಕ್ಕೂ ಆತಂಕಕಾರಿ.

ಹೀಗಾಗಿ, ಸೋಂಕಿಗೀಡಾಗಬಹುದಾದ ಸಾಧ್ಯತೆ ಇರುವ ದುರ್ಬಲ ಮಕ್ಕಳನ್ನು ರಕ್ಷಿಸಲು ತಕ್ಷಣವೇ ಯುದ್ಧೋಪಾದಿಯಲ್ಲಿ ಸರ್ಕಾರ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ:

*ಪ್ರತೀ ಮಗುವನ್ನು ಅಪೌಷ್ಟಿಕತೆಯಿಂದ ಹೊರ ತರಲು ಈಗಾಗಲೇ ಇರುವ ಯೋಜನೆಯೊಂದಿಗೆ ತುರ್ತು ವಿಶೇಷ ಕಾರ್ಯಯೋಜನೆಯನ್ನು ರೂಪಿ ಸಲು ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಸಂಬಂಧಿಸಿದ ಇಲಾಖೆ ಮತ್ತು ಆಸಕ್ತ ಸಾಮಾಜಿಕ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು, ಮಕ್ಕಳ ತಜ್ಞರು, ಮಾನಸಿಕ ತಜ್ಞರು ಹಾಗೂ ದಾನಿಗಳನ್ನು ಒಳಗೊಂಡ ಸಮಿತಿಯೊಂದನ್ನು ತಕ್ಷಣವೇ ರಚಿಸಿ, ಅದರ ಸಲಹೆಯನ್ನು ಆಧರಿಸಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು.

*ವಿಭಿನ್ನ ಆರೋಗ್ಯ ಸಮಸ್ಯೆ, ಅಪೌಷ್ಟಿಕತೆ ಮತ್ತು ರಕ್ತಹೀನತೆಯ ತೀವ್ರತೆಯ ಆಧಾರದಲ್ಲಿ ಮಕ್ಕಳನ್ನು ಮೂರು ವಿಭಾಗ ಮಾಡಿ, ತುರ್ತು ವೈದ್ಯಕೀಯ ಅವ ಶ್ಯಕತೆಯ ಆದ್ಯತೆಯ ಮೇಲೆ ಪ್ರತೀ ಮಗುವನ್ನು ವೈದ್ಯರ ವೈಯಕ್ತಿಕ ನಿಗಾದಲ್ಲಿ ಇರಿಸಬೇಕು. ಮಗುವಿನ ತಪಾಸಣೆ ನಂತರ, ಅದರ ಆರೋಗ್ಯ ಸ್ಥಿತಿಯನ್ನು ಅನುಸರಿಸಿ ವೈದ್ಯರು ಪ್ರತ್ಯೇಕ ಪೌಷ್ಟಿಕಾಂಶದ ಟಾನಿಕ್, ಮಾತ್ರೆ ಮತ್ತು ಆಹಾರವನ್ನು ಸೂಚಿಸಬೇಕು. ಮಗುವಿನ ಆರೋಗ್ಯ ಸ್ಥಿತಿ, ನೀಡಲಾಗಿರುವ ಚಿಕಿತ್ಸೆ, ತೆಗೆದುಕೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮಗುವಿನ ಹೆಸರಲ್ಲಿ ಕಡತ ರೂಪಿಸಿ ನಮೂದಿಸಬೇಕು ಮತ್ತು ಈ ಕುರಿತು ಪೋಷಕರಿಗೆ ಅವಶ್ಯಕ ಎಚ್ಚರಿಕೆ ನೀಡಬೇಕು. ಈ ಯೋಜನೆಯ ಅನುಷ್ಠಾನಕ್ಕೆ ವೈದ್ಯರು, ನರ್ಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಜೊತೆಗೆ ಆಸಕ್ತ ಸ್ವಯಂಸೇವಕರನ್ನೂ ಒಳಗೊಂಡು ವಿಕೇಂದ್ರೀಕೃತ ಕಾರ್ಯವಿಧಾನವನ್ನು ತಕ್ಷಣವೇ ರೂಪಿಸಬೇಕು. ಇದರ ಮೇಲ್ವಿಚಾರಣೆಯ ಜವಾಬ್ದಾರಿ ಯನ್ನು ಕಡ್ಡಾಯವಾಗಿ ಉನ್ನತಾಧಿಕಾರಿಗಳಿಗೆ ವಹಿಸಬೇಕು.

*ಕೋವಿಡ್ ಸೋಂಕಿಗೆ ಒಳಗಾಗದಂತೆ ಮುನ್ನೆ ಚ್ಚರಿಕೆ ವಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮುದ್ರಿಸಿ, ಪೋಷಕರು ಮತ್ತು ಕಾರ್ಯಯೋಜನೆಯ ಸಿಬ್ಬಂದಿಗೆ ಹಂಚಬೇಕು. ಅದನ್ನು ಕಡ್ಡಾಯವಾಗಿ ಅನುಸರಿಸಲು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು.

*ಅಂಚಿಗೆ ಒತ್ತರಿಸಲ್ಪಟ್ಟ, ನಿರ್ಗತಿಕ, ಬಡತನದ ಕುಟುಂಬದಲ್ಲಿರುವ, ಆರೋಗ್ಯ ಸಮಸ್ಯೆ ಇರುವ ಮಗುವನ್ನು ತಕ್ಷಣವೇ ಗುರುತಿಸಿ, ಮಗುವಿಗೆ ಸರ್ವ ತೋಮುಖ ಆರೈಕೆ ಪ್ರಾರಂಭಿಸಬೇಕು.

*ಪ್ರತೀ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರವೂ ಮಕ್ಕಳ ಚಿಕಿತ್ಸೆಗಾಗಿ ಸರ್ವ ಸುಸಜ್ಜಿತಗೊಳ್ಳಬೇಕು. ಮಕ್ಕಳಿಗೆ ಅವಶ್ಯಕ ವೆಂಟಿಲೇಟರ್, ಆಕ್ಸಿಜನ್, ಐಸಿಯು ಬೆಡ್ ಇನ್ನಿತರ ವೈದ್ಯಕೀಯ ಸೌಲಭ್ಯಗಳನ್ನು ಗರಿಷ್ಠ ಪ್ರಮಾಣಕ್ಕೆ ಹೆಚ್ಚಿಸಬೇಕು.

*ಪ್ರತೀ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ಮಕ್ಕಳ ತಜ್ಞರು, ವೈದ್ಯರು, ನರ್ಸ್ ಮತ್ತು ಸೇವಾ–ತಾಂತ್ರಿಕ ಸಿಬ್ಬಂದಿಯನ್ನು ತುರ್ತಾಗಿ ನೇಮಿಸಬೇಕು.

*ಮಕ್ಕಳ ಕೋವಿಡ್ ಸಮಸ್ಯೆ ಸಂಬಂಧಿತ ವೈದ್ಯಕೀಯ ಸಲಹೆ ಪಡೆಯಲು, 24 ಗಂಟೆ ಕಾರ್ಯ ನಿರ್ವಹಿಸುವ ವಿಕೇಂದ್ರೀಕೃತ ಆರೋಗ್ಯ ಸಹಾಯವಾಣಿಯನ್ನು ಆರಂಭಿಸಬೇಕು.

*ಅಪೌಷ್ಟಿಕತೆ ಮತ್ತು ಅನಾರೋಗ್ಯಕ್ಕೆ ಒಳ ಗಾಗುವ ಸಾಧ್ಯತೆ ಇರುವ ಸರ್ಕಾರಿ ಮತ್ತು ಖಾಸಗಿ ಮಕ್ಕಳ ಅನಾಥಾಶ್ರಮಗಳು, ದತ್ತು ಕೇಂದ್ರಗಳು, ಬಾಲ ಮಂದಿರಗಳು, ವೀಕ್ಷಣಾಮಂದಿರ, ವಸತಿಯುತ ಶಾಲೆಗಳಲ್ಲಿನ ಅಂಗವಿಕಲ ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಅವಶ್ಯಕತೆ ಇರುವ ಮಗುವಿಗೆ ನಿಯಮಿತ ಮತ್ತು ತುರ್ತಾಗಿ ವೈದ್ಯಕೀಯ ಸೌಲಭ್ಯ ನೀಡಲು ಪ್ರತ್ಯೇಕ ತಂಡಗಳನ್ನು ರಚಿಸಿ, ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT