ರಂಗಶಿಬಿರಕ್ಕೇಕೆ ರಂಗಿನ ಪ್ರಚಾರ?

ಮಂಗಳವಾರ, ಏಪ್ರಿಲ್ 23, 2019
29 °C

ರಂಗಶಿಬಿರಕ್ಕೇಕೆ ರಂಗಿನ ಪ್ರಚಾರ?

Published:
Updated:
Prajavani

ಈಗ ಮಕ್ಕಳಿಗಾಗಿ ರಜಾ ಕಾಲದ ಶಿಬಿರಗಳು ಆರಂಭವಾಗಿವೆ. ಮೊದಮೊದಲು ಈ ಶಿಬಿರ ಮಾಡುವುದರ ಬಗ್ಗೆ ಹೆಚ್ಚು ಒಲವು ಇರುತ್ತಿತ್ತು. ತಂದೆತಾಯಿಗಳ ಮೂಲಕವೋ ಅಥವಾ ಭವಿಷ್ಯದಲ್ಲಿ ಆ ಮಗುವಾದರೂ ರಂಗಭೂಮಿಯ ಮೂಲಕ ಜಗತ್ತನ್ನು ನೋಡಬಲ್ಲದಾಗುತ್ತದೆ ಎಂಬ ಆಸೆ ಇತ್ತು. ಜೊತೆಗೆ ಈ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರೇಕ್ಷಕ ವರ್ಗ ಹೆಚ್ಚಾಗುತ್ತದೆ, ಒಂದಷ್ಟು ವೇದಿಕೆಗಳು ಸೃಷ್ಟಿ ಆಗುವ ಮೂಲಕ ನಾಟಕ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುತ್ತದೆ ಅಂದುಕೊಳ್ಳುತ್ತಿದ್ದೆ. ಹಾಗೆಯೇ ಕೆಲವು ಕಾಲ ಮಕ್ಕಳ ರಂಗಭೂಮಿಯ ಮೂಲಕ ಕೆಲವೊಂದಷ್ಟು ಬದಲಾವಣೆಗಳು ಕೂಡ ಆದವು ಎಂಬುದರಲ್ಲಿ ಎರಡು ಮಾತಿಲ್ಲ. ಶಿಕ್ಷಣದಲ್ಲಿಯೂ ಸಣ್ಣ ಮಟ್ಟದಲ್ಲಿ ಬದಲಾವಣೆ ಆದಂತೆ ತೋರಿತು. ಯಾವಾಗ ಈ ಬೇಸಿಗೆ ಶಿಬಿರಗಳನ್ನು ಆದಾಯದ ಮೂಲವೆಂಬಂತೆ ವ್ಯಾವಹಾರಿಕವಾಗಿ ನಿರ್ವಹಿಸಲು ಆರಂಭಿಸಿದೆವೋ ಆಗ ಸಿನಿಮಾ, ಧಾರಾವಾಹಿ ಕಲಾವಿದರ ಹೆಸರು ಬಳಸಿಕೊಂಡು ಆಕರ್ಷಿಸುವ ಪರಿಪಾಟ ಶುರುವಾಯಿತು. ಈ ಆಕರ್ಷಣೆ ಇಂದು ರಂಗಭೂಮಿಯನ್ನೇ ಮಕ್ಕಳ ದೃಷ್ಟಿಯಲ್ಲಿ ಜಾಳಪೋಳ ಆಗಿ ಬಿಂಬಿಸುವಲ್ಲಿಗೆ ಬಂದು ನಿಂತಿದೆ ಅನಿಸುತ್ತಿದೆ.

ಶಿಬಿರದ ಆರಂಭದ ಪಾಂಪ್ಲೆಟ್ ಹೇಗಿರುತ್ತದೆ ಅಂದರೆ ‘ನಿಮ್ಮ ಮಕ್ಕಳು ಡ್ರಾಮಾ ಜೂನಿಯರ್ಸ್‌ಗೆ ಹೋಗಬೇಕೇ...! ನಮ್ಮ ಶಿಬಿರದಲ್ಲಿ ಮಜಾಭಾರತ ಖ್ಯಾತಿಯ ಇಂಥವರು ಬಂದು ಅಭಿನಯ ಕಲಿಸಿಕೊಡುತ್ತಾರೆ...! ಕಾಮಿಡಿ ಕಿಲಾಡಿ ಖ್ಯಾತಿಯ... ಈ ಇಂಥವರು ಅಭಿನಯ ಕಲಿಸಿಕೊಡುತ್ತಾರೆ. ಸಿನಿಮಾ ಸ್ಟಾರ್ ಶಿಬಿರಕ್ಕೆ ಬರುತ್ತಾರೆ. ಧಾರಾವಾಹಿಯ ಈ ಅಭಿನಯ ಚತುರ ಶಿಬಿರದಲ್ಲಿ ಪಾಠ ಮಾಡುತ್ತಾರೆ ಎಂದೆಲ್ಲ ಪ್ರಚಾರ ಮಾಡುವ ಮೂಲಕ ಈ ಶಿಬಿರಗಳು ಏನು ಮಾಡಹೊರಟಿವೆ ಎಂಬುದೇ ಯಕ್ಷಪ್ರಶ್ನೆ. ಮಕ್ಕಳ ಕಲ್ಪನಾಶಕ್ತಿ ಇಮ್ಮಡಿಸಲು ಯಾವ ಶಿಬಿರಗಳು ಸಹಾಯಕವಾಗಲಿದ್ದವೋ ಅಂಥ ಶಿಬಿರಗಳು ಈಗ ಸಮುದಾಯಕ್ಕೆ ರಂಗಶಿಬಿರದ ಮೂಲಕ ಏನನ್ನು ಹೇಳಹೊರಟಿವೆ? ಇಡೀ ಶಿಬಿರದ ವಿನ್ಯಾಸಗಳು ಬಹುತೇಕ ಕರ್ನಾಟಕದಾದ್ಯಂತ ಒಂದೇ ಮಾದರಿಯವು ಆಗಿರುವುದರಿಂದ, ಆ ಸಿದ್ಧ ಚೌಕಟ್ಟಿನಾಚೆ ಮಕ್ಕಳ ಮನೋವಿಕಾಸ ಹೇಗೆ ಬೆಳೆಯುತ್ತದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದೋ ನಾ ಕಾಣೆ. ರಂಗಾಯಣದ ಶಿಬಿರಗಳಲ್ಲೂ ಏಕತಾನತೆ ಹೊರತು, ಮಕ್ಕಳ ದೃಷ್ಟಿಯಲ್ಲಿ ಆರಂಭ ವಾಗಿದ್ದ ಶಿಬಿರದ ವಿನ್ಯಾಸದಲ್ಲಿ ಹೊಸ ಬದಲಾವಣೆ ರೂಢಿಸಿಕೊಂಡಿರುವುದಂತೂ ಇಲ್ಲವೇ ಇಲ್ಲ.

ಅದೇ ಹತ್ತು-ಹದಿನೈದು ಮಾದರಿಯ ಕಲಿಕೆಗಳನ್ನು ಮಕ್ಕಳು ಬೇಸಿಗೆ ರಜೆಯಲ್ಲಿ ಕಲಿಯುತ್ತಾರೆ ಎಂಬ ಕಾರಣಕ್ಕಷ್ಟೇ ಬಹುತೇಕ ತಂದೆತಾಯಿ ಸೇರಿಸುವುದಿಲ್ಲ. ಮನೆಯಲ್ಲಿ ಒಂಟಿಯಾಗಿರುವ ಮಕ್ಕಳು ಬೇರೆಬೇರೆ ವಯೋಮಾನದವರೊಂದಿಗೆ, ಬೇರೆಬೇರೆ ಸಮುದಾ ಯದ ಮಕ್ಕಳೊಟ್ಟಿಗೆ (ಯಾಕೆಂದರೆ ಈಗ ಕೆಲವು ಶಾಲೆಗಳಲ್ಲೂ ಜಾತಿ-ಧರ್ಮ ಕೇಂದ್ರಿತ ಪ್ರವೇಶಗಳು ಆಗುತ್ತಿವೆ) ಬೆರೆಯುತ್ತಾರೆ. ಆಟವಾಡುತ್ತ ತಮ್ಮ ಸಂವೇದನೆಯನ್ನು ಚುರುಕುಗೊಳಿಸಿಕೊಳ್ಳುತ್ತಾರೆ ಎಂಬ ಆಶಯವೂ ಪಾಲಕರಲ್ಲಿ ಇರುತ್ತದೆ ಎಂದು ನಂಬಿದ್ದೇನೆ. ಇನ್ನು ಕೆಲವು ಪಾಲಕರಂತೂ ಈ ಬೇಸಿಗೆ ಕಾಲದ ರಜೆಯಲ್ಲಿ ಟೈಂಪಾಸ್ ಮಾಡಲಿ ಅಂತಲೂ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸುವವರಿದ್ದಾರೆ. ಕೆಲವರು ಆಸಕ್ತಿಗೆ ಅನುಸಾರವಾಗಿ, ಊಟದಲ್ಲಿ ಉಪ್ಪಿನಕಾಯಿಯ ಹಾಗೆ ಕಲೆಯ ಅಭಿರುಚಿಯೂ ಮಕ್ಕಳಿಗೆ ಬರಬೇಕೆಂದು ಸೇರಿಸುವವರೂ ಇದ್ದಾರೆ. ಅವೆಲ್ಲವೂ ಈ ಬಾಲ್ಯಕ್ಕೆ ಮಾತ್ರ ಸೀಮಿತ, ಬದುಕಿಗಲ್ಲ. ಅದೂ ಶಾಲೆಯ ರಜಾ ಅವಧಿಯಲ್ಲಿ ಮಾತ್ರ ಇಂಥವೆಲ್ಲ. ಒಮ್ಮೆ ಶಾಲೆ ಶುರುವಾದರೆ ಮಕ್ಕಳ ಆಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇದೆಲ್ಲವೂ ಹಾಗಿರಲಿ... ಸದಾ ಚಲನಶೀಲರಾದ ರಂಗಕರ್ಮಿಗಳು ರಂಗಶಿಬಿರಗಳನ್ನು ಭಾವಿಸಿಕೊಳ್ಳುವ ರೀತಿ ಮಾತ್ರ ಸೋಜಿಗದ್ದಾಗಿದೆ. ಟಿ.ವಿ ಮಾಧ್ಯಮದ ರಿಯಾಲಿಟಿ ಶೋಗಳ ಮಾದರಿಯಲ್ಲಿ ರಂಗಶಿಬಿರ ಗಳನ್ನು ಆಯೋಜಿಸುತ್ತಿರುವುದು ಯಾಕೋ ಅಷ್ಟಾಗಿ ಸರಿಯಾದ ಮಾದರಿಯಲ್ಲವೇನೋ ಅನಿಸುತ್ತದೆ. ನಾವು ಶಿಬಿರಗಳ ಉದ್ಘಾಟನೆಗೆ ಆಗಲಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಅಥವಾ ಪ್ರಚಾರಕ್ಕಾಗಿ  ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುವವರನ್ನು ಬಳಸಿಕೊಳ್ಳುವ ಮೂಲಕ ಮಕ್ಕಳಿಗಾಗಲಿ, ಪೋಷಕರಿಗಾಗಲಿ ಯಾವ ಬಗೆಯ ಸಂದೇಶವನ್ನು ಕೊಡುತ್ತಿದ್ದೇವೆ ಅನ್ನುವುದನ್ನು ಯೋಚಿಸಬೇಕಾಗಿದೆ.

ಇಡೀ ಶಿಬಿರಗಳ ಉದ್ದೇಶದ ಸ್ಪಷ್ಟ ಕಲ್ಪನೆ ನಮಗೇ ಇಲ್ಲದಿದ್ದರೆ ನಾವು ಏನು ಮಾಡುತ್ತಿದ್ದೇವೆ ಎನ್ನುವುದಕ್ಕೆ ಅರ್ಥವಾದರೂ ಏನು? ರಂಗಭೂಮಿಯೊಳಗಿನ ಶಿಕ್ಷಣ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಇಂಥ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲವು ಎಂಬುದನ್ನಾದರೂ ಊಹಿಸಬೇಕಲ್ಲವೇ? ದಯಮಾಡಿ ನೀವು ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರನ್ನು ಶಿಬಿರಗಳಿಗೆ ಕರೆಸುವಿರಾದರೆ ಅಂಥ ಬೇಸಿಗೆ ಶಿಬಿರ ನಡೆಸುವವರು ‘ಇದು ರಿಯಾಲಿಟಿ ಶೋಗಳ ಬೇಸಿಗೆ ಶಿಬಿರ. ಡ್ರಾಮಾ ಜೂನಿಯರ್ಸ್‌ ಬೇಸಿಗೆ ಶಿಬಿರ, ಕಾಮಿಡಿ ಕಿಲಾಡಿ ಬೇಸಿಗೆ ಶಿಬಿರ, ಸೀರಿಯಲ್ ಬೇಸಿಗೆ ಶಿಬಿರ, ಸಿನಿಮಾ ಬೇಸಿಗೆ ಶಿಬಿರ’ ಎಂದು ಪ್ರಚಾರ ಮಾಡಲಿ. ಬೇಕಾದರೆ ಅದರಲ್ಲಿ, ನಾಟಕವನ್ನೂ ಹೇಳಿಕೊಡಲಾಗುತ್ತದೆ ಎಂದು ಸೇರಿಸಿಕೊಳ್ಳಲಿ. ರಂಗಶಿಬಿರದಲ್ಲಿ ಈ ಪ್ರಚಾರದ ಬದುಕನ್ನು ಸೇರಿಸುವುದು ಬೇಡ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !