ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಚುನಾಯಿತ ಪ್ರತಿನಿಧಿಗಳು ಸುಶಿಕ್ಷಿತರಾಗಿರಬೇಕೇ?

Published 30 ಜೂನ್ 2024, 22:33 IST
Last Updated 30 ಜೂನ್ 2024, 22:33 IST
ಅಕ್ಷರ ಗಾತ್ರ

ಎನ್‍ಡಿಎ ಸರ್ಕಾರದ ಹೊಸ ಮಂತ್ರಿಮಂಡಲದಲ್ಲಿ ಸಾವಿತ್ರಿ ಠಾಕೂರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಇದೇ ಜೂನ್ 18ರಂದು, ‘ಸ್ಕೂಲ್ ಚಲೋ ಅಭಿಯಾನ್’ ಅಂಗವಾಗಿ ಅವರು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಒಂದು ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರ ಅಂಗವಾಗಿ ಅವರು ಒಂದು ಫಲಕದ ಮೇಲೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆಯಾದ, ‘ಬೇಟಿ ಬಚಾವೋ, ಬೇಟಿ ಪಢಾವೋ’ ಅನ್ನು ಹಿಂದಿ ಭಾಷೆಯಲ್ಲಿ ಬರೆಯಬೇಕಾಗಿತ್ತು. ಆದರೆ, ಅದನ್ನು ಅವರು ತಪ್ಪುತಪ್ಪಾಗಿ ಬರೆದು ಅಪಹಾಸ್ಯಕ್ಕೆ ಈಡಾದರು.

ಸಂಸದರಾಗಿ ಆಯ್ಕೆಯಾಗುವವರಲ್ಲಿ ಸಾಕ್ಷರತೆ ಇರಲೇಬೇಕೇ? ಇಲ್ಲ. ಸಂವಿಧಾನದ 84ನೇ ವಿಧಿ ಪ್ರಕಾರ, ಸಂಸದರಾಗಲು ಅಗತ್ಯವಾದ ಅರ್ಹತೆ ಎಂದರೆ ಭಾರತೀಯ ನಾಗರಿಕರಾಗಿರಬೇಕು, ವಯಸ್ಸು ಕನಿಷ್ಠ 25 ವರ್ಷ ಆಗಿರಬೇಕು, ಘೋಷಿತ ಕ್ರಿಮಿನಲ್ ಆಗಿರಬಾರದು ಎಂದಿದೆ. ಇಲ್ಲಿ ಶಿಕ್ಷಿತರಾಗಿರಬೇಕು ಎಂದೇನೂ ಇಲ್ಲ. ಎಂದರೆ, ಅವರಿಗೆ ಸರಿಯಾಗಿ ಬರೆಯಲು ಬಾರದೇ ಇದ್ದರೂ ಸಾವಿತ್ರಿ ಠಾಕೂರ್ ಅವರಿಗೆ ಸಂಸದೆ, ಸಚಿವೆ ಆಗುವ ಎಲ್ಲಾ ಹಕ್ಕಿದೆ ಎಂದಾಯಿತು. ಆದರೆ, ಈ ವಿಧಿಯನ್ನು ರೂಪಿಸಿದ್ದು ಸಂವಿಧಾನದ ಜಾರಿಯ ಆರಂಭದಲ್ಲಿ. ಆಗ ದೇಶವು ಅದೇ ತಾನೆ ವಸಾಹತುಶಾಹಿಯಿಂದ ಮುಕ್ತಿ ಪಡೆದಿತ್ತು.

1947ರಲ್ಲಿ ದೇಶದ ಸಾಕ್ಷರತಾ ಪ್ರಮಾಣ ಬರೀ ಶೇಕಡ 12ರಷ್ಟು ಇತ್ತು. ಮಹಿಳಾ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ, ಸುಮಾರು ಶೇ 9ರಷ್ಟು ಇತ್ತು. ಇನ್ನು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳಲ್ಲಿ ಅನಕ್ಷರರ ಪ್ರಮಾಣವೇ ಹೆಚ್ಚಾಗಿತ್ತು. ಹೀಗಾಗಿ, ಶಾಸಕರು, ಸಂಸದರಾಗಿ ಆಯ್ಕೆಯಾಗುವುದಕ್ಕೆ ಶಿಕ್ಷಣದ ಮಟ್ಟವನ್ನು ನಿಗದಿ ಮಾಡಿಬಿಟ್ಟರೆ, ದೇಶದ ಬಹುತೇಕ ಜನರನ್ನು ಇದರಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಎಲ್ಲರನ್ನೊಳಗೊಳ್ಳುವ ಜನತಂತ್ರದ ಆಶಯಕ್ಕೆ ಧಕ್ಕೆ ಬರುತ್ತದೆ ಎಂಬುದು ಸಂವಿಧಾನ ರಚನೆಕಾರರ ಕಳವಳವಾಗಿತ್ತು.

ಆ ಹೊತ್ತಿಗೆ ಇದು ಅತ್ಯಂತ ಸಮಂಜಸವಾದ ತೀರ್ಮಾನವಾಗಿತ್ತು. ಆದರೆ, ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳಲ್ಲಿ ಒಟ್ಟಾರೆ ಶಿಕ್ಷಣ, ಅದರಲ್ಲೂ ಮುಖ್ಯವಾಗಿ ಸಾಕ್ಷರತೆ, ವಯಸ್ಕರ ಶಿಕ್ಷಣ, ತೆರೆದ ಶಾಲೆಗಳು ಇತ್ಯಾದಿ ಯೋಜನೆಗಳ ಫಲವಾಗಿ ಸಾಕ್ಷರತೆ ಪ್ರಮಾಣವು ಕ್ರಮೇಣ ಏರುತ್ತಾ ಬಂತು. ಈಗ ಸಾಕ್ಷರತೆ ಪ್ರಮಾಣವು ಪುರುಷರಲ್ಲಿ ಶೇ 85ರಷ್ಟು ಇದೆ, ಮಹಿಳೆಯರಲ್ಲಿ ಶೇ 72ಕ್ಕೆ ತಲುಪಿದೆ. ಈಗಲೂ ಜನಪ್ರತಿನಿಧಿಗಳಿಗೆ ಸಾಕ್ಷರತೆ, ಶಿಕ್ಷಣ ಇಲ್ಲದಿದ್ದರೂ ನಡೆಯುತ್ತದೆ ಎಂದು ಹೇಳುವುದು ಸರಿಯೇ? ಹಾಗೆ ನೋಡಿದರೆ, 46 ವರ್ಷದ, ಧಾರ್‌ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಾವಿತ್ರಿ ಠಾಕೂರ್ ಅವರು 2024ರ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವಾಗ ತಾವು, 2018ರಲ್ಲಿ ಉರ್ದು ಎಜುಕೇಷನ್ ಬೋರ್ಡಿನ 12ನೇ ತರಗತಿಯನ್ನು ಪಾಸು ಮಾಡಿರುವುದಾಗಿ ದಾಖಲಿಸಿದ್ದಾರೆ. ನಮ್ಮಲ್ಲಿ ಕೆಲವು ಪ್ರಮುಖ ಸಚಿವರನ್ನೂ ಒಳಗೊಂಡ ಹಾಗೆ ಹಲವು ಜನಪ್ರತಿನಿಧಿಗಳು ತಾವು ಹೊಂದಿರುವುದಾಗಿ ಹೇಳಿಕೊಂಡಿರುವ ಶೈಕ್ಷಣಿಕ ಅರ್ಹತೆಗಳು ಅನೇಕ ವಿವಾದಗಳನ್ನು ಹುಟ್ಟುಹಾಕಿರುವುದೂ ಇದೆ.

ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನುವುದನ್ನು ಒಪ್ಪುವುದಾದರೂ ಅವರು ವಹಿಸಬೇಕಾಗಿರುವ ಜವಾಬ್ದಾರಿಯ ಕುರಿತೂ ಲಕ್ಷ್ಯ ಇರಬೇಕಾಗುತ್ತದೆ. ಸಾವಿತ್ರಿ ಠಾಕೂರ್‌ ಅವರು ಒಂದು ಉದಾಹರಣೆಯಷ್ಟೆ. ಈಗ ಇವರು ತಮ್ಮ ಸಚಿವೆ ಸ್ಥಾನದಿಂದ ಸುಮಾರು ₹36 ಸಾವಿರ ಕೋಟಿ ಮೊತ್ತದ ಬಜೆಟ್ಟನ್ನು ನಿರ್ವಹಿಸಬೇಕಾಗುತ್ತದೆ. ನಿತ್ಯ ಹತ್ತಾರು ಕಡತಗಳನ್ನು ಓದಿ, ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಘಟಾನುಘಟಿ ಐಎಎಸ್ ಅಧಿಕಾರಿಗಳನ್ನು ನಿಭಾಯಿಸಬೇಕಾಗುತ್ತದೆ. ದೇಶದ ಕೋಟ್ಯಂತರ ಮಕ್ಕಳ ಮತ್ತು ಮಹಿಳೆಯರ, ಶೋಷಿತರ, ಹಿಂದುಳಿದವರ ಧ್ವನಿಯಾಗಬೇಕಾಗುತ್ತದೆ. ಇಂಥ ಒಬ್ಬ ವ್ಯಕ್ತಿ ತಮ್ಮ ಖಾತೆಯ ವ್ಯಾಪ್ತಿಗೊಳಪಡುವ ಅದರಲ್ಲೂ ಭಾರಿ ಪ್ರಚಾರ ಪಡೆದಿರುವ ಒಂದು ಘೋಷಣೆಯನ್ನೂ ಸರಿಯಾಗಿ ಬರೆಯಲು ಸಾಧ್ಯವಾಗದಿದ್ದರೆ ಹೇಗೆ ಎಂದು ವಿರೋಧ ಪಕ್ಷಗಳ ಪ್ರತಿನಿಧಿಗಳು ತೀವ್ರವಾಗಿ ಟೀಕಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 84ರ ತಿದ್ದುಪಡಿಯಾಗಬೇಕು, ಎಲ್ಲ ಹಂತಗಳಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಬೇಕು ಎಂಬುದೂ ಕೆಲವರ ವಾದವಾಗಿದೆ. ಶಿಕ್ಷಣವು ಚುನಾಯಿತ ಪ್ರತಿನಿಧಿಗಳಲ್ಲಿ ನಿರ್ದಿಷ್ಟ ಮಟ್ಟದ ಸಾಮರ್ಥ್ಯ, ತಿಳಿವಳಿಕೆ ಮತ್ತು ವಿಶ್ಲೇಷಣೆಯ ಕೌಶಲವನ್ನು ನೀಡುತ್ತದೆ. ವಸ್ತುನಿಷ್ಠ ಮಾಹಿತಿಯನ್ನು ಆಧರಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆಯು ದಕ್ಷ ಆಡಳಿತದಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಬಿರುತ್ತದೆ ಎನ್ನುವುದು ಇದರ ಪ್ರತಿಪಾದಕರ ವಾದ. ಇವತ್ತಿನ ಶಿಕ್ಷಣದ ಸ್ಥಿತಿಗತಿಗಳನ್ನು ನೋಡಿದಾಗ, ಔಪಚಾರಿಕ ವ್ಯವಸ್ಥೆಯಲ್ಲಿ ಸಿಗುವ ಭಾಷೆ ಮತ್ತು ಸಂವಹನ ಕೌಶಲಗಳು, ಆಡಳಿತ, ನ್ಯಾಯಾಂಗ, ವಾಣಿಜ್ಯ, ವ್ಯವಹಾರ, ಮಾಧ್ಯಮ ಇತ್ಯಾದಿ ಯಾವುದೇ ಕ್ಷೇತ್ರಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ನೀಡುವುದಿಲ್ಲ, ಜನತಂತ್ರದ ಜೀವಾಳವಾದ ವೈಚಾರಿಕತೆ, ವೈಜ್ಞಾನಿಕ ಮನೋವೃತ್ತಿ, ಪ್ರಶ್ನೆ ಕೇಳುವ ಸ್ವಭಾವ... ಇಂಥವುಗಳನ್ನು ಬೆಳೆಸುವುದಿಲ್ಲ. ಶಿಕ್ಷಣದ ಸುಧಾರಣೆಯಾಗಬೇಕು, ಅದು ಸಶಕ್ತ ನಾಗರಿಕರನ್ನು ಸೃಜಿಸುವಲ್ಲಿ ಸಫಲವಾಗಬೇಕು ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತಲೇ, ಇರುವ ಹಾಗೆಯೇ ಶಿಕ್ಷಣವು ವ್ಯಕ್ತಿತ್ವದ ಒಂದು ಗುಣವಾಗಿದೆ. ಭಾರತದ 18ನೇ ಲೋಕಸಭೆ ಇದರ ಸಾಧಕಬಾಧಕಗಳನ್ನು ಚರ್ಚಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT