ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಹೆಚ್ಚಳವೇ ಆದ್ಯತೆಯಾಗಲಿ

Last Updated 8 ಜೂನ್ 2018, 7:08 IST
ಅಕ್ಷರ ಗಾತ್ರ

ನಮ್ಮದು ಮಧ್ಯ ಕರ್ನಾಟಕದ ಅಪ್ಪಟ ಬಯಲುಸೀಮೆಯ ಕುಗ್ರಾಮ. ಸಾರಿಗೆ ವ್ಯವಸ್ಥೆಯಿಲ್ಲದ, 200 ಮನೆಗಳುಳ್ಳ ಸಣ್ಣ ಊರು. 1990ರ ದಶಕದಲ್ಲಿ ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 20ರಿಂದ 30 ಮಕ್ಕಳು ಓದುತ್ತಿದ್ದರು. ಆಗತಾನೆ ಸರ್ಕಾರಿ ಉದ್ಯೋಗಕ್ಕೆ ಸೇರಿ, ನಮ್ಮೂರಿಗೆ ಶಿಕ್ಷಕರಾಗಿ ಬಂದವರು ಶಿವಕುಮಾರ ಮೇಷ್ಟ್ರು. ಸಮಯ ಪಾಲನೆ, ಶ್ರದ್ಧೆ, ಪ್ರಾಮಾಣಿಕತೆ ಅವರು ರೂಢಿಸಿಕೊಂಡು ಬಂದಿದ್ದ ಮೌಲ್ಯಗಳಾಗಿದ್ದವು. ಶಿವಣ್ಣ ಈಗ ಬದುಕಿಲ್ಲ. ಅವರಿಂದ ಪಾಠ ಕಲಿತಿದ್ದ ಅದೆಷ್ಟೋ ಮಕ್ಕಳು ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ.

ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣ ಕೊಡುವುದರಲ್ಲಿ ಅವರು ವಹಿಸುತ್ತಿದ್ದ ಮುತುವರ್ಜಿ ಇಂದಿನ ಶಿಕ್ಷಕರಿಗೆ ಮಾದರಿ. ಶಾಲೆ ಬಿಟ್ಟು ಓಡಿಹೋಗುತ್ತಿದ್ದ ಮಕ್ಕಳನ್ನು ಅವರೇ ಹೋಗಿ ಮತ್ತೆ ಶಾಲೆಗೆ ಕರೆತಂದು ಓದಿಸುತ್ತಿದ್ದರು. ನಿದ್ದೆ ಮಾಡುವ ಮಕ್ಕಳನ್ನು ಚುರುಕಾಗಿಸಲು ಶಾಲಾ ಅಂಗಳದಲ್ಲಿ ಆಟವಾಡಿಸುತ್ತಿದ್ದರು. ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಅವರನ್ನು ಬಲಾಢ್ಯರನ್ನಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದರು.

‘ನಮ್ಮೂರ ಶಾಲೆ’ ಈಗ ಮಾಧ್ಯಮಿಕ ಶಾಲೆಯಾಗಿದೆ. ನಾಲ್ಕಾರು ಶಿಕ್ಷಕರು, ಅಡುಗೆ ಸಿಬ್ಬಂದಿ ಇದ್ದಾರೆ. ಆದರೂ ಶಿಕ್ಷಕರಿಗೆ ಪುರುಸೊತ್ತಿಲ್ಲ. ಮುಖ್ಯ ಶಿಕ್ಷಕರಿಗಂತೂ ಅಡುಗೆ ಮನೆಯ ಉಸ್ತುವಾರಿ. ಮಕ್ಕಳಿಗೆ ಊಟ ಮಾಡಿಸಿ ಲೆಕ್ಕ ಬರೆಯುವುದರಲ್ಲೇ ಅವರ ಸಮಯ ಮುಗಿದುಬಿಡುತ್ತದೆ. ಗಂಟೆ ಬಾರಿಸುತ್ತಿದ್ದಂತೆ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಬೈಕ್ ಹತ್ತಿ ಮನೆಯ ಕಡೆಗೆ ಪರಾರಿಯಾಗಿಬಿಡುತ್ತಾರೆ.

‘ನಮ್ಮೂರ ಶಾಲೆ’ಯಲ್ಲಿ ಈಚಿನ ವರ್ಷಗಳಲ್ಲಿ ಮಕ್ಕಳ ಕಲಿಕಾ ಮಟ್ಟ ಕುಸಿಯುತ್ತಿದೆ. ಸರ್ಕಾರಿ ಶಾಲೆಗೆ ಬರುತ್ತಿದ್ದ ಮಕ್ಕಳು ತಾಲ್ಲೂಕು ಕೇಂದ್ರದಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದಾರೆ. ‘ನಮ್ಮ ಮಗು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಬೇಕು’ ಎಂಬ ಜಿದ್ದಿಗೆ ಬಿದ್ದು, ಪೋಷಕರು ಬರಗಾಲದಲ್ಲೂ ಸಾಲ ಮಾಡಿ ಮಕ್ಕಳನ್ನು ಕಾನ್ವೆಂಟ್‍ಗಳಿಗೆ ಸೇರಿಸುತ್ತಿದ್ದಾರೆ.

ಇದೇ ಧೋರಣೆ ಎಲ್ಲ ಊರುಗಳಲ್ಲಿರುವ ಪಾಲಕರದ್ದೂ ಆಗಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲ. ಊಟ, ಮೊಟ್ಟೆ, ಹಾಲು ಇವಿಷ್ಟಕ್ಕೇ ಮಕ್ಕಳು ಹಾಜರಾಗುತ್ತವೆ. ನಮ್ಮ ಪ್ರಭುತ್ವ ಸರ್ಕಾರಿ ಶಾಲೆಗಳ ನಿರ್ಲಕ್ಷ್ಯದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತಿಲ್ಲವೋ ಗೊತ್ತಿಲ್ಲ. ಸೌಲಭ್ಯಗಳನ್ನು ಕೊಟ್ಟರೆ ಸಾಕೇ? ಶಿಕ್ಷಣದ ಗುಣಮಟ್ಟ, ಮಕ್ಕಳ ಕಲಿಕಾ ಮಟ್ಟ, ಶಿಕ್ಷಕರ ಮೌಲ್ಯಮಾಪನದ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ? ‘ಗಂಟೆ ಹೊಡಿ ಸಂಬಳ ತಗೋ’ ಎಂಬುದೇ ಧೋರಣೆಯಾದರೆ ಗ್ರಾಮೀಣ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಗತಿಯೇನು?

‘ಗ್ರಾಮ ಭಾರತದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಪಡೆದ 14ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಕನಿಷ್ಠ ಸಾಕ್ಷರತಾ ಕೌಶಲಗಳೂ ಇರುವುದಿಲ್ಲ. ಇವರು ದಿನನಿತ್ಯದ ಜೀವನಕ್ಕೆ ಅಗತ್ಯವಿರುವಷ್ಟು ಓದಲು, ಸರಳ ಲೆಕ್ಕಾಚಾರ ಮಾಡಲೂ ವಿಫಲರಾಗುತ್ತಿದ್ದಾರೆ’ ಎಂದು ಸ್ವಯಂಸೇವಾ ಸಂಸ್ಥೆಯೊಂದು ನಡೆಸಿದ್ದ ಸಮೀಕ್ಷೆ ಹೇಳಿದೆ.

ಖಾಸಗಿ ಶಾಲೆಗಳೋ, ‘ಮಕ್ಕಳ ಪೊಷಕರಿಗೂ ಇಂಗ್ಲಿಷ್ ಭಾಷೆ ಬರಬೇಕು’ ಎಂಬುದನ್ನು ಕಡ್ಡಾಯಗೊಳಿಸಿವೆ. ಆ ಮಕ್ಕಳಿಗೆ ಶಾಲೆಯ ಅವಧಿ ಮುಗಿದ ನಂತರ ಮನೆಪಾಠ ಎಂಬ ಶಿಕ್ಷೆ ಬೇರೆ. ಹೆಚ್ಚು ಅಂಕ ಗಳಿಸಿದ ಮಗುವಿನ ಫೋಟೊ ಮತ್ತು ಗಳಿಸಿದ ಅಂಕಗಳನ್ನು ಪ್ರದರ್ಶಿಸುವ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಅಲ್ಲಲ್ಲಿ ಹಾಕಲಾಗುತ್ತದೆ. ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗುತ್ತಿದೆ. ಪೋಷಕರು ಇದಕ್ಕೆ ಮಾರುಹೋಗುತ್ತಾರೆ.

ಅಂಕ ಗಳಿಕೆಯೇ ಇಲ್ಲಿ ಮುಖ್ಯವಾಗಿರುವುದರಿಂದ ಮಕ್ಕಳ ಮೇಲೆ ವಿಪರೀತ ಒತ್ತಡ ಹೇರಲಾಗುತ್ತದೆ. ನಿರೀಕ್ಷಿಸಿದಷ್ಟು ಅಂಕಗಳನ್ನು ಪಡೆಯಲಾಗದೆ ಅದೆಷ್ಟೋ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಒಂದು ಬೀದಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳ ಫ್ಲೆಕ್ಸ್‌ ಇದ್ದರೆ, ಮತ್ತೊಂದು ಬೀದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಗುವಿನ ಫ್ಲೆಕ್ಸ್ ಇರುತ್ತದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು, ಪರೀಕ್ಷೆಯಲ್ಲಿ ಅನುತ್ತೀರ್ಣ ಆದ ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ಆರನೇ ಸ್ಥಾನದಲ್ಲಿದೆ (ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ).

ಸರ್ಕಾರಿ ಶಾಲೆಗಳು ಸುಸ್ಥಿತಿಯಲ್ಲಿದ್ದಿದ್ದರೆ ನಮ್ಮ ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದಾಗಿತ್ತು. ಹಾಗಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಪ್ರಸಕ್ತ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 601 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಕೇವಲ 1 ಅಂಕ ಪಡೆದಿದ್ದಾಗಿ ವರದಿಯಾಗಿದೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಇಂಥ ವಿದ್ಯಾರ್ಥಿಗಳ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಯೋಚಿಸಲೇಬೇಕು. ‘ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ’ ಎಂದು ಹೆಮ್ಮೆಯಿಂದ ಹೇಳುವ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಗಾದರೂ ಮಾಡಿ ಶಿಕ್ಷಣ
ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಮೂಲಕ ಪಾತಾಳಕ್ಕೆ ಕುಸಿದಿರುವ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸಬೇಕು. ಗುಣಮಟ್ಟದ ಶಿಕ್ಷಣ ನೀಡುವುದು ಪ್ರಭುತ್ವದ ಜವಾಬ್ದಾರಿ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳ ಮತ್ತು ಪಾಲಕರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಕೆಲಸ ಮೊದಲು ಆಗಬೇಕು. ಆಟ, ಓಟದಲ್ಲಿ ಚುರುಕಾಗಿ, ಸಂತಸದಿಂದ ಕಾಲ ಕಳೆಯಬೇಕಾದ ಮಗು, ಮಣಭಾರದ ಬ್ಯಾಗ್ ಹೊತ್ತು ಶಾಲೆಗೆ ಹೋಗುತ್ತಿರುವುದನ್ನು ನೋಡಿದರೆ ಮದ್ದುಗುಂಡುಗಳನ್ನು ಹೊತ್ತುಕೊಂಡು ಯುದ್ಧಕ್ಕೆ ಹೋಗುವ ಸೈನಿಕರ ನೆನಪಾಗುತ್ತದೆ.

ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಉಳಿಯಬೇಕೆಂದರೆ ಹಾಗೂ ಮಕ್ಕಳ ದಾಖಲಾತಿ ಹೆಚ್ಚಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಸರ್ಕಾರಿ ಅಧಿಕಾರಿಗಳ ಮಕ್ಕಳನ್ನೂ ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವಂತಹ ನಿಯಮವನ್ನು ಜಾರಿಗೆ ತರಬೇಕು.
-ಎಸ್.ಎಂ. ಸೋಮನಗೌಡ

Test....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT