ಶನಿವಾರ, ಮಾರ್ಚ್ 25, 2023
30 °C
ಅಖಂಡ ಜೀವರಾಶಿಯ ನೆಮ್ಮದಿಯನ್ನು ಉಳಿಸುವ ಇರಾದೆ ನಿಮ್ಮಲ್ಲಿದೆಯಾದರೆ, ಹೊಸ ವಿದ್ಯುನ್ಮಾನ ಸಾಮಗ್ರಿ ಖರೀದಿಯ ಯೋಚನೆಯನ್ನು ಮುಂದೂಡುತ್ತಾ ಬನ್ನಿ

ಸಂಗತ: ವಿದ್ಯುನ್ಮಾನ ತ್ಯಾಜ್ಯ-ದುರಸ್ತಿಯೇ ಪರಿಹಾರ

ಪ.ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಕ್ಕಳ ಕೈಗೂ ಸ್ಮಾರ್ಟ್ ಮೊಬೈಲ್ ಫೋನು ನೀಡಿ ಕೊರೊನಾ ಕಾಲದಲ್ಲಿ ಮನೆಯಲ್ಲಿಯೇ ಶಿಕ್ಷಣ ನೀಡಿದ ಹೆಗ್ಗಳಿಕೆ ನಮ್ಮದು. ಪದವಿ ಹಂತದಲ್ಲಂತೂ ಕಾಗದದ ಬಳಕೆ ದೂರವಾಗಿದೆ. ಕಂಪ್ಯೂಟರ್‌ಗಳು, ಲ್ಯಾಪ್‍ಟಾಪ್‍ಗಳೇ ಬಳಿಗೆ
ಬಂದಿವೆ.

ಸ್ಮಾರ್ಟ್ ಫೋನುಗಳು ಕೆಳಗೆ ಬಿದ್ದು ಗಾಜು ಬಿರುಕು ಬಿಡಬಹುದು. ಒಂದೆರಡು ವರ್ಷವಾದ ಮೇಲೆ ಸವೆಯಬಹುದು. ಹೋಮ್ ಬಟನ್ ಅಂಟಿಕೊಳ್ಳಬಹುದು. ಲ್ಯಾಪ್‍ಟಾಪ್  ಐದಾರು ವರ್ಷ ಬಾಳಿಕೆ ಬರಬಹುದು. ಫೋನುಗಳಲ್ಲಿ ಕೆಲವು ಮಾದರಿಗಳಲ್ಲಿ ಬಳಕೆ ಮುಂದುವರಿಸಲು ಫೇಸ್‌ಬುಕ್, ವಾಟ್ಸ್‌ಆ್ಯಪ್‍ಗಳು ಬೆಂಬಲ ನೀಡುವುದಿಲ್ಲ. ಆಗ ಗ್ರಾಹಕ ತನ್ನ ವಸ್ತು ಸುಸ್ಥಿತಿಯಲ್ಲಿದ್ದರೂ ಹೊಸದನ್ನು ಕೊಳ್ಳುವುದು ಅನಿವಾರ್ಯವಾಗುತ್ತದೆ.

ಹಿಂದೆ ಟೆಲಿವಿಜನ್ ಪೂರ್ಣ ಕೆಟ್ಟುಹೋದರೂ ಏನೋ ಒಂದು ಮೊತ್ತಕ್ಕೆ ಗುಜರಿ ಅಂಗಡಿಯವರು ತೆಗೆದುಕೊಳ್ಳುತ್ತಿದ್ದರು. ಈಗಿನ ಉತ್ಪನ್ನಗಳು ಅವರಿಗೂ ಬೇಡ. ಮನೆಯಲ್ಲಿದ್ದರೆ ತೊಂದರೆಯಾಗುತ್ತದೆಂದು ವಿದ್ಯುನ್ಮಾನ ಉಪಕರಣಗಳನ್ನು ಬೀದಿಯ ಬದಿಯಲ್ಲಿ ಎಸೆದುಹೋಗಿ ನಿರುಮ್ಮಳವಾಗುವವರೇ ಹೆಚ್ಚು.

ದಿನದ ಬೆಳಗಿನ ಕಾಫಿ ತಯಾರಿಕೆಗೆ ಬಳಸುವ ಸಾಧನದಿಂದ ಆರಂಭಿಸಿ ಪ್ರತಿಕ್ಷಣವೂ ಮನುಷ್ಯ ವಿದ್ಯುನ್ಮಾನ ವಸ್ತುಗಳನ್ನೇ ಬಳಸುತ್ತಿದ್ದಾನೆ. ಮಸಾಜ್ ಕುರ್ಚಿಗಳು, ರಿಮೋಟ್ ಕಂಟ್ರೋಲ್ ಸಾಧನ, ಡಯಾಲಿಸಿಸ್ ಯಂತ್ರ, ಎಲ್‍ಇಡಿ ಬಲ್ಬು, ವೈಫೈ ಡಾಂಗಲ್, ಮೈಕ್ರೊವೇವ್ ಒಲೆ ಹೀಗೆ ಎಲ್ಲವೂ ವಿದ್ಯುನ್ಮಾನ ಮೂಲದವುಗಳೇ ಆಗಿವೆ.

ಒಂದು ಅಂದಾಜಿನ ಪ್ರಕಾರ, ವರ್ಷಕ್ಕೆ ಇಂತಹ ತ್ಯಾಜ್ಯ ಸಾಮಗ್ರಿಗಳ ಉತ್ಪಾದನೆ ಲಕ್ಷಾಂತರ ಟನ್ ದಾಟಿದೆ. ಮುಂದಿನ ಒಂದು ದಶಕದಲ್ಲಿ ಇದು ಇನ್ನಷ್ಟು ಬೃಹತ್‌ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. 78 ದೇಶಗಳಲ್ಲಿ ಇಂತಹ ತ್ಯಾಜ್ಯದಿಂದ ಹೊರಗೆ ಬರುವ ಪರಿಹಾರೋಪಾಯಗಳ ಕುರಿತು ಚಿಂತನ ಮಂಥನ ನಡೆಸಿದ್ದಾರೆ.

ತ್ಯಾಜ್ಯವನ್ನು ಮಣ್ಣಿಗೆ ಎಸೆದರೆ ವಾತಾವರಣಕ್ಕೆ ಅದರೊಳಗಿರುವ ವಿಷ ವಸ್ತುಗಳು ಹರಡುತ್ತ ಹೋಗುತ್ತವೆ. ಆರ್ಸೆನಿಕ್, ಬೆರಿಲಿಯಂ, ಕ್ಯಾಡ್ಮಿಯಂ, ಸೀಸ, ಪಾದರಸ ಇವೆಲ್ಲವೂ ಗಾಳಿಯನ್ನಷ್ಟೇ ಅಲ್ಲ, ಮಣ್ಣು, ನೀರನ್ನೂ ಕಲುಷಿತಗೊಳಿಸಿ ವನ್ಯಜೀವಿಗಳಿಗೆ, ಜಲಚರಗಳಿಗೆ ಮಾರಕವಾಗಿ ಬಿಡುತ್ತವೆ. ಈ ರಗಳೆ ಬೇಡ ಎಂದು ಮಣ್ಣಿನಲ್ಲಿ ಹೂಳಿದರೆ ಇವೆಲ್ಲವೂ ಅಂತರ್ಜಲದಲ್ಲಿ ಕರಗಿ ಕುಡಿಯುವ ನೀರಿಗೆ ವಿಷ ಕದಡುತ್ತವೆ.

ಬೇಡ ಎಂದು ಕೈಬಿಡುವ ವಿದ್ಯುನ್ಮಾನ ತ್ಯಾಜ್ಯಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ, ಆನಂತರದ ಸ್ಥಾನ ಚೀನಾಕ್ಕೆ ಲಭಿಸಿದೆ. ವಿದ್ಯುನ್ಮಾನ ಸಾಮಗ್ರಿಗಳ ವ್ಯಾಮೋಹ ಹೀಗೆಯೇ ಮುಂದುವರಿದರೆ ವಿಶ್ವದ ಜನಸಂಖ್ಯೆಯ ಒಬ್ಬೊಬ್ಬನೂ 2030ರ ಹೊತ್ತಿಗೆ ಸರಾಸರಿ 12 ಕಿಲೊ ತ್ಯಾಜ್ಯವನ್ನು ವಾತಾವರಣಕ್ಕೆ ಸೇರಿಸುತ್ತಾನೆ.

ಹಾಗೆಂದು ವರ್ಷವರ್ಷವೂ ವಿದ್ಯುನ್ಮಾನ ವಸ್ತುಗಳನ್ನು ತ್ಯಜಿಸುವುದು ಅನಿವಾರ್ಯವೇ ಎಂದು ಕೇಳಿದರೆ ಖಂಡಿತ ಅಲ್ಲ. ಒಂದು ವಸ್ತುವನ್ನು ಈಗ ತಯಾರಕರು ಕೊಡುವ ಭರವಸೆಯ ಅವಧಿಗಿಂತ ಹೆಚ್ಚಿನ ವರ್ಷಗಳ ಕಾಲ ಬಾಳಿಕೆ ಬರುವಂತೆ ಮಾಡಬಹುದು.

ಕಂಪನಿಯ ವಸ್ತುಗಳು ಸುದೀರ್ಘ ಕಾಲ ಬಾಳಿಕೆ ಬರುವಂತಿದ್ದರೆ ಪ್ರತಿನಿಮಿಷವೂ ಉತ್ಪಾದನೆಯನ್ನು ಹೊರಗೆ ತರುತ್ತಲೇ ಇರುವ ಕಾರಣ ಹೊಸದರ ಮಾರಾಟದಲ್ಲಿ ಏರಿಕೆಯಾಗುವುದಿಲ್ಲ. ಹೀಗಾಗಿ ಅದರ ಆಯುಷ್ಯದ ಲಲಾಟ ಲಿಖಿತವನ್ನು ಮೊದಲೇ ಬರೆದು ಮಾರುಕಟ್ಟೆಗೆ ಬಿಡುತ್ತಾರೆ. ಇದರಿಂದ ಭೂಮಿ ಹಾಳಾಗುತ್ತದೆ, ನೀರು ವಿಷಮಯವಾಗುತ್ತದೆಂಬ ಪಾಪಪ್ರಜ್ಞೆ ಇರಿಸಿಕೊಂಡರೆ ಉದ್ಯಮ ಬೆಳೆಯುವುದಿಲ್ಲ.

ತ್ಯಾಜ್ಯ ವಿದ್ಯುನ್ಮಾನ ಸಾಮಗ್ರಿಗಳನ್ನು ಮತ್ತೆ ದುರಸ್ತಿ ಮಾಡಬಾರದೆಂಬ ಉದ್ದೇಶದಿಂದಲೇ ಬಿಡಿಭಾಗಗಳ ತಯಾರಿಕೆ ಮಾಡುವುದಿಲ್ಲ. ಅನೇಕ ವಿದ್ಯುನ್ಮಾನ ಸಾಮಗ್ರಿಗಳಲ್ಲಿ ಚಿನ್ನ, ಬೆಳ್ಳಿ, ತವರ, ವಲ್ಗಾಡಿಯಂನಂತಹ ಬೆಲೆಬಾಳುವ ಲೋಹಗಳಿರುವ ಕಾರಣ ಶೇ 30ರಷ್ಟು ತ್ಯಾಜ್ಯಗಳನ್ನು ಒಡೆದು ಈ ಲೋಹಗಳನ್ನು ಮರಳಿ ಪಡೆಯುವ ಕೆಲಸ ನಡೆಯುತ್ತದೆ. ವಿದ್ಯುನ್ಮಾನ ಸಾಮಗ್ರಿಗಳನ್ನು ಹೀಗೆ ಒಡೆಯುವ ಕೆಲಸಗಾರರು ಮತ್ತು ಪರಿಸರದ ನಿವಾಸಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮಗಳಾಗುವುದು ಗೋಚರಿಸಿದೆ.

ಇದರಿಂದ ಅಖಂಡ ಜೀವರಾಶಿಯ ನೆಮ್ಮದಿಯನ್ನು ಉಳಿಸುವ ಇರಾದೆ ನಮ್ಮಲ್ಲಿದೆಯಾದರೆ ಜಾಗತಿಕ ವಿಜ್ಞಾನಿಗಳು ಹೇಳುವ ಪರಿಹಾರ ಒಂದೇ. ಒಂದು ವಸ್ತುವನ್ನು ಸಾಧ್ಯವಿರುವಷ್ಟು ಹೆಚ್ಚು ವರ್ಷಗಳ ಕಾಲ ದುಡಿಸಿಕೊಳ್ಳಿ. ಅದು ಕೆಟ್ಟುಹೋದಾಗ ಮತ್ತೆ ಮತ್ತೆ ದುರಸ್ತಿ ಮಾಡಿ ಉಪಯೋಗಿಸಿ. ಹೊಸದನ್ನು ಖರೀದಿಸುವ ಯೋಚನೆಯನ್ನು ಮುಂದೆ ಹಾಕುತ್ತ ಬನ್ನಿ.

ಇದರಿಂದ ಕಂಪನಿಗಳಿಗೆ ಹೊಸ ಪದವೀಧರರ ನೇಮಕ ಪ್ರಕ್ರಿಯೆಗೆ ಕೊಂಚ ಹಿನ್ನಡೆ ಬರಬಹುದು. ಆದರೆ ನಮ್ಮ ನೆರೆಮನೆಯಲ್ಲಿರುವ ಅದೆಷ್ಟೋ ಹುಡುಗರು ಐಟಿಐ ತರಬೇತಿ ಪಡೆದು, ಟಿ.ವಿ, ಕಂಪ್ಯೂಟರ್ ದುರಸ್ತಿ ಮಾಡುವ ಕಲೆಯನ್ನು ಕಲಿತು ಉದ್ಯೋಗವಿಲ್ಲದೆ ಪರದಾಡುತ್ತಿದ್ದರೆ ಅವರಿಗೆ ಕೈತುಂಬ ಉದ್ಯೋಗ ಸಿಗಬಹುದು. ಹೊಸದನ್ನು ನಾಚಿಸುವಂತೆ ದುರಸ್ತಿ ಮಾಡಿಕೊಡಲು ಸಾಧ್ಯವಿದೆ.

ಹೊಸ ವಸ್ತು ತಂದರೂ ಅದರ ಬಾಳಿಕೆ ಒಂದೆರಡು ವರ್ಷಗಳೆನ್ನುವಾಗ ಹಳೆಯದು ಕೂಡ ದುರಸ್ತಿ ಮಾಡಿದರೆ ಅಷ್ಟೇ ಸಮಯ ಉಳಿದು ಗ್ರಾಹಕನ ಕಿಸೆಯ ದೃಷ್ಟಿಯಿಂದಲೂ ಲಾಭ ತರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು