ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಎಂಜಿನಿಯರಿಂಗ್‌ ಕೋರ್ಸ್‌– ಇರಲಿ ವಿವೇಚನೆ

ಆಸಕ್ತಿ, ಕಲಿಕಾ ಸಾಮರ್ಥ್ಯ, ಆರ್ಥಿಕ ಪರಿಸ್ಥಿತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ
Published 25 ಜೂನ್ 2024, 19:28 IST
Last Updated 25 ಜೂನ್ 2024, 19:28 IST
ಅಕ್ಷರ ಗಾತ್ರ

ಆಟೊ ಓಡಿಸುವ ಪರಿಚಿತರೊಬ್ಬರು ಇತ್ತೀಚೆಗೆ ಎದುರಾದಾಗ, ತಮ್ಮ ಮಗನಿಗೆ ಒಂದು ಲಕ್ಷ ರೂಪಾಯಿ ಶುಲ್ಕ ಕಟ್ಟಿ ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಸೀಟು ಕೊಡಿಸಿರುವುದಾಗಿ ತಿಳಿಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಮ್ಯಾನೇಜ್‍ಮೆಂಟ್ ಕೋಟಾದಡಿ ಲಭ್ಯವಿರುವ ಸೀಟು ಕೊಡಿಸಿದ್ದ ಅವರ ಮಾತು ಕೇಳಿ ಅಚ್ಚರಿಯಾಯಿತು.

‘ಮೊದಲಿಗೆ ಸಿಇಟಿ ಮೂಲಕ ಸೀಟು ಪಡೆಯೋಕೆ ಪ್ರಯತ್ನ ಪಡೋದಲ್ವಾ? ಇಷ್ಟು ತರಾತುರಿಯಲ್ಲಿ ಏಕೆ ಮಗನನ್ನು ಎಂಜಿನಿಯರಿಂಗ್‍ಗೆ ಸೇರಿಸಲು ಹೋದ್ರಿ’ ಅಂತ ವಿಚಾರಿಸಿದೆ. ‘ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ರ್‍ಯಾಂಕ್‌ ಪಡೆದಿರುವ ಮಗ, ಓದುವುದಾದರೆ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ಕೋರ್ಸುಗಳನ್ನು ಮಾತ್ರ ಓದುತ್ತೇನೆ ಅಂತ ಹಟ ಹಿಡಿದ. ಅದೂ ಅಲ್ಲದೆ ತನ್ನ ಕೆಲ ಸ್ನೇಹಿತರು ಈಗಾಗಲೇ ಪ್ರವೇಶ ಪಡೆದಿರುವ ಕಾಲೇಜಿಗೇ ಸೇರಿಸುವಂತೆ ಬೇಡಿಕೆ ಇಟ್ಟ. ಹೀಗಾಗಿ, ಸೀಟು ಖಾಲಿಯಾಗುವ ಮೊದಲೇ ಸೇರಿಸೋಣ ಅಂತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ಬ್ರ್ಯಾಂಚಿಗೆ ಮ್ಯಾನೇಜ್‍ಮೆಂಟ್ ಕೋಟಾದಡಿ ಸೀಟು ಕೊಡಿಸಿದೆ’ ಅಂದರು.

ಸಿಇಟಿಯಲ್ಲಿ ಒಂದೂಮುಕ್ಕಾಲು ಲಕ್ಷದ ಆಸುಪಾಸಿನ ರ್‍ಯಾಂಕು ಗಳಿಸಿರುವ ತಮ್ಮ ಮಗಳು, ಕಂಪ್ಯೂಟರ್ ಸೈನ್ಸ್ ಕೋರ್ಸು ಓದಬೇಕೆಂದು ಬಯಸುತ್ತಿದ್ದಾಳೆ. ಅವಳ ರ್‍ಯಾಂಕಿಗೆ ಸರ್ಕಾರಿ ಕೋಟಾದಲ್ಲಿ ಕಂಪ್ಯೂಟರ್ ಸೈನ್ಸ್ ಸೀಟು ಸಿಗುವುದಿಲ್ಲ. ಮ್ಯಾನೇಜ್‍ಮೆಂಟ್ ಕೋಟಾದಡಿ ಸೀಟು ಕೊಡಿಸುವುದಾದರೆ ಎಷ್ಟಾಗಬಹುದು ಅಂತ ಆತ್ಮೀಯರೊಬ್ಬರು ವಿಚಾರಿಸಿದರು. ಅವರು ಕೇಳಿದ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಪದವಿಗೆ ₹ 20 ಲಕ್ಷ ಶುಲ್ಕ ಪಾವತಿಸಬೇಕಿತ್ತು. ಇಷ್ಟು ಹಣ ನೀಡಲು ತಯಾರಿದ್ದರೂ ಸೀಟು ಸಿಗುವ ಖಾತರಿ ಇರಲಿಲ್ಲ. ಅಲ್ಲದೆ ₹ 20 ಲಕ್ಷ ಹಣ ಖರ್ಚು ಮಾಡಿ ಮಗಳನ್ನು ಓದಿಸುವಷ್ಟು ಅವರು ಆರ್ಥಿಕವಾಗಿ ಶಕ್ತರಾಗಿರಲಿಲ್ಲ.

ನಲವತ್ತು ಸಾವಿರದ ಆಸುಪಾಸಿನ ರ್‍ಯಾಂಕು ಗಳಿಸಿರುವ ಪರಿಚಿತ ಹುಡುಗನೊಬ್ಬ, ಸರ್ಕಾರಿ ಕೋಟಾದಡಿ ತನಗೆ ಯಾವ ಕೋರ್ಸಿನ ಸೀಟು ಸಿಗುವುದೋ ಆ ಕೋರ್ಸು ಓದುವುದಾಗಿ ತನ್ನ ತಂದೆಗೆ ತಿಳಿಸಿದ. ಸ್ನೇಹಿತರ ಮಕ್ಕಳೆಲ್ಲ ಕಂಪ್ಯೂಟರ್ ಸೈನ್ಸ್ ಓದುತ್ತಿರುವಾಗ ತಮ್ಮ ಮಗ ಯಾಕೆ ಬೇರೆ ಕೋರ್ಸ್ ಓದಬೇಕು ಎಂದು ಭಾವಿಸಿದ, ಆರ್ಥಿಕವಾಗಿ ಸಬಲರಾದ ಹುಡುಗನ ತಂದೆ, ಮ್ಯಾನೇಜ್‍ಮೆಂಟ್ ಕೋಟಾ ಆದರೂ ಸಮಸ್ಯೆ ಇಲ್ಲ, ಕಂಪ್ಯೂಟರ್ ಸೈನ್ಸ್ ಕೋರ್ಸಿಗೇ ದಾಖಲಾಗುವಂತೆ ಮಗನಿಗೆ ಹೇಳಿ, ಮ್ಯಾನೇಜ್‍ಮೆಂಟ್ ಕೋಟಾದಡಿಯ ಸೀಟು ಕೊಡಿಸಿದ್ದಾರೆ.

ಆರಂಭದಿಂದಲೂ ಬೇಡಿಕೆ ಕಾಯ್ದುಕೊಂಡು ಬಂದಿರುವ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್ ಕೋರ್ಸುಗಳಿಗೆ ಹಿಂದಿನ ಐದಾರು ವರ್ಷಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಎಂಜಿನಿಯರಿಂಗ್ ಓದುವುದಾದರೆ ಕಂಪ್ಯೂಟರ್ ಸೈನ್ಸ್ ಮತ್ತು ಅದರ ಉಪವಿಭಾಗಗಳಿಗೆ ಸಂಬಂಧಿಸಿದ ಕೋರ್ಸುಗಳನ್ನು ಮಾತ್ರವೇ ಓದಬೇಕು ಎನ್ನುವ ಮನಃಸ್ಥಿತಿ ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರ ವಲಯದಲ್ಲಿ ಬೇರೂರಿದೆ. ಕೋರ್ (ಮೂಲ) ಎಂಜಿನಿಯರಿಂಗ್ ಕೋರ್ಸುಗಳಾದ ಮೆಕ್ಯಾನಿ
ಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ಗೆ ದಾಖಲಾಗಲು ವಿದ್ಯಾರ್ಥಿಗಳು ಹಿಂಜರಿಯುತ್ತಿರುವ ಕಾರಣದಿಂದಾಗಿ ಇದೀಗ ಶೈಕ್ಷಣಿಕ ಮತ್ತು ಔದ್ಯೋಗಿಕ ವಲಯದಲ್ಲಿ ಸಂದಿಗ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತಮ ರ್‍ಯಾಂಕು ಗಳಿಸಿದ ಬಹುಪಾಲು ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಮತ್ತು ಅದಕ್ಕೆ ಸಂಬಂಧಿತ ಎಂಜಿನಿಯರಿಂಗ್ ಕೋರ್ಸುಗಳಿಗೆ ದಾಖಲಾಗುತ್ತಿರುವುದರಿಂದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ಪದವೀಧರರ ಅಗತ್ಯವಿರುವ ಕಂಪನಿಗಳಿಗೆ ನಿರೀಕ್ಷೆಗೆ ತಕ್ಕಂತಹ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಬೇರೆ ಆಯ್ಕೆಗಳು ಇರದ ಕಾರಣದಿಂದಾಗಿ, ‘ಇರುವವರಲ್ಲಿಯೇ ಪರವಾಗಿಲ್ಲ’ ಎನ್ನುವ ಮಾನದಂಡದ ಆಧಾರದಲ್ಲಿ ಉದ್ಯೋಗಕ್ಕೆ ಆರಿಸಿಕೊಳ್ಳುತ್ತಿದ್ದಾರೆ.

ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸುಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡ ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು, ಬೇಡಿಕೆ ಇರುವ ಹೊಸ ಕೋರ್ಸುಗಳನ್ನು ಆರಂಭಿಸುವ ಜೊತೆಗೆ, ಇರುವ ಕೋರ್ಸುಗಳಲ್ಲಿನ ಸೀಟುಗಳನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಿಕೊಂಡಿವೆ. ಗಮನಾರ್ಹ ಸಂಗತಿ ಎಂದರೆ, ಬಹುತೇಕ ಕಾಲೇಜುಗಳಲ್ಲಿ ಹೊಸ ಕೋರ್ಸುಗಳನ್ನು ಬೋಧಿಸಲು ಅರ್ಹ ಅಧ್ಯಾಪಕರೇ ಇಲ್ಲ. ಬೋಧಕರನ್ನು ನೇಮಿಸಿಕೊಳ್ಳಲು ಕಾಲೇಜುಗಳು ಸಿದ್ಧವಿದ್ದರೂ, ಅಭ್ಯರ್ಥಿಗಳ ಅಲಭ್ಯತೆ ವ್ಯಾಪಕವಾಗಿ ಕಾಡುತ್ತಿದೆ.

ಎಲ್ಲರೂ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ಕೋರ್ಸುಗಳನ್ನೇ ಓದತೊಡಗಿದರೆ, ಉದ್ಯೋಗ ಮಾರುಕಟ್ಟೆಗೆ ಬೇಡಿಕೆಗಿಂತ ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳ
ಪ್ರವೇಶವಾಗಲಿದೆ. ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ಏರುಗತಿಯಲ್ಲಿರುವಾಗ ಅದಕ್ಕೆ ಪೂರಕವಾಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳೂ ಹೆಚ್ಚದಿದ್ದಲ್ಲಿ ಹಲವರಿಗೆ ಅರ್ಹ ಉದ್ಯೋಗ ಸಿಗದಿರುವ ಸಾಧ್ಯತೆಯೇ ಹೆಚ್ಚು.

ಆಸಕ್ತಿ, ಕಲಿಕಾ ಸಾಮರ್ಥ್ಯ ಮತ್ತು ಆರ್ಥಿಕ ಪರಿಸ್ಥಿತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವ ಸಂಯಮ ಈಗಷ್ಟೇ ಪಿಯುಸಿ ಮುಗಿಸಿ ಪದವಿಗೆ ಪ್ರವೇಶ ಪಡೆಯುವ ಹಂತದಲ್ಲಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮನೆ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT