ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಉತ್ತಮ ಶಾಲೆಗೆ ಉತ್ಸಾಹವೇ ಮುನ್ನುಡಿ

ಮಹಾರಾಷ್ಟ್ರದ ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ ತಂದಿರುವ ಉತ್ತಮ ಬದಲಾವಣೆ ಹಲವಾರು ಶಾಲೆಗಳಿಗೆ ಪ್ರೇರಣಾದ
Last Updated 16 ಜನವರಿ 2023, 21:12 IST
ಅಕ್ಷರ ಗಾತ್ರ

ಶಿಕ್ಷಕರು ತಮ್ಮಲ್ಲಿರುವ ಉತ್ಸಾಹ, ಆಸಕ್ತಿ, ಬಿಡದೇ ಮುನ್ನುಗ್ಗುವ ಛಲ, ಬದಲಾವಣೆಗೆ ತೆರೆದುಕೊಳ್ಳುವ ತುಡಿತದಿಂದ ಶಾಲೆಯನ್ನೇ ಬದಲಾಯಿಸಿದ ಅನೇಕ ಕತೆಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಂತಹುದೇ ತುಡಿತ ಮತ್ತು ಬದ್ಧತೆಯಿಂದ ಶಾಲೆಯನ್ನೇ ಆಮೂಲಾಗ್ರವಾಗಿ ಬದಲಾಯಿಸುವುದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶಿಕ್ಷಕರೊಬ್ಬರ ಯಶಸ್ಸಿನ ಕತೆಯ ಅವಲೋಕನ ನಮ್ಮೆಲ್ಲರಲ್ಲಿಯೂ ಹುಮ್ಮಸ್ಸು ಹೆಚ್ಚಿಸಬಲ್ಲದು.

ವಿದ್ಯಾರ್ಥಿಗಳನ್ನು ಪರಿಣಾಮಕಾರಿ ಕಲಿಕೆಯೆಡೆಗೆ ಕೊಂಡೊಯ್ಯಲು ಶಾಲೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವ ಪ್ರಯತ್ನವನ್ನು ಅನೇಕ ಖಾಸಗಿ ಶಾಲೆಗಳು ಮಾಡುತ್ತಿವೆ. ಆದಾಗ್ಯೂ ದೇಶ, ವಿದೇಶಗಳೇ ತಿರುಗಿ ನೋಡುವಂತೆ ತಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಡಿಜಿಟಲೀಕರಣ ಮಾಡಿದ್ದು ಸಂದೀಪ್ ಗುಂಡ್ ಎಂಬ ಉತ್ಸಾಹಿ ಶಿಕ್ಷಕ. ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ಪಶ್ಟೆಪಡ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂದೀಪ್ ಅವರು ಮಾಡಿರುವ ಸಾಧನೆ ಕಡಿಮೆಯೇನಲ್ಲ. ಇಲ್ಲಿನ ವಿದ್ಯಾರ್ಥಿಗಳು ಪಠ್ಯಪುಸ್ತಕ, ನೋಟ್‍ಪುಸ್ತಕಗಳನ್ನು ಶಾಲೆಗೆ ತೆಗೆದುಕೊಂಡು ಹೋಗುವುದಿಲ್ಲ. ಪಾಠಗಳನ್ನು ಪ್ರೊಜೆಕ್ಟರ್ ಬಳಸಿ ಬೋಧನೆ ಮಾಡಲಾಗುತ್ತದೆ.

ವಿದ್ಯಾರ್ಥಿಗಳು ತಮ್ಮಲ್ಲಿರುವ ಟ್ಯಾಬ್‍ಗಳಲ್ಲಿ ಶೇಖರವಾಗಿರುವ ಪಠ್ಯಪುಸ್ತಕಗಳನ್ನು ತೆರೆದು, ಓದುತ್ತಾರೆ. ಡಿಜಿಟಲ್ ಪೆನ್ ಬಳಸಿ ಟ್ಯಾಬ್‍ಗಳಲ್ಲಿಯೇ ಬರೆಯುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ಮಾರ್ಟ್ ಬೋರ್ಡ್ ಬಳಿ ಕರೆದು ವಿಷಯವನ್ನು ವಿವರಿಸಲು ಅಥವಾ ಲೆಕ್ಕ ಬಿಡಿಸಲು ತಿಳಿಸುತ್ತಾರೆ. ಈ ರೀತಿ ಪ್ರತೀ ವಿದ್ಯಾರ್ಥಿ ತನ್ನ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಬೋರ್ಡ್‌ನಲ್ಲಿ ಬರೆದ ಪ್ರತೀ ಮಾಹಿತಿಯು ವಿದ್ಯಾರ್ಥಿಯ ಹೆಸರಿನಲ್ಲಿ ಶೇಖರವಾಗುತ್ತದೆ. ಶಿಕ್ಷಕರು ನೀಡುವ ಕಿರು ಪರೀಕ್ಷೆ, ಪರೀಕ್ಷೆಗಳಿಗೆ ಉತ್ತರಗಳನ್ನು ವಿದ್ಯಾರ್ಥಿಗಳು ತಮ್ಮ ಟ್ಯಾಬ್‍ಗಳ ಮೂಲಕವೇ ಮಾಡುತ್ತಾರೆ. ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ಶಿಕ್ಷಕರು ಡಿಜಿಟಲ್ ವ್ಯವಸ್ಥೆಯಲ್ಲಿಯೇ ಮೌಲ್ಯಮಾಪನ ಮಾಡಿ, ಫಲಿತಾಂಶ ಘೋಷಿಸುತ್ತಾರೆ.

ಎಲ್ಲಾ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಯಾವ ರೀತಿ ಮುಂದುವರಿಯುತ್ತಿದ್ದಾರೆ ಎಂಬುದನ್ನು ವಿಶ್ಲೇಷಣೆ ಮಾಡಿ, ವರದಿಯನ್ನು ಶಿಕ್ಷಕರು ಸುಲಭವಾಗಿ ತಯಾರು ಮಾಡಿ, ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳ ಕಡೆ ವಿಶೇಷ ಗಮನ ನೀಡುತ್ತಾರೆ. ಟ್ಯಾಬ್‍ಗಳನ್ನು ಸೋಲಾರ್ ಬ್ಯಾಟರಿಗಳ ಮೂಲಕ ಚಾರ್ಜ್‌ ಮಾಡುವುದರಿಂದ ವಿದ್ಯುತ್ ಮೇಲೆ ಯಾವುದೇ ರೀತಿಯ ಅವಲಂಬನೆ ಇಲ್ಲ. ಈ ರೀತಿ ಶಾಲೆಯ ಸಂಪೂರ್ಣ ಡಿಜಿಟಲೀಕರಣವನ್ನು ಸರ್ಕಾರದಿಂದ ಒಂದು ರೂಪಾಯಿಯನ್ನೂ ಪಡೆಯದೆ ಸಂಪೂರ್ಣವಾಗಿ ಗ್ರಾಮಸ್ಥರು, ಪೋಷಕರು, ಕೊಡುಗೈ ದಾನಿಗಳ ನೆರವಿನಿಂದ ಮಾಡಿರುವುದು ವಿಶೇಷ ಸಂಗತಿ.

ಸಂದೀಪ್ ಗುಂಡ್ ಅವರ ಯಶಸ್ಸಿನ ಕಥನ ಕುತೂಹಲಕಾರಿಯಾಗಿದೆ. 2009ರಲ್ಲಿ ಕೆಲಸಕ್ಕೆ ಸೇರಿದಾಗ ಅವರು ಶಾಲೆಯ ಪರಿಸ್ಥಿತಿ ನೋಡಿ, ಬೇರೆ ಶಾಲೆಗೆ ಪೋಸ್ಟಿಂಗ್ ಮಾಡಿಕೊಡಲು ಇಲಾಖೆಯ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದರು. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ಶಾಲೆಯನ್ನು ಅಭಿವೃದ್ಧಿ ಮಾಡು ಎಂಬ ಇಲಾಖಾ ಅಧಿಕಾರಿಗಳ ಸಲಹೆಗೆ ಕಿವಿಯಾದ ಗುಂಡ್‌, ಬದಲಾವಣೆಗೆ ಮನಸ್ಸು ಮಾಡುತ್ತಾರೆ. ವಿದ್ಯಾರ್ಥಿಗಳು ಪದೇ ಪದೇ ಗೈರುಹಾಜರಾಗುವುದು, ಕಲಿಕೆಯಲ್ಲಿ ನಿರಾಸಕ್ತಿ, ಮನೆಯಲ್ಲಿ ಟಿ.ವಿ., ಮೊಬೈಲ್‍ಗಳಲ್ಲಿ ಸಕ್ರಿಯರಾಗಿದ್ದುದನ್ನು ಅರಿತ ಅವರು, ಶಾಲೆಯಲ್ಲಿ ಮಾಡಬಹುದಾದ ಬದಲಾವಣೆಗಳನ್ನು ಪಟ್ಟಿ ಮಾಡಿ, ಗ್ರಾಮಸ್ಥರ ಸಭೆ ಕರೆಯುತ್ತಾರೆ.

ಶಾಲೆಯ ಕುರಿತಾದ ತಮ್ಮ ಕನಸನ್ನು ಸಭೆಯಲ್ಲಿ ಉತ್ಸಾಹದಿಂದ ವಿವರಿಸುವುದನ್ನು ಕಂಡ ಒಬ್ಬ ಮಹಿಳೆ, ‘ನೀವು ಹೇಳಿದ ವಿಷಯ ನನಗೇನೂ ಅರ್ಥವಾಗಿಲ್ಲ. ಆದರೆ ನೀವೇನೋ ಮಾಡುವಿರಿ ಎಂಬ ನಂಬಿಕೆ ನನ್ನಲ್ಲಿ ಇದೆ’ ಎನ್ನುತ್ತಾ ತನ್ನ ಬೆವರಿನ ದುಡಿಮೆಯ ₹ 1,000 ಕೊಡುತ್ತಾಳೆ. ಇನ್ನೊಬ್ಬ ಗ್ರಾಮಸ್ಥ ₹ 50,000 ನೀಡುತ್ತಾರೆ. ಆ ಹಣವನ್ನು ಒಟ್ಟು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಖಾತೆ ತೆರೆದು, ಸಹಾಯಕ್ಕೆ ವಿನಂತಿಸಿದ ಕರೆಗೆ ನೆರವಿನ ಮಹಾಪೂರವೇ ಹರಿದುಬರುತ್ತದೆ. ತಾನೂ ಕಲಿಯುತ್ತ, ಕಲಿಸುತ್ತ ಶಾಲೆಯನ್ನು ಹಂತ ಹಂತವಾಗಿ ಸಂಪೂರ್ಣ ಡಿಜಿಟಲೀಕರಣ ಮಾಡುತ್ತಾರೆ.

ಇವರ ಯಶಸ್ಸಿನ ಕತೆಯಿಂದ ಪ್ರೇರಿತವಾದ ರಾಜ್ಯ ಸರ್ಕಾರವು ವಿಶಿಷ್ಟವಾದ ‘ಗುಂಡ್ ಮಾದರಿ’ಯನ್ನು ರಾಜ್ಯದ 11,000 ಶಾಲೆಗಳಲ್ಲಿ ಅಳವಡಿಸುತ್ತಿದೆ. ಉಳಿದ 50 ಸಾವಿರ ಶಾಲೆಗಳು ಬದಲಾವಣೆಯ ಹಾದಿಯಲ್ಲಿವೆ ಎನ್ನಲಾಗಿದೆ. ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳ ಅಧಿಕಾರಿಗಳು ಮತ್ತು ಶಿಕ್ಷಕರು ಗುಂಡ್ ಅವರ ಪ್ರಯೋಗವನ್ನು ನೋಡಿ, ತಿಳಿಯಲು ಅವರ ಶಾಲೆಗೆ ಭೇಟಿ ನೀಡುತ್ತಾರೆ. ಗುಂಡ್ ಅವರು ರಾಜ್ಯದಾದ್ಯಂತ ಓಡಾಡಿ ಅನೇಕ ಶಿಕ್ಷಕರ ಸಭೆಗಳಲ್ಲಿ ಮಾತನಾಡಿ, ತಮ್ಮ ಪ್ರಯತ್ನದ ಕುರಿತು ವಿವರಣೆ ನೀಡಿ, ಇತರ ಶಾಲೆಗಳಲ್ಲಿಯೂ ಸಾಧನೆಯ ಕಿಡಿ ಹೊತ್ತಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ವ್ಯಕ್ತಿಯೊಳಗಿನ ಸಾಧನೆಯ ತುಡಿತ ಹೇಗೆ ಎಲ್ಲೆಡೆ ಹಬ್ಬಬಹುದು ಎಂಬುದಕ್ಕೆ ಗುಂಡ್ ಅವರ ಕಥನ ಒಂದೊಳ್ಳೆ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT