ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ |ಸ್ವಾತಂತ್ರ್ಯ: ದಿನ ನಿಗದಿಯ ಕಸರತ್ತು

Published 13 ಆಗಸ್ಟ್ 2023, 23:31 IST
Last Updated 13 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಭಾರತದ ಸ್ವಾತಂತ್ರ್ಯೋತ್ಸವವನ್ನು ನಾವೆಲ್ಲರೂ ಆಗಸ್ಟ್ 15ರಂದು ಆಚರಿಸುತ್ತೇವೆ. ಆ ಸಂಭ್ರಮಕ್ಕೆ ಕಾರಣವಾದ ದಿನಾಂಕ ನಿಗದಿಯ ಕಸರತ್ತಿನ ಬಗ್ಗೆ ಅರಿಯುವ ಗೋಜಿಗೆ ನಾವು ಹೋಗುವುದಿಲ್ಲ. ಆ ಬಗ್ಗೆ ಕೇಳಿದರೂ ‘ಒಳ್ಳೆ ಕತೆಯಾಯಿತಲ್ಲ, ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 15ರಂದು, ಆದ್ದರಿಂದ...’ ಎಂಬ ಉತ್ತರ ಬರುವುದು ಸಹಜ. ಮತ್ತೆ ಅದೇ ಪ್ರಶ್ನೆ, ಅಂದೇ ಏಕೆ, ಒಂದೆರಡು ದಿನ ಹಿಂದೆ, ಮುಂದೆ ಯಾಕಲ್ಲ?

ನಮಗೆ ಸ್ವಾತಂತ್ರ್ಯ ದೊರಕಿದ್ದು ಬ್ರಿಟಿಷ್ ಪಾರ್ಲಿಮೆಂಟ್ 1947ರ ಫೆಬ್ರುವರಿ 20ರಂದು ಪಾಸು ಮಾಡಿದ ಇಂಡಿಯನ್ ಆ್ಯಕ್ಟ್ ಆಫ್‌ ಇಂಡಿಪೆಂಡೆನ್ಸ್– 1947ರ ಪ್ರಕಾರ. ಆ ಅಧಿನಿಯಮದಲ್ಲಿ ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್‌ ಪಾಕಿಸ್ತಾನ್ ಮತ್ತು ರಿಪಬ್ಲಿಕ್ ಆಫ್‌ ಇಂಡಿಯಾ ಎಂಬ ಎರಡು ರಾಷ್ಟ್ರಗಳನ್ನಾಗಿ ವಿಭಜಿಸುವ ತೀರ್ಮಾನವೂ ಆಗಿಹೋಗಿತ್ತು. ಅದರ ಪ್ರಕಾರ, ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರವನ್ನು ಒಟ್ಟಿಗೇ ಹಸ್ತಾಂತರಿಸಿದ್ದು 1947ರ ಆಗಸ್ಟ್ 15ರಂದು, ಅಂದರೆ ಆಗಸ್ಟ್ 14 ಮತ್ತು 15ರ ನಡುವಿನ ಮಧ್ಯರಾತ್ರಿ. ಹೀಗಾಗಿ ನಾವು ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ. ಪಾಕಿಸ್ತಾನದ ಪ್ರಮಾಣಿತ ಸಮಯವು ಭಾರತೀಯ ಪ್ರಮಾಣಿತ ಸಮಯಕ್ಕಿಂತ (ಐಎಸ್‍ಟಿ) 30 ನಿಮಿಷ ಹಿಂದೆ. ಹೀಗಾಗಿ, ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮತ್ತು ಅದು ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದು ಆಗಸ್ಟ್ 14ರಂದು. ಹಾಗೆ ನೋಡಿದರೆ, ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಲಾರ್ಡ್ ಮೌಂಟ್‍ಬ್ಯಾಟನ್‌ ಅವರಿಗೆ ಬ್ರಿಟಿಷ್ ಸಂಸತ್ತು ನಿಗದಿ ಮಾಡಿದ ದಿನಾಂಕ ಜೂನ್ 30, 1948. ಆದರೆ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಇಂಥ ಯಾವುದೇ ವಿಳಂಬವನ್ನು ಸಹಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಇರಲಿಲ್ಲ. ವಿಭಜನೆಯ ವಿಚಾರವನ್ನು ಎತ್ತಿಕೊಂಡು ಆಗಲೇ ದೇಶದ ನಾನಾ ಕಡೆ ಕೋಮು ಹಿಂಸಾಚಾರಗಳು ಭುಗಿಲೆದ್ದಿದ್ದವು. ಇವು ಇನ್ನೂ ಉಲ್ಬಣವಾಗುವ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ಮೌಂಟ್‍ಬ್ಯಾಟನ್ ಅಧಿಕಾರ ಹಸ್ತಾಂತರದ ದಿನಾಂಕವನ್ನು ಇನ್ನಷ್ಟು ಬೇಗ ಹಾಕಿಕೊಂಡು, ಸ್ವಾತಂತ್ರ್ಯವನ್ನು ಘೋಷಿಸಿದರು.

ಅದಕ್ಕಾಗಿ ಆಗಸ್ಟ್ ಹದಿನೈದನ್ನು ಆಯ್ಕೆ ಮಾಡಿಕೊಂಡಿದ್ದಕ್ಕೂ ಒಂದು ನಿರ್ದಿಷ್ಟ ಕಾರಣವಿದೆ. ಇಂಥ ಮಹತ್ವದ ಒಂದು ಐತಿಹಾಸಿಕ ಘಟನೆಗೆ ಒಂದು ಪ್ರಶಸ್ತ ದಿನವನ್ನು ನಿಗದಿಪಡಿಸುವುದು ಅಗತ್ಯವಲ್ಲವೇ? ಈ ಆಯ್ಕೆಯ ಅವಕಾಶವನ್ನು ಭಾರತೀಯರಿಗೆ ನೀಡದೆ, ಬ್ರಿಟಿಷರೇ ಈ ದಿನವನ್ನು ನಿಗದಿ ಮಾಡಿದರು. 1939- 45ರಲ್ಲಿ ನಡೆದ ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ, ಬ್ರಿಟನ್ನಿನ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಆಗಸ್ಟ್ 6 ಮತ್ತು 9ಕ್ಕೆ ಅನುಕ್ರಮವಾಗಿ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬುಗಳನ್ನು ಸಿಡಿಸಿತು. ನಗರಗಳು ನೆಲಸಮವಾದ ನಂತರ ಜಪಾನ್ ಬೇರೆ ದಾರಿ ಕಾಣದೆ ಬ್ರಿಟಿಷರಿಗೆ ಶರಣಾಯಿತು. ಅದು, 1945ರ ಆಗಸ್ಟ್ 15ರಂದು. 1947ರ ಆಗಸ್ಟ್‌ 15ಕ್ಕೆ ಈ ಘಟನೆಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರಕ್ಕೆ ಮೌಂಟ್‌ಬ್ಯಾಟನ್‌ ಈ ದಿನವನ್ನು ಆಯ್ಕೆ ಮಾಡಿಕೊಂಡರು.

ವಿಪರ್ಯಾಸದ ಸಂಗತಿ ಎಂದರೆ, ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯೂ ಸೇರಿದ ಹಾಗೆ ಸರಿಸುಮಾರು 190 ವರ್ಷಗಳವರೆಗೆ ತಾವು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ದೇಶಕ್ಕೆ ಕೊನೆಗೂ ಸ್ವಾತಂತ್ರ್ಯವನ್ನು ಘೋಷಿಸಲು ಆಯ್ಕೆ ಮಾಡಿಕೊಂಡಿದ್ದ ದಿನದಲ್ಲಿಯೂ ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ದರ್ಪವನ್ನೇ ಮೆರೆದಿದ್ದರು. ಇದು ಆಗಿನ ಭಾರತೀಯ ನಾಯಕರಿಗೆ ಇಷ್ಟವಾಗಿರಲಿಲ್ಲ. ಆದರೆ, ಅದನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಇಲ್ಲಿ, ಇನ್ನೊಂದು ಅಂಶವನ್ನೂ ಗಮನಿಸಬೇಕು.

1947 ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಗಳಿಸಿತು ಎಂದು ಹೇಳಲಾಗುತ್ತದೆ. ಆದರೆ, ಅಂದು ನಾವು ಸಾರ್ವಭೌಮ ರಾಷ್ಟ್ರವಾಗಿರಲಿಲ್ಲ. ನಮ್ಮದೇ ಸಂಸತ್ತು ಇದ್ದರೂ ದೇಶವನ್ನು ಆಳುತ್ತಿದ್ದುದು ಬ್ರಿಟಿಷರ ದಿ ಗವರ್ನಮೆಂಟ್‌ ಆಫ್ ಇಂಡಿಯಾ ಆ್ಯಕ್ಟ್– 1935ರ ಪ್ರಕಾರವೇ. ಅಲ್ಲಿಯವರೆಗೆ ಬ್ರಿಟಿಷ್ ವೈಸರಾಯ್‌ ಆಗಿದ್ದ ಮೌಂಟ್ ಬ್ಯಾಟನ್, ಬ್ರಿಟಿಷ್‌ ರಾಜರ ಪರವಾಗಿ ನಮ್ಮ ಗವರ್ನರ್ ಜನರಲ್ ಆಗಿ ಮುಂದುವರಿದರು. ಹಾಗಾದರೆ ನಾವು ಆಗ ಸಾವರಿನ್ ಅಥವಾ ಸಾರ್ವಭೌಮ ರಾಷ್ಟ್ರವಾಗಿರಲಿಲ್ಲವೇಕೆ? ಏಕೆಂದರೆ, ನಮಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ನಮ್ಮ ದೇಶವನ್ನು ನಾವೇ ಆಳಿಕೊಳ್ಳಲು ಅಗತ್ಯ ‘ಸಂವಿಧಾನ’ ನಮ್ಮಲ್ಲಿ ಇರಲಿಲ್ಲ.

ಭಾರತಕ್ಕೆ ಬೇಕಾದ ಸಂವಿಧಾನವನ್ನು ರಚಿಸಿಕೊಳ್ಳುವ ಕಾರ್ಯವು 1946ರಲ್ಲಿಯೇ ಡಿಸೆಂಬರ್ 6ರಿಂದ ಆರಂಭವಾಗಿತ್ತೇನೋ ನಿಜ. ಆದರೆ ಅದು ಆಗಿನ್ನೂ ಪರಿಪೂರ್ಣವಾಗಿ ಸಿದ್ಧವಾಗಿರಲಿಲ್ಲ. ಭಾರತದ ವಿವಿಧ ಪ್ರದೇಶಗಳಿಂದ ಜನರ ಪರೋಕ್ಷ ಆಯ್ಕೆಯ ಮೂಲಕ ಬಂದ 299 ಜನರ ‘ಸಂವಿಧಾನ ರಚನಾ ಸಭೆ’ಯು ಈ ಕಾರ್ಯದಲ್ಲಿ ತೊಡಗಿತ್ತು. ‘ಕರಡು ರಚನಾ ಸಮಿತಿ’ಯ ಅಧ್ಯಕ್ಷರಾಗಿದ್ದ ಬಿ.ಆರ್.ಅಂಬೇಡ್ಕರ್ ಅವರು ಭಾರತ ಸಂವಿಧಾನದ ಸಮಗ್ರ ಕರಡನ್ನು ತಯಾರಿಸಿ, ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ್‌ ಅವರಿಗೆ 1949ರ ನವೆಂಬರ್ 25ರಂದು ಸಲ್ಲಿಸಿದರು. ಮರುದಿನವೇ, ಅಂದರೆ, 1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನವು ಅಂಗೀಕಾರವಾಯಿತು (ಆ ದಿನವನ್ನು ನಾವೀಗ ಪ್ರತಿವರ್ಷ ‘ರಾಷ್ಟ್ರೀಯ ಸಂವಿಧಾನ ದಿನ’ವೆಂದು ಆಚರಿಸುತ್ತೇವೆ). ಅದು ದೇಶದಲ್ಲಿ ಜಾರಿಗೆ ಬಂದಿದ್ದು 1950ರ ಜ. 26ರಂದು. ಭಾರತವು ತನ್ನದೇ ಆದ ಸಂವಿಧಾನ ಹೊಂದಿರುವ, ಸಾರ್ವಭೌಮ ಜನಸತ್ತಾತ್ಮಕ ಗಣರಾಜ್ಯವಾಗಿ ಹೊಮ್ಮಿದ್ದು ಅದೇ ದಿನ. ಅಂದು ನಾವು ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT