ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಆಚರಣೆಯ ಆಶಯ ಅರಿಯೋಣ..

ಆಚರಣೆಗಳು ದಿನೇ ದಿನೇ ಮೌಲ್ಯ ಕಳೆದುಕೊಳ್ಳುತ್ತಿವೆ. ಅವು ಸ್ಫೂರ್ತಿ ತುಂಬಲು ಮತ್ತು ಕ್ರಿಯಾಶೀಲತೆ ಬೆಳೆಯಲು ಕಾರಣವಾಗಬೇಕು
Published 10 ಡಿಸೆಂಬರ್ 2023, 19:32 IST
Last Updated 10 ಡಿಸೆಂಬರ್ 2023, 19:32 IST
ಅಕ್ಷರ ಗಾತ್ರ

ಸಹಕಾರಿ ಸಪ್ತಾಹ ಕಾರ್ಯಕ್ರಮವೊಂದಕ್ಕೆ ಈಚೆಗೆ ತೆರಳಿದ್ದೆ. ಹೆಚ್ಚಿಗೆ ಜನ ಸೇರಿರಲಿಲ್ಲ. ಸಂಘಟಕರು ಕಾರ್ಯಕ್ರಮವನ್ನು ಬೇಗ ಮುಗಿಸುವ ಅವಸರದಲ್ಲಿದ್ದರು. ಅಧ್ಯಕ್ಷತೆ ವಹಿಸಬೇಕಾಗಿದ್ದ ಗಣ್ಯರು ಬರಲಿಲ್ಲ. ಬಂದಿದ್ದವರಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಿವೃತ್ತ ಶಿಕ್ಷಕರೊಬ್ಬರು ವಿಶೇಷ ಉಪನ್ಯಾಸ ನೀಡಿದರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಮಾತನಾಡಿದರು, ಆದರೆ ಸಹಕಾರಿ ರಂಗದ ಬಗ್ಗೆ ಚಕಾರ ಎತ್ತಲಿಲ್ಲ.

ತುರ್ತಾಗಿ ಒಂದು ಕೆಲಸಕ್ಕೆ ಹೋಗಬೇಕು ಎಂದು ಅಧ್ಯಕ್ಷರು ಭಾಷಣ ಮಾಡದೇ ಹೊರಟುಹೋದರು. ಸಿಹಿ ಹಂಚಿದ ಮೇಲೆ ಕಾರ್ಯಕ್ರಮ ಮುಕ್ತಾಯವಾಯಿತು. ಸರ್ಕಾರಿ ಪ್ರಾಯೋಜಿತ ಬಹಳಷ್ಟು ಆಚರಣೆಗಳು ಇದೇ ಮಾದರಿಯಲ್ಲಿ ನಡೆಯುತ್ತಿವೆ. ಆಚರಣೆಗಳ ಮೌಲ್ಯ ಕ್ಷೀಣಿಸತೊಡಗಿದೆ.

ಸಪ್ತಾಹ, ಜಯಂತಿ, ಮಹತ್ವದ ದಿನಾಚರಣೆಗಳ ಹಿಂದೆ ಸಮಾಜದ ಸಮಗ್ರ ವಿಕಾಸಕ್ಕೆ ಸ್ಫೂರ್ತಿ ತುಂಬುವ ಉದ್ದೇಶ ಮತ್ತು ಧ್ಯೇಯ ಅಡಗಿರುತ್ತವೆ. ಸಹಕಾರಿ ಸಪ್ತಾಹದಲ್ಲಿ ಸಹಕಾರಿ ರಂಗದ ಸಬಲೀಕರಣ, ಮುಚ್ಚಿದ ಸಹಕಾರಿ ಸಂಘಗಳ ಪುನಶ್ಚೇತನ, ಸಹಕಾರಿ ಸಂಘಟನೆಯಿಂದ ಆಗುವ ಸಾಮೂಹಿಕ ಉನ್ನತಿ, ನಾಯಕತ್ವದ ಗುಣ, ಹಂಚಿ ತಿನ್ನುವ ಸಹಕಾರಿ ಮನೋಭಾವವನ್ನು ಬೆಳೆಸುವ ಕುರಿತು ಚಿಂತನ–ಮಂಥನ ನಡೆಸುವ ಉದ್ದೇಶ ಇರುತ್ತದೆ. ಸಪ್ತಾಹ ಆಚರಣೆ ಒಂದು ವಾರ ನಡೆಯಬೇಕು. ಆದರೆ ಬಹಳಷ್ಟು ಕಡೆ ಶಿಷ್ಟಾಚಾರ ಎಂಬಂತೆ ಒಂದು ಸಭೆ–ಸಮಾರಂಭ ಮಾಡಿ ಮುಕ್ತಾಯಗೊಳಿಸುತ್ತಾರೆ.

ಇಂತಹ ಸಪ್ತಾಹಗಳನ್ನು ಅರ್ಥಪೂರ್ಣವಾಗಿಆಚರಿಸಬೇಕು. ಸಂಬಂಧಿಸಿದ ಕ್ಷೇತ್ರದ ಆಗುಹೋಗುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ತಜ್ಞರ ಅಭಿಪ್ರಾಯ ತಿಳಿದುಕೊಳ್ಳಬೇಕು. ಹೊಸ ಹೊಸ ಬೆಳವಣಿಗೆ ಅರಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಇವೆಲ್ಲ ಸಪ್ತಾಹ ಆಚರಣೆ ಸಂದರ್ಭದಲ್ಲಿ ನಡೆಯಬೇಕಾದ ಕಾರ್ಯಗಳು. ಆದರೆ ಬಹಳಷ್ಟು ಆಚರಣೆಗಳು ನೆಪಮಾತ್ರಕ್ಕೆ ನಡೆಯುತ್ತಿವೆ.

ಮಹಾನ್ ವ್ಯಕ್ತಿಗಳ ಜಯಂತಿ, ಪುಣ್ಯಸ್ಮರಣೆ, ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳು ಮತ್ತು ಸಪ್ತಾಹಗಳ ಸಂಖ್ಯೆ ತುಂಬ ದೊಡ್ಡದಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದಿನಗಳನ್ನು ಆಚರಿಸಲಾಗುತ್ತಿದೆ. ಗ್ರಾಮ ಮಟ್ಟದ ಆಚರಣೆಗೆ ಪಂಚಾಯಿತಿ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಸಂಘ ಸಂಸ್ಥೆಗಳಲ್ಲಿ ನಡೆಯುವ ಆಚರಣೆಗೆ ಆ ಸಂಸ್ಥೆಗಳ ಮುಖ್ಯಸ್ಥರು ಹೊಣೆಗಾರರು. ಅವರು ತಮ್ಮ ಸಿಬ್ಬಂದಿಗೆ ಸಿದ್ಧತೆ ನಡೆಸುವ ಹೊಣೆ ವಹಿಸುತ್ತಾರೆ. ಅವರು ಹಳೆಯ ಕಡತ ನೋಡಿ, ಹಿಂದಿನ ಮಾದರಿಯನ್ನೇ ಪುನರಾವರ್ತನೆ ಮಾಡುತ್ತಾರೆ. ಅಲ್ಲಿ ಹೊಸ ಚಿಂತನೆಗೆ ಅವಕಾಶವೇ ಇರುವುದಿಲ್ಲ.

ಅಂತರರಾಷ್ಟ್ರೀಯ ಮಹಿಳಾ ದಿನ, ಜಲ ದಿನ, ಆರೋಗ್ಯ ದಿನ, ಹುಲಿ ಸಂರಕ್ಷಣಾ ದಿನ, ಪ್ರವಾಸಿ ದಿನ, ಮತದಾನ ಜಾಗೃತಿ ದಿನ, ಎಂಜಿನಿಯರ್‌ಗಳ ದಿನ, ಪೋಷಕಾಂಶ ಸಪ್ತಾಹ, ಸಾಕ್ಷರತಾ ಸಪ್ತಾಹ, ವಿಜ್ಞಾನ ಸಪ್ತಾಹ... ಹೀಗೆ ಸಾಲು ಸಾಲು ಆಚರಣೆಗಳಿವೆ. ಹೊಸ ಆಚರಣೆಗಳೂ ಸೇರ್ಪಡೆಯಾಗುತ್ತವೆ. ಚಂದ್ರಯಾನ-3 ಯಶಸ್ವಿಯಾದ ಬಳಿಕ, ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯಲ್ಲಿ, ಶಾಲಾ ಪಠ್ಯದಲ್ಲಿ ಅವರ ಬಗ್ಗೆ ಇರುವ ವಿಷಯವನ್ನೇ ಗಿಳಿ ಪಾಠದಂತೆ ಒಪ್ಪಿಸಲಾಗುತ್ತದೆ. ಪಠ್ಯದ ಆಚೆಗೂ ಗಣ್ಯರ ಸಾಧನೆಗಳನ್ನು ದಿನಾಚರಣೆಯಲ್ಲಿ ಪರಿಚಯಿಸಬೇಕು. ಸಂಘಟಕರು ಆಸಕ್ತಿ ವಹಿಸಿದರೆ ಮಾತ್ರ ಇದು ಸಾಧ್ಯ. ಕೆಲವು ದಿನಾಚರಣೆಗಳು ಸಮುದಾಯ ಆಧಾರಿತವಾಗಿ ನಡೆಯುತ್ತಿವೆ. ಆ ಸಮುದಾಯದ ಜನ ಮಾತ್ರ ಭಾಗವಹಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸರ್ಕಾರಿ, ಅರೆ ಸರ್ಕಾರಿ, ಸಂಘ–ಸಂಸ್ಥೆಗಳ ಮೂಲಕ ನಡೆಯುವ ಆಚರಣೆಗಳಲ್ಲಿ ಸಮಾಜದ ಎಲ್ಲ ವರ್ಗದವರು ಭಾಗವಹಿಸುವ ಸೌಹಾರ್ದದ ವಾತಾವರಣವನ್ನು ನಿರ್ಮಿಸಬೇಕು. ಆಚರಣೆಗಳು ಜನರನ್ನು ಒಂದುಗೂಡಿಸುವ ಕೆಲಸ ಮಾಡಬೇಕೇ ವಿನಾ ವಿಭಜಿಸುವ ಕೆಲಸವನ್ನಲ್ಲ.

ಪ್ರತಿವರ್ಷ ಕೈಗಾರಿಕೆಗಳಲ್ಲಿ ಅಂತರರಾಷ್ಟ್ರೀಯ ಸುರಕ್ಷಾ ಸಪ್ತಾಹ ಆಚರಿಸಲಾಗುತ್ತದೆ. ‘ಶೂನ್ಯಹಾನಿ’ ಈ ವರ್ಷದ ಘೋಷವಾಕ್ಯ. ಕೈಗಾರಿಕೆಗಳಲ್ಲಿ ಈ ಸಪ್ತಾಹ ಆಚರಣೆಯನ್ನು ಕೈಗಾರಿಕಾ ಇಲಾಖೆ ಕಡ್ಡಾಯ
ಗೊಳಿಸಿದೆ. ‘ಸುರಕ್ಷತೆ ಮೊದಲು’ ಎಂಬ ಉತ್ತಮ ಘೋಷವಾಕ್ಯವನ್ನು ಮತ್ತೆ ಮತ್ತೆ ಹೇಳಲಾಗುತ್ತದೆ. ಆದರೆ ಬಹಳಷ್ಟು ಕೈಗಾರಿಕೆಗಳು ಸಪ್ತಾಹ ಆಚರಿಸುವುದಿಲ್ಲ. ಕಾರ್ಖಾನೆಗಳ ಮುಂದೆ ಬ್ಯಾನರ್ ಕಟ್ಟಿ, ಫೋಟೊ ತೆಗೆದು, ಆಚರಿಸಿದಂತೆ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಕಳಿಸುತ್ತಾರೆ. ‘ಕಾರ್ಮಿಕರನ್ನು ಒಳಗೊಂಡು ಸುರಕ್ಷತಾ ದಿನವನ್ನು ಯಾಕೆ ಆಚರಿಸುವುದಿಲ್ಲ?’ ಎಂದು ಕಾರ್ಖಾನೆ ಅಧಿಕಾರಿಯೊಬ್ಬರನ್ನು ಕೇಳಿದಾಗ, ‘ಕಾರ್ಮಿಕರಿಗೆ ಸುರಕ್ಷತೆಯ ಬಗ್ಗೆ ಹೆಚ್ಚಿಗೆ ಮಾಹಿತಿ ನೀಡಿದರೆ ಸುರಕ್ಷತೆಗೆ ಬೇಕಾಗುವ ಉಪಕರಣ
ಗಳನ್ನು ಪೂರೈಸಲು ಬೇಡಿಕೆ ಇಡುತ್ತಾರೆ, ಚಳವಳಿ ಮಾಡುತ್ತಾರೆ. ಅದು ದೊಡ್ಡ ತಲೆನೋವು’ ಎಂದರು!

ದಿನಾಚರಣೆ, ಸಪ್ತಾಹಗಳ ಆಚರಣೆಯು ಸ್ಫೂರ್ತಿ, ಕ್ರಿಯಾಶೀಲತೆ ಬೆಳೆಯುವುದಕ್ಕೆ ಮತ್ತು ಉತ್ತಮ ಫಲಿತಾಂಶ ಬರುವುದಕ್ಕೆ ಕಾರಣವಾಗಬೇಕು. ಸಂಬಂಧಿಸಿದ ಎಲ್ಲರಲ್ಲೂ ಹೊಸ ಉತ್ಸಾಹ, ಹುಮ್ಮಸ್ಸು ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT