ಮಂಗಳವಾರ, ಅಕ್ಟೋಬರ್ 22, 2019
21 °C
ನಮ್ಮ ನೆಲದಲ್ಲಿನ ಸರ್ಕಾರಿ ಸಂಸ್ಥೆಯಲ್ಲೇ ನಾಗರಿಕರಿಗೆ ಮೂಲಭೂತ ಸೇವೆ ಕನ್ನಡದಲ್ಲಿ ದೊರೆಯಲಿಲ್ಲವೆಂದರೆ, ಇನ್ನು ಖಾಸಗಿ ಸೇವೆಗಳ ಪಾಡೇನು?

ಹಿಂದಿಗೆ ವಿರೋಧ: ಕಲಿಕೆಗಲ್ಲ, ಹೇರಿಕೆಗೆ

Published:
Updated:
Prajavani

‘ಹಿಂದಿ ಬಳಕೆ: ಭಾಷಾ ಆವೇಶವೇಕೆ?’ ಎಂದು ಡಿ.ಎ.ಶಂಕರ್ ಪ್ರಶ್ನಿಸಿದ್ದಾರೆ (ಸಂಗತ, ಸೆ. 23). ಮೊದಲಿಗೆ, ಲೇಖಕರು ಹಿಂದಿ ಬಳಕೆ ಮತ್ತು ಹೇರಿಕೆಯ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಿದಂತಿಲ್ಲ ಅಥವಾ ಗಮನಿಸಿದ್ದರೂ ಅದನ್ನು ನಿರ್ಲಕ್ಷಿಸಿ, ಹಿಂದಿ ಬಳಸಿದರೆ ವೈಯಕ್ತಿಕ ನೆಲೆಯಲ್ಲಿ ಆಗಬಹುದಾದ ಲಾಭಗಳನ್ನು ಮುನ್ನೆಲೆಗೆ ತಂದು, ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಬಹುದು. ಹಿಂದಿ ಹೇರಿಕೆಯಿಂದ ಆಗಬಹುದಾದ ಅನನುಕೂಲದ ಪುಟ್ಟ ಉದಾಹರಣೆ ನೀಡಬಯಸುತ್ತೇನೆ.

ರಾಷ್ಟ್ರೀಕೃತ ಬ್ಯಾಂಕ್ ಒಂದಕ್ಕೆ ಇತ್ತೀಚೆಗೆ ಹೋಗಿದ್ದಾಗ, ಮಹಿಳೆಯೊಬ್ಬರು ಗ್ರಾಹಕ ಸಂಪರ್ಕ ಅಧಿಕಾರಿಯೊಂದಿಗೆ ಏನನ್ನೋ ಕನ್ನಡದಲ್ಲಿ ಕೇಳುತ್ತಿದ್ದರು. ಆಕೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಗ್ರಾಹಕರಿಗೆ ಮಾಹಿತಿ ನೀಡಿ ಸೂಕ್ತ ಮಾರ್ಗದರ್ಶನ ಕೊಡಬೇಕಾದಂತಹ ಆ ವ್ಯಕ್ತಿಗೆ ಹಿಂದಿ ಮತ್ತು ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಆ ಮಹಿಳೆ ತನ್ನ ಸಮಸ್ಯೆಯನ್ನು ಹೇಳಲು ಪಡುತ್ತಿದ್ದ ಬವಣೆ ನೋಡಿ, ಕೊನೆಗೆ ನಾನೇ ಅವರಿಬ್ಬರ ಮಧ್ಯೆ ಭಾಷಾಂತರಕಾರನಾಗಿ ಕೆಲಸ ಮಾಡಬೇಕಾಯಿತು.

ಆ ಅಧಿಕಾರಿಗೆ ಕನ್ನಡ ಗೊತ್ತಿದ್ದರೆ ಅಥವಾ ಗ್ರಾಹಕ ಸೇವೆಗೆ ಸ್ಥಳೀಯ ಭಾಷೆ ಗೊತ್ತಿರುವುದು ಅತ್ಯವಶ್ಯಕ ಎಂಬ ಕನಿಷ್ಠ ಜ್ಞಾನವು ಅವರನ್ನು ನಿಯೋಜಿಸಿದ ಅಧಿಕಾರಿಗಳಿಗೆ ಗೊತ್ತಿದ್ದರೆ ಈ ಗೊಂದಲ ತಪ್ಪುತ್ತಿತ್ತು. ರಾಜ್ಯದಾದ್ಯಂತ ಇಂದು ಯಾವುದೇ ಬ್ಯಾಂಕ್‍ಗೆ ಹೋದರೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ನಮ್ಮದೇ ನೆಲದಲ್ಲಿರುವ ಸರ್ಕಾರಿ ಸಂಸ್ಥೆಯಲ್ಲಿಯೇ ಸಾಮಾನ್ಯ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಸೇವೆ ಕನ್ನಡದಲ್ಲಿ ದೊರೆಯಲಿಲ್ಲವೆಂದರೆ, ಇನ್ನು ಖಾಸಗಿ ಸೇವೆಗಳ ಪಾಡೇನು? ಇಂದು ಜನರು ವಿರೋಧಿಸುತ್ತಿರುವುದು ಈ ರೀತಿಯ ಹೇರಿಕೆಯನ್ನೇ ಹೊರತು, ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಪರಭಾಷೆ ಕಲಿಯುವುದನ್ನಲ್ಲ. ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡವನ್ನು ಕಲಿಸಬೇಕೇ ಹೊರತು, ‘ಹಿಂದಿ ದಿವಸ್’ ಆಚರಿಸಿ, ಗ್ರಾಹಕರಿಗೇ ಹಿಂದಿ ಕಲಿಸಲು ಪ್ರಯತ್ನಿಸುವುದಲ್ಲ.

ಇನ್ನು ಲೇಖಕರು, ಬೇರೆ ರಾಜ್ಯಗಳಿಗೆ ಹೋದಾಗ ಹಿಂದಿಯಿಂದ ಆಗುವ ಅನುಕೂಲಗಳನ್ನು ವಿವರಿಸಿದ್ದಾರೆ. ಅದು ಭಾಗಶಃ ಸರಿಯೆಂದೇ ಹೇಳಬೇಕು. ಏಕೆಂದರೆ ನಾನು ಕೂಡ ಕಾರ್ಯನಿಮಿತ್ತ ಉತ್ತರದ ರಾಜ್ಯಗಳಿಗೆ ಹೋದಾಗ ಅದರ ಲಾಭವನ್ನು ಪಡೆದಿದ್ದೇನೆ. ಆದರೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಒಳನಾಡಿಗೆ ಹೋದಾಗ ಹಿಂದಿಗಿಂತ ಹರುಕು ಮುರುಕು ಸ್ಥಳೀಯ ಭಾಷೆಯೇ ಮೇಲು.

ಇನ್ನು ಹಿಂದಿ ಕಲಿಕೆಯಿಂದ ವೈಯಕ್ತಿಕ ಕೆಲಸಕ್ಕೆ ಆಗುವ ಲಾಭವು ಎಲ್ಲಾ ರಾಜ್ಯ, ಭಾಷೆಗಳಿಗೂ ಅನ್ವಯಿಸುತ್ತದೆ. ದೇಶದ ಬೇರೆ ಬೇರೆ ಭಾಗಗಳಿಂದ ಹೊಟ್ಟೆಪಾಡಿಗಾಗಿ ಕರ್ನಾಟಕಕ್ಕೆ ಬಂದವರು ವ್ಯವಹಾರಕ್ಕಾಗಿ ಕನ್ನಡ ಕಲಿತಿಲ್ಲವೇ? ವ್ಯಾಪಾರಕ್ಕಾಗಿ ಬೇರೆ ರಾಜ್ಯಗಳಿಗೆ ಓಡಾಡುವ ಕನ್ನಡಿಗರು ಅಲ್ಲಿನ ಭಾಷೆಗಳನ್ನು ಚೆನ್ನಾಗಿ ಕಲಿತಿಲ್ಲವೇ? ಅಷ್ಟೇಕೆ, ಎಷ್ಟೋ ಕನ್ನಡಿಗರು ಉದ್ಯೋಗದ ಅವಶ್ಯಕತೆಗಾಗಿ ಜರ್ಮನ್, ಫ್ರೆಂಚ್, ಜಪಾನಿ ಭಾಷೆಗಳನ್ನೂ ಕಲಿತಿಲ್ಲವೇ? ಅದನ್ನು ಯಾರು ವಿರೋಧಿಸಿದ್ದಾರೆ? ಇಂದು ಕನ್ನಡಿಗರಿಗೆ ಇರುವಷ್ಟು ಪರಭಾಷಾ ಸಹಿಷ್ಣುತೆ ಮತ್ತು ಪರಭಾಷಾ ಜ್ಞಾನ (ಕರ್ನಾಟಕದ ಆಚೆಗೆ ಹೋಗದಿದ್ದರೂ) ಬೇರೆ ರಾಜ್ಯದವರಿಗೆ ಇಲ್ಲವೆಂದೇ ಹೇಳಬಹುದು. ಅಲ್ಲಿಗೆ ಕನ್ನಡಿಗರು ಹಿಂದಿಯನ್ನು ವಿರೋಧಿಸುತ್ತಾರೆ ಎಂಬ ಮಾತಿಗೆ ಅರ್ಥವೇ ಇಲ್ಲ.

ಇನ್ನು, ಇಂಗ್ಲಿಷ್‍ಗಿಂತ ಹಿಂದಿಯೇ ಹೆಚ್ಚು ಜನಬಳಕೆಯಲ್ಲಿದೆ, ರಾಮಾಯಣ, ಮಹಾಭಾರತ ಧಾರಾವಾಹಿಗಳು ಹಿಂದಿಯಲ್ಲಿ ಬಂದಿದ್ದರಿಂದ ಜನಪ್ರಿಯವಾದವು ಎಂದು ಲೇಖಕರು ಹೇಳಿದ್ದಾರೆ. ನಿಜವಾಗಿ ಜನಸಾಮಾನ್ಯರಿಗೆ ಹಿಂದಿಗಿಂತ ಇಂಗ್ಲಿಷ್‌ನ ಪದಗಳೇ ಚಿರಪರಿಚಿತ. ಇಂದಿಗೂ ಒಬ್ಬ ಸಾಮಾನ್ಯ ಕನ್ನಡಿಗನಿಗೆ ಹಿಂದಿಯ ಆಮ್, ಅದ್ರಕ್, ಕಿತಾಬ್, ಈಕ್ ಪದಗಳು ಹೆಚ್ಚು ಪರಿಚಿತವೋ ಇಂಗ್ಲಿಷ್‌ನ ಮ್ಯಾಂಗೊ, ಜಿಂಜರ್, ಬುಕ್, ಶುಗರ್‌ಕೇನ್‌ ಪರಿಚಿತವೋ?

ಇನ್ನು ರಾಮಾಯಣ, ಮಹಾಭಾರತ ಧಾರಾವಾಹಿಗಳು ಸ್ಥಳೀಯ ಭಾಷೆಗಳಲ್ಲಿ ಬಂದಿದ್ದರೆ ಇನ್ನೂ ಹೆಚ್ಚು ಜನಪ್ರಿಯವಾಗುತ್ತಿದ್ದವು. ಎಲ್ಲಾ ಭಾಷೆಗಳಲ್ಲಿ ಮಾಡುವ ಆರ್ಥಿಕ ಸೌಲಭ್ಯ ಇಲ್ಲದೆ, ಇರುವುದರಲ್ಲಿ ಹೆಚ್ಚು ಜನರಿಗೆ ಅರ್ಥವಾಗುವ ಭಾಷೆ ಎಂದು ಅವು ಕೇವಲ ಹಿಂದಿಯಲ್ಲಿ ಬಂದದ್ದಷ್ಟೇ. ಆಗಲೂ ಸಾಮಾನ್ಯ ಜನರಿಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ. ಅದಕ್ಕೆಂದೇ ಕನ್ನಡದ ಕೆಲವು ಪತ್ರಿಕೆಗಳು ‘ಮಹಾಭಾರತ’ ಧಾರಾವಾಹಿಯ ಅಂದಿನ ಎಪಿಸೋಡ್‍ನ ಕನ್ನಡ ಭಾಷಾಂತರವನ್ನು ಪ್ರಕಟಿಸುತ್ತಿದ್ದವು. ಎಷ್ಟೋ ಜನ ಅದನ್ನು ಓದಿಯೇ ಅಂದಿನ ಕಥೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅದರಲ್ಲೇ ಅರ್ಥವಾಗುತ್ತದೆ ಸ್ಥಳೀಯ ಭಾಷೆಯ ಅವಶ್ಯಕತೆ ಎಷ್ಟೆಂದು.

ಕನ್ನಡಿಗರು ಅಸ್ಮಿತೆಗಾಗಿ ಕನ್ನಡ, ಅವಕಾಶಗಳ ಹೆಬ್ಬಾಗಿಲಾಗಿ ಇಂಗ್ಲಿಷ್, ಸಂಪರ್ಕದ ಭಾಷೆಯಾಗಿ ಹಿಂದಿಯನ್ನು ಖಂಡಿತ ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಆದ್ಯತೆಯಾಗಬೇಕು ಮತ್ತು ಇಲ್ಲಿ ಎಲ್ಲಾ ಸೇವೆಗಳೂ ಕಡ್ಡಾಯವಾಗಿ ಕನ್ನಡದಲ್ಲಿ ದೊರಕಿ ಎಲ್ಲರನ್ನೂ ಒಳಗೊಳ್ಳಬೇಕೆಂಬುದು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವವರ ಆಶಯವೇ ಹೊರತು, ನಾವು ಬೇರೆ ಭಾಷೆಯನ್ನು ಕಲಿಯುವುದಿಲ್ಲ ಎಂದಲ್ಲ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)