ಭಾನುವಾರ, ಫೆಬ್ರವರಿ 23, 2020
19 °C

ವಿಡಂಬನೆ | ಸುದ್ದಿಯಲ್ಲಿ ಇರುವುದು ಹೇಗೆ?

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಕುಖ್ಯಾತ ಲೇಖಕ ಕಿ.ತಾ.ಪತಿ ಅವರು ತಮ್ಮ ಹೊಸ ಪುಸ್ತಕ ‘ಸುದ್ದಿಯಲ್ಲಿರುವುದು ಹೇಗೆ?’ ಮೂಲಕ ಇಂದಿನ ಮಜಾಕಾರಣಿಗಳಿಗೆ ಅಮೃತವನ್ನೇ ಹಂಚುವ ಪ್ರಯತ್ನ ಮಾಡಿದ್ದಾರೆ. ಮಜಾಕೀಯ ವಲಯದಲ್ಲಿ ಯಾವತ್ತೂ ಚಾಲ್ತಿಯಲ್ಲಿರಬೇಕಾದರೆ ಆಗಾಗ ಸುದ್ದಿ ಮಾಡುವುದು ಅನಿವಾರ್ಯ. ಹಾಗೆ ಮಾಡುವ ಸುದ್ದಿಗಳು ‘ಚೀಪ್’ ಆದಷ್ಟೂ ಅವು ಅಧಿಕ ಜನರನ್ನು ಮುಟ್ಟುತ್ತವೆ ಎಂಬುದು ಅನೇಕ ಪಕ್ಷ ಮುಖಂಡರ ನಂಬಿಕೆ. ಅಂತಹ ‘ಚೀಪ್’ ಹೇಳಿಕೆಗಳನ್ನು ಕೊಡುವುದಕ್ಕೆ ಯಾವ ರೀತಿಯ ಸೂತ್ರಗಳನ್ನು ಪಾಲಿಸಬೇಕು ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಚಾಲ್ತಿಯಲ್ಲಿರುವ ಚಾಳಿ ಬೆಳೆಸಲಿಚ್ಛಿಸುವವರು ಪಾಲಿಸಬೇಕಾದ ಕೆಲವು ಆಹಾರ ನಿಯಮಗಳನ್ನು ಇಲ್ಲಿ ಕೊಟ್ಟಿದ್ದಾರೆ. ಅಳವಡಿಸಿಕೊಳ್ಳಬೇಕಾದ ಶಿಸ್ತುಬದ್ಧ ಜೀವನಶೈಲಿಯ ವಿವರಗಳನ್ನೂ ನೀಡಿದ್ದಾರೆ. ಮೊದಲು ದಿನನಿತ್ಯ ಬೆಳಿಗ್ಗೆ ಉಪಾಹಾರಕ್ಕೆ ಮುಂಚೆ ಒಂದು ಲೋಟ ಕತ್ತೆ ಹಾಲನ್ನು ಕುಡಿಯಬೇಕು. ದಿನಾ ಮಧ್ಯಾಹ್ನ ಊಟಕ್ಕೆ ಮುಂಚೆ ಮೂರು ಪೆಗ್ ರಮ್ ಏರಿಸಬೇಕು. ರಾತ್ರಿ ಆಹಾರ ಭಕ್ಷಣೆಗೆ ಮುಂಚೆ ಹಂದಿ ತಲೆಯ ಸೂಪ್ ಸೇವಿಸಬೇಕು. ವಾರಕ್ಕೆ ಎರಡು ಬಾರಿಯಾದರೂ ತೋಳದ ಮಾಂಸ ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಇನ್ನು ಜೀವನಶೈಲಿಯ ಬಗ್ಗೆ ಅವರು ಹೀಗೆ ಬರೆಯುತ್ತಾರೆ: ಮುಂಜಾನೆ ಪಾರ್ಕ್‌ನಲ್ಲಿ ಹಿಮ್ಮುಖವಾಗಿ ನಡೆಯಬೇಕು. ಹಾಗೆ ಕನಿಷ್ಠ ಮೂರು ಸುತ್ತಾದರೂ ಹೊಡೆಯಬೇಕು. ಈ ‘ಹಿನ್ನಡೆ’
ಯಿಂದಾಗಿ ಜೀವನದಲ್ಲಿ ಯಾವತ್ತೂ ನಾಚಿಕೆ, ಮಾನ, ಮರ್ಯಾದೆ ಇರುವುದಿಲ್ಲವಂತೆ! ತಿಂಗಳಿಗೊಮ್ಮೆ ಮಾತ್ರ ಸ್ನಾನ ಮಾಡತಕ್ಕದ್ದು. ಈ ರೀತಿಯ ಜೀವನಕ್ರಮ ಬೆಳೆಸಿಕೊಂಡವರ ನಾಲಗೆಯಿಂದ ಅಸಹ್ಯ ಹುಟ್ಟಿಸುವಂತಹ ಮಾತುಗಳು ನಿರರ್ಗಳವಾಗಿ ಹೊರಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಲೇಖಕರು ಭರವಸೆ ಕೊಡುತ್ತಾರೆ. ಮುಂದೆ ಅವರು, ಯಾವ ರೀತಿಯಲ್ಲೆಲ್ಲಾ ಸುದ್ದಿ ಮಾಡಿದರೆ ಮಜಾಕಾರಣಿಗಳು ಗಬ್ಬು ಎಬ್ಬಿಸಬಹುದೆಂದು ಬಹಳ ಖಚಿತವಾಗಿ ಬರೆಯುತ್ತಾರೆ.

ಈಚೆಗಿನ ವಿದ್ಯಮಾನದ ಪ್ರಕಾರ, ಬಹಳ ಸುಲಭವಾಗಿ ಸುದ್ದಿಯಲ್ಲಿ ಇರಬೇಕಾದರೆ ಮನುಷ್ಯ ದೇಹದ ಭಾಗಗಳಲ್ಲಿ ಒಂದೊಂದನ್ನೇ ಆಯ್ಕೆ ಮಾಡಿ ‘ಕತ್ತರಿಸಿ ಹಾಕುತ್ತೇನೆ’ ಎಂದು ಹದಿನೈದು ದಿವಸಕ್ಕೊಮ್ಮೆ ಘೋಷಿಸಬೇಕು. ಒಂದು ವೇಳೆ ಹಾಗೆ ಘೋಷಿಸಲು ನಿಮಗೆ ಧೈರ್ಯವಿಲ್ಲದಿದ್ದರೆ, ಅದನ್ನು ಮಾಡಿದವರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಪತ್ರಿಕಾಗೋಷ್ಠಿ ಕರೆದು ಘೋಷಿಸಿ, ಬಹಿರಂಗ ಸುಪಾರಿ ನೀಡಬಹುದು.

ಶಾಂತಿ ಕದಡುವ ಹೇಳಿಕೆಗಳಿಂದಲೂ ಹೆಸರುವಾಸಿಯಾಗಬಹುದು. ಚರಂಡಿಗಳಲ್ಲೆಲ್ಲಾ ರಕ್ತ ಹರಿಯಬಹುದು! ಒಂದು ಚಿಕ್ಕ ಬೆಂಕಿಪೊಟ್ಟಣ ಸಾಕು... ರಾಜ್ಯವಿಡೀ ಬೆಂಕಿ ಉರಿಸೋಕೆ! ದೇಶ ಧಗ ಧಗ ಉರಿಯುವುದನ್ನು ನೋಡಲು ಬಯಸುವುದಿಲ್ಲವಾದರೆ ನಮ್ಮನ್ನು ಕೆಣಕಬೇಡಿ! ಹೀಗೆ ನಾನಾ ರೀತಿಯಲ್ಲಿ ಬೆಂಕಿ ಉಗುಳಬೇಕು. ಇದಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮ ಮೇಲೆ ಸಹಸ್ರಾರು ಜನ ಉಗುಳಿದರೆ ತಲೆಕೆಡಿಸಿಕೊಳ್ಳಬೇಡಿ.

ಪ್ರಧಾನಮಂತ್ರಿಯನ್ನು ಟೀಕಿಸುವುದರಿಂದ ದೇಶವಿಡೀ ನಿಮ್ಮ ಹೆಸರನ್ನು ಗಮನಿಸುತ್ತದೆ. ವಿಶೇಷವಾಗಿ ಇ.ಡಿ ಮತ್ತು ಐ.ಟಿಯವರು! ಹಾಗೆಂದು ನೀವು ಏನೂ ಭಯಪಡಬೇಕಾಗಿಲ್ಲ. ಯಾಕೆಂದರೆ ಅವರು ಮುಂದೆ ಮನೆ ಮೇಲೆ ದಾಳಿ ಮಾಡಿದಾಗ, ಒಂದು ದೊಡ್ಡ ಸುದ್ದಿಗೆ ಆಹಾರವಾಗುವ ಭಾಗ್ಯ ನಿಮಗೆ ಸಿಗುತ್ತದೆ. ಮುಂದೆ ಜೈಲುವಾಸ, ಬಿಡುಗಡೆಯಾ
ದರಂತೂ ನೀವೇ ಸುದ್ದಿಶೂರ!

ಚಪ್ಪಲಿ, ಮಸಿ, ಟೊಮ್ಯಾಟೊ ಕೂಡಾ ನಿಮ್ಮನ್ನು ಸುದ್ದಿಯಲ್ಲಿರಲು ಸಹಾಯ ಮಾಡಬಲ್ಲವು. ನೀವು ಭಾಗವಹಿಸುವ ಯಾವುದಾದರೂ ಸಮಾರಂಭದಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತನಿಂದಲೇ ಚಪ್ಪಲಿ ಎಸೆಯುವಂತೆ ಮಾಡಬಹುದು. ಮಸಿ ಎಸೆಯುವಂತೆ ನಿಮ್ಮ ಪರಿಚಯದವನಿಗೇ ಹೇಳಬಹುದು. ಅದೇ ರೀತಿ, ಹಳೇ ಫ್ಯಾಷನ್ ಆದರೂ ಟೊಮ್ಯಾಟೊ (ಬೆಲೆ ಕಡಿಮೆಯಿದ್ದಾಗ) ಎಸೆಯಲು ಬಾಡಿಗೆ ಜನರ ವ್ಯವಸ್ಥೆ ಮಾಡಬಹುದು.

ಆಗಾಗ ದೇಶಪ್ರೇಮ ಉಕ್ಕಿ ಹರಿಯುವ ಮಾತುಗಳನ್ನಾಡಿದರೂ ಈಗಿನ ಕಾಲಾವಸ್ಥೆಯಲ್ಲಿ ದೊಡ್ಡ ಸುದ್ದಿಯಾಗಬಹುದು. ದೇಶಪ್ರೇಮ ಅಂದರೆ ಕೇಸರೀಕರಣ ಹಾಗೂ ಅನ್ಯಧರ್ಮೀಯರನ್ನು ದ್ವೇಷಿಸುವುದು. ನಿಮ್ಮ ಕ್ಷೇತ್ರಕ್ಕೆ ‘ಸ್ಮಾರ್ಟ್‌ಸಿಟಿ’ ಭಾಗ್ಯ ಸಿಗದಿದ್ದರೇನಾಯಿತು, ‘ಕೇಸರಿನಗರ’ವನ್ನಾಗಿಸುತ್ತೇನೆ ಎಂದು ಸಾರ್ವಜನಿಕರ ಎದುರು ಪಣ ತೊಡಿ.‌

ನಿಮ್ಮ ತಲೆ ಕೆಟ್ಟುಹೋಗಿದೆ ಅನ್ನುವಷ್ಟರ ಮಟ್ಟಿಗೆ ಅಚ್ಚರಿ ಮೂಡಿಸುವ ಹೇಳಿಕೆಗಳನ್ನು ಕೊಡುವ ಅಭ್ಯಾಸ ಮಾಡಿಕೊಳ್ಳಿ. ಉದಾಹರಣೆಗೆ ‘ಸ್ವಾಮಿ ವಿವೇಕಾನಂದರು ದೇಶದ ಮೊದಲ ಪ್ರಧಾನಿ ಆಗಬೇಕಾಗಿತ್ತು’, ‘ಸರ್ದಾರ್ ಪಟೇಲ್ ಅವರಿಗೆ ದೇವಾಲಯ ಕಟ್ಟಿಸುತ್ತೇನೆ’, ‘ಸಾವರ್ಕರ್ ನಮ್ಮ ದೇಶದ ನಿಜವಾದ ರಾಷ್ಟ್ರಪಿತ’, ‘ರಜನಿಕಾಂತ್ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡಬೇಕು’ ಎಂದೆಲ್ಲಾ ಹೇಳಿದರೆ ಕನಿಷ್ಠ ವಾರವಿಡೀ ಸುದ್ದಿಯಲ್ಲಿರಬಹುದು.

ಪುಸ್ತಕದ ಕೊನೆಗೆ ಲೇಖಕ ಕಿ.ತಾ.ಪತಿ, ಅಧಿಕಾರ ಇಲ್ಲದೆ ಸುದ್ದಿಯಲ್ಲಿರಲು ಚಡಪಡಿಸುವವರಿಗೆಂದೇ ಟಿಪ್ಸ್ ಕೊಟ್ಟಿದ್ದಾರೆ. ಅಂತಹವರು ಸರ್ಕಾರಿ ಕಚೇರಿಗೆ ಬಂದು ಅಧಿಕಾರಿಯ ಮೇಲೆ ಹಲ್ಲೆ ಮಾಡಬಹುದು. ಮಿಣಿ ಮಿಣಿ ಬಾಂಬ್ ತಯಾರಿಸುವ ಪ್ರಾತ್ಯಕ್ಷಿಕೆ ವಿಡಿಯೊ ಮಾಡಿ ‘ಯೂಟ್ಯೂಬ್’ ಮತ್ತು ‘ವಾಟ್ಸ್‌ಆ್ಯಪ್’ನಲ್ಲಿ ಪ್ರಸಾರ ಮಾಡಬಹುದು. ನೀವು ಮೂಢನಂಬಿಕೆಗೆ ಈಗಾಗಲೇ ಕುಖ್ಯಾತರಾಗಿದ್ದರೆ ಸ್ವತಃ ಮಾರುಕಟ್ಟೆಗೆ ಬಂದು, ಒಂದು ಮೂಟೆ ನಿಂಬೆಹಣ್ಣನ್ನು ಖರೀದಿಸಿದರೆ ಸಾಕು. ಹೇಗೆ ಮನೆ ಮನೆಗಳಲ್ಲಿ ಸುದ್ದಿಯಾಗುತ್ತೀರಿ ಎಂಬುದನ್ನು ನೀವೇ ನೋಡಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)