ಗುರುವಾರ , ಡಿಸೆಂಬರ್ 3, 2020
19 °C
ಒಮ್ಮೆ ಪ್ರಬಂಧ ಸಲ್ಲಿಸಿದರೆ ಸಾಕು, ಸುಲಭವಾಗಿ ಪಿಎಚ್‍.ಡಿ ಪದವಿ ದಕ್ಕುತ್ತಿದೆ!

ಪಿಎಚ್‍.ಡಿ ‘ಬಿಕ್ಕಟ್ಟು’: ಬಗೆದಷ್ಟೂ ಆಳ

ವಸಂತ ರಾಜು ಎನ್. Updated:

ಅಕ್ಷರ ಗಾತ್ರ : | |

Prajavani

‘ಪಿಎಚ್‍.ಡಿ ಎಂಬ ಬಿಕ್ಕಟ್ಟು’ ಕುರಿತ ಡಾ.ಎನ್.ಎಸ್.ಗುಂಡೂರ ಅವರ ಲೇಖನ (ಸಂಗತ, ಜೂನ್‌ 12), ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನಾ ಗುಣಮಟ್ಟದ ಬಗೆಗಿನ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಇಂದಿನ ಪಿಎಚ್‌.ಡಿಗಳ ಗುಣಮಟ್ಟದ ಕುಸಿತಕ್ಕೆ ಬಹುಮುಖ್ಯವಾಗಿ, ವಿದ್ಯಾರ್ಥಿಗಳಲ್ಲಿನ ಗ್ರಹಿಕೆ ಮತ್ತು ಕಲಿಕಾಸಕ್ತಿಯ ಕೊರತೆ ಕಾರಣ ಎಂದು ಲೇಖಕರು ಗುರುತಿಸಿದ್ದಾರೆ. ಆದರೆ, ಇಂತಹ ಸ್ಥಿತಿಗೆ ಇನ್ನೂ ಅನೇಕ  ಬಾಹ್ಯ (ಯುಜಿಸಿ) ಮತ್ತು ಆಂತರಿಕ (ವಿಶ್ವವಿದ್ಯಾಲಯಗಳಲ್ಲಿನ ಮೌಲ್ಯಗಳ ಕುಸಿತ) ಅಂಶಗಳ ಕೊಡುಗೆ ಇದೆ.

ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಕ್ಷೇತ್ರದ ಮೂಲಭೂತ ತಿಳಿವಳಿಕೆ ಅಥವಾ ಗ್ರಹಿಕೆಯನ್ನು ಹೆಚ್ಚಿಸಲು ಯುಜಿಸಿಯು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆರು ತಿಂಗಳ ಕೋರ್ಸ್ ವರ್ಕ್‌ ಅನ್ನು ಕಡ್ಡಾಯಗೊಳಿಸಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವಿಷಯದ ಮೇಲೆ ಹಿಂದೆ ನಡೆದಿರುವ ಸಂಶೋಧನೆಗಳ ಸಮೀಕ್ಷೆಯನ್ನು ಮಾಡಬೇಕು ಮತ್ತು ಆ ಕುರಿತು ಕಿರುಪ್ರಬಂಧವೊಂದನ್ನು  ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಆದರೂ ನಮ್ಮ ಪಿಎಚ್‍.ಡಿಗಳ ಗುಣಮಟ್ಟ ಕುಸಿತದ ದೂರುಗಳು ಮಾತ್ರ ಕೇಳಿಬರುತ್ತಲೇ ಇವೆ.

ಇಂದು ಸಂಶೋಧನಾ ಮಾರ್ಗದರ್ಶನ ಮಾಡುತ್ತಿರುವ ಅಧ್ಯಾಪಕರಲ್ಲಿ– ಕೆಲವರನ್ನು ಹೊರತುಪಡಿಸಿ– ಸಂಶೋಧನಾ ಚಟುವಟಿಕೆಗೆ ಸಂಬಂಧಿಸಿದಂತೆ ಒಂದು ರೀತಿಯ ನಿರಾಸಕ್ತಿ ಮನೆಮಾಡಿದೆ. ಹಿಂದೆ ಸಂಶೋಧನಾ ಮಾರ್ಗದರ್ಶಕರು ವಿದ್ಯಾರ್ಥಿಗಳ ಜೊತೆ ಸ್ವತಃ ಸಂಶೋಧನಾ ಕಾರ್ಯಗಳಲ್ಲಿ ನಿರತರಾಗುತ್ತಿದ್ದರು. ವಿದ್ಯಾರ್ಥಿಗಳು ಪ್ರತೀ ಹಂತದಲ್ಲೂ ಅವರ ಸಲಹೆ-ಸೂಚನೆ ಪಡೆಯುತ್ತಿದ್ದರು.  ಆದರೆ ಇಂದು, ಸಂಶೋಧನಾ ಚಟುವಟಿಕೆಯಲ್ಲಿ ಯಾವುದೇ ಅನುಭವವಿರದ ಅಧ್ಯಾಪಕರು ಕೂಡ ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳು ಸಲ್ಲಿಸುವ ಪ್ರಬಂಧವನ್ನು ಸವಿವರವಾಗಿ ನೋಡುವ ಪರಿಪಾಟ ಕೂಡ ಇಲ್ಲವಾಗಿದೆ. ಇನ್ನು ಸಂಶೋಧನೆಯ ಮೌಲ್ಯಮಾಪನ ಮಾಡುವ ಅಧ್ಯಾಪಕರು ಸಹ, ಪ್ರಬಂಧದ ನ್ಯೂನತೆಗಳನ್ನು ವಸ್ತುನಿಷ್ಠವಾಗಿ ಗುರುತಿಸುವ, ಪ್ರಬಂಧಗಳನ್ನು ಪುನರ್‌ರಚಿಸುವ ಸಲಹೆಗಳನ್ನು ನೀಡುವ ವ್ಯವಸ್ಥೆಯಿಂದ ದೂರಸರಿದಿದ್ದಾರೆ. ಒಮ್ಮೆ ವಿಶ್ವವಿದ್ಯಾಲಯಕ್ಕೆ ಪ್ರಬಂಧ ಸಲ್ಲಿಸಿದರೆ ಸಾಕು, ಸುಲಭವಾಗಿ ಪಿಎಚ್‍.ಡಿ ಪದವಿ ದಕ್ಕುತ್ತಿದೆ. ಹಿಂದೆ ಪ್ರಬಂಧವನ್ನು ಮೌಲ್ಯಮಾಪನ ಮಾಡುವ ಹೊರ ವಿಶ್ವವಿದ್ಯಾಲಯಗಳ ಅಧ್ಯಾಪಕರು ಯಾವುದೇ ಮುಲಾಜಿಗೆ ಒಳಗಾಗುತ್ತಿರಲಿಲ್ಲ. ಪ್ರಬಂಧದ ವಿಧಿ ವಿಧಾನಗಳಲ್ಲಿ ತಪ್ಪಾಗಿದ್ದರೆ ಅದನ್ನು ತಿರಸ್ಕರಿಸುತ್ತಿದ್ದರು. ಇಂದು ಆ ರೀತಿಯ ಮಾರ್ಗದರ್ಶಕರು ಮತ್ತು ಮೌಲ್ಯಮಾಪಕರನ್ನು ಕಾಣುವುದು ಅಪರೂಪವಾಗಿದೆ.

ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಭ್ರಷ್ಟತೆ ಮನೆಮಾಡಿದೆ. ದಕ್ಷ ಅಧ್ಯಾಪಕರು ನೇಮಕವಾಗದ ಕಾರಣ, ಸಂಶೋಧನೆಯಲ್ಲಿ ಕೃತಿಚೌರ್ಯ, ಗುಣಮಟ್ಟದಲ್ಲಿ ಅಗಾಧ ಕುಸಿತ ಕಂಡುಬಂದಿದೆ. ಬಹುತೇಕ ಅನುಭವರಹಿತ ಅಧ್ಯಾಪಕರೇ ಸಂಶೋಧನಾ ಮಾರ್ಗದರ್ಶಕರಾಗಿ ನಿಯೋಜನೆ ಆಗುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಸಂಶೋಧನಾ ಕ್ಷೇತ್ರದಲ್ಲಿನ ವಿಧಿ-ವಿಧಾನಗಳನ್ನು ಕಲಿಸಲು ವಿಫಲರಾಗುತ್ತಿದ್ದಾರೆ. ನಮ್ಮ ನೀತಿ ನಿರೂಪಕರು ವಿಶ್ವವಿದ್ಯಾಲಯಗಳನ್ನು ವಿಶೇಷವಾಗಿ ಪರಿಗಣಿಸಿ, ದಕ್ಷರು ಹಾಗೂ ಜ್ಞಾನದಾಹಿಗಳನ್ನು ಇಲ್ಲಿನ ಹುದ್ದೆಗಳಿಗೆ ನೇಮಕ ಮಾಡಬೇಕು. ಆಗ ಒಂದಷ್ಟು ಬದಲಾವಣೆಗಳನ್ನು ಸಂಶೋಧನಾ ಕ್ಷೇತ್ರದಲ್ಲಿ ಕೂಡ ನೋಡಬಹುದು.

ಈ ಒಂದು ದಶಕದಲ್ಲಿ ಯುಜಿಸಿ ಜಾರಿ ಮಾಡಿದ ಅನೇಕ ಅವೈಜ್ಞಾನಿಕ ನೀತಿ-ನಿಯಮಗಳು ಕೂಡ ಸಂಶೋಧನೆಯ ಗುಣಮಟ್ಟ ಕುಸಿತಕ್ಕೆ ಕಾರಣವಾಗಿವೆ. ಉನ್ನತ ಶಿಕ್ಷಣದ ಅಧ್ಯಾಪಕ ಹುದ್ದೆಗೆ ಪಿಎಚ್‍.ಡಿ ಪದವಿಯನ್ನು ಕಡ್ಡಾಯ ಮಾಡಿದ್ದರಿಂದ, ಪಿಎಚ್‌.ಡಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಆದರೆ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡಿತು. ಪಿಎಚ್.ಡಿ ಪಡೆಯಲು ಕಡ್ಡಾಯವಾಗಿ ಎರಡು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು ಎನ್ನುವ ನಿಯಮವು ಕಾಟಾಚಾರದ ಲೇಖನಗಳು ಪ್ರಕಟಗೊಳ್ಳಲು ಕಾರಣವಾಯಿತು. ಸಂಶೋಧನಾ ಲೇಖನಗಳ ಪ್ರಕಟಣೆ ಒಂದು ದೊಡ್ಡ ಮೋಸದ ಜಾಲವಾಗಿ ಬೆಳೆಯಿತು. ಪರಿಣಾಮವಾಗಿ, ಭಾರತದ ನಿಯತಕಾಲಿಕಗಳ ಬಹುಪಾಲು ಸಂಶೋಧನಾ ಲೇಖನಗಳಿಗೆ ಜಾಗತಿಕವಾಗಿ ಯಾವುದೇ ಮನ್ನಣೆ ಸಿಗಲಿಲ್ಲ.

ಸಂಶೋಧನೆಗಳ ಕೃತಿಚೌರ್ಯ ತಡೆಯಲು ಯುಜಿಸಿಯು ತಂತ್ರಾಂಶದ ಮೊರೆ ಹೋಯಿತು. ಆದರೆ ಇಂಗ್ಲಿಷ್‌ ಭಾಷೆಯ ಸಂಶೋಧನಾ ಪ್ರಬಂಧಗಳನ್ನು ಹೊರತುಪಡಿಸಿ, ಇತರ ಭಾಷೆಗಳಲ್ಲಿನ ಪ್ರಬಂಧಗಳ ಕೃತಿಚೌರ್ಯವನ್ನು ಈ ತಂತ್ರಾಂಶ ಪರಿಶೀಲಿಸುವುದಿಲ್ಲ. ಉತ್ತರ ಭಾರತದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಹಿಂದಿ ಭಾಷೆಯಲ್ಲಿ ಸಲ್ಲಿಸುವುದರಿಂದ ಅವುಗಳ ಕೃತಿಚೌರ್ಯ ಪತ್ತೆ ಕಷ್ಟಕರವಾಗಿದೆ. ಒಬ್ಬ ಅಧ್ಯಾಪಕ ಎಷ್ಟು ಮಂದಿಗೆ ಪಿಎಚ್‍.ಡಿ ಮಾರ್ಗದರ್ಶಕರಾಗಬಹುದು ಎನ್ನುವ ಬಗ್ಗೆ ಯುಜಿಸಿ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಕೆಲ ವಿಶ್ವವಿದ್ಯಾಲಯಗಳು ಮನಬಂದಂತೆ ಈ ನಿಯಮಗಳನ್ನು ಬಳಸಿಕೊಂಡಿದ್ದರೂ ಅವುಗಳ ಮೇಲೆ ಯಾವುದೇ ಕಠಿಣ ಕ್ರಮ ಜಾರಿಯಾಗಿಲ್ಲ.

ಯುಜಿಸಿ ಈಗಲಾದರೂ ಎಚ್ಚೆತ್ತು, ಕಳೆದ ಒಂದು ದಶಕದಲ್ಲಿ ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಲಾದ ಪಿಎಚ್‍.ಡಿ ಪ್ರಬಂಧಗಳ ಮರುಮೌಲ್ಯಮಾಪನಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಇದರ ಜೊತೆಗೆ, ತಾನು ಎಡವಿದ್ದೆಲ್ಲಿ ಎನ್ನುವುದನ್ನು ಸಹ ಅದು ವಸ್ತುನಿಷ್ಠವಾಗಿ ವಿಶ್ಲೇಷಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು