ನ್ಯಾಯಾಲಯಗಳಲ್ಲಿ ಮೂಲಸೌಕರ್ಯ

7
ಜನರಿಗೆ ನ್ಯಾಯ ಸಿಗಬೇಕು ಎಂದಾದರೆ ಕೋರ್ಟ್‌ಗಳಲ್ಲಿನ ಸೌಲಭ್ಯ ಹಾಗೂ ಆಡಳಿತದಲ್ಲಿ ಸುಧಾರಣೆ ಆಗಬೇಕು

ನ್ಯಾಯಾಲಯಗಳಲ್ಲಿ ಮೂಲಸೌಕರ್ಯ

Published:
Updated:

ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಇತರರು ಹಾಗೂ ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆಗಸ್ಟ್‌ 2ರಂದು ನೀಡಿದ ತೀರ್ಪಿನಲ್ಲಿ ಒಂದು ವಿಷಯದ ಮೇಲೆ ಬೆಳಕು ಚೆಲ್ಲಿದೆ. ಭಾರತದ ನ್ಯಾಯಾಂಗದ ವಿಚಾರದಲ್ಲಿ ಬಹುತೇಕ ಸಂದರ್ಭಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ, ನ್ಯಾಯಾಲಯಗಳಲ್ಲಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಷಯ ಇದು.

ನ್ಯಾಯಾಲಯಗಳಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲದಿರುವುದರಿಂದ ನ್ಯಾಯದಾನ ಪ್ರಕ್ರಿಯೆಯ ಮೇಲೆ ಯಾವ ರೀತಿಯ ಪರಿಣಾಮಗಳು ಆಗಬಹುದು ಎಂಬುದನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ 14 ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳಲ್ಲಿ ಹೇಳಿರುವ ಪ್ರತೀ ಅಂಶವನ್ನು ಎಲ್ಲ ನ್ಯಾಯಾಲಯಗಳಲ್ಲೂ ಒದಗಿಸುವುದು ಸುಪ್ರೀಂ ಕೋರ್ಟ್‌ನ ಪ್ರಕಾರ ಅತ್ಯಗತ್ಯ. ನ್ಯಾಯಾಲಯಗಳ ಸಂಕೀರ್ಣದಲ್ಲಿ ಪ್ರತಿ ಮಹಡಿಯಲ್ಲಿ ಎಲ್ಲೆಲ್ಲಿ ಏನೇನು ಇದೆ ಎಂಬುದನ್ನು ತಿಳಿಸುವ ನಕ್ಷೆ ಇರಬೇಕಿರುವುದು ಅಗತ್ಯ, ಇದು ಯುವ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಸಹಾಯಕ್ಕೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕೋರ್ಟ್‌ಗಳು ಅಂಗವಿಕಲಸ್ನೇಹಿ ಕೂಡ ಆಗಿರಬೇಕು ಎಂಬ ಉದ್ದೇಶದಿಂದ, ಕೋರ್ಟ್‌ಗಳಲ್ಲಿ ಬ್ರೈಲ್‌ ಲಿಪಿಯ ಸೂಚನಾ ಫಲಕಗಳು ಇರಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹೈಕೋರ್ಟ್‌ಗಳಲ್ಲಿ ಇರುವಂತಹ, ಯಾವ ನ್ಯಾಯಾಲಯದಲ್ಲಿ ಯಾವ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬುದನ್ನು ತೋರಿಸುವ ಎಲೆಕ್ಟ್ರಾನಿಕ್‌ ಫಲಕಗಳ ಅಗತ್ಯ ಇತರ ನ್ಯಾಯಾಲಯಗಳ ಸಂಕೀರ್ಣದಲ್ಲೂ ಇರಬೇಕಾದ ಅಗತ್ಯತೆಯನ್ನು ಹೇಳಲಾಗಿದೆ. ನ್ಯಾಯಾಲಯಗಳ ಸಂಕೀರ್ಣದಲ್ಲಿ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದೂ ಹೇಳಲಾಗಿದೆ.

ನ್ಯಾಯಾಲಯಗಳ ಸಂಕೀರ್ಣದಲ್ಲಿ ಮೂಲಸೌಕರ್ಯ ಸೂಕ್ತ ಮಟ್ಟದಲ್ಲಿ ಇಲ್ಲದೇ ಇರಲು ಒಂದು ಕಾರಣವನ್ನು ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆ. ‘ಪ್ರಸಕ್ತ ಸಂದರ್ಭದಲ್ಲಿ ಬಹುತೇಕ ರಾಜ್ಯಗಳು ನ್ಯಾಯಾಂಗಕ್ಕಾಗಿ ಬಜೆಟ್‌ನಲ್ಲಿ ಮೀಸಲಿಡುವ ಮೊತ್ತದಲ್ಲಿ ಶೇಕಡ 1ರಷ್ಟಕ್ಕಿಂತ ಕಡಿಮೆ ಮೊತ್ತವನ್ನು ಮೂಲಸೌಕರ್ಯಕ್ಕಾಗಿ ತೆಗೆದಿರಿಸುತ್ತಿವೆ’ ಎಂದು ಹೇಳಿದೆ. ‘ಬಜೆಟ್‌ನಲ್ಲಿ ಅನುದಾನ ನೀಡುವುದು ಬೇಡಿಕೆಗಳನ್ನು ಆಧರಿಸಿ ಆಗಿರಬೇಕೇ ವಿನಾ, ಎಷ್ಟು ಕೊಡಬಹುದು ಎಂಬುದೊಂದನ್ನು ಮಾತ್ರ ಆಧರಿಸಿ ಅಲ್ಲ’ ಎಂದೂ ಅದು ಹೇಳಿದೆ. ನ್ಯಾಯಾಂಗವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಲ್ಲಿನ ಮೂಲಸೌಕರ್ಯ ಉತ್ತಮಪಡಿಸುವ ಉದ್ದೇಶಕ್ಕೆ ಹೂಡಿಕೆ ಮಾಡಬೇಕಾಗುತ್ತದೆ. ಈ ಹೂಡಿಕೆಯನ್ನು ಕಾರ್ಯಾಂಗ ಅಥವಾ ಶಾಸಕಾಂಗಕ್ಕೆ ಮಾಡುವ ಖರ್ಚುಗಳಿಗೆ ಸರಿಸಮವಾಗಿ ನೋಡಬೇಕು. ನ್ಯಾಯಾಧೀಶರು, ಕೋರ್ಟ್‌ಗಳಲ್ಲಿ ಕೆಲಸ ಮಾಡುವವರ ಸ್ಥಿತಿಯನ್ನು ಇನ್ನಷ್ಟು ಉತ್ತಮಪಡಿಸಲು ಅಗತ್ಯವಿರುವ ಅನುದಾನ ಮೀಸಲಿಡಬೇಕು, ಅದರಲ್ಲೂ ಮುಖ್ಯವಾಗಿ ದೇಶದ ಅಧೀನ ನ್ಯಾಯಾಲಯಗಳಲ್ಲಿ ಇದು ಆಗಬೇಕು. ಕೆಳಹಂತದ ನ್ಯಾಯಾಲಯಗಳ ಆವರಣದಲ್ಲಿ ಜನ ಮೇಕೆಗಳನ್ನು, ಇಲಿಗಳನ್ನು ಕಂಡಿದ್ದೂ ಇದೆ. 21ನೆಯ ಶತಮಾನದಲ್ಲಿ ಕೂಡ ನಮ್ಮ ಪ್ರಾಥಮಿಕ ನ್ಯಾಯದಾನ ವ್ಯವಸ್ಥೆಯನ್ನು ಇಂತಹ ಸ್ಥಿತಿಯಲ್ಲಿ ಇಟ್ಟಿರುವುದು ಸರಿಯಲ್ಲ.

ತಾನು ನೀಡಿರುವ ತೀರ್ಪು ಅನುಷ್ಠಾನಕ್ಕೆ ಬರಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್‌, ಪ್ರತಿ ರಾಜ್ಯದಲ್ಲೂ ಒಂದು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ತಾಕೀತು ಮಾಡಿದೆ. ಈ ಸಮಿತಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ ಮತ್ತು ಆ ರಾಜ್ಯದ ಹೈಕೋರ್ಟ್‌ನ ಅಧಿಕಾರಿಯೊಬ್ಬರು ಸದಸ್ಯರಾಗಿ ಇರುತ್ತಾರೆ. ನ್ಯಾಯಾಂಗದಲ್ಲಿನ ಮೂಲಸೌಕರ್ಯವನ್ನು ಆದ್ಯತೆಯ ವಿಷಯವನ್ನಾಗಿ ಇರಿಸಿಕೊಂಡು ಈ ಸಮಿತಿಗಳು ಮೂರು ಯೋಜನೆಗಳನ್ನು ಸಿದ್ಧಪಡಿಸಬೇಕು. ಕಿರು ಅವಧಿ (ಒಂದು ವರ್ಷದ್ದು), ಮಧ್ಯಮ ಅವಧಿ (ಐದು ವರ್ಷದ್ದು) ಮತ್ತು ದೀರ್ಘಾವಧಿಯ (ಹತ್ತು ವರ್ಷದ್ದು) ಯೋಜನೆಗಳು ಇದರಲ್ಲಿ ಇರಬೇಕು.

ಆದರೆ, ನ್ಯಾಯಾಂಗದಲ್ಲಿನ ಮೂಲಸೌಕರ್ಯದ ಕೊರತೆಯ ವಿಷಯವು ಈ ಹಿಂದೆ ಕೂಡ ಕೋರ್ಟ್‌ಗಳಲ್ಲಿ ಚರ್ಚಿತವಾಗಿದೆ. ಹೀಗಿದ್ದರೂ ನ್ಯಾಯಾಲಯಗಳಲ್ಲಿನ ಮೂಲಸೌಕರ್ಯದ ಮಟ್ಟದಲ್ಲಿ ಹೆಚ್ಚಳ ಆಗಿಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್‌ ಈಗ ನೀಡಿರುವ ತೀರ್ಪಿನಲ್ಲಿರುವ ಅಂಶಗಳು ಕಾಗದದಲ್ಲಿ ಮಾತ್ರ ಉಳಿಯುವಂತೆ ಆಗಬಾರದು ಎಂಬ ಕಾರಣಕ್ಕೆ, ನ್ಯಾಯಾಂಗದ ಅಭಿವೃದ್ಧಿ ಯೋಜನೆಗಳಲ್ಲಿನ ಪ್ರಗತಿಯ ವರದಿಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕಾಲಕಾಲಕ್ಕೆ ಸಲ್ಲಿಸುತ್ತ ಇರುವಂತೆ ಆಗಬೇಕು. ಹಾಗೆಯೇ, ಇದರಲ್ಲಿ ಪಾರದರ್ಶಕತೆ ಇರುವಂತೆ ಆಗಲು ಈ ಯೋಜನೆಗಳು ಸಾರ್ವಜನಿಕರಿಗೂ ಲಭ್ಯವಾಗುವಂತೆ ಇರಬೇಕು. ನ್ಯಾಯಾಲಯಗಳಲ್ಲಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಸುಧಾರಣೆಗಳನ್ನು ಕಾಲಕಾಲಕ್ಕೆ ಮತ್ತು ನಿರಂತರವಾಗಿ ಒಂದು ಸಮಿತಿ ಕಡ್ಡಾಯವಾಗಿ ಪರಿಶೀಲಿಸಬೇಕು ಎನ್ನುವ ಮೂಲಕ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಸೂಚನೆಗಳ ಅನುಷ್ಠಾನಕ್ಕೆ ತ್ವರಿತವಾಗಿ ಕ್ರಮಗಳು ಆಗುತ್ತವೆ ಎಂಬ ನಿರೀಕ್ಷೆ ಹೊಂದಬಹುದು.

ನ್ಯಾಯಾಲಯಗಳಲ್ಲಿನ ಭೌತಿಕ ಮೂಲಸೌಕರ್ಯದ ಅಭಿವೃದ್ಧಿಗೆ ಹಲವು ಮಾರ್ಗಸೂಚಿಗಳನ್ನು ನೀಡಿರುವುದಷ್ಟೇ ಅಲ್ಲದೆ, ಈ ತೀರ್ಪು ಪ್ರತಿ ನ್ಯಾಯಿಕ ಜಿಲ್ಲೆಯಲ್ಲೂ ಅರ್ಹತೆ ಹೊಂದಿದ ನ್ಯಾಯಾಲಯ ನಿರ್ವಾಹಕರು ಇರಬೇಕು, ಅವರು ನ್ಯಾಯಾಲಯಗಳ ಆಡಳಿತದಲ್ಲಿ ಸಹಾಯ ಮಾಡಬೇಕು ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಕೋರ್ಟ್‌ಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವ, ಆದರೆ ನ್ಯಾಯಾಂಗಕ್ಕೆ ನೇರವಾಗಿ ಸಂಬಂಧಿಸಿರದ ಕೆಲಸಗಳನ್ನು ನಿಭಾಯಿಸುವ ಹೊಣೆಯನ್ನು ಈ ವ್ಯಕ್ತಿಗೆ ನೀಡಬೇಕು. ಆಗ, ಇಂತಹ ಕೆಲಸಗಳ ಬಗ್ಗೆ ಸಕಾಲದಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ. ಸೇವಾ ಹಿರಿತನದ ಪಟ್ಟಿಯಲ್ಲಿ ನ್ಯಾಯಾಲಯ ನಿರ್ವಾಹಕರ ಸ್ಥಾನ ಏನು, ಅವರ ಜವಾಬ್ದಾರಿಗಳು ಏನೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸಬೇಕು. ಹೀಗೆ ಮಾಡುವುದರಿಂದ, ಅಡೆತಡೆಗಳು ಇಲ್ಲದೆ ಅಗತ್ಯ ಬದಲಾವಣೆಗಳನ್ನು ತರಲು ಅವರಿಗೆ ಸಾಧ್ಯವಾಗುತ್ತದೆ. ಕೋರ್ಟ್‌ಗಳಲ್ಲಿನ ಮೂಲಸೌಕರ್ಯವನ್ನು ಉತ್ತಮಪಡಿಸುವುದು ಎಷ್ಟು ಅಗತ್ಯವಾಗಿದೆಯೋ, ಕೋರ್ಟ್‌ಗಳ ಆಡಳಿತವನ್ನು ಸುಧಾರಿಸುವ ಅಗತ್ಯ ಕೂಡ ಅಷ್ಟೇ ಇದೆ. ಆಗ, ನ್ಯಾಯವೆಂಬುದು ಜನರಿಗೆ ಸಿಗುವಂತೆ ಆಗಬೇಕು ಎಂಬ ಉದ್ದೇಶ ಸಾಧಿಸಲು ಆಗುತ್ತದೆ.

ಲೇಖಕಿ: ‘ದಕ್ಷ್’ ಸಂಸ್ಥೆಯಲ್ಲಿ ಸಹ ಸಂಶೋಧಕಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !