ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜನಪರ ನಿಲುವು, ವೈಚಾರಿಕ ಸ್ಪಷ್ಟತೆ

ಜನಪರ ಚಳವಳಿ, ಚಿಂತನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಪ್ರೊ. ಕೆ.ಮರುಳಸಿದ್ದಪ್ಪ
Published 13 ನವೆಂಬರ್ 2023, 19:27 IST
Last Updated 13 ನವೆಂಬರ್ 2023, 19:27 IST
ಅಕ್ಷರ ಗಾತ್ರ

ಸಮಕಾಲೀನ ಕರ್ನಾಟಕದ ಬಹುಮುಖ್ಯ ಚಿಂತಕರು ಪ್ರೊ.ಕೆ.ಮರುಳಸಿದ್ದಪ್ಪ (ಕೆಎಂಎಸ್). ಪ್ರಸ್ತುತ
ದಿನಮಾನಗಳಲ್ಲಿ ಚಿಂತಕರು ಎನ್ನುವ ಪದವನ್ನು ಬಳಸುವುದಕ್ಕೂ ಅನೇಕ ಬಾರಿ ಹಿಂಜರಿಕೆಯಾಗುತ್ತದೆ. ಕೆಎಂಎಸ್ ಅದರ ನಿಜಾರ್ಥದಲ್ಲಿ ವಚನ ಚಳವಳಿಯ ವಾರಸುದಾರರಲ್ಲಿ ಒಬ್ಬರು.

70–80ರ ದಶಕಗಳಿಂದಲೂ ರಾಜ್ಯದ ಎಲ್ಲ ಮುಖ್ಯ ಜನಪರ ಚಳವಳಿಗಳು ಹಾಗೂ ಚಿಂತನೆಗಳ ಸಕ್ರಿಯ ಭಾಗವಾಗಿ ಇರುವವರು ಕೆಎಂಎಸ್. ಬುದ್ಧಿಜೀವಿ ಎಂಬ ಪರಿಕಲ್ಪನೆಯ ಸಾಕಾರರೂಪದಂತಿದ್ದಾರೆ ಅವರು. ಬುದ್ಧಿಜೀವಿಗಳು ಅಂದರೆ ಅಸಾಧ್ಯವಾದುದು, ಅಪ್ರಾಯೋಗಿಕವಾದುದನ್ನು ಲೋಕಕ್ಕೆ ಮಾತ್ರ ಹೇಳಿ, ತಮ್ಮನ್ನು ಅದರಿಂದ ಹೊರತುಪಡಿಸಿಕೊಂಡಿರುವವರು ಎನ್ನುವ ಇತ್ತೀಚಿನ ಅಪವ್ಯಾಖ್ಯಾನಗಳನ್ನೆಲ್ಲ ಹೊಡೆದುಹಾಕಿದವರು. ಬುದ್ಧಿಜೀವಿಗಳೆಂದರೆ ಸಮಷ್ಟಿಯ ಹಿತವನ್ನೇ ಗುರಿಯಾಗಿಸಿಕೊಂಡವರು, ಸಮುದಾಯದ ಸಾಂಸ್ಥಿಕ ರಚನೆಗಳ ಆರಂಭದಿಂದಲೂ ಎಲ್ಲ ಬಗೆಯ ಅವಕಾಶಗಳಿಂದ ವಂಚಿತರಾದ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿರುವವರ ಜೊತೆ ಕೈಜೋಡಿಸುತ್ತಾ ಹೋಗುವವರು ಎಂದು ನಿರೂಪಿಸಿದವರು.

ಬುದ್ಧಿ ಎನ್ನುವುದು ಯಾವಾಗಲೂ ನ್ಯಾಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೂ ಸಹಬಾಳ್ವೆಯಲ್ಲಿ ನಂಬಿಕೆಯಿಡುವ ಮೂಲಭೂತ ಜೀವನತತ್ವ ಗಳನ್ನು ಅನುಮೋದಿಸುವಂಥದ್ದು. ಬಹುತೇಕರು ಬುದ್ಧಿಯ ಈ ಅನುಮೋದನೆಯನ್ನು ಪಕ್ಕಕ್ಕೆ ಸರಿಸಿ, ಪಟ್ಟಭದ್ರಶಕ್ತಿಗಳಿಗೆ ಶರಣಾಗುವವರು. ಯಾರು ಬುದ್ಧಿಯ ಅನುಮೋದನೆಯನ್ನು ತಮ್ಮ ಸಾಕ್ಷಿಪ್ರಜ್ಞೆಯಾಗಿ ಬದುಕಿನುದ್ದಕ್ಕೂ ಉಳಿಸಿಕೊಳ್ಳಲು, ಅಳವಡಿಸಿಕೊಳ್ಳಲು ಯತ್ನಿಸುತ್ತಾರೋ ಅಂಥವರೇ ಬುದ್ಧಿಜೀವಿ ಎನ್ನುವುದಾದರೆ, ಕೆಎಂಎಸ್ ನಮ್ಮ ನಡುವಿರುವ ಅಪರೂಪದ ಬುದ್ಧಿಜೀವಿ. ಕೆಎಂಎಸ್ ಅವರನ್ನು ಮೊದಲ ಬಾರಿಗೆ ನೋಡಿದವರೆಲ್ಲರಿಗೂ ಸಾರ್ವಜನಿಕ ಸಂದರ್ಭಗಳಲ್ಲಿ ಅವರು ತೆಗೆದುಕೊಳ್ಳುವ ನಿಲುವಿಗೂ ಅವರ ಮೆಲುಮಾತಿನ ವ್ಯಕ್ತಿತ್ವಕ್ಕೂ ಎಲ್ಲಿಯದೆಲ್ಲಿಯ ಸಂಬಂಧ ಎನ್ನುವಷ್ಟು ಆಶ್ಚರ್ಯ ಹುಟ್ಟುತ್ತದೆ. ಆದರೆ, ಅವರ ಜೊತೆ ಮಾತನಾಡುತ್ತಾ ಹೋದ ಹಾಗೆ, ಆ ಮೆಲುಧ್ವನಿಯ ಹಿಂದಿರುವ ಅಚಲ ನಿಲುವು, ವಿಚಾರಗಳ ಸ್ಪಷ್ಟತೆ ನಮ್ಮನ್ನು ಸೆಳೆಯುತ್ತದೆ.

ಎರಡು ಸಂದರ್ಭಗಳಲ್ಲಿ ಕೆಎಂಎಸ್ ಅವರ ನಿಲುವುಗಳನ್ನು ಚರ್ಚಿಸಬಯಸುತ್ತೇನೆ. ಈ ಸಂದರ್ಭ ಗಳು ಕೆಎಂಎಸ್‌ ಅವರ ವ್ಯಕ್ತಿತ್ವವನ್ನು ಸರಿಯಾಗಿ ನಿರೂಪಿಸುತ್ತವೆ. ಮೊದಲನೆಯದು, ನನಗೆ ಜಿಎಸ್‍ಎಸ್ ಪ್ರಶಸ್ತಿ ದೊರೆತ ಸಂದರ್ಭ. ಅವರಿಗೆ ಫೋನ್ ಮಾಡಿದ ನಾನು, ‘ಪ್ರಶಸ್ತಿಯ ಹಣವನ್ನು ಟ್ರಸ್ಟ್‌ಗೇ ವಾಪಸ್ ಕೊಡಲು ಬಯಸುತ್ತೇನೆ. ಪ್ರಶಸ್ತಿಯೇ ದೊಡ್ಡ ಗೌರವ. ಆ ಹಣ ಟ್ರಸ್ಟ್‌ಗೇ ವಾಪಸ್ ಹೋದರೆ ಉಪಯೋಗವಾ ಗಬಹುದು’ ಎಂದೆ. ಒಂದು ಗಳಿಗೆಯೂ ಯೋಚಿ ಸದ ಕೆಎಂಎಸ್, ‘ಟ್ರಸ್ಟ್‌ನಲ್ಲಿ ಹಣವಿದೆ. ನೀವು ವಾಪಸ್ ಕೊಡುವ ಅಗತ್ಯ ಇಲ್ಲ. ಆ ಹಣದ ಬಳಕೆಗೆ ನಿಮಗೆ ಯಾವುದು ಅತ್ಯಂತ ಉಪಯುಕ್ತವಾದ ಕ್ರಮ ಎನಿಸುತ್ತದೋ ಅದಕ್ಕೆ ಬಳಸಿ’ ಎಂದು ಸ್ಪಷ್ಟವಾಗಿ ಹೇಳಿದರು. ಈ ಸಲಹೆ ಸಮಂಜಸ ಎನಿಸಿ ನಾನು ಅದನ್ನು ಪಾಲಿಸಿದೆ. ಕೆಎಂಎಸ್ ಹೆಚ್ಚು ತಲೆಕೆಡಿಸಿಕೊಳ್ಳದೆ, ಬೇಕಾದರೆ ಟ್ರಸ್ಟ್‌ಗೆ ವಾಪಸ್ ಕೊಡಿ ಎನ್ನುವ ಲೋಕಾಭಿರಾಮದ ಸಲಹೆಯನ್ನು ಕೊಡಬಹುದಿತ್ತು. ಆದರೆ ಅವರು ಅಂಥದ್ದಕ್ಕೆ ಅವಕಾಶ ಕೊಡಲಿಲ್ಲ.

ಮೇಷ್ಟ್ರು ಎಂ.ಎಂ.ಕಲಬುರ್ಗಿ ಮತ್ತು ಗೆಳತಿ ಗೌರಿಯ ಸಾವಿನ ಆಘಾತದಲ್ಲಿ ನಾವೆಲ್ಲರೂ ಇದ್ದಾಗ, ಸಭೆಯೊಂದರಲ್ಲಿ ಕೆಎಂಎಸ್ ಹೇಳಿದ ಮಾತು ಈಗಲೂ ಮುಖ್ಯವಾದುದೆಂದು ತೋರುತ್ತದೆ. ‘ಕಲಬುರ್ಗಿ ಮತ್ತು ಗೌರಿ ಅವರ ಸಾವಿನ ಕುರಿತು ನಾವು ಸದಾ ದುಃಖಿತರಾಗಿ ಮಾತನಾಡಬಾರದು. ವ್ಯಕ್ತಿಗತವಾಗಿ ಅವರನ್ನು ಕಳೆದುಕೊಂಡ ದುಃಖವನ್ನು ಒಳಗಿಟ್ಟುಕೊಂಡು, ಅವರು ಬಲಿಯಾದ ಕಾರಣ ಮತ್ತು ಉದ್ದೇಶಗಳನ್ನು ಇನ್ನೂ ಹೆಚ್ಚು ಜನರಿಗೆ ಮುಟ್ಟಿಸುವ ಕೆಲಸವನ್ನು ನಾವು ಮಾಡಬೇಕು. ಪದೇಪದೇ ಅವುಗಳನ್ನು ಕೊಲೆ ಕೊಲೆ ಎಂದು ಹೇಳಬೇಡಿ. ಅವರನ್ನು ಹುತಾತ್ಮರು ಎಂದೇ ನಾವು ಸಂಬೋಧಿಸಬೇಕು’ ಎಂದಿದ್ದರು. ಸಾರ್ವಜನಿಕ ಬದುಕಿನಲ್ಲಿ ನಾವು ತಳೆಯಬೇಕಾದ ನಿಲುವು, ಆಡ ಬೇಕಾದ, ಬಳಸಬೇಕಾದ ಭಾಷೆ ಎಷ್ಟು ಸೂಕ್ಷ್ಮದ್ದು ಮತ್ತು ಮಹತ್ವದ್ದು ಎನ್ನುವುದು ಈ ಪ್ರಸಂಗದಿಂದ ನಮಗೆ ತಿಳಿಯುತ್ತದೆ.

ಕೆಎಂಎಸ್ ಅವರದ್ದೊಂದು ಗೆಳೆಯರ ಗುಂಪು, ತಮ್ಮ ನಡುವೆ ಇರಬಹುದಾದ ಭಿನ್ನಾಭಿಪ್ರಾಯಗ
ಳನ್ನು ಇಟ್ಟುಕೊಂಡೂ ಅಖಂಡವಾಗಿ ಉಳಿದುಬಂದಿದೆ. ಇವರ ಸಹೋದ್ಯೋಗಿಗಳು, ಸಮಕಾಲೀನರಲ್ಲಿ ಹಲವರು ಅಧಿಕಾರಸ್ಥರನ್ನು ಓಲೈಸಿಕೊಂಡು ಸುರಕ್ಷಿತ ಹಾದಿ ಹಿಡಿದವರು. ಅಂಥ ಬಹುಸಂಖ್ಯಾತರ ಜೊತೆಯಲ್ಲಿ ಅಲ್ಪಸಂಖ್ಯಾತರಾಗಿ ಈ ಗೆಳೆಯರು ಲೋಕನಿಷ್ಠುರದ ದಾರಿಯನ್ನು ಹಿಡಿದರು. ಉಳಿದವರು ಚರ್ಚೆ, ಸಭೆ, ಹೋರಾಟಗಳಲ್ಲಿ ಭಾಗವಹಿಸುವ ಯೋಚನೆಯನ್ನೂ ಮಾಡದಿದ್ದಾಗ, ಉದ್ಯೋಗದಲ್ಲಿದ್ದ
ಸಂದರ್ಭದಲ್ಲೂ ಕೆಎಂಎಸ್ ನಿರ್ಭೀತಿಯಿಂದ ಆ ಸಭೆಗಳಲ್ಲಿ ಭಾಗವಹಿಸಿ ಜನಪರ ನಿಲುವುಗಳನ್ನು ಪ್ರಭುತ್ವದ ವಿರುದ್ಧ ತೆಗೆದುಕೊಳ್ಳಲು ಒಂದಿಷ್ಟೂ ಹಿಂದೆಮುಂದೆ ನೋಡಲಿಲ್ಲ.

ಬಹುಮತದ ಆಯ್ಕೆಯನ್ನು ಅವರು ಎತ್ತಿ ಹಿಡಿ ಯುತ್ತಾರೆಯೇ ವಿನಾ ವೈಯಕ್ತಿಕವಾದ ಆಯ್ಕೆಗಳನ್ನು ಎಂದೂ ಮುಂದಿಡುವುದಿಲ್ಲ. ಆಯ್ಕೆ ಪ್ರಕ್ರಿಯೆ ಪ್ರಜಾಸಾಂವಿಧಾನಿಕ ನೆಲೆಯಲ್ಲಿ ನಡೆಯುವಂತೆ ನೋಡಿ
ಕೊಳ್ಳುವುದರಲ್ಲಿ ಅವರು ವಹಿಸುವ ಕಾಳಜಿ ಅತ್ಯುತ್ತಮ ಆಯ್ಕೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ.

ಡಾ. ಕೆ.ಎಂ.ಎಸ್‌. ಅಭಿಮಾನಿಗಳ ಬಳಗವು ಪ್ರೊ. ಕೆ.ಮರುಳಸಿದ್ದಪ್ಪ ಅವರಿಗೆ ಬುಧವಾರ (ನ. 15) ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಈ ಸಂದರ್ಭದಲ್ಲಿ ಸಮರ್ಪಣೆಯಾಗಲಿರುವ ಗೌರವ ಗ್ರಂಥದ ಲೇಖನವೊಂದರ ಆಯ್ದ ಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT