ಶನಿವಾರ, ಮೇ 28, 2022
22 °C
ಅಕ್ರಮವಾಗಿ ಅಫೀಮು ಬೆಳೆಯುತ್ತಾ ಪೊಲೀಸರ ಅತಿಥಿಗಳಾಗುತ್ತಿದ್ದ ಬಿಹಾರದ ರೈತರೀಗ ನಿಂಬೆಹುಲ್ಲು ಬೆಳೆದು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ

ಸಂಗತ: ಮುಳುಗುತ್ತಿದ್ದವರಿಗೆ ನಿಂಬೆಹುಲ್ಲಿನ ಆಸರೆ– ಬಿಹಾರ ರೈತರ ಚಮತ್ಕಾರ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

ಅವು ಬಿಹಾರ ರಾಜ್ಯದ ಗಯಾ ಜಿಲ್ಲೆಯ ಎಂಟು ಹಳ್ಳಿಗಳು. ರಾತ್ರಿಯಾದರೆ ಸಾಕು ಹಳ್ಳಿಯ ಮನೆಗಳ ಮೇಲೆಲ್ಲ ಪೊಲೀಸು ರೈಡು, ಲಾಠಿ ಏಟು, ಅರೆಸ್ಟು ಮತ್ತು ಮಣಗಟ್ಟಲೆ ಅಫೀಮು ಬೆಳೆಯ ಜಪ್ತಿ ನಡೆಯುತ್ತಿತ್ತು. ಜನ ಮಾದಕದ್ರವ್ಯ ಸಾಗಾಣಿಕೆದಾರರಲ್ಲ, ಕಳ್ಳರೂ ಅಲ್ಲ. ಅಫೀಮು ಬೆಳೆಯುವ ರೈತರು!

ಹಗಲೆಲ್ಲ ಮೈಮುರಿದು ಹೊಲಗಳಲ್ಲಿ ದುಡಿಯುತ್ತಿದ್ದ ರೈತ ಗಂಡಸರು ರಾತ್ರಿಯಾದರೆ ಸ್ಥಳೀಯ ಠಾಣೆಗಳ ಜೈಲು ಸೇರುತ್ತಿದ್ದರು. ಕಳೆದ ಹನ್ನೊಂದು ವರ್ಷಗಳಿಂದಲೂ ನಡೆಯುತ್ತಿದ್ದ ಈ ಯಾತನೆಯಿಂದ ರೈತರಿಗೆ ಮುಕ್ತಿ ಸಿಕ್ಕಿದ್ದು ತೀರಾ ಇತ್ತೀಚೆಗೆ ಒಂದು ವರ್ಷದ ಹಿಂದೆ. ಅದೂ ಒಂದು ಹುಲ್ಲಿನಿಂದ!

ಹೌದು, ಎಂಟೂ ಹಳ್ಳಿಗಳ ರೈತರೀಗ ಪೊಲೀಸರ ಕಣ್ಣು ತಪ್ಪಿಸಿ ಓಡುತ್ತಿಲ್ಲ. ಅವರ ಮೇಲೆ ಕೇಸು– ಅರೆಸ್ಟುಗಳು ನಿಂತೇ ಹೋಗಿವೆ. ಅದಕ್ಕೆ ಕಾರಣ, ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ ಸಹಾಯ ಮತ್ತು ನೀಡಿದ ಮಾರ್ಗದರ್ಶನ. ಅಫೀಮು ಬೆಳೆಯ ಜಾಗದಲ್ಲೀಗ ಲೆಮನ್‍ಗ್ರಾಸ್ (ನಿಂಬೆ ಹುಲ್ಲು) ನಳನಳಿಸುತ್ತಿದೆ. ಚೋಟ್‍ಕಿ ಛಂಪಿ ಹಳ್ಳಿಯ ರೈತ ಸಕಲದೇವ್ ಯಾದವ್ ತನ್ನ ಐದು ಎಕರೆ ಜಮೀನಿನಲ್ಲಿ ಔಷಧೀಯ ಗುಣದ ನಿಂಬೆಹುಲ್ಲನ್ನು ಬೆಳೆಯಲು ₹ 25,000 ಬಂಡವಾಳ ಹಾಕಿ 1,500 ಲೀಟರ್ ಹುಲ್ಲೆಣ್ಣೆಯನ್ನು ಉತ್ಪಾದಿಸುವ ಉಮೇದಿನಲ್ಲಿದ್ದಾನೆ. ಒಂದು ಲೀಟರ್ ಎಣ್ಣೆಗೆ ₹ 500ರಂತೆ ₹ 7.5 ಲಕ್ಷ ಆದಾಯ ಗಳಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ಹುಲ್ಲಿನ ಎಸಳು ಅಲ್ಲಿನ ರೈತರ ಬಾಳಿನ ಹೊಸಬೆಳಕಾಗಲಿದೆ.

ಒಂದು ನೂರು ವರ್ಷದ ಹಿಂದೆ ನಮ್ಮ ನೆಲಕ್ಕೆ ಬಂದ ನಿಂಬೆಹುಲ್ಲನ್ನು ಕೇರಳ, ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶ, ಉತ್ತರಾಂಚಲ ಮತ್ತು ಅಸ್ಸಾಂನ ಭಾಗಗಳಲ್ಲಿ ಹೆಚ್ಚು ಬೆಳೆಯ
ಲಾಗುತ್ತದೆ. ವಿಶ್ವದಲ್ಲೇ ನಿಂಬೆಹುಲ್ಲಿನ ಎಣ್ಣೆ ಮತ್ತು ಚಹಾ ಎಲೆಗಳನ್ನು ಅತಿಹೆಚ್ಚು ರಫ್ತು ಮಾಡುವ ದೇಶ ನಮ್ಮದು. ಇದಕ್ಕೆ ಗಯಾ ಜಿಲ್ಲೆಯ ಹಳ್ಳಿಗಳ ರೈತರ ಕೊಡುಗೆಯೂ ಈಗ ಸೇರುತ್ತಿದೆ.

ಹತ್ತು ವರ್ಷಗಳ ಹಿಂದೆ ಬಿತ್ತಿದ ಬೆಳೆ ಕೈಗೆ ಬಾರದೆ ಬಡತನ ತಾಂಡವವಾಡುತ್ತಿತ್ತು. ಅದರಿಂದ ಹೊರಬರಲು ಪೊಲೀಸರ, ಸ್ಥಳೀಯ ಅಧಿಕಾರಿಗಳ ಕಣ್ತಪ್ಪಿಸಿ ಅಫೀಮು ಸಸಿಯನ್ನು ಇದ್ದಬದ್ದ ಜಮೀನಿನಲ್ಲಿ ನೆಟ್ಟ ರೈತರು ಅದರ ಮೇಣ ಮಾರಿ ಕೈತುಂಬ ಹಣ ಸಂಪಾದಿಸತೊಡಗಿದರು.

ಸೆಂಟ್ರಲ್ ಬ್ಯೂರೊ ಆಫ್ ನಾರ್ಕೋಟಿಕ್ಸ್‌ನ ಪರವಾನಗಿ ಇರುವ ರೈತರು ಮಾತ್ರ ಅಫೀಮು ಬೆಳೆಯಬಹುದು. ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶದ 22 ಜಿಲ್ಲೆಗಳಲ್ಲಿ ಅಫೀಮು ಬೆಳೆಯಲು ಅನುಮತಿ ಇದೆ. ನಿಷೇಧಿತ ಬೆಳೆಯನ್ನು ನಾಶಪಡಿಸಲು ಹೊಲಗಳ ಮೇಲೆ ದಾಳಿ ಮಾಡುತ್ತಿದ್ದ ಪೊಲೀಸರು ಬೆಳೆಗೆ ಬೆಂಕಿ ಹಚ್ಚಿ ರೈತರನ್ನು ಬಡಿದು ಜೈಲಿಗಟ್ಟುತ್ತಿದ್ದರು.

ಒಮ್ಮೆಯಂತೂ 400 ಹೆಕ್ಟೇರ್ ಜಮೀನಿನ ತುಂಬ ಬೆಳೆದಿದ್ದ ಅಫೀಮು ಬೆಳೆಯನ್ನು ಸುಟ್ಟುಹಾಕಿ ದಾಖಲೆ ಮಾಡಿದ್ದರು. ಇದರಿಂದ ಧೈರ್ಯಗೆಡದ ರೈತರು ‘ಏನೇ ಬರಲಿ ಅಫೀಮು ಇರಲಿ’ ಎಂಬಂತೆ ಹಟಕ್ಕೆ ಬಿದ್ದು, ಗಯಾ ಜಿಲ್ಲೆಯೊಂದರಲ್ಲೇ ಬರೋಬ್ಬರಿ 1,300 ಹೆಕ್ಟೇರ್ ಜಮೀನಿನಲ್ಲಿ ಅಫೀಮು ಬೆಳೆದಿದ್ದರು! ಅದರ ಪೈಕಿ 300 ಹೆಕ್ಟೇರ್ ಜಮೀನು ‘ಗೌತಮ ಬುದ್ಧ ವನ್ಯಜೀವಿ ಅಭಯಾರಣ್ಯ’ದ ವ್ಯಾಪ್ತಿಯಲ್ಲಿತ್ತು!

ಆಗ ಕಾಡಿನ ಒತ್ತುವರಿ ಕೇಸು ರೈತರ ಮೇಲೆ ಬಿತ್ತು. ಕಾಡುಪ್ರಾಣಿ ಬೇಟೆಯಾಡಿದ್ದೀರಿ ಎಂದು ಸುಳ್ಳು ಕೇಸುಗಳೂ ದಾಖಲಾದವು. ಗಂಡಸರು ಜಾಮೀನು ಸಿಗದೆ ತಿಂಗಳಾನುಗಟ್ಟಲೆ ಜೈಲು ಪಾಲಾದರು. ಇದ್ಯಾಕೋ ಸರಿಬರುತ್ತಿಲ್ಲ ಎಂದುಕೊಂಡ ಹಳ್ಳಿಯ ಹೆಣ್ಣು ಮಕ್ಕಳು ‘ನಮಗೆ ಸಾಕಾಗಿಹೋಗಿದೆ, ನಾವಿನ್ನು ಅಫೀಮು ಬೆಳೆಯುವುದಿಲ್ಲ. ನಮಗೆ ದಾರಿ ತೋರಿಸಿ, ನೀವು ಹೇಳಿದಂತೆ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಯಲ್ಲಿ ಅಳಲು ತೋಡಿಕೊಂಡರು.

ಸ್ಪಂದಿಸಿದ ಸರ್ಕಾರವು ಅರಣ್ಯ ಇಲಾಖೆಯ ನೇತೃತ್ವದಲ್ಲಿ, ಅಫೀಮು ಬೆಳೆ ಬದಲು ಕಡಿಮೆ ನೀರು ಬೇಡುವ, ಔಷಧೀಯ ಗುಣದ ನಿಂಬೆಹುಲ್ಲನ್ನು ಬೆಳೆಯಲು ಉತ್ತೇಜನ ನೀಡಿತು. ಮಹಿಳೆಯರಿಗೆ ಜೇನು ಸಾಕಣೆ, ಹೊಲಿಗೆ, ನುಗ್ಗೆ ಹಾಗೂ ಇಪ್ಪೆ (ಇಂಡಿಯನ್ ಬಟರ್ ಟ್ರೀ) ಮರ ಬೆಳೆಯುವ ತರಬೇತಿ ನೀಡಲಾಯಿತು. ರೈತರು ಅರಣ್ಯ ಇಲಾಖೆಯ ಕ್ರಮಕ್ಕೆ ಸರಿಯಾಗಿ ಸ್ಪಂದಿಸಿದ್ದರಿಂದ, ಸರ್ಕಾರವು ಜೈಗಿರ್ ಹಳ್ಳಿಯಲ್ಲಿ ನಿಂಬೆಹುಲ್ಲಿನಿಂದ ಎಣ್ಣೆ ತೆಗೆಯುವ ಘಟಕ ಸ್ಥಾಪಿಸಿ ರೈತರಿಗೆ ನೆರವಾಯಿತು. ಎಣ್ಣೆಗೆ ನಿಂಬೆಯ ವಾಸನೆ ಇರುವುದರಿಂದ ಸಾಬೂನು, ಮಾರ್ಜಕ, ಪರ್‌ಫ್ಯೂಮ್, ಕಾಂತಿವರ್ಧಕ, ಪಾನೀಯ, ಅಡುಗೆ ಮತ್ತು ಕೀಟನಿವಾರಕಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

3ರಿಂದ 4 ವರ್ಷಗಳ ಕಾಲ ಬದುಕುವ ನಿಂಬೆಹುಲ್ಲನ್ನು ಶಾಶ್ವತ ಸಸ್ಯ ಎಂದೂ ಕರೆಯುತ್ತಾರೆ. ಇದರ ಜೊತೆಗೆ ನುಗ್ಗೆಕಾಯಿ ಪುಡಿ, ಜೇನುತುಪ್ಪ, ಟಿಲ್‍ಕುಟ್ (ಇಪ್ಪೆ ಹೂವಿನ ಗುಲ್ಕನ್) ತಯಾರಿಸುವ ಘಟಕಗಳೂ ಬಂದಿವೆ. ರೈತರ ಉತ್ಪನ್ನಗಳನ್ನು ‘ಅರಣ್ಯಕ್’ ಬ್ರ್ಯಾಂಡ್ ಹೆಸರಿನಲ್ಲಿ ಅರಣ್ಯ ಇಲಾಖೆಯೇ ಮಾರಾಟ ಮಾಡುತ್ತಿದೆ. ರೈತರು ನ್ಯಾಯಸಮ್ಮತ ರೀತಿಯಲ್ಲಿ ಹಣ ಗಳಿಸುತ್ತಿದ್ದಾರೆ. ಎಣ್ಣೆ ಮತ್ತು ಚಹಾದ ರೂಪದಲ್ಲಿ ಭಾರೀ ಆದಾಯ ತರುತ್ತಿರುವ ಲೆಮನ್‍ಗ್ರಾಸ್, ಮುಳುಗುತ್ತಿದ್ದ ರೈತರ ಬಾಳಿನ ಆಸರೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು