ಶುಕ್ರವಾರ, ಮೇ 14, 2021
27 °C
ಪ್ರಾಥಮಿಕ ಶಿಕ್ಷಣದ ಶುಲ್ಕಕ್ಕೆ ಸಂಬಂಧಿಸಿ ಸರ್ಕಾರ ಇತ್ತೀಚೆಗೆ ಕೈಗೊಂಡಿದ್ದ ನಿರ್ಧಾರ, ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ

ಸಂಗತ: ಶುಲ್ಕ ನೀತಿ ಕಲಿಸಿದ ಪಾಠ

ಪ್ರೊ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

Prajavani

ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಶುಲ್ಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಅತ್ಯಂತ ಜನಪರವಾದ ನಿರ್ಧಾರವನ್ನು ಕೈಗೊಂಡಿತ್ತು. ಆದರೆ ಹೈಕೋರ್ಟ್‌ ತಡೆಯಾಜ್ಞೆಯಿಂದ ಅಷ್ಟೇ ಭರದಲ್ಲಿ ಆ ನಿರ್ಧಾರವನ್ನು ಕೈ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸರ್ಕಾರ ಕಡ್ಡಾಯಗೊಳಿಸಲಿದ್ದ ಏಕರೂಪ ಶುಲ್ಕದ ನೀತಿಯನ್ನು ಬಹಳಷ್ಟು ಮಂದಿ ಸ್ವಾಗತಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆದು, ಅದು ಜಾರಿಗೆ ಬರಲೇಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು.

ಇದನ್ನು ಗಮನಿಸಿದಾಗ, ಇಂತಹ ನೀತಿಯಿಂದ ಒಳಿತುಗಳನ್ನು ಮಾತ್ರ ನಿರೀಕ್ಷಿಸಬಹುದೇ, ಶುಲ್ಕದ ಪ್ರಮಾಣ ನಿಗದಿಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲ ಶಾಲೆಗಳ ಸ್ಥಿತಿಗತಿಯನ್ನು ಸರ್ಕಾರವು ವೈಜ್ಞಾನಿಕವಾಗಿ ಪರಿಶೀಲಿಸಿತ್ತೇ ಎಂಬ ಪ್ರಶ್ನೆಗಳು ಎದುರಾಗುತ್ತವೆ.

ಸರ್ಕಾರದ ಆಶಯ ಮೇಲ್ನೋಟಕ್ಕೆ ಬೆಂಬಲಾರ್ಹ ಎನಿಸುವುದು ನಿಜ. ಆದರೆ ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಸೀಟು ಸಿಕ್ಕಲು ಏಕೆ ಕಷ್ಟವಾಗುತ್ತದೆ ಮತ್ತು ಪೋಷಕರು ಅಂತಹ ಶಾಲೆಗಳಲ್ಲಿಯೇ ತಮ್ಮ ಮಕ್ಕಳಿಗೆ ಸೀಟು ಅರಸಿ ರಾತ್ರಿಯೆಲ್ಲ ಸರದಿ ಸಾಲಲ್ಲಿ ಏಕೆ ನಿಲ್ಲುತ್ತಾರೆ ಎಂಬ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರ ಹುಡುಕಿಕೊಳ್ಳಬೇಕಿದೆ. ಕೆಲವು ಖಾಸಗಿ ಶಾಲೆಗಳ ಬಂಡವಾಳಶಾಹಿತನವನ್ನು ಬದಿಗೊತ್ತಿ, ಅಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು, ಕಲಿಕಾ ಕ್ರಮಗಳು ಮುಂತಾದ ಅಂಶಗಳನ್ನು ಪರಿಗಣಿಸಿದರೆ, ಪೋಷಕರು ತೆರುವ ಹಣಕ್ಕೆ ನ್ಯಾಯ ದೊರಕುವ ಎಲ್ಲ ಸಾಧ್ಯತೆಗಳೂ ಇವೆ ಎಂಬುದು ಸಾಬೀತಾಗುತ್ತದೆ.

ರಾಜ್ಯದಲ್ಲಿರುವ ಎಲ್ಲ ಖಾಸಗಿ ಶಾಲೆಗಳು ಸಮ ಪ್ರಮಾಣದಲ್ಲಿ ತಮ್ಮ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತಿಲ್ಲ. ಹೀಗಾಗಿ ಈ ಶಾಲೆಗಳ ನಡುವೆ ಶುಲ್ಕದ ವಿಚಾರದಲ್ಲಿ ಬಹಳಷ್ಟು ಅಂತರವಿರುತ್ತದೆ. ಕೆಲವು ಖಾಸಗಿ ಶಾಲೆಗಳು ಗುಣಮಟ್ಟ ಕಾಪಾಡಿಕೊಳ್ಳುವ ಸಲುವಾಗಿ, ತಮ್ಮಲ್ಲಿರುವ ಅನುಭವಸ್ಥ ಬೋಧಕ ಸಿಬ್ಬಂದಿಯನ್ನು ಅವರು ಕೇಳಿದಷ್ಟು ಸಂಬಳ ಕೊಟ್ಟು ಉಳಿಸಿಕೊಂಡಿರುತ್ತವೆ. ಇಷ್ಟೆಲ್ಲಾ ಮಾಡುವ ಕೆಲವು ಖಾಸಗಿ ಶಾಲೆಗಳನ್ನು ಉಳಿದ ಶಾಲೆಗಳೊಂದಿಗೆ ತಾಳೆ ಮಾಡಿ, ಏಕರೂಪ ಶುಲ್ಕವನ್ನು ಜಾರಿಗೆ ತಂದರೆ ಅದರ ಬಿಸಿಯು ಹೆಚ್ಚಾಗಿ ಯಾರನ್ನು ತಟ್ಟಬಹುದು ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ಏಕರೂಪ ಶುಲ್ಕ ಪ್ರಸ್ತಾಪದ ಬೆನ್ನಲ್ಲಿಯೇ ಶುರುವಾದ ಖಾಸಗಿ ಶಾಲೆಗಳ ಪ್ರತಿಭಟನೆ ಮತ್ತು ಮೊರೆಗೆ ಹೈಕೋರ್ಟ್‌ ಓಗೊಡದೇ ಇದ್ದಿದ್ದರೆ ಈ ಶುಲ್ಕ ನೀತಿಯು ಹೆಚ್ಚಾಗಿ ಅನನುಕೂಲ ಉಂಟು ಮಾಡುತ್ತಿದ್ದುದು ಖಾಸಗಿ ಶಾಲೆಗಳ ಶಿಕ್ಷಕರಿಗೆ. ಶಿಕ್ಷಕರ ಸಂಬಳ ಶಾಲೆಗಳಲ್ಲಿ ಸಂಗ್ರಹವಾಗುವ ಶುಲ್ಕದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಕೋವಿಡ್ ಮೊದಲನೇ ಅಲೆಯ ಸಮಯದಲ್ಲಿ ಶುಲ್ಕವನ್ನು ಪೂರ್ಣಪ್ರಮಾಣದಲ್ಲಿ ಸಂಗ್ರಹಿಸಲಾಗದ ಕಾರಣದಿಂದ ಶಿಕ್ಷಕರ ಸಂಬಳ ಕಡಿತವಾದ ಹಲವಾರು ಪ್ರಕರಣಗಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೆವು.

ಏಕರೂಪದ ಶುಲ್ಕ ನೀತಿಯಿಂದ ಪೋಷಕರಿಗೆ ಆರ್ಥಿಕವಾಗಿ ಸಹಾಯವಾಗಲಿ ಮತ್ತು ಶಿಕ್ಷಣದ ಪಾವಿತ್ರ್ಯವನ್ನು ಶಿಕ್ಷಣ ಸಂಸ್ಥೆಗಳು ಮರೆಯದೇ ಇರಲಿ ಎಂಬ ಸರ್ಕಾರದ ಆಶಯಕ್ಕೆ ಪೂರಕವಾಗಿ ಹಲವು ಅಂಶಗಳನ್ನು ಸೇರಿಸಬೇಕಿದೆ. ಕೆಲವು ಖಾಸಗಿ ಶಾಲೆಗಳ ಇಂದಿನ ಅಭೂತಪೂರ್ವ ಯಶಸ್ಸಿಗೆ ಪ್ರಮುಖ ಕಾರಣಗಳು ಅವುಗಳ ಮೂಲ ಸೌಕರ್ಯ, ಸಮಕಾಲೀನ ಸಮಾಜಕ್ಕೆ ಅನ್ವಯಿಸುವಂತಹ ಕಲಿಕಾ ಮಾಧ್ಯಮ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಗೆ ಬೇಕಿರುವ ಕಲಿಕಾ ಕ್ರಮ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಶಾಲೆಗಳ ಬಾಗಿಲುಗಳನ್ನು ತಟ್ಟುತ್ತಾರೆ, ಪ್ರವೇಶಕ್ಕಾಗಿ ಪ್ರಭಾವಿ ವ್ಯಕ್ತಿಗಳ ಶಿಫಾರಸು ಗಳನ್ನು ತರುತ್ತಾರೆ ಮತ್ತು ಶಾಲೆಗಳ ಅವಶ್ಯಕತೆಗಳಿಗೆ ತಕ್ಕಂತೆ ಸಜ್ಜಾಗುತ್ತಾರೆ. ಈ ಶಾಲೆಗಳಿಗೆ ಇಷ್ಟು ಬೇಡಿಕೆ ಹೇಗಿದೆ ಮತ್ತು ಅವುಗಳನ್ನು ಮೀರಿಸುವ ಅಥವಾ ಸರಿಸಾಟಿಯಾಗುವ ಸರ್ಕಾರಿ ಶಾಲೆಗಳ ಸೃಷ್ಟಿ ಏಕೆ ಸಾಧ್ಯವಾಗಿಲ್ಲ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ.

ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ಇದ್ದೇ ಇದೆ. ಸಹಸ್ರಾರು ಕೋಟಿಗಳನ್ನು ಶಿಕ್ಷಕರ ನೇಮಕಾತಿಯಿಂದ ಹಿಡಿದು ಶಾಲಾ ಕಟ್ಟಡಗಳ ನಿರ್ಮಾಣದವರೆಗಿನ ಖರ್ಚುಗಳಿಗಾಗಿ ಮೀಸಲಿಡ ಲಾಗುತ್ತದೆ. ಪ್ರಾಥಮಿಕ ಶಿಕ್ಷಕರ ನೇಮಕಾತಿಯು ಖಾಸಗಿ ಶಾಲೆಗಳಿಗಿಂತಲೂ ಕ್ರಮಬದ್ಧವಾಗಿ ಆಗುತ್ತದೆ. ಆದರೂ ನಮ್ಮ ಸರ್ಕಾರಿ ಶಾಲೆಗಳು ಪೋಷಕರಿಗೆ ಬೇಡವಾಗುತ್ತಿರುವುದು ಏಕೆ?

ಶುಲ್ಕ ನೀತಿಗೆ ಸಂಬಂಧಿಸಿದ ಇಡೀ ಪ್ರಕರಣದಲ್ಲಿ ನಮಗೆ ಪಾಠವಾಗಿ ಲಭಿಸಿದ ವಿಚಾರವೆಂದರೆ, ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸುವ ಬದಲಿಗೆ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳ ಉನ್ನತೀಕರಣ ಆಗಬೇಕು. ಸರ್ಕಾರಿ ಶಾಲೆಗಳ ಕಟ್ಟಡಗಳು ಖಾಸಗಿ ಶಾಲೆಗಳಿಗೆ ಸವಾಲೊಡ್ಡುವಂತೆ ಇದ್ದರೆ ಪೋಷಕರ ಚಿತ್ತ ಖಾಸಗಿ ಶಾಲೆಗಳತ್ತ ಹರಿಯುವುದು ಕಡಿಮೆಯಾದೀತು ಎಂಬುದು.

ಇಂದು ನಮಗೆ ತುರ್ತಾಗಿ ಬೇಕಿರುವಪರಿಹಾರವೆಂದರೆ, ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕಾಗಿ ಮೀಸಲಿಡುವ ಕೋಟ್ಯಂತರ ರೂಪಾಯಿ ಪೋಲಾಗದಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹರಿಯಬೇಕು. ಆಗ ಖಾಸಗಿ ಶಾಲೆಗಳು ಕ್ರಮೇಣ ಸರ್ಕಾರಿ ಶಾಲೆಗಳ ಪೈಪೋಟಿಯನ್ನು ಎದುರಿಸುವ ಸಲುವಾಗಿ ತಮ್ಮ ಶುಲ್ಕವನ್ನು ತಗ್ಗಿಸಲೂಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು