ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮರಳಿ ತರೋಣ

ಜಗತ್ತಿಗೆ ‘ಶಾಂತಿ’ಯ ಮಂತ್ರ ಬೋಧಿಸಿದಂಥ ನಮ್ಮ ನಾಡಿನ ಬೀದಿಗಳಲ್ಲಿ ಜನರನ್ನು ಸಾಯಹೊಡೆಯುವಂತಹ ವಿಕೃತಿ ಸೃಷ್ಟಿಯಾದದ್ದಾದರೂ ಹೇಗೆ?
Last Updated 17 ಜುಲೈ 2018, 19:36 IST
ಅಕ್ಷರ ಗಾತ್ರ

ಭಾರತ ವೇದೋಪನಿಷತ್ತುಗಳು ಜನಿಸಿದ ನಾಡು, ಅಧ್ಯಾತ್ಮದ ನೆಲೆವೀಡು, ಶಾಂತಿ ಎಂದರೆ ಏನು ಎಂಬುದನ್ನು ಕೇವಲ ಸಂದೇಶವಾಗಿ ಅಲ್ಲ, ಕ್ರಿಯಾರೂಪದಲ್ಲಿಜಗತ್ತಿಗೆ ತೋರಿಸಿಕೊಟ್ಟ ಭೂಮಿ. ಅಸಂಖ್ಯ ದೈವದೇವರು
ಗಳು, ಸಾವಿರಾರು ತೀರ್ಥ ಕ್ಷೇತ್ರಗಳು, ಮೇಲು ಕೀಳೆನ್ನದೆ ಶುದ್ಧಾತ್ಮರಾಗಲು ಬಯಸಿ ಬಂದ ಲೋಕದ ಜನರ ಆತ್ಮಶುದ್ಧಿ, ಹೃದಯಶುದ್ಧಿಯ ಕಾಯಕದಲ್ಲಿ ಸದಾ ನಿರತರಾಗಿರುವ ಸಂತರ, ಯೋಗಿಗಳ, ಅಧ್ಯಾತ್ಮ ಚಿಂತಕರ, ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದ ಕೋಟ್ಯಾನುಕೋಟಿ ಸಜ್ಜನರು ಮಾತ್ರವಲ್ಲ, ಬದುಕಿನಲ್ಲಿ ಬಟ್ಟೆಗೆಟ್ಟ ಬಡ, ದೀನ ದಲಿತ ಮಾನವರನ್ನು ಸದ್ಧರ್ಮಿಗಳಾಗಿ, ಸತ್ಕರ್ಮಿಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟುಕೊಂಡಿ
ರುವ ಯೋಗಿಗಳು, ನಿಷ್ಕಾಮ ಕರ್ಮಿಗಳು, ನಿಸ್ಸಂಸಾರಿಗಳು ಈ ದೇಶದಲ್ಲಿ ನೂರಾರಲ್ಲ, ಸಾವಿರಾರು ಇದ್ದಾರೆ.

ಶಾಂತಿಗಾಗಿ, ಲೋಕೋದ್ಧಾರಕ್ಕಾಗಿ ಬಹುತೇಕ ಪ್ರತಿದಿನವೆಂಬಂತೆ ಯಜ್ಞ ಯಾಗಾದಿಗಳು ನಡೆಯುವ ನೆಲಇದು. ನಡೆದಾಡುವ ವಿರಕ್ತರು, ಸನ್ಯಾಸಿಗಳು, ಪರಮಹಂಸರು, ಅವಧೂತರು, ಸರ್ವಸಂಗ ಪರಿತ್ಯಾಗಿಗಳು ಮುಂತಾದವರಿಂದ ಈ ದೇಶಕ್ಕಾಗಲಿ, ಸಮಾಜಕ್ಕಾಗಲಿ ಯಾವ ಬಾಧೆಯೂ ಇಲ್ಲ. ಬುದ್ಧ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿಯಂಥವರು; ‘ಮಾನವ ಕುಲಂ ಒಂದೇ ವಲಂ’ ಎಂದು ಲೋಕಕ್ಕೆ ಸಾರಿದ ಮಹಾಕವಿಗಳು; ಮಾನವ ಧರ್ಮ ಮತ್ತು ವಿಶ್ವ ಧರ್ಮವನ್ನು ‘ಅಹಿಂಸಾ ಪರಮೋಧರ್ಮ’ ಎಂಬ ಒಂದು ವಾಕ್ಯದಲ್ಲಿ ತುಂಬಿಕೊಟ್ಟ ಮಹಾಚೇತನಗಳು ಭಾರತದ ಹೊರತು ಬೇರೆಲ್ಲೂ ಹುಟ್ಟಿಲ್ಲ. ಸಮಾಜಸೇವೆಗೆ ಬದುಕನ್ನು ಅರ್ಪಿಸಿಕೊಳ್ಳುವ ಸ್ತ್ರೀ ಪುರುಷರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವುದು ಭಾರತದಲ್ಲಿ ಮಾತ್ರ. ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬೇರೆ ಬೇರೆ ದೇಶಗಳಿಗೆ ಲಕ್ಷಾಂತರ ಜನರು ಹೋಗುತ್ತಾರೆ. ಆದರೆ ಒಂದು ಇಡೀ ದೇಶದ ಭಾರತದ ಸೌಂದರ್ಯವೇ ಆಗಿರುವ ವೈವಿಧ್ಯಮಯ ಸಂಸ್ಕೃತಿಯನ್ನು, ಸಾಮಾಜಿಕ ರೀತಿ ರಿವಾಜುಗಳನ್ನು ಕಣ್ಣಾರೆ ಕಾಣಲು ಇಡೀ ಜಗತ್ತು ಭಾರತಕ್ಕೆ ಬರುತ್ತದೆ.

130 ಕೋಟಿ ಜನಸಂಖ್ಯೆಯಿರುವ ಭಾರತದ 29 ರಾಜ್ಯಗಳಲ್ಲಿಯೂ ಪ್ರತಿದಿನ ಸಾಹಿತ್ಯ ಚರ್ಚೆ, ಸಂಗೀತ,ನೃತ್ಯಗಳಲ್ಲದೆ, ಹಲವು ಬಗೆ ಸಾಂಸ್ಕೃತಿಕ ಮನೋರಂಜನೆ ನೀಡುವ ಕಾರ್ಯಕ್ರಮಗಳು ನಡೆಯುತ್ತವೆ. ಭಾರತೀ
ಯರ ಸೌಮ್ಯ ಸುಸಂಸ್ಕೃತ ನಡೆ ನುಡಿಯಿಂದಾಗಿ ಭಾರತೀಯರಿಗೆ ಎಲ್ಲಿ ಹೋದರೂ ಪ್ರೀತಿ, ಮನ್ನಣೆ ದೊರೆಯುತ್ತದೆ.ದೂರದರ್ಶನದ ಬಹುತೇಕ ಅಸಂಖ್ಯ ಎನ್ನಬಹುದಾದಂಥ ಟಿ.ವಿ. ಚಾನೆಲುಗಳಲ್ಲಿ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಪ್ರತಿದಿನ ಪ್ರದರ್ಶಿತವಾಗುತ್ತವೆ. ಪ್ರತಿದಿನ ರಾಜಕಾರಣ ಮತ್ತು ಸರ್ಕಾರದ ಆಡಳಿತ ವೈಖರಿಯ ಕುರಿತು ನಡೆಯುವ ಚರ್ಚೆಗಳು ಪ್ರಸಾರವಾಗುತ್ತವೆ.ಭಾರತದಲ್ಲಿ ಕೆಲವು ಸಾವಿರ ಭಾಷೆಗಳು, ನೂರಾರು ಬಗೆಯ ನೃತ್ಯ, ಸಂಗೀತವಿದೆ. ನೂರಾರು ಮಂದಿ ರಾತ್ರಿ ಹಗಲು ಎಂಬ ಭೇದವಿಲ್ಲದೆ ಮನೋರಂಜಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ.

ಇಂಥ ದೇಶದಲ್ಲಿ ಪ್ರತಿದಿನವೆಂಬಂತೆ ಕೊಲೆ, ರೇಪ್ ಇತ್ಯಾದಿ ಅಪರಾಧಗಳು ನಡೆಯುತ್ತಾ ಇವೆ ಎಂದರೆ ನಮಗೆ ‘ಅಯ್ಯೊ ಯಾಕೆ ಹೀಗಾಗುತ್ತದೆ’ ಎಂದು ದುಃಖ,ನಾಚಿಕೆ ಆಗಬೇಡವೆ? ನಾಚಿಕೆ ಮಾತ್ರವಲ್ಲ, ಈ ವಿರೋಧಾ
ಭಾಸದ ಬಗ್ಗೆ ಚರ್ಚೆ, ವಿಶ್ಲೇಷಣೆ ನಡೆಯಬೇಡವೆ? ಆಡಳಿತದ ಲೋಪದೋಷ, ದೌರ್ಬಲ್ಯಗಳ ಕುರಿತು ವಿಚಾರಣೆ ಆಗಬೇಡವೆ? ಅಪರಾಧಿಗಳಿಗೆ ಶಿಕ್ಷೆಯ ಬದಲು ಮನ್ನಣೆ ಸಿಗುತ್ತದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.ದೇಶದಲ್ಲಿ ವಿವೇಕಹೀನರ ಸಂಖ್ಯೆ ಬೆಳೆಯುತ್ತಿದೆ. ಉದಾಹರಣೆಗೆ, ವರ್ಷ ವರ್ಷ ಶರಾಬು ಕುಡಿದು ಸಾಯುವವರ ಸಂಖ್ಯೆ ವರ್ಧಿಸುತ್ತಿದೆ. ಲಕ್ಷಾಂತರ ಮಂದಿಯನ್ನು ಬೇರೆ ಬೇರೆ ವೇಷದಲ್ಲಿ ತಂಬಾಕು ಕೊಲ್ಲುತ್ತಾ ಇದೆ. ಮಾದಕ ದ್ರವ್ಯ ವ್ಯಸನಕ್ಕೆ ಯುವಪೀಳಿಗೆ ಬಲಿಯಾಗುತ್ತಾ ಇದೆ. ದ್ರವ್ಯವನ್ನೇ ದೇವರಾಗಿಸಿಕೊಂಡು ಅದರ ಪೂಜೆಯಲ್ಲಿ ಮೈಮರೆತವರು ದೇಶವನ್ನು ಆಳುತ್ತಾ ಇದ್ದಾರೆ.ಈ ಪೂಜೆಯಲ್ಲಿ ಅವರ ಮಾನವೀಯತೆ ನಾಶವಾಗುತ್ತಿದೆ.

ನಮ್ಮಂತೆಯೇ ಮನುಷ್ಯರಾಗಿರುವ ಲಕ್ಷಾಂತರ ಜನ ಸೆರೆಮನೆಯಲ್ಲಿದ್ದಾರೆ. ಅವರು ಯಾಕೆ ಬಂಧನದಲ್ಲಿರಬೇಕು ಎಂಬ ಪ್ರಶ್ನೆ ಸರ್ಕಾರದ ಮಿದುಳಿನಲ್ಲಿ ಯಾವತ್ತೂ ಹುಟ್ಟಿಲ್ಲ.ಎರಡು ಬದಲಾವಣೆಗಳು ಆಗಲೇಬೇಕು. 1. ನಮ್ಮನ್ನು ಆಳುತ್ತಿರುವ ಪ್ರಜಾಪ್ರಭುತ್ವದ ಆಮೂಲಾಗ್ರ ಶುದ್ಧೀಕರಣ ಆಗಬೇಕು. ಇದು ಪ್ರಜೆಗಳ ಚಿಂತನೆ ಮತ್ತು ಕ್ರಿಯೆಯಿಂದಲೇ ಆಗಬೇಕಾದ್ದು. 2. ಸೆರೆಮನೆ ಎಂಬ ಶಬ್ದದ ಬದಲು ‘ಶ್ರಮಾಲಯ’ ಎಂಬ ಶಬ್ದವನ್ನು ಬಳಸಬೇಕು. ‘ಕೈದಿ’ ಎಂಬ ಶಬ್ದದ ಬದಲು ‘ಶ್ರಮಿಕ’ ಎಂಬ ಶಬ್ದವನ್ನು ಬಳಸಬೇಕು. ಶ್ರಮಿಕರಬದುಕಿನ ವೆಚ್ಚ ಅವರ ಶ್ರಮದಿಂದಲೇ ಬರಬೇಕು.ಎಲ್ಲವನ್ನೂ ನಿಭಾಯಿಸುವ ಪೊಲೀಸರ ಸಂಖ್ಯೆ ಹೆಚ್ಚಾಗಬೇಕು. ಪೊಲೀಸುಪಡೆ ಸೇರುವವರು ಸಜ್ಜನ ನಾಗರಿಕರಾಗಿರಬೇಕು. ಪ್ರತಿ ಜಿಲ್ಲೆಗೊಂದು ‘ಶ್ರಮಾಲಯ’ ನಿರ್ಮಾಣಕ್ಕೆ ಹತ್ತು ಎಕರೆ ಜಾಗ ಕೊಡಬೇಕು. ಈ ‘ಶ್ರಮಾಲಯ’ದಲ್ಲಿ ಹಗಲು ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಶ್ರಮಿಕರು ಸ್ವಂತ ಇಚ್ಛೆಯಿಂದ ಕೆಲಸ ಮಾಡಬೇಕು. ಅವರ ಕೆಲಸವೆಂದರೆ ಕಾಯಿಪಲ್ಲೆ, ಹಣ್ಣುಹಂಪಲು ಮತ್ತು ಹೂವು ಬೆಳೆಯುವುದು ಮಾತ್ರ.

ಶ್ರಮಿಕರು ಬೆಳೆದುದರಲ್ಲಿ ತಮ್ಮ ಬಳಕೆಗೆ ಬೇಕಾಗುವಷ್ಟನ್ನು ತೆಗೆದುಕೊಳ್ಳಬಹುದು. ಉಳಿದುದನ್ನು ಮಾರುಕಟ್ಟೆಗೆ ಕಳಿಸಬೇಕು ಮತ್ತು ಬೇರೆ ಊರುಗಳಿಗೆ ಅಥವಾ ದೇಶಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು.

ಶ್ರಮಾಲಯಕ್ಕೆ ಜೋಡಿಕೊಂಡು ಶ್ರಮಿಕರ ವಾಸಗೃಹಗಳ ನಿರ್ಮಾಣವಾಗಬೇಕು. ಶ್ರಮಿಕರ ವಾಸಗೃಹದ ಹೆಸರು ‘ಮನೆ’ ಎಂದಿರಬೇಕು. ಅದರಲ್ಲಿ ಅಡುಗೆ, ಶೌಚ, ಶಯನ ಮತ್ತು ಪುಸ್ತಕ ಓದಿಗೆ ಒಟ್ಟು ಮೂರು ಕೋಣೆಗಳಿರಬೇಕು. ಶ್ರಮಿಕರು ತಮ್ಮ ಆಹಾರವನ್ನು ತಮ್ಮ ಅಡುಗೆ ಕೋಣೆಯಲ್ಲೇ ತಯಾರಿಸಿಕೊಳ್ಳಬೇಕು.ಶ್ರಮಾಲಯದ ಪ್ರಾಕಾರದ ಗೋಡೆ ಮತ್ತು ಅದಕ್ಕೆ ಹೊಂದಿಕೊಂಡು ಶ್ರಮಿಕರ ಮನೆಗಳಿರುವ ಭಾಗದ ಗೋಡೆ ಉಕ್ಕು ಮತ್ತು ಕಾಂಕ್ರೀಟಿನದಾಗಿದ್ದು, ಹತ್ತು ಅಡಿ ಎತ್ತರ
ವಾಗಿದ್ದು, ಅಭೇದ್ಯವಾಗಿರಬೇಕು. ಪ್ರಾಕಾರಕ್ಕೆ ವಿದ್ಯುತ್ ಬೇಲಿ ಜೋಡಿಸಿರಬೇಕು. ವಿದ್ಯುತ್ ಶಕ್ತಿ ಪ್ರಾಣ ತೆಗೆಯುವ ಪ್ರಮಾಣದಲ್ಲಿರಬಾರದು. ಇಂಥ ಒಂದು ನಿರ್ಮಾಣಕ್ಕೆ ಕೆಲವು ಕೋಟಿ ಹಣ ಬೇಕಾಗುತ್ತದೆ. ಯಾವ್ಯಾವುದಕ್ಕೋ ಕೋಟ್ಯಂತರ ವ್ಯಯಿಸುವ ಸರ್ಕಾರ ಮಾನವೀಯತೆ ಕಳೆದುಕೊಂಡಿರುವ ಸಾವಿರಾರು ಮಂದಿಯನ್ನು ಮಾನವರಾಗಿಸಲು ಕೆಲವು ಕೋಟಿ ವ್ಯಯಿಸುವುದು ಅಪರಾಧವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT