ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಓದುಗರಿಗೆ ಸವಾಲು

Last Updated 15 ಅಕ್ಟೋಬರ್ 2018, 19:38 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಅಕ್ಟೋಬರ್‌ 8ರ ಸಂಚಿಕೆಯ ಎರಡು ಸುದ್ದಿಗಳು ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಉಂಟುಮಾಡಿದವು. ‘ಸುಭಾಷಿತ’ದಲ್ಲಿ ಟ್ಯಾಗೋರ್‌ ಅವರ, ‘ನಾನು ನರಕದಲ್ಲೂ ಒಳ್ಳೆಯ ಪುಸ್ತಕಗಳನ್ನು ಸ್ವಾಗತಿಸುವೆ. ಅವು ಇದ್ದಲ್ಲಿ ಸ್ವರ್ಗ ತಂತಾನೇ ಹುಟ್ಟುತ್ತದೆ’ ಎಂಬ ಮಾತುಗಳು ಪ್ರಕಟವಾಗಿದ್ದರೆ, ‘ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ: ಪುಸ್ತಕಗಳ ಕೊರತೆ, ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಅಲೆದಾಟ’ ಎಂಬ ಸುದ್ದಿ ಇನ್ನೊಂದು ಪುಟದಲ್ಲಿ ಪ್ರಕಟವಾಗಿತ್ತು.

ಆಗಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಗ್ರಂಥಾಲಯವು ಐತಿಹಾಸಿಕ ಮಹತ್ವ ಪಡೆದಿದೆ. ನಾಡಿನ ಹಾಗೂ ದೇಶವಿದೇಶಗಳಲ್ಲಿ ಬೆಳಗಿದ ಅನೇಕ ಪ್ರತಿಭಾವಂತರು ಈ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿ ಹೊರಬಂದವರು. ನಾನೂ ಈ ಗ್ರಂಥಾಲಯದ ವಿದ್ಯಾರ್ಥಿಯಾಗಿದ್ದವನು. ಅಲ್ಲಿ ಉಪಗ್ರಂಥಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ನಾನು ಕಂಡ ಒಬ್ಬ ಶ್ರೇಷ್ಠ ಗ್ರಂಥಪಾಲಕ ದಿವಂಗತ ರಾಮಮೂರ್ತಿಯವರು.
ಓದುಗರು ಪುಸ್ತಕಗಳಿಗಾಗಿ ಅಥವಾ ಯಾವುದೋ ಮಾಹಿತಿ ಪಡೆಯಲಿಕ್ಕಾಗಿ ಗ್ರಂಥಾಲಯಕ್ಕೆ ಬಂದಾಗ, ರಾಮಮೂರ್ತಿ ಅವರು ನಗುಮೊಗದಿಂದ ಸ್ವಾಗತಿಸಿ, ಬಂದವರಿಗೆ ಎಲ್ಲ ಅಗತ್ಯ ಮಾಹಿತಿ ಒದಗಿಸುತ್ತಿದ್ದರು.

‘ಗ್ರಂಥಾಲಯದ ಸಿಬ್ಬಂದಿ ಹರಟೆ ಹೊಡೆಯುತ್ತಾ ಕುಳಿತಿರುತ್ತಾರೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದು ಅ.8ರ ಸುದ್ದಿಯಲ್ಲಿ ವರದಿಯಾಗಿದೆ. ಇದು ನಮ್ಮ ಗ್ರಂಥಾಲಯಗಳ ಇಂದಿನ ದುರಂತ ಸ್ಥಿತಿ.

ವಿಶ್ವವಿದ್ಯಾಲಯದ ಆಡಳಿತವು ಜ್ಞಾನಭಾರತಿ ಕ್ಯಾಂಪಸ್‍ಗೆ ಸ್ಥಳಾಂತರವಾದ ನಂತರ ಸೆಂಟ್ರಲ್ ಕಾಲೇಜ್ ಗ್ರಂಥಾಲಯದ ಚಟುವಟಿಕೆಗಳು ಸೊರಗಿದವು ಎನ್ನಬಹುದು. ಮುಖ್ಯ ಸಿಬ್ಬಂದಿ ಹೊಸ ಕ್ಯಾಂಪಸ್‍ಗೆ ಸ್ಥಳಾಂತರವಾದ ನಂತರ ಗ್ರಂಥಸಂಗ್ರಹ ಕಾರ್ಯ ಕುಂಠಿತವಾಯಿತು. ನೂತನ ಗ್ರಂಥಾಲಯ ಸ್ಥಾಪನೆಒಂದು ದೊಡ್ಡ ಸವಾಲು. ಅನುಪಯುಕ್ತ ಪುಸ್ತಕಗಳನ್ನು ತೆಗೆದುಹಾಕಿ ಹೊಸ ಗ್ರಂಥಗಳಿಗೆ ಸ್ಥಳಾವಕಾಶ ಮಾಡಬೇಕು. ಕೇಂದ್ರ ಗ್ರಂಥಾಲಯಗಳ ಅನೇಕ ಶಾಖೆಗಳಲ್ಲಿ ಹೊಸದಾಗಿ ಸೇರ್ಪಡೆಯಾದ ಲಕ್ಷಾಂತರ ಪುಸ್ತಕಗಳನ್ನು ಜಾಗದ ಕೊರತೆಯಿಂದಾಗಿ ರಾಶಿ ಹಾಕಲಾಗಿದೆ. ಗ್ರಂಥಾಲಯಗಳಿಗೆ ಹೊಸ ಕಟ್ಟಡಗಳ ನಿರ್ಮಾಣ ಆಗುತ್ತಿಲ್ಲ. ಎರಡು– ಮೂರು ದಶಕಗಳಿಂದ ಗ್ರಂಥಾಲಯ ಇಲಾಖೆಗೆ ನುರಿತ ಸಿಬ್ಬಂದಿಯ ನೇಮಕ ಆಗಿಲ್ಲ. ಇದೇ ಸಮಸ್ಯೆ ಕೆಲವು ಕಾಲೇಜು ಮತ್ತು ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲೂ ಇದೆ.

ಗ್ರಾಮ ಪಂಚಾಯಿತಿ ಅಧೀನದ ಗ್ರಂಥಾಲಯಗಳಿಗೆ ಇಂದಿಗೂ ಪ್ರತಿ ತಿಂಗಳು 400 ರೂಪಾಯಿ ಮೊತ್ತದ ಪತ್ರಿಕೆಗಳ ಸರಬರಾಜು ಮಾತ್ರ ಆಗುತ್ತಿದೆ. ಈ ಮೊತ್ತವನ್ನು ₹ 1000ಕ್ಕೆ ಹೆಚ್ಚಿಸಬೇಕೆಂಬ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ.

ಈಗಿನ ಪೀಳಿಗೆಯ ವಿದ್ಯಾರ್ಥಿಗಳು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಗ್ರಂಥಾಲಯದ ಅವ್ಯವಸ್ಥೆಯ ಬಗ್ಗೆ ಹೇಳಿಕೊಂಡಿದ್ದಾರೆ. ಗ್ರಂಥಾಲಯ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯ ಬಗ್ಗೆಯಷ್ಟೇ ಹೇಳಿದರೆ ಸಾಲದು, ಇತ್ತೀಚಿನ ದಿನಮಾನದಲ್ಲಿ ನಮ್ಮ ಒಟ್ಟಾರೆ ಸಾಂಪ್ರದಾಯಿಕ ಓದಿನ ಸಂಸ್ಕೃತಿಯ ಮೇಲೆ ಒಮ್ಮೆಯೇ ದಾಳಿ ಮಾಡಿರುವ ‘ವಿದ್ಯುನ್ಮಾನ ಓದು’ ಎಂಬ ಮೋಹವೂ ಈ ಸ್ಥಿತಿಗೆ ಸಮಾನ ಹೊಣೆಯಾಗಿದೆ. ಕೆಲವು ವರ್ಷಗಳ ಹಿಂದೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ‘ಇ– ಮ್ಯಾಗಜಿನ್’ ಹಾಗೂ ‘ಇ– ಗ್ರಂಥ’ ಸೇರ್ಪಡೆ ಮಾಡಲು ಕೋಟ್ಯಂತರ ರೂಪಾಯಿಗಳ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ ಎಂಬ ಸುದ್ದಿ ಓದಿದ ನೆನಪು. ನಮ್ಮ ಗ್ರಂಥಾಲಯಗಳ ಆಡಳಿತ ವ್ಯವಸ್ಥೆಯಲ್ಲಿ ಒಂದು ವರ್ಗವಿದೆ, ತಂತ್ರಜ್ಞಾನದ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಬಲವಂತವಾಗಿ ದಿಢೀರನೆ ಹೇರಲು ಅದು ಪ್ರಯತ್ನಿಸುತ್ತಿರುತ್ತದೆ.

ಈ ವಿಷಯದಲ್ಲಿ ಯಾವ ವಿಶ್ವವಿದ್ಯಾಲಯವೂ ಕಡಿಮೆಯಿಲ್ಲ. ಹಾಗೆಂದು ನಾನು ತಂತ್ರಜ್ಞಾನದ ಅಳವಡಿಕೆಯನ್ನು ವಿರೋಧಿಸುವುದಿಲ್ಲ. ಆದರೆ, ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಓದು ಸಹ ಚಾಲ್ತಿಯಲ್ಲಿದೆ. ತಂತ್ರಜ್ಞಾನವನ್ನು ಮತ್ತು ಸಾಂಪ್ರದಾಯಿಕ ಓದನ್ನು ಸಮನ್ವಯಗೊಳಿಸಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಅನುಕೂಲ ಮಾಡುವ ಸಂಪನ್ಮೂಲಗಳನ್ನು ಆಡಳಿತ ವರ್ಗ ಒದಗಿಸಬೇಕು. ಅಭಿವೃದ್ಧಿ ಹೊಂದಿರುವ ಅಮೆರಿಕದಂತಹ ದೇಶದಲ್ಲಿಯೂ ಸಾಂಪ್ರದಾಯಿಕವಾಗಿ ಓದುವ ಪುಸ್ತಕಗಳ ಹಾಗೂ ತಂತ್ರಜ್ಞಾನ ಆಧರಿತ ಓದುವ ಪರಿಕರಗಳ ಸಮನ್ವಯ ಹೊಂದಿರುವ ‘ಹೈಬ್ರಿಡ್ ಗ್ರಂಥಾಲಯ’ಗಳೆಂದು ಕರೆಯಲಾಗುವ ವ್ಯವಸ್ಥೆಯನ್ನು ಒದಗಿಸಿದ್ದಾರೆ.

ಸಾರ್ವಜನಿಕ ಗ್ರಂಥಾಲಯಗಳು ಹಿಂದಿನಿಂದಲೂ ಸಮಾಜದ ಎಲ್ಲಾ ವರ್ಗದ ಓದುಗರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿವೆ. ನಾನು ಹಿಂದೆ ಸೇವೆ ಸಲ್ಲಿಸಿದ್ದ, ಜಯನಗರದ ಕೇಂದ್ರ ಗ್ರಂಥಾಲಯಕ್ಕೆ ಈಚೆಗೆ ಭೇಟಿ ನೀಡಿದ್ದೆ. ಅಲ್ಲಿನ ಓದುಗರೊಡನೆ ಮಾತನಾಡಿದಾಗ, ‘ಹಳೆಯ ಗ್ರಂಥಾಲಯಗಳಲ್ಲಿ ಓದಲು ಅನುಕೂಲವಾ
ಗುವ ಉತ್ತಮ ವಾತಾವರಣವೇನೋ ಇದೆ. ಆದರೆ ನಮಗೆ ಬೇಕಾದ ಗ್ರಂಥಗಳು ಲಭ್ಯವಿಲ್ಲದ ಕಾರಣ ಬೇಕಾದ ಗ್ರಂಥಗಳನ್ನು ಹೊರಗಿನಿಂದ ತಂದು ಇಲ್ಲಿ ಕುಳಿತು ಓದುತ್ತಿದ್ದೇವೆ. ಅನೇಕ ಗ್ರಂಥಗಳು ಇಲ್ಲಿ ಇದ್ದರೂ ಈಗಿನ ಕಾಲಮಾನಕ್ಕೆ ಅವುಗಳು ಉಪಯೋಗವಾಗುತ್ತಿಲ್ಲ’ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸಾರ್ವಜನಿಕ ಗ್ರಂಥಾಲಯಗಳ ಇಂದಿನ ಬಲು ದೊಡ್ಡ ಸವಾಲೆಂದರೆ, ಕಳೆದುಹೋದ ತನ್ನ ಓದುಗರನ್ನು ಪುನಃ ಗ್ರಂಥಾಲಯಕ್ಕೆ ಸೆಳೆಯುವುದು. ಗ್ರಂಥಾಲಯಗಳು ಓದುಗನನ್ನು ಒಬ್ಬ ಗ್ರಾಹಕನೆಂದು ಭಾವಿಸಬೇಕು. ಅವನಿಗೆ ಅಗತ್ಯವಾದ ಅಧ್ಯಯನ ಸಾಮಗ್ರಿ ಒದಗಿಸಲು ಸೂಕ್ತ ನೀತಿ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಹಲವು ದಶಕಗಳ ಹಿಂದೆ ರೂಪಿಸಿದ ಪುಸ್ತಕ ಸಂಗ್ರಹ ನೀತಿಗೆ ಮಾರ್ಪಾಡು ತರಬೇಕಾಗಿದೆ. ಗ್ರಂಥಾಲಯದ ಆಡಳಿತವರ್ಗ ವರ್ಷಕ್ಕೊಮ್ಮೆಯಾದರೂ ಓದುಗ
ರೊಂದಿಗೆ ಸಂವಾದ ಏರ್ಪಡಿಸಿ ಸಮೀಕ್ಷೆ ನಡೆಸಬೇಕು. ಸರ್ಕಾರವು ಗ್ರಾಮ ಸಭೆಗಳನ್ನು ನಡೆಸಿ ಜನರ ಬೇಕು– ಬೇಡಗಳನ್ನು ಚರ್ಚಿಸಬೇಕು. ನಮ್ಮ ವಿಶ್ವವಿದ್ಯಾಲಯಗಳ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಆಡಳಿತ ವರ್ಗಗಳು ವರ್ಷಕ್ಕೊಮ್ಮೆಯಾದರೂ ಹೊಸ ತಲೆಮಾರಿನ ಓದುಗರ ಮುಂದೆ ತಾವು ನೀಡುತ್ತಿರುವ ಸೇವೆಯನ್ನು ಸಾಣೆ ಹಿಡಿಯುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಬೇಕು. ಮಧ್ಯಮ ವರ್ಗ ಹಾಗೂ ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ಜ್ಞಾನದ ಸೋಪಾನಗಳಾಗಬೇಕು ಎಂಬುದು ಆಶಯ.

-ಸಂಖ್ಯೆ 814, 5ನೇ ಕ್ರಾಸ್, 1ನೇ ಬ್ಲಾಕ್, ಕಲ್ಯಾಣ ನಗರ, ಬೆಂಗಳೂರು-560043. ದೂ :9448030720

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT