ಭಾನುವಾರ, ಜನವರಿ 17, 2021
24 °C
ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶ ನಮ್ಮದೆಂದು ಸಂಭ್ರಮಿಸುವ ಹೊತ್ತಿನಲ್ಲೇ ಅಭದ್ರತೆ ಮೂಡಿಸುತ್ತಿರುವ ಸಂಗತಿಗಳನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ

ಪ್ರಜಾಪ್ರಭುತ್ವ: ಇದೆ ಇತಿಮಿತಿ

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಚರಿತ್ರೆಯುದ್ದಕ್ಕೂ ನಿರಂಕುಶ ಪ್ರಭುತ್ವ, ರಾಜರ ಆಡಳಿತ, ಸೇನಾ ಆಡಳಿತಗಳನ್ನೆಲ್ಲಾ ಕಂಡುಂಡ ಜಗತ್ತು, ಕೊನೆಗೆ ಪ್ರಜಾಪ್ರಭುತ್ವ ಮಾದರಿಯನ್ನು ಅನ್ವೇಷಿಸಿ, ಆ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಇರಿಸಿಕೊಂಡು ಮುನ್ನಡೆಯುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಗಳಿವೆ ಮತ್ತು ಉಳಿದವು ಅದರೆಡೆಗೆ ಆಸೆಗಣ್ಣಿನಿಂದ ನೋಡುತ್ತಿವೆ. 2007ರ ಸೋವಿಯತ್ ಒಕ್ಕೂಟದ ಚುನಾವಣೆಯಲ್ಲಿಯೂ ಇದು ಸಾಬೀತಾಗಿದೆ. ಚೀನಾದ ಟಿಯನನ್ಮೆನ್‌ ಚೌಕದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಹಾಂಗ್‌ಕಾಂಗ್ ನಾಗರಿಕರ ಇತ್ತೀಚಿನ ಹೋರಾಟವೂ ಇದೇ ನಿಲುವನ್ನು ಧ್ವನಿಸುತ್ತವೆ. ಲಿಬಿಯಾದ ದಂಗೆಯ ಆಶಯ ಕೂಡ ಪ್ರಜಾಪ್ರಭುತ್ವ ಸ್ಥಾಪನೆಯೇ ಆಗಿತ್ತು.

ಹಾಗೆಂದು ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದಾಗಲೀ ಉಳಿಸಿಕೊಳ್ಳುವುದಾಗಲೀ ಸುಲಭ ಅಂತೇನಲ್ಲ. ಆ ಮಾದರಿಯಲ್ಲಿನ ಯಶಸ್ಸಿನಲ್ಲಿ ಮತದಾರನ ಪ್ರಜ್ಞಾವಂತಿಕೆ ಮತ್ತು ಹೊಣೆಗಾರಿಕೆಯ ಪಾಲು ದೊಡ್ಡದಿರುತ್ತದೆ. ಜಾಗರೂಕ ಸಮಾಜದ ಪಾಲ್ಗೊಳ್ಳುವಿಕೆಯ ಜರೂರತ್ತು ಇರುತ್ತದೆ. ಹೀಗಾಗಿ, ದೇಶದ ಪ್ರಜಾಪ್ರಭುತ್ವಕ್ಕಿರುವ ಆತಂಕಗಳನ್ನು ಸದಾಕಾಲ ತೆರೆದ ಮನಸ್ಸಿನಿಂದ ಅವಲೋಕಿಸಬೇಕಿರುತ್ತದೆ.

ಎಕಾನಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ (ಇಐಯು) ಸಿದ್ಧಪಡಿಸುವ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವೀಗ ಕಳೆದ ಬಾರಿಗಿಂತ ಹತ್ತು ಸ್ಥಾನ ಕುಸಿತ ದಾಖಲಿಸುವುದರೊಂದಿಗೆ, ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಾರ್ವೆಯು ಅಗ್ರಸ್ಥಾನ ಮತ್ತು ಉತ್ತರ ಕೊರಿಯಾವು ಕೊನೆಯ ಸ್ಥಾನದಲ್ಲಿರುವುದು ನಿರೀಕ್ಷಿತ ಬೆಳವಣಿಗೆಯೇ! ರಾಜಕೀಯ ನೇತಾರರು- ಪಕ್ಷಗಳು ದ್ವೇಷ ಬಿತ್ತುತ್ತಾ, ನಾಗರಿಕ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿರುವ ಸೂಚಕವಿದು. ರಾಜಕೀಯ ಸಂಸ್ಕೃತಿ-ಸಹಭಾಗಿತ್ವ, ಸರ್ಕಾರದ ಕಾರ್ಯವೈಖರಿ, ಬಹುತ್ವದ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಆದ್ಯಪಾಲನೆಗಳು ದೋಷಪೂರಿತ ಹಾದಿಯಲ್ಲಿ ಸಾಗಿರುವುದೇ ಹಿನ್ನಡೆಗೆ ಕಾರಣವೆಂದೂ ವಿಶ್ಲೇಷಿಸಲಾಗುತ್ತಿದೆ.

ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಸುಶಿಕ್ಷಿತ ಅಮೆರಿಕದ ವರ್ತಮಾನದ ಬೆಳವಣಿಗೆಗಳೂ ಪ್ರಜಾಪ್ರಭುತ್ವ ವ್ಯವಸ್ಥೆಗಿರುವ ಆತಂಕವನ್ನು ಹೆಚ್ಚಿಸಿವೆ. ಪ್ರಜಾ
ಪ್ರಭುತ್ವವೆಂದರೆ, ಸಹಬಾಳ್ವೆಯ ಸೊಗಸು ಮತ್ತು ಜನಸೇವಾ ಮನೋಭಾವವು ಪರಸ್ಪರ ದಟ್ಟೈಸುವ ಒಂದು ಸುಂದರ ಜೋಡಣೆ. ಸಹವರ್ತಿಗಳಲ್ಲಿ ಗೌರವ ಮತ್ತು ಸಮಾನಭಾವ ತೋರುವ, ಪೆಡಸಾದ ಸಾಮಾಜಿಕ ನಿರ್ಬಂಧ ಮೀರಿದ ಮುಕ್ತ ಸಮಾಜವಾಗಿರಬೇಕು ಎಂಬುದು ಸಂವಿಧಾನ ನಿರ್ಮಾತೃಗಳ ಆಶಯವಾಗಿತ್ತು. ಜೊತೆಗದು ಸಮಾಜವಾದಕ್ಕೆ ಹೊರಳಬೇಕಾದ, ಶ್ರೇಣೀಕರಣ ಮತ್ತು ಪ್ರತ್ಯೇಕತೆಗಳಿರದ ಸಮಾಜವ್ಯವಸ್ಥೆಯ ಪ್ರತಿರೂಪವೂ ಆಗಿರಬೇಕೆಂದು ಬಯಸಿದ್ದರು.

ಸ್ವಾತಂತ್ರ್ಯಾ ನಂತರದಲ್ಲಿ ದೇಶದ ಜನಸಾಮಾನ್ಯರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಗಮನಾರ್ಹ ಸುಧಾರಣೆಗಳಾಗಿವೆ. ವೈಜ್ಞಾನಿಕ ಸಂಶೋಧನೆ ಮತ್ತು ಜಾಗತಿಕ ಚಹರೆಯಲ್ಲಿ ಹಲವಾರು ಮೈಲಿಗಲ್ಲುಗಳನ್ನು ನೆಟ್ಟಿದ್ದನ್ನು ಮರೆಯಲಾಗದು. ಆದರೆ, ಇಡೀ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಸ್ವಾರ್ಥ, ಭ್ರಷ್ಟಾಚಾರ, ಅಧಿಕಾರ ದಾಹ, ಜಾತಿ-ಧರ್ಮ ಮೋಹಗಳ ಪಿಡುಗಿನಿಂದ ಅವನತಿಯಂಚಿಗೆ ಸರಿಯುತ್ತಿದ್ದೇವೆಂದೇ ಅರ್ಥ. ಅನೈತಿಕ ಮಾರ್ಗದಲ್ಲಿ ಚುನಾವಣೆಯನ್ನು ಗೆಲ್ಲುವವರು ಮುಂದೆ ಸಂಭಾವಿತರಾಗಿರಬೇಕೆಂದು ಜನರು ನಿರೀಕ್ಷಿಸುವುದಾದರೂ ಹೇಗೆ? ಅದು ಬೇವು ನೆಟ್ಟು ಮಾವು ಬಯಸಿದಂತಾಗುತ್ತದೆ ಅಷ್ಟೆ.

‘ಇತ್ತೀಚೆಗಂತೂ ಇಲ್ಲಿ ಎಲ್ಲಾ ಹಂತದ ಜನಪ್ರತಿನಿಧಿಗಳೂ ಬಿಕರಿಗೆ ಸಿಗುತ್ತಾರೆ...’ ಎಂಬಂತಹ ಕಳವಳಕಾರಿ ಸನ್ನಿವೇಶ ಸೃಷ್ಟಿಯಾಗುತ್ತಿದೆ! ಎಲ್ಲವೂ ಮಾರಾಟದ ಸರಕಾದ ಮೇಲೆ ಪ್ರಜಾಪ್ರಭುತ್ವದ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆಗಳನ್ನೆಲ್ಲಾ ಹುಡುಕುವುದೆಲ್ಲಿ?

ಜಗತ್ತಿನ ಚರಿತ್ರೆಯಲ್ಲಿ ಬಹುತೇಕ ಚಳವಳಿಯ, ಹೋರಾಟದ, ಕ್ರಾಂತಿಯ ಶಕ್ತಿಯಾಗಿ ಒಳನುಸುಳಿದವರು ಅಲ್ಲಿಯ ಯುವಜನರು. ಆದರಿಲ್ಲಿ ಯುವಕರು ತೋರುತ್ತಿರುವ ಜಾಣ ಕುರುಡು, ಕಿವುಡುಗಳಾಚೆಯ ಅರೆಪ್ರಜ್ಞಾಹೀನ ಮನಃಸ್ಥಿತಿಯು ದೇಶದ ಪ್ರಜಾಪ್ರಭುತ್ವಕ್ಕಿರುವ ಕೊರತೆ ಮತ್ತು ಅಪಾಯವೂ ಹೌದು.

ತಂತ್ರಜ್ಞಾನ ಯುಗದಲ್ಲೂ ಹಸಿವು, ಬಡತನ, ಅಸ್ಪೃಶ್ಯತೆ, ನಿರುದ್ಯೋಗ, ಕೃಷಿಯ ಅನಿಶ್ಚಿತತೆಯಿಂದ ದೇಶವಿನ್ನೂ ಹೊರಬಂದಿಲ್ಲ. ಯುವಜನರ ನಿರೀಕ್ಷೆಗೆ, ಬೇಡಿಕೆಗೆ ಪೂರಕವಾಗಿ ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿಸಬೇಕಾದ ಸವಾಲು ನಮ್ಮ ಮುಂದಿದೆ. ಜೊತೆಗೆ ನಮ್ಮದು ಜಗತ್ತಿನಲ್ಲೇ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶವೆಂದು ಸಂಭ್ರಮಿಸುವ ಹೊತ್ತಿನಲ್ಲಿ ಆರ್ಥಿಕ ಸ್ಥಿತಿ, ಉದ್ಯೋಗ ಸೃಷ್ಟಿ, ಆಹಾರಭದ್ರತೆ, ಬಡತನ ನಿರ್ಮೂಲನೆ ಮತ್ತು ಪರಿಸರ ಸಂರಕ್ಷಣೆಯ ವಿಷಯಗಳಲ್ಲಿ ಅಭದ್ರತೆಯತ್ತ ಸಾಗುತ್ತಿರುವ ಬಗ್ಗೆ ವಿಶ್ವ ಸಂಘಟನೆಗಳು ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

‘ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠ ಮಾದರಿಯ ವ್ಯವಸ್ಥೆ ಎಂದೇನಿಲ್ಲ. ಅಲ್ಲಿಯೂ ಇತಿಮಿತಿಗಳಿವೆ. ಆದರೆ ಇನ್ನುಳಿದವು ಅದಕ್ಕಿಂತಲೂ ಕೆಟ್ಟ ಮಾದರಿಯವು!’ ಎಂಬ ಚರ್ಚಿಲ್‍ರ ಮಾತಿನ ಮರ್ಮವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಉತ್ತರದಾಯಿತ್ವದ ಆಳ್ವಿಕೆಯನ್ನು ಅಳವಡಿಸಿಕೊಂಡು, ಸಕಾರಾತ್ಮಕ ನಿಲುವುಗಳನ್ನು ಒಳಗೊಳ್ಳುತ್ತಾ ನಡೆದಲ್ಲಿ ಮಾತ್ರ ಪ್ರಜಾಪ್ರಭುತ್ವಕ್ಕೆ ಆಯುಷ್ಯವಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು