ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘#MeToo’ಗೆ ಒಂದು ಚೌಕಟ್ಟಿರಲಿ

ಅಧಿಕಾರದ ಮದದಲ್ಲಿ ಮಹಿಳೆಯರನ್ನು ಹಿಂಸಿಸುವವರ ಲೆಕ್ಕ ಚುಕ್ತಾ ಮಾಡುವ ಅಭಿಯಾನವಾಗಿ #MeToo ಮುಂದುವರೆದಲ್ಲಿ ಅದಕ್ಕೊಂದು ಬೆಲೆ ಇದೆ
Last Updated 23 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಅಭಿಯಾನವೊಂದು ಸಮಾಜದ ‘ಗಂಡುಮಾನ’ವನ್ನೇ ಬೀದಿಗೆ ತಂದು ನಿಲ್ಲಿಸುತ್ತಿದೆ. ‘# ಮೀ ಟೂ’ ಅಭಿಯಾನವು ಮೇಲ್ನೋಟಕ್ಕೆ, ಎಂದೋ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ಸಾಂದರ್ಭಿಕ ಕಾರಣಕ್ಕೆ ಮುದುಡಿ ಕುಳಿತು, ಬಾಯಿ ಬಿಡಲಾಗದೆ ಸಹಿಸಿದ ಕಹಿ ಘಟನೆಗಳ ಮುಂದೂಡಿದ ಧ್ವನಿ, ನಿತ್ಯವೂ ನಡೆಯುವ– ಅನುಭವಿಸುವ ನರಕಯಾತನೆಯಂತೆ ಕಾಣಿಸುತ್ತಿದೆ. ಈ ವಿಚಾರದಲ್ಲಿ ಮಹಿಳೆ ಎಂದೂ ಅಬಲೆಯೇ! ಆದರೆ, ‘ಮಹಿಳೆಯರ ಆರ್ತನಾದ’ ಎಂಬ ಕಾರಣಕ್ಕೆ ದೇಶದ ಕಾನೂನು ವ್ಯವಸ್ಥೆ ಮತ್ತು ಮಾನವಹಕ್ಕು ಆಯೋಗಗಳು #ಮೀ ಟೂ ಅಭಿಯಾನಕ್ಕೆ ಒಂದು ಚೌಕಟ್ಟು ಹಾಕದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ದೇಶದ ಸಾಮಾಜಿಕ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡಬಲ್ಲ, ಅಪಾಯದ ಮಟ್ಟ ಮೀರಿ ಮುನ್ನುಗ್ಗಬಲ್ಲಷ್ಟು ಯಾತನೆಗಳು ಮಹಿಳೆಯರಲ್ಲಿ ಮಡುಗಟ್ಟಿ ಕುಳಿತಿವೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಜಗತ್ತಿನಲ್ಲಿರುವ ಹೆಚ್ಚಿನ ಪ್ರಾಣಿ ಪಕ್ಷಿಗಳಲ್ಲಿ ಸಂತಾನೋತ್ಪತ್ತಿಗೆ ಮಾತ್ರ ಮೀಸಲಾದ ಮಿಲನ ಕ್ರಿಯೆಗೆ ಅದರದೇ ಆದ ಕಾಲವಿರುತ್ತದೆ. ಮನುಷ್ಯ ಪ್ರಾಣಿಗೆ ಮಾತ್ರ ಲೈಂಗಿಕಾಸಕ್ತಿ ನಿತ್ಯನಿರಂತರ. ‘ಕಾಮಾತುರಾಣಾಂ ನ ಭಯಂ ನಲಜ್ಜಾ’ ಎನ್ನುವ ಮಾತು ಕೆರಳಿದ ಕಾಮವನ್ನು ಹದ್ದುಬಸ್ತಿನಲ್ಲಿಡಲಾಗದ ಅಸಹಾಯಕತೆಯ ಉತ್ತಮ ವಿಶ್ಲೇಷಣೆ. ಲೈಂಗಿಕ ಪ್ರಕರಣಗಳಿಗೆ ಅತಿ ಶೀಘ್ರವಾಗಿ ಕಠಿಣ ಶಿಕ್ಷೆ ನೀಡುವ ನ್ಯಾಯ ವ್ಯವಸ್ಥೆ ಇರುವ ದೇಶಗಳಲ್ಲೂ ಜೀವ ಭಯವನ್ನೂ ಮೆಟ್ಟಿನಿಂತು ಕಾಮ ವಿಜೃಂಭಿಸುತ್ತಲೇ ಇದೆ. ಭಾರತದಲ್ಲಿ ಪ್ರಜ್ಞಾವಂತರು ಕಾಮದ ಬಯಕೆಯನ್ನು ನಿಯಂತ್ರಿಸಿಕೊಳ್ಳುತ್ತಿರುವುದು, ಸಮಾಜದಲ್ಲಿ ಮುಖ ಎತ್ತಿ ತಿರುಗಲಾಗದ ‘ಲಜ್ಜೆಯ’ ಭಯಕ್ಕೇ ಎಂದರೆ ತಪ್ಪಾಗದು.

ಸಾಮಾನ್ಯ ಮನುಷ್ಯರಷ್ಟೇ ಅಲ್ಲ, ಕಾವಿ ತೊಟ್ಟ ಸನ್ಯಾಸಿಗಳನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಅದೆಷ್ಟೋ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಕಾಯುತ್ತ ಕುಳಿತಿವೆ. ನ್ಯಾಯಾಂಗಕ್ಕೆ ಸಾಕ್ಷಿಗಳನ್ನು ಪೂರೈಸಿ, ಚಾತಕಪಕ್ಷಿಯಂತೆ ಕಾದು ಕುಳಿತರೂ ನ್ಯಾಯ ಲಭಿಸಿಯೇ ತೀರುತ್ತದೆ ಎಂಬ ನಂಬಿಕೆಯಂತೂ ಉಳಿದಿಲ್ಲ. ಸಮಾಜವೂ ದೂರು ನೀಡಿದ ಮಹಿಳೆಯರನ್ನೇ ಅನುಮಾನದ ಕಣ್ಣುಗಳಿಂದ ನೋಡುವುದರಿಂದ, ಅದೆಷ್ಟೋ ಪ್ರಕರಣಗಳು ಕಾಲಗರ್ಭದಲ್ಲಿ ಹುದುಗಿ ಹೋಗಿರುತ್ತವೆ. ಅತ್ಯಾಚಾರದಂತಹ ಹೇಯ ಕೃತ್ಯವನ್ನು ಹೊರತುಪಡಿಸಿ ಎಂದೋ ನಡೆದ ಸಣ್ಣಪುಟ್ಟ ಕಹಿ ಘಟನೆಗಳನ್ನು ಅಭಿಯಾನದ ರೂಪದಲ್ಲಿ ಕೆದಕಿ ತೆಗೆದರೆ, ಈಗಾಗಲೇ ನ್ಯಾಯಾಲಯದಲ್ಲಿ ಕುಳಿತಿರುವ ಪ್ರಕರಣಗಳ ಗಂಭೀರತೆಯೂ ಕಡಿಮೆಯಾಗುತ್ತದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳೂ ‘ಪೆಟ್ಟಿ ಕೇಸ್‌’ ಮಟ್ಟಕ್ಕೆ ಇಳಿದು ಸಮಾಜದಲ್ಲಿ ಎಲ್ಲಿ ನೋಡಿದರೂ ಕಳಂಕಿತರೇ ಕಂಡುಬಂದರೆ ಲಜ್ಜೆಗೇನು ಬೆಲೆ ಉಳಿದೀತು!?

ಬಾಹ್ಯ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಾ ಸಂಭಾವಿತರೆಂಬ ಪಟ್ಟ ಕಟ್ಟಿಕೊಂಡಿದ್ದ ಪ್ರತಿಷ್ಠಿತರ ಏಕಾಂತದ ಮುಖವನ್ನು # ಮೀ ಟೂ ಅಭಿಯಾನ ಬಯಲು ಮಾಡಿದೆ, ಮಾಡುತ್ತಿದೆ. ಆರೋಪ ಮಾಡುತ್ತಿರುವವರು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುತ್ತಿರುವ ಅಕ್ಷರಸ್ಥರೇ! ಮೊದಲಿನಿಂದಲೂ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳಿವೆ, ನ್ಯಾಯಾಲಯಗಳಿವೆ. ಅದನ್ನೆಲ್ಲ ಬಿಟ್ಟು, ಗಟ್ಟಿ ಸಾಕ್ಷ್ಯ ಇಲ್ಲದೆ, ಎಂದೋ ಕೈ ಮುಟ್ಟಿದ್ದರು, ಕೆನ್ನೆ ಸವರಿದ್ದರು, ವಿನಾಕಾರಣ ಮಾತನಾಡಿಸುತ್ತಿದ್ದರು, ಕಣ್ಣಿನಲ್ಲೇ ಸಂಜ್ಞೆ ಮಾಡುತ್ತಿದ್ದರು… ಎನ್ನುವ ಆರೋಪಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದೆಂದರೆ ಪರೋಕ್ಷವಾಗಿ ಕಾನೂನನ್ನು ಕೈಗೆತ್ತಿಕೊಂಡು ತೇಜೋವಧೆ ಮಾಡಿದಂತೆಯೇ. ಸೆಲೆಬ್ರಿಟಿಗಳಂತೂ ಆರೋಪ ಮಾಡುವುದೆಂದರೆ ‘ನಾನು ಸಂಭಾವಿತೆ’ ಎಂಬ ಪ್ರಮಾಣಪತ್ರಕ್ಕೆ ಹೆಸರು ನೋಂದಾಯಿಸುವುದೆಂದು ಭಾವಿಸಿದಂತಿದೆ.

ಪುರುಷ ಮಾತ್ರ ಕಾಮದ ಕೈಗೊಂಬೆಯಲ್ಲ. ಹೆಣ್ಣು ಸಹ ಪುರುಷನನ್ನು ಸೆಳೆದು, ಲೈಂಗಿಕ ಶೋಷಣೆಯ ಭಾಗವಾಗಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿರುವ ಮಹಿಳೆಯು ತನ್ನ ಕಾರ್ಯಕ್ಷೇತ್ರದಲ್ಲಿ ಪುರುಷನೊಟ್ಟಿಗೆ ಏಗಬೇಕಾಗಿರುವುದು ಅನಿವಾರ್ಯ. ದುಡಿಯುವ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಳ್ಳದೆ, ಪುರುಷನೊಟ್ಟಿಗಿನ ಸ್ನೇಹವನ್ನು ಸಲುಗೆಯಾಗಿಸಿಕೊಳ್ಳದೆ ಮೈಯೆಲ್ಲ ಕಣ್ಣಾಗಿಸಿಕೊಂಡು ಜಾಗರೂಕಳಾಗಿ ಹೆಜ್ಜೆ ಇಡಬೇಕಿದೆ. ಇದು ಪುರುಷರಿಗೂ ಅನ್ವಯಿಸುವ ಮಾತು. # ಮೀ ಟೂ ಅಭಿಯಾನ ಒಂದು ಹಂತದ ಎಚ್ಚರಿಕೆಯ ಗಂಟೆಯನ್ನು ಪುರುಷ ಸಮಾಜಕ್ಕೆ ರವಾನಿಸಿದೆ. ಪುರುಷಕಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿರಬಹುದು, ಆದರೆ ಎಲ್ಲ ಪುರುಷರೂ ಕಾಮುಕರಲ್ಲ. ಅಧಿಕಾರದ ಮದದಲ್ಲಿ, ಹಣದ ದರ್ಪದಲ್ಲಿ ಮಹಿಳೆಯರನ್ನು ಹಿಂಸಿಸುವವರ ‘ಲೆಕ್ಕವನ್ನು ಚುಕ್ತಾ ಮಾಡುವ’ ಅಭಿಯಾನವಾಗಿ # ಮೀ ಟೂ ಮುಂದುವರೆದಲ್ಲಿ ಅದಕ್ಕೊಂದು ಬೆಲೆ.

ಅಜ್ಞಾತವಾಸದಲ್ಲಿ ಸೈರಂಧ್ರಿಯಾಗಿದ್ದ ದ್ರೌಪದಿಯನ್ನು ಕಾಮುಕ ಕೀಚಕನು ಲೈಂಗಿಕವಾಗಿ ಕಾಡಿದಾಗ ಭೀಮ ಅವನನ್ನು ಸಂಹಾರ ಮಾಡಿದ ಕಥೆ ಮಹಾಭಾರತದಲ್ಲಿದೆ. ಸಮಾಜದಲ್ಲಿ, ಕಾಡುವ ಕೀಚಕರೂ ಇರುತ್ತಾರೆ– ಕಾಪಾಡುವ ಭೀಮರೂ ಇರುತ್ತಾರೆ ಎನ್ನುವ ಆಶಾವಾದದೊಂದಿಗೆ # ಮೀ ಟೂ ಅಭಿಯಾನ ಒಂದು ಚೌಕಟ್ಟಿನೊಳಗೆ ನಿರ್ಬಂಧಿಸಲ್ಪಡಲಿ. ದುರುಪಯೋಗವಾಗದಂತೆ ಮಹಿಳೆಯರಿಗೆ ಶ್ರೀರಕ್ಷೆಯಾಗಲಿ.

-ಪ್ರಕಾಶ್ ಕಾಕಾಲ್, ಹೆಗ್ಗೋಡು

ಸತ್ಯ ಅರಿತು ಮಾತನಾಡಿ!

#ಮೀ ಟೂ ಅಭಿಯಾನಕ್ಕೆ ಸಂಬಂಧಿಸಿದಂತೆ ಬರುವ ಪರ–ವಿರೋಧ ಚರ್ಚೆಗಳನ್ನು ಗಮನಿಸಿದರೆ ಇದು ಸ್ವಹಿತಾಸಕ್ತಿಗೆ ಬಳಕೆಯಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಆದರೆ, ಕೆಲವರು ಇದೇ ವಿಚಾರ ಮುಂದಿಟ್ಟುಕೊಂಡು ದ್ವೇಷ ಸಾಧನೆಗೂ ಮುಂದಾಗುತ್ತಿದ್ದಾರೆಯೇ ಎಂಬ ಆತಂಕ ಕಾಡುತ್ತಿದೆ.

ಆರೋಪದ ಸತ್ಯಾಸತ್ಯತೆ ಅರಿಯುವ ಮುನ್ನವೇ ‘ಅರ್ಜುನ್‌ ಸರ್ಜಾ ಕ್ಷಮೆ ಯಾಚಿಸಬೇಕು’ ಎಂದು ಪ್ರಕಾಶ್ ರೈ ಒತ್ತಾಯಿಸಿದ್ದಾರೆ. ನ್ಯಾಯ ನಿರ್ಣಯ ಮಾಡಲು ಕೋರ್ಟ್ ಇದೆ, ಹಿರಿಯ ಕಲಾವಿದರು ಇದ್ದಾರೆ. ಅದಕ್ಕೂ ಮೊದಲೇ ಆತುರದಲ್ಲಿ ಆರೋಪ– ಪ್ರತ್ಯಾರೋಪ ಮಾಡುವುದರ ಉದ್ದೇಶವೇನು?

ಆತುರದ ತೀರ್ಮಾನ ಮತ್ತು ಸ್ವಹಿತಾಸಕ್ತಿಯ ನಡೆಗಳ ಮೂಲಕ #ಮೀ ಟೂ ಅಭಿಯಾನವನ್ನೇ ಬಲಿ ಕೊಡುವುದು ತರವಲ್ಲ. ಯಾರೇ ಆಗಲಿ, ಮಾತನಾಡುವ ಮುನ್ನ ಪೂರ್ವಾಪರಗಳನ್ನು ಅರಿತು ಮಾತನಾಡುವುದು ಸೂಕ್ತ.

-ಶಿವಾನಂದ ಪಸಲಾದಿ, ಹೆಬ್ಬಳ್ಳಿ, ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT