7
ಸರ್ಕಾರಿ ಆಸ್ಪತ್ರೆಗಳು ವೈದ್ಯರ ಕೊರತೆಯಿಂದ ನಲುಗುತ್ತಿದ್ದರೆ, ಮತ್ತೊಂದೆಡೆ ಎಂಬಿಬಿಎಸ್‌ಗೆ ಇರುವ ಬೇಡಿಕೆ ಕಾಯ್ದುಕೊಳ್ಳುವ ವ್ಯಾವಹಾರಿಕ ಕಾಳಜಿ! ಇದಕ್ಕೆ ಏನೆನ್ನುವುದು?

‘ನೀಟ್’ ಕಾಲದ ಬಿಕ್ಕಟ್ಟು

Published:
Updated:

ಈ ಬಾರಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಫಲಿತಾಂಶ ಹೊರಬಿದ್ದ ನಂತರ ಮೆಡಿಕಲ್ ಓದಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದ ಪರಿಚಿತರೊಬ್ಬರ ಪುತ್ರ ಆಘಾತಕ್ಕೊಳಗಾಗಿದ್ದ. ಅವನ ರ‍್ಯಾಂಕಿಂಗ್‍ಗೆ ಸರ್ಕಾರಿ ಕೋಟಾದಡಿ ಸೀಟು ಸಿಗುವುದು ದುರ್ಲಭವೇ ಆಗಿತ್ತು. ಮೆಡಿಕಲ್ ಹೊರತು ಬೇರೆ ಏನನ್ನೂ ಓದಲು ತನಗಿಷ್ಟವಿಲ್ಲವೆಂದು ಹಟ ಹಿಡಿದು ಕುಳಿತಿದ್ದವನು ಕೊನೆಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆ
ಯಲು ನಿರ್ಧರಿಸಿ, ಹೈದರಾಬಾದಿನ ಕೋಚಿಂಗ್ ಸೆಂಟರ್‌ ಒಂದರ ಕದ ತಟ್ಟಿದ್ದಾನೆ. ಒಂದು ವರ್ಷ ಅಲ್ಲೇ ನೆಲೆನಿಂತು ತರಬೇತಿ ಪಡೆಯಲಿರುವ ಆತನ ಖರ್ಚು ವೆಚ್ಚ ಸುಮಾರು ₹ 3 ಲಕ್ಷ.

ಎಂಬಿಬಿಎಸ್ ಪ್ರವೇಶಕ್ಕೆ ರಾಜ್ಯ ಮಟ್ಟದ ಸಿಇಟಿ ಬದಲು ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆ ಬರೆಯುವುದು ಅನಿವಾರ್ಯವಾದ ನಂತರ, ಮೆಡಿಕಲ್ ಓದಲೇಬೇಕೆಂಬ ಕನಸು ಕಟ್ಟಿಕೊಂಡಿರುವ ಮಧ್ಯಮ ವರ್ಗದ ವಿದ್ಯಾರ್ಥಿಗಳು ಮೊದಲ ಯತ್ನದಲ್ಲಿ ವಿಫಲವಾದರೆ ಪುನಃ ಸಿದ್ಧತೆ ನಡೆಸಿ, ನೀಟ್ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದಾರೆ. ಹೈದರಾಬಾದ್, ಬೆಂಗಳೂರುಗಳಲ್ಲಿರುವ ‘ಬ್ರ್ಯಾಂಡೆಡ್’ ಕೋಚಿಂಗ್ ಸೆಂಟರ್‌ಗಳ ಮೊರೆ ಹೋಗುತ್ತಿದ್ದಾರೆ.

ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳಿಗೆ ಲಕ್ಷಾಂತರ ರೂಪಾಯಿ ಸುರಿದು ತರಬೇತಿ ಪಡೆದುಕೊಳ್ಳುವಷ್ಟು ಆರ್ಥಿಕ ಶಕ್ತಿ ಇರದ ಬಡ ವಿದ್ಯಾರ್ಥಿಗಳ ಪಾಡೇನು ಎಂಬ ಕುರಿತು ಚಿಂತಿಸಬೇಕಾದ ಅನಿವಾರ್ಯ ಈಗ ಎದುರಾಗಿದೆ. ಮೆಡಿಕಲ್ ಪ್ರವೇಶಕ್ಕೆ ರಾಜ್ಯ ಮಟ್ಟದಲ್ಲಿ ಸಿಇಟಿ ಪರೀಕ್ಷೆ ನಡೆಸುತ್ತಿದ್ದ ವೇಳೆ, ಅದರ ಸಿದ್ಧತೆಗೆ ಬೇಕಾದ ಪಠ್ಯ ಸಾಮಗ್ರಿ ಮತ್ತು ತರಬೇತಿಯು ಕೈಗೆಟಕುವ ದರದಲ್ಲಾದರೂ ಲಭ್ಯವಾಗುತ್ತಿತ್ತು. ಆದರೆ ಈಗ
ಸ್ಥಳೀಯ ಮಟ್ಟದಲ್ಲಿ ದೊರೆಯುವ ತರಬೇತಿ ಕುರಿತು ವಿದ್ಯಾರ್ಥಿಗಳಲ್ಲಿ ಅಷ್ಟೇನೂ ಆಶಾಭಾವ ಇಲ್ಲದಂತಾಗಿದೆ.

ಮೆಡಿಕಲ್ ಓದಲೇಬೇಕೆಂಬ ಅಪೇಕ್ಷೆ ಇಟ್ಟುಕೊಂಡವರು ನೀಟ್ ಪರೀಕ್ಷೆ ಎದುರಿಸಲು ತರಬೇತಿ ಪಡೆಯಬೇಕಿರುವುದು ಅನಿವಾರ್ಯವೆಂಬ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕೋಚಿಂಗ್ ಸೆಂಟರ್‌ಗಳು ಶಾಲಾ ಹಂತದಿಂದಲೇ ನೀಟ್ ತರಬೇತಿ ಒದಗಿಸಲಾರಂಭಿಸಿವೆ. ಇಂತಹ ತರಬೇತಿಯ ವೆಚ್ಚ ಭರಿಸಲಾಗದವರು ಎಂಬಿಬಿಎಸ್ ಓದುವ ದುಬಾರಿ ಕನಸಿನ ತಂಟೆಗೆ ಹೋಗದಿರುವುದೇ ಉತ್ತಮ ಎಂಬ ಸಂದೇಶ ರವಾನೆಯಾಗುತ್ತಿದೆ.

ನೀಟ್ ಪರೀಕ್ಷೆಯ ಮೂಲಕ, ಎಂಬಿಬಿಎಸ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದು ನಿಜವೇ ಆದರೆ ಆ ಗುಣಮಟ್ಟಕ್ಕೆ ಬೇಕಿರುವ ತಳಪಾಯ ಎಲ್ಲ ವಿದ್ಯಾರ್ಥಿಗಳಿಗೂ ಸಮಾನವಾಗಿ ಎಟುಕಬೇಕಲ್ಲವೇ? ಹಣವುಳ್ಳ ಕಾರಣಕ್ಕೆ ಲಭ್ಯವಾಗುವ ವಿಶೇಷತರಬೇತಿ ಪಡೆದುಕೊಂಡವರ ಜೊತೆ ಉಳಿದವರು ಹೇಗೆ ಸ್ಪರ್ಧಿಸಬಲ್ಲರು? ಅಂತಹದ್ದೊಂದು ಸ್ಪರ್ಧೆ ನ್ಯಾಯೋಚಿತವಾದುದೇ?

ನೀಟ್ ಪರೀಕ್ಷೆಯ ಫಲಿತಾಂಶ ಹೊರಬಿದ್ದ ನಂತರ ಈ ಬಾರಿಯೂ ತಮಿಳುನಾಡಿನಲ್ಲಿ ಜರುಗಿದ ಬಡ ವಿದ್ಯಾರ್ಥಿಯ ಆತ್ಮಹತ್ಯೆಯು ಒಂದೆರಡು ದಿನಗಳ ಮಟ್ಟಿಗಾದರೂ ಈ ಕುರಿತ ಚರ್ಚೆ ಮುನ್ನೆಲೆಗೆ ಬರಲು ನೆಪವಾಯಿತು. ಉಳಿದ ರಾಜ್ಯಗಳಲ್ಲಿ ಅಂತಹ ಪ್ರತಿರೋಧವೇನೂ ವ್ಯಕ್ತವಾಗುತ್ತಿಲ್ಲ.

ಗುಣಮಟ್ಟದ ತರಬೇತಿಯನ್ನು ಎಲ್ಲರಿಗೂ ದಕ್ಕುವಂತೆ ಮಾಡಬೇಕಿರುವುದು ತನ್ನ ಜವಾಬ್ದಾರಿಯೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅನಿಸದಿರುವುದು ವಿಪರ್ಯಾಸವೇ ಸರಿ. ರಾಜ್ಯದಲ್ಲಿ ಇನ್ನೂ ಆರು ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ತೆರೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಅಸಮ್ಮತಿ ಸೂಚಿಸಿರುವ ವೃತ್ತಿಪರ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಆರ್. ಜಯರಾಮ್, ‘ಈಗಾಗಲೇ ಎಂಜಿನಿಯರಿಂಗ್ ಪದವಿಗೆ ಬೇಡಿಕೆಯೇ ಇಲ್ಲ. ಇನ್ನಷ್ಟು ಕಾಲೇಜುಗಳು ಆರಂಭವಾದರೆ ವೈದ್ಯಕೀಯ ಶಿಕ್ಷಣಕ್ಕೂ ಎಂಜಿನಿಯರಿಂಗ್ ಗತಿಯೇ ಆಗಲಿದೆ’ ಎಂದಿದ್ದಾರೆ (ಪ್ರ.ವಾ., ಜೂನ್‌ 19). ಇವರ ಮಾತು ಸದ್ಯದ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಿದೆ. ಒಂದೆಡೆ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳು ವೈದ್ಯರ ಕೊರತೆಯಿಂದ ನಲುಗುತ್ತಿದ್ದರೆ, ಮತ್ತೊಂದೆಡೆ ಎಂಬಿಬಿಎಸ್‌ಗೆ ಇರುವ ಬೇಡಿಕೆ ಕಾಯ್ದುಕೊಳ್ಳುವ ವ್ಯಾವಹಾರಿಕ ಕಾಳಜಿ! ಇದಕ್ಕೆ ಏನೆನ್ನುವುದು?

₹ 80 ಲಕ್ಷದಿಂದ ಒಂದೆರಡು ಕೋಟಿಗಳವರೆಗೂ ಬೆಲೆಬಾಳುವ ಮ್ಯಾನೇಜ್‍ಮೆಂಟ್ ಕೋಟಾದಡಿಯ ಒಂದೊಂದು ಮೆಡಿಕಲ್ ಸೀಟೂ ಸಿರಿವಂತರ ಮಕ್ಕಳಿಗಲ್ಲದೆ ಮತ್ತಿನ್ಯಾರಿಗಾದರೂ ಕೈಗೆಟುಕಲು ಸಾಧ್ಯವೇ? ಹಾಗಾಗಿಯೇ ಮಧ್ಯಮ ವರ್ಗದವರು ಕೋಚಿಂಗ್‍ಗೆ ಎರಡು–ಮೂರು ಲಕ್ಷ ರೂಪಾಯಿ ವ್ಯಯಿಸಿ, ಸರ್ಕಾರಿ ಕೋಟಾದಡಿ ಲಭ್ಯವಿರುವ ಮೆಡಿಕಲ್ ಸೀಟು ಪಡೆಯುವ ಉಮೇದಿಗೆ ಬೀಳುತ್ತಿರುವುದು. ಹೊಸದಾಗಿ ಪ್ರಾರಂಭವಾಗುವ ಸರ್ಕಾರಿ ಮೆಡಿಕಲ್ ಕಾಲೇಜುಗಳು ಇಂತಹವರ ಕನಸಿಗೆ ಖಂಡಿತ ನೀರೆರೆಯಬಲ್ಲವು. ಆದರೆ, ಸರ್ಕಾರಿ ಕೋಟಾದಡಿ ಸೀಟು ಹೆಚ್ಚಾದಂತೆಲ್ಲ ತಾವು ಬಿಕರಿಗಿಡುವ ಸೀಟುಗಳ ಮೌಲ್ಯ ಎಲ್ಲಿ ಕಡಿಮೆಯಾಗಲಿದೆಯೋ ಎಂದು ಚಿಂತಿಸುವ ಖಾಸಗಿ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಗಳು ಗುಣಮಟ್ಟ, ಬೇಡಿಕೆ ಮತ್ತಿತರ ನೆಪ ಮುಂದೊಡ್ಡಿ ಸರ್ಕಾರಿ ಕೋಟಾದಡಿಯ ಸೀಟುಗಳು ಮತ್ತು ಸರ್ಕಾರಿ ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಳಕ್ಕೆ ಅಸಮ್ಮತಿ ಸೂಚಿಸುವುದು ಯಾರ ಹಿತಾಸಕ್ತಿ ಕಾಯುವ ಸಲುವಾಗಿ ಎಂಬುದು ಅರ್ಥವಾಗುವಂಥದ್ದೇ.

ಹರಸಾಹಸಪಟ್ಟು ಎಂಬಿಬಿಎಸ್ ಸೀಟು ಪಡೆದು ವೈದ್ಯರಾದವರು, ಆನಂತರ ಮತ್ತೆ ಎಂ.ಡಿ. ಸೀಟು ಪಡೆಯಲು ನಡೆಸುವ ಸಿದ್ಧತೆ, ವ್ಯಯಿಸುವ ಹಣ ಮತ್ತು ಸಮಯವನ್ನೆಲ್ಲ ಪರಿಗಣಿಸಿದರೆ, ವೈದ್ಯರಾಗಿ ಜನಸೇವೆ ಮಾಡುವ ಮಾತನಾಡುತ್ತಿದ್ದವರು ಆನಂತರ ಏಕೆ ತಮ್ಮ ಸೇವೆಯನ್ನು ಹಣ ಸಂಪಾದನೆಗೆ ಮೀಸಲಿಡುತ್ತಾರೆ ಎಂಬುದು ಮನದಟ್ಟಾಗುತ್ತದೆ. ಲಭ್ಯವಿರುವ ಅತ್ಯಲ್ಪ ಸಂಪನ್ಮೂಲಗಳನ್ನು ಬಳಸಿಕೊಂಡು, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕವೇ ವೈದ್ಯರಾಗಿ ರೂಪುಗೊಳ್ಳುವ ವಿದ್ಯಾರ್ಥಿಗಳು ಇದ್ದಾರಾದರೂ, ನೀಟ್‌ನಂತಹ ಕೋಚಿಂಗ್ ಸೆಂಟರ್ ಕೇಂದ್ರಿತವಾಗಿ ಹೊರಹೊಮ್ಮಲಾರಂಭಿಸಿರುವ ಪ್ರವೇಶ ಪರೀಕ್ಷೆಯು ಇಂತಹವರ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣವಾಗುವ ಅಸಮಾನ ನೆಲೆಯೊಂದನ್ನು ಸೃಷ್ಟಿಸುವತ್ತ ದಾಪುಗಾಲಿಡುತ್ತಿರುವುದು ಕಣ್ಣೆದುರಿಗಿನ ವಾಸ್ತವ.

ವೈದ್ಯಕೀಯ ಶಿಕ್ಷಣ ಕೂಡ ಬಂಡವಾಳ ಹೂಡಿಕೆ ಮತ್ತು ಗಳಿಕೆಯ ಸೂತ್ರಕ್ಕೆ ಕಟ್ಟು ಬೀಳುವಂತೆ ಮಾಡುವ ವ್ಯವಸ್ಥೆಯೇ, ಜನಪರ ವೈದ್ಯರನ್ನು ಎದುರು ನೋಡುವುದು ವಿರೋಧಾಭಾಸವಾಗಿ ತೋರುವುದಿಲ್ಲವೇ?

Tags: 

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !