ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ: ಪ್ರಚಾರ ಮತ್ತು ವಾಸ್ತವ

ನವೋದ್ಯಮಗಳು ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಲ್ಲವೇ?
Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

ರಾಷ್ಟ್ರೀಯ ನವೋದ್ಯಮ ಸಲಹಾ ಮಂಡಳಿಯ ಸದಸ್ಯರ ಹೆಸರುಗಳನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆಯೆಂಬ ಸುದ್ದಿ ಇತ್ತೀಚೆಗೆ ಪ್ರಕಟವಾಯಿತು. ನವೋದ್ಯಮಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸರ್ಕಾರಕ್ಕೆ ಬೇಕಾದ ಸಲಹೆಗಳನ್ನು ನೀಡುವುದು ಈ ಮಂಡಳಿಯ ಉದ್ದೇಶ. ಅರೆ ನಗರ ಮತ್ತು ಗ್ರಾಮೀಣ ಪ್ರದೇಶದ ತರುಣರಲ್ಲಿ, ಯುವ ವಿದ್ಯಾರ್ಥಿಗಳಲ್ಲಿ ನೂತನ ಆವಿಷ್ಕಾರವನ್ನು ಬೆಳೆಸುವುದು ಕೂಡ ಸರ್ಕಾರದ ಉದ್ದೇಶ ಎಂದು ಘೋಷಿಸಲಾಗಿದೆ. ಉದ್ಯೋಗವನ್ನು ಹುಡುಕುವ ಯುವಕರ ಬದಲಾಗಿ, ಉದ್ಯೋಗವನ್ನು ಸೃಷ್ಟಿಸುವ ಯುವಕರ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಒಪ್ಪಿಕೊಂಡಿದೆ ಎಂಬ ಸಮಾಧಾನ ನಮ್ಮ ಪಾಲಿಗೆ!

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದ್ದಂತೆ ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್‌ಗಳಿಗೆ) ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019-20ರ ಬಜೆಟ್ ಭಾಷಣದಲ್ಲಿ ಕೆಲವು ನಿರ್ಧಾರಗಳನ್ನು ಪ್ರಕಟಿಸಿದರು. ಸರ್ಕಾರ ಹಿಂದೆಯೇ ಪ್ರಕಟಿಸಿದ ನಿರ್ಧಾರಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿತೇ ಹೊರತು ಗುರುತರವಾದ ಹೊಸ ಬದಲಾವಣೆಗಳನ್ನು ಮಾಡಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಸ್ಟಾರ್ಟ್‌ಅಪ್‌ ಹೂಡಿಕೆದಾರರು ತಮ್ಮ ಆದಾಯದ ಕುರಿತು ಸರ್ಕಾರಕ್ಕೆ ತಕ್ಕ ಮಾಹಿತಿ ನೀಡದೇ ಇದ್ದಲ್ಲಿ, ಕಂಪನಿಯ ಷೇರು ಮೌಲ್ಯ ಯಾವುದೇ ಪ್ರಮಾಣದಲ್ಲಿದ್ದರೂ ಅವರನ್ನು ಯಾವುದೇ ರೀತಿಯ ತೆರಿಗೆ ಪರಿಶೀಲನೆಗೆ ಒಳಪಡಿಸದಿರಲು ಸಚಿವೆ ಒಪ್ಪಿಕೊಂಡರು.

ಹೂಡಿಕೆದಾರರು ಮತ್ತು ಅವರ ಹೂಡಿಕೆ ಮೂಲ ಕುರಿತ ವಿವಾದವನ್ನೂ ಇ-ವಿಚಾರಣೆ ಮೂಲಕ ಇತ್ಯರ್ಥಪಡಿಸಲಾಗುವುದು, ನವೋದ್ಯಮಗಳು ಸಂಗ್ರಹಿಸಿದ ಬಂಡವಾಳವು ಯಾವುದೇ ತೆರಿಗೆ ಪರಿಶೀಲನೆಗೆ ಒಳಪಡದಂತೆ ಮಾಡಲಾಗುವುದು ಎಂಬ ಭರವಸೆಯೂ ಅವರಿಂದ ದೊರಕಿದೆ.

ಸಣ್ಣಪುಟ್ಟ ಸಮಸ್ಯೆಗಳ ಚರ್ಚೆಗಾಗಿ ಸ್ಟಾರ್ಟ್‌ಅಪ್‌ಗಳಿಂದಲೇ ಪ್ರತ್ಯೇಕ ಟಿ.ವಿ ಚಾನೆಲ್ ಪ್ರಾರಂಭದಂತಹ ಕೆಲವು ಲಘು ಸುಧಾರಣೆಗಳನ್ನು ಸಾರಿ ನಿರ್ಮಲಾ ಕೈತೊಳೆದುಕೊಂಡು ಬಿಟ್ಟರು! ಅವರ ನಿಲುವು ಏನೇ ಇರಲಿ, ಜಿಎಸ್‌ಟಿಯಿಂದ ಎಷ್ಟೋ ಸ್ಟಾರ್ಟ್‌ಅಪ್‌ಗಳು ಕಷ್ಟಕ್ಕೀಡಾಗಿದ್ದರಿಂದಲೇ ಬಜೆಟ್ ಗಿಂಡಿಯಿಂದ ಅವುಗಳತ್ತ ಸ್ವಲ್ಪ ಸ್ವಲ್ಪ ನೀರು ಹರಿಯುವಂತಾಯಿತು ಎಂಬ ಸಮಾಧಾನ ಬರುವಂತಾಗಿದೆ.

ಸ್ವಲ್ಪ ಹಿಂದೆ ಹೋದರೆ, ಮೂಲ ಸ್ವರೂಪದಲ್ಲಿಯೇ ದೋಷವಿದ್ದ ಕಾರಣದಿಂದ, ಕೇಂದ್ರ ಸರ್ಕಾರ ಪ್ರಾರಂಭಿಸಿದ ‘ಮುದ್ರಾ’ ಯೋಜನೆಯ ಆಶ್ರಯದಲ್ಲಿ ಹಲವು ನವೋದ್ಯಮಗಳು ಕುಂಟುತ್ತಾ ಸಾಗಿದ ಘಟನೆ ಮನದಟ್ಟಾಗುತ್ತದೆ. 2015ರ ಏಪ್ರಿಲ್‌ನಲ್ಲಿ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಗೆ (ಪಿಎಂಎಂವೈ) ಅಬ್ಬರದ ಚಾಲನೆ ನೀಡುವಾಗ, ಇದು ಸಂಬಂಧಪಟ್ಟ ನವೋದ್ಯಮಿಗಳ ಬದುಕನ್ನು ಹಸನು ಮಾಡಲಿದೆ ಎಂದು ಪ್ರಧಾನಿ ಭರವಸೆ ನೀಡಿದ್ದರು. ಕಿರು ವಾಣಿಜ್ಯೋದ್ಯಮಿಗಳಿಗೆ ಸಾಲ ಸೌಲಭ್ಯವನ್ನು ರೂಪಿಸಿ, ನಿರ್ವಹಿಸುವ ಹೊಣೆ ‘ಮುದ್ರಾ’ ಮೇಲಿದೆ ಎಂಬ ಪ್ರಚಾರಕ್ಕೇನೂ ಕೊರತೆಯಾಗಲಿಲ್ಲ. 2019ರಫೆಬ್ರುವರಿಯ ಹೊತ್ತಿಗೆ 15.81 ಕೋಟಿ ಫಲಾನುಭವಿಗಳಿಗೆ ‘ಮುದ್ರಾ’ ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಕೋಟ್ಯಂತರಉದ್ಯೋಗಗಳು ಸೃಷ್ಟಿಯಾಗಿ, ಅನೇಕರು ನವೋದ್ಯಮಿಗಳಾಗಿ ಪರಿವರ್ತನೆಗೊಂಡಿದ್ದಾರೆ ಎಂಬ ಪ್ರಚಾರವೂ ನಡೆದುಹೋಯಿತು. ಸಹಜವಾಗಿ ಅದು ಟೀಕೆಗೂ ಗುರಿಯಾಯಿತು.

2019ರ ಹೊತ್ತಿಗೆ ವಾಸ್ತವ ಸಂಗತಿಗಳ ದರ್ಶನವಾದಾಗ, ‘ಮುದ್ರಾ’ ಯೋಜನೆಯ ನೆರವಿನಿಂದ ಪಾರಂಭವಾದ ಉದ್ಯೋಗಗಳ ಬಗೆಗಾಗಲೀ ನವೋದ್ಯಮಿಗಳ ಪ್ರಗತಿಯ ಬಗೆಗಾಗಲೀ ಖಚಿತ ದಾಖಲೆಗಳೇ ಇರಲಿಲ್ಲ! 2015-19ರ ಅವಧಿಯಲ್ಲಿ ವಿತರಣೆಯಾದ ಒಟ್ಟು ₹ 7.27 ಲಕ್ಷ ಕೋಟಿಯಲ್ಲಿ ಶೇ 90ರಷ್ಟು ಸಾಲದ ಸರಾಸರಿ ಸಾಲದ ಮೊತ್ತ ಕೇವಲ₹ 23 ಸಾವಿರ! ಇವುಗಳಲ್ಲಿ ಹೆಚ್ಚಿನ ಸಾಲಗಳು ದೈನಂದಿನ ವಹಿವಾಟುಗಳಿಗಾಗಿ ಅಥವಾ ವೈಯಕ್ತಿಕ ಉದ್ದೇಶಗಳಿಗಾಗಿ ಬಳಕೆಯಾಗಿದ್ದರಿಂದ ನವೋದ್ಯಮ ಸೃಷ್ಟಿಗೆ ಇದ್ದ ಅವಕಾಶ ಸೀಮಿತವಾಗಿತ್ತು.

ನವೋದ್ಯಮಿಗಳ ಮೇಲೆ ಸರಿಯಾದ ನಿಗಾ ಇಡುವೆಡೆ ಯಶಸ್ಸು ಕಂಡುಬಂದಿದೆ. ಆದರೆ ನಿಯಮಾವಳಿಗಳು ಸಡಿಲವಾಗಿ ಇರುವಲ್ಲಿ ಸೋಲುಂಟಾಗಿದೆ. ಹೀಗಾಗಿ ಹೆಚ್ಚಿನ ವ್ಯವಹಾರಗಳಲ್ಲಿ ಸಾರ್ವಜನಿಕ ಹಣ ದುರುಪಯೋಗವಾದ ಸತ್ಯವನ್ನು ಬಚ್ಚಿಡಲು ಕೇಂದ್ರ ಸರ್ಕಾರಕ್ಕೆ ಈಗ ಸಾಧ್ಯವಾಗುತ್ತಿಲ್ಲ. ಇದನ್ನೇ ಸ್ಟಾರ್ಟ್‌ಅಪ್‌ ತಜ್ಞ ಎನ್.ರವಿಶಂಕರ್ 2016ರಲ್ಲೇ ‘ಒಂದು ವ್ಯವಸ್ಥೆ ಬೆಳೆಯಬೇಕಾದರೆ ಅದರಲ್ಲಿ ಸರ್ಕಾರದ ಪಾತ್ರ ಇರಲೇಬೇಕಾದರೂ ಸ್ಟಾರ್ಟ್‌ಅಪ್‌ಗಳ ವಿಷಯದಲ್ಲಿ ಸರ್ಕಾರ ವಹಿಸಬೇಕಾಗಿರುವುದು ಹೂಡಿಕೆದಾರನ ಪಾತ್ರವಲ್ಲ, ಬದಲಿಗೆ ಪೋಷಕನ ಪಾತ್ರ’ ಎಂದು ತಿಳಿಸಿದ್ದು ಅರ್ಥಪೂರ್ಣವಾಗಿದೆ.

ಇಷ್ಟಾದರೂ ನವೋದ್ಯಮಗಳ ವಿಷಯದಲ್ಲಿ ಭಾರತವು ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬ ಸಂಗತಿಗೆ ಈಗ ಮತ್ತೆ ಪ್ರಚಾರ ಸಿಕ್ಕಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ 4,750 ನವೋದ್ಯಮಗಳು ಭಾರತದಲ್ಲಿ ಈಗ ಕಾರ್ಯನಿರ್ವಹಿಸುತ್ತಿದ್ದು, 2025ರ ಹೊತ್ತಿಗೆ ಈ ಸಂಖ್ಯೆ ಒಂದು ಲಕ್ಷಕ್ಕೆ ಏರಲಿದೆ ಎಂದು ಹೇಳಲಾಗುತ್ತಿದೆ. ಇವು 33 ಲಕ್ಷ ಉದ್ಯೋಗ ಸೃಷ್ಟಿಗೆ ಕಾರಣವಾಗಲಿವೆ ಎಂಬ ಅಂದಾಜು ಮಾಡಲಾಗಿದೆ. ಇದು ಸತ್ಯವಾಗಲಿದೆಯೋ ಇಲ್ಲವೋ ಎನ್ನುವ ಪ್ರಶ್ನೆ ಇದೆಯಾದರೂ ಇನ್ನಷ್ಟು ಸಬ್ಸಿಡಿಗೆ ಮಾಮೂಲಿಯಂತೆ ನವೋದ್ಯಮಗಳು ಹಣಕಾಸು ಸಚಿವೆಯತ್ತ ಮುಖ ಮಾಡಿ ಕುಳಿತಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT