ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ – ಮುದ್ದು ಪ್ರಾಣಿ: ಅರಿವಿನ ಕೊರತೆ...

ಮಾನವ, ಪ್ರಾಣಿ ಮತ್ತು ಪರಿಸರದ ಮೂರೂ ಸ್ವಾಸ್ಥ್ಯಗಳನ್ನು ಒಂದಾಗಿ ಪರಿಗಣಿಸಿ ಪರಿಹಾರ ಹುಡುಕುವ ‘ಒನ್ ಹೆಲ್ತ್’ ಪರಿಕಲ್ಪನೆಯನ್ನು ಬಲಗೊಳಿಸುವುದು ಇಂದಿನ ಅನಿವಾರ್ಯ
Last Updated 5 ಜುಲೈ 2022, 19:30 IST
ಅಕ್ಷರ ಗಾತ್ರ

‘ಎಷ್ಟು ಹೇಳಿದ್ರೂ ಕೇಳಲ್ಲ, ಮೂರು ಹೊತ್ತೂ ಈ ನಾಯಿನ ಹಿಡ್ಕಂಡು ಮುದ್ದು ಮಾಡ್ತಿರ್ತಾಳೆ. ಇವ್ಳಿಗೆ ಏನಾದ್ರು ಕಾಯ್ಲೆ ಬಂದ್ರೆ ಅಂತ ನಂಗೆ ಯೋಚ್ನೆ ಸರ್. ನೀವೇ ಬುದ್ಧಿ ಹೇಳಿ’ ತಮ್ಮ ಆತಂಕವನ್ನು ನನ್ನ ಮುಂದಿಟ್ಟಿದ್ದರು ಆ ಹುಡುಗಿಯ ತಾಯಿ. ಹಾಗಂತ ಅವರ ಮಗಳು ತೀರಾ ಸಣ್ಣವಳೇನೂ ಅಲ್ಲ, ಹೈಸ್ಕೂಲಿಗೆ ಹೋಗುತ್ತಿದ್ದಾಳೆ. ನಾಯಿಯನ್ನು ಅತಿಯಾಗಿ ಮುದ್ದಿಸುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿಹೇಳಿದಾಗ ಅವಳಮ್ಮನ ಮೊಗದಲ್ಲಿ ಸಮಾಧಾನದ ಗೆರೆಗಳು. ಹೌದು, ಹೆಚ್ಚು ಕಮ್ಮಿ ಇಂಥದ್ದೇ ದೂರುಗಳು ನಾನು ಚಿಕಿತ್ಸೆಗೆಂದು ಹೋದೆಡೆಯಲ್ಲೆಲ್ಲಾ ಸಾಮಾನ್ಯ.

ಬಹುತೇಕ ಜಾನುವಾರು ಮಾಲೀಕರು, ಮುದ್ದುಪ್ರಾಣಿಗಳ ಒಡೆಯರಿಗೆ ಪ್ರಾಣಿಗಳಿಂದ ಬರಬಹುದಾದ ಕಾಯಿಲೆಗಳು, ಕಂಟಕಗಳ ಕುರಿತಾಗಿ ಅರಿವು ಕಡಿಮೆ. ಸರಿಯಾದ ತಿಳಿವಳಿಕೆಯಿಲ್ಲದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಸಾಕುಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾದಾಗ ತಮಗೂ ಕಾಯಿಲೆ ಅಂಟಬಹುದೆಂಬ ಹೆದರಿಕೆಯಿಂದ ಶುಶ್ರೂಷೆ ಮಾಡಲು ಹಿಂದೇಟು ಹಾಕುವುದೂ ಉಂಟು. ಕೊರೊನಾ ಸೋಂಕಿನ ಸಮಯದಲ್ಲಿ ರೋಗಾಣುಗಳು ನಾಯಿಗಳಿಂದಲೂ ಹರಡಬಹುದು ಎಂಬ ತಪ್ಪು
ಕಲ್ಪನೆಯಿಂದಾಗಿ ತಾವು ಸಾಕಿದ ಮುದ್ದು ಪ್ರಾಣಿಗಳನ್ನು ಬೀದಿಗಟ್ಟಿದವರ ಸಂಖ್ಯೆಯೂ ದೊಡ್ಡದಿತ್ತು!

ಪ್ರಾಣಿಗಳಿಂದ ಮಾನವನಿಗೆ ಹರಡಬಹುದಾದ ಕಾಯಿಲೆಗಳೇ ಪ್ರಾಣಿಜನ್ಯ ರೋಗಗಳು ಅಥವಾ ಮಿಗ- ಮಾನವ ವ್ಯಾಧಿಗಳು. ಪಶು, ಪಕ್ಷಿ, ಕೀಟಗಳಿಂದ ಮಾನವನಿಗೆ ಸೋಂಕು ರೋಗಗಳು ಹರಡುವಂತೆ ಮನುಜನೂ ಹಲವು ಕಾಯಿಲೆಗಳನ್ನು ಪಶುಗಳಿಗೆ ದಾಟಿಸಬಲ್ಲ. ಜುಲೈ 6, ವಿಶ್ವ ಪ್ರಾಣಿಜನ್ಯ ರೋಗ ದಿವಸ. ಶ್ರೇಷ್ಠ ಸೂಕ್ಷ್ಮಾಣುಜೀವಿ ತಜ್ಞ ಲೂಯಿಸ್ ಪ್ಯಾಶ್ಚರ್ ಮನುಕುಲಕ್ಕೆ ಮಹತ್ತರ ಕೊಡುಗೆ ನೀಡಿದ್ದು 1885ರ ಇದೇ ದಿನ. ತಾವೇ ಸಂಶೋಧಿಸಿದ ಲಸಿಕೆಯನ್ನು ಹುಚ್ಚುನಾಯಿಯಿಂದ ತೀವ್ರ ಕಡಿತಕ್ಕೊಳಗಾದ ಜೋಸೆಫ್ ಮೆಸ್ಟರ್ ಎಂಬ ಬಾಲಕನಿಗೆ ನೀಡುವುದರ ಮೂಲಕ ಮಾರಕ ರೇಬಿಸ್ ರೋಗದಿಂದ ಆ ಹುಡುಗನನ್ನು ರಕ್ಷಿಸುವಲ್ಲಿ ಅವರು ಯಶಸ್ವಿಯಾದರು. ಇದು ಹುಚ್ಚುನಾಯಿ ಕಾಯಿಲೆ ಎಂಬ ಭಯಾನಕ ಪ್ರಾಣಿಜನ್ಯ ರೋಗದ ವಿರುದ್ಧದ ಮೊದಲ ಲಸಿಕಾ ಪ್ರಯೋಗವೂ ಹೌದು.

ಮಾನವನ ಸೋಂಕು ರೋಗಗಳಲ್ಲಿ ಶೇ 60ಕ್ಕೂ ಅಧಿಕ ಕಾಯಿಲೆಗಳಿಗೆ ಪ್ರಾಣಿಗಳೇ ಮೂಲ. ಅದರಲ್ಲೂ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬಹುತೇಕ ವ್ಯಾಧಿಗಳಿಗೂ ಪಶುಗಳಿಗೂ ಸಂಬಂಧವಿದೆ. ಎರಡು ವರ್ಷಗಳಿಂದ ಜನಜೀವನವನ್ನು ಹೈರಾಣಾಗಿಸಿ ಅಪಾರ ಸಾವು, ಸಂಕಟಗಳಿಗೆ ಕಾರಣವಾದ ಕೊರೊನಾ ವೈರಾಣುಗಳು ಬಾವಲಿ, ಪ್ಯಾಂಗೊಲಿನ್‍ನಿಂದ ಬಂದಿರಬಹುದೆಂದು ಬಲವಾಗಿ ನಂಬಲಾಗಿದೆ. ಕೊರೊನಾ ತುಸು ನಿಯಂತ್ರಣಕ್ಕೆ ಬಂದಿದೆಯೆಂದು ಅನಿಸುತ್ತಿರುವ ಈ ಹೊತ್ತಿನಲ್ಲಿ ‘ಮಂಗನ ಸಿಡುಬು’ ಎಂಬ ಮತ್ತೊಂದು ಸಾಂಕ್ರಾಮಿಕ ರೋಗ ಮಂಗಗಳಿಂದ ಮಾನವನಿಗೆ ಹರಡುತ್ತಿರುವುದು ಪತ್ತೆಯಾಗಿದೆ. ಅದರಲ್ಲೂ ಯುರೋಪ್‍ನಲ್ಲಿ ಈ ಎರಡು ವಾರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆಯಾಗಿದ್ದು ಕಳವಳ ಹೆಚ್ಚಿಸಿದೆ.

ಲಕ್ಷಾಂತರ ಸಂಖ್ಯೆಯಲ್ಲಿ ಮಾನವ ಬಲಿ ಪಡೆದ ಪ್ಲೇಗ್ ಸೇರಿದಂತೆ ಇಲಿಜ್ವರ, ಕ್ಷಯ, ಆಂಥ್ರಾಕ್ಸ್, ಸಾಲ್ಮೊ ನೆಲ್ಲಾ ವ್ಯಾಧಿ, ಕೋಳಿಶೀತ ಜ್ವರ, ಮಂಗನಕಾಯಿಲೆ, ಹಂದಿ ಜ್ವರ, ಬಾವಲಿ ಜ್ವರ, ಬ್ರುಸೆಲ್ಲಾ, ಎಬೋಲ, ಬೆಕ್ಕುಗಳಿಂದ ಹರಡುವ ಟಾಕ್ಸೊಪ್ಲಾಸ್ಮವಲ್ಲದೆ ಪಶುಗಳ ಶಿಲೀಂಧ್ರ, ಲಾಡಿಹುಳ, ಕೊಕ್ಕೆಹುಳ ಬಾಧೆಗಳು ಸೇರಿ ದಂತೆ ಇನ್ನೂರಕ್ಕೂ ಅಧಿಕ ಪ್ರಮುಖ ಪ್ರಾಣಿಜನ್ಯ ರೋಗಗಳನ್ನು ಗುರುತಿಸಲಾಗಿದೆ.

ಪರಿಸರಮಾಲಿನ್ಯ, ಕಾಡು ನಾಶ, ಮಾನವ ಅತಿಕ್ರಮಣ, ಕಿರಿದಾದ ಆವಾಸಸ್ಥಾನ, ಆಹಾರ, ಮೇವಿನ ಕೊರತೆ, ತಾಪಮಾನದ ಏರಿಕೆ, ಋತುಚಕ್ರದ ವ್ಯತ್ಯಯಗಳು ಹತ್ತಾರು ಅಪಾಯಗಳನ್ನು ತಂದೊಡ್ಡುತ್ತಿವೆ. ಹೊಸ ಹೊಸ ರೋಗಗಳ ಜೊತೆಗೆ ಹಳೆಯ ಕಾಯಿಲೆಗಳೂ ಬೇರೊಂದು ರೂಪದಲ್ಲಿ ಮರುಕಳಿಸುತ್ತಾ ಸವಾಲು ಎಸೆಯುತ್ತಿವೆ.

ಸಾಕುಪ್ರಾಣಿಗಳ ಜೊತೆಗೆ ವಾಸದ ಶೆಡ್‍ಗಳ ಸ್ವಚ್ಛತೆ, ಶುದ್ಧ ನೀರು, ಮೇವಿನ ಪೂರೈಕೆ, ಕಾಲಕಾಲಕ್ಕೆ ಲಸಿಕೆ ಹಾಕುವುದು, ಜಂತುನಾಶಕ ಔಷಧ ನೀಡಿಕೆ, ಹಾಲನ್ನು ಕಾಯಿಸಿ ಬಳಸುವುದು, ಮಾಂಸ, ಮೊಟ್ಟೆಯಂತಹ ಆಹಾರ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸುವುದು, ಮುದ್ದು ಪ್ರಾಣಿಗಳು ಅಡುಗೆ ಮನೆ, ಮಲಗುವ ಕೋಣೆಗಳಿಗೆ ಬರುವುದನ್ನು ನಿರ್ಬಂಧಿಸುವುದು, ಪ್ರಾಣಿಗಳ ಸಂಪರ್ಕದ ನಂತರ ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಪರಿಸರದ ನೈರ್ಮಲ್ಯ ಕಾಯ್ದುಕೊಳ್ಳುವಿಕೆ, ತ್ಯಾಜ್ಯಗಳ ಸೂಕ್ತ ವಿಲೇವಾರಿಯಂತಹ ಕ್ರಮಗಳು ಪಶುಜನ್ಯ ಕಾಯಿಲೆಗಳ ಸರಪಣಿಯನ್ನು ತುಂಡರಿಸಲು ಸಹಕಾರಿ.

ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯ ಒಂದಕ್ಕೊಂದು ಪೂರಕ. ಒಂದರ ಅನಾರೋಗ್ಯ ಮತ್ತೊಂದನ್ನು ತೀವ್ರವಾಗಿ ಬಾಧಿಸಬಲ್ಲದು. ಈ ಮೂರೂ ಸ್ವಾಸ್ಥ್ಯಗಳನ್ನು ಒಂದಾಗಿ ಪರಿಗಣಿಸಿ ಪರಿಹಾರ ಹುಡುಕುವ ‘ಒನ್ ಹೆಲ್ತ್’ ಪರಿಕಲ್ಪನೆಯನ್ನು ಬಲಗೊಳಿಸುವುದು ಇಂದಿನ ಅನಿವಾರ್ಯ. ವೈದ್ಯಕೀಯ, ಪಶುವೈದ್ಯಕೀಯ ಮತ್ತು ಪರಿಸರ ಪರಿಣತರು, ವಿಜ್ಞಾನಿಗಳು, ಕ್ಷೇತ್ರ ಮಟ್ಟದ ಕಾರ್ಯಕರ್ತರು ಒಗ್ಗೂಡಿ, ಪರಸ್ಪರ ಸಮನ್ವಯದಿಂದ ಕಾರ್ಯತತ್ಪರರಾದಾಗ ಮಾತ್ರ ಇಂತಹ ಪ್ರಾಣಿಜನ್ಯ ರೋಗಗಳ ನಿಯಂತ್ರಣ ಸಾಧ್ಯ.

(ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT