ಮಂಗಳವಾರ, ಜೂನ್ 2, 2020
27 °C
ಭವಿಷ್ಯದ ಪ್ರಜೆಗಳಿಗೆ ಉತ್ತಮ ಶಿಕ್ಷಣ ನೀಡುವ ಹೊಣೆ ಹೊತ್ತಿರುವ ಶಿಕ್ಷಕನ ಹಿತ ಕಾಪಾಡುವುದು ಸರ್ಕಾರ ಮತ್ತು ಸಮಾಜದ ಬಹುದೊಡ್ಡ ಜವಾಬ್ದಾರಿ

ಸಂಗತ | ಗುರುವಿನ ಹಿತ ಕಾಯುವ ತನಕ...

ಡಾ. ಸಂಗಮೇಶ್ ಬಿ. Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು, ಸಾವಿರಾರು ಅನುದಾನರಹಿತ ಶಾಲಾ– ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರ ನಿದ್ದೆಗೆಡಿಸಿದೆ. ಲಾಕ್‌ಡೌನ್‌ನಿಂದ ಅಸಂಘಟಿತ ಕೂಲಿ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸ್ಪಂದಿಸುತ್ತಿವೆ. ಆದರೆ ಇವರಂತೆಯೇ ಸಂಕಷ್ಟಕ್ಕೆ ಸಿಲುಕಿರುವ ಈ ಶಿಕ್ಷಕರು ಮತ್ತು ಉಪನ್ಯಾಸಕರೂ ಒಂದರ್ಥದಲ್ಲಿ ಅಸಂಘಟಿತ ಕಾರ್ಮಿಕರೇ ಆಗಿದ್ದಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವಿದ್ದರೂ ನಿಗದಿತ ಸಂಬಳ ಇಲ್ಲದೆ, ಸೇವಾ ಭದ್ರತೆ ಇಲ್ಲದೆ ದುಡಿಯುವ ಇವರ ಸ್ಥಿತಿಯು ಲಾಕ್‌ಡೌನ್‌ನ ಈ ಸಂದರ್ಭದಲ್ಲಂತೂ ಆಡುವಂತಿಲ್ಲ ಅನುಭವಿಸುವಂತಿಲ್ಲ ಎಂಬಂತಾಗಿದೆ.

ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿವೆ. ಈ ಎರಡು ದಶಕಗಳಲ್ಲಿ ಈ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ಹಣ ಗಳಿಸಿವೆ. ಈಗ ಲಾಕ್‌ಡೌನ್‌ ಸವಾಲಿನಿಂದಾಗಿ ಹಣದ ಹರಿವು ಒಂದಿಷ್ಟು ಕಡಿಮೆಯಾಗಿದೆ ಅಂದಮಾತ್ರಕ್ಕೆ, ಶಿಕ್ಷಕರಿಗೆ ವೇತನ ನೀಡುವಷ್ಟೂ ಅವುಗಳ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂದು ಭಾವಿಸಲಾದೀತೆ?

ದೇಶದಲ್ಲಿ ವೃತಿಪರ ಶಿಕ್ಷಣ ಕುಂದುತ್ತಿರುವುದರಿಂದಾಗಿ ಕಳೆದ ಐದಾರು ವರ್ಷಗಳಿಂದ ಖಾಸಗಿ ಸಂಸ್ಥೆಗಳ ಉಪನ್ಯಾಸಕರ ಸ್ಥಿತಿ ಹದಗೆಟ್ಟಿದೆ. ತನ್ನಿಂದ ಕಲಿತ ವಿದ್ಯಾರ್ಥಿಯು ತಿಂಗಳಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆಯುವಂತಾದರೆ, ಈ ಉಪನ್ಯಾಸಕರು ಕೇವಲ ಇಪ್ಪತ್ತು ಸಾವಿರ ರೂಪಾಯಿಗೆ ತಮ್ಮ ಸ್ವಾಭಿಮಾನ ಬದಿಗಿಟ್ಟು ಕೆಲಸ ಮಾಡಬೇಕಾದ ಸ್ಥಿತಿ ಹಲವೆಡೆ ಇದೆ.

ಕೆಲಸವನ್ನು ಕಾಯಂಗೊಳಿಸುವ ಆಮಿಷವೊಡ್ಡಿ ಕೆಲಸಕ್ಕೆ ಸೇರಿಸಿಕೊಂಡು ನಂತರ ಶೋಷಿಸುವುದು ಸರ್ವೇಸಾಮಾನ್ಯವಾಗಿದೆ. ರಾಜಕಾರಣಿಯೊಬ್ಬರಿಗೆ ಸೇರಿದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ಆದಾಯ ತೆರಿಗೆ ದಾಳಿಯ ಭೀತಿಯಿಂದ, ಉಪನ್ಯಾಸಕರಿಗೆ ಆರು ತಿಂಗಳ ವೇತನವನ್ನು ಮುಂಚಿತವಾಗಿ ನೀಡಿ, ಬಳಿಕ ಅದನ್ನು ಹಿಂಪಡೆದ ನಿದರ್ಶನವೂ ಇದೆ.

ಇಂತಹವು ಸಾಲದೆಂಬಂತೆ ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ಅನುಸರಿಸುವ ದ್ವಂದ್ವ ನೀತಿಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈಗ ಚಾಲ್ತಿಯಲ್ಲಿರುವ ಎಲ್ಲ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಈ ಮಂಡಳಿಯ ಅಡಿ ಬರುತ್ತವೆ. ಮಂಡಳಿಯು ಕೇವಲ ಮಾನ್ಯತೆ ಕೊಡುವುದಷ್ಟೇ ಅಲ್ಲ, ಸಂಸ್ಥೆಗಳು ತಮ್ಮ ಜವಾಬ್ದಾರಿ ಮರೆತರೆ ಕಠಿಣ ಕ್ರಮ ಕೈಗೊಳ್ಳುವುದಕ್ಕೂ ಅವಕಾಶವಿದೆ. ಆದರೆ ಈ ಬಗೆಯ ದಿಟ್ಟ ನಿರ್ಧಾರವನ್ನು ಅದು ತೆಗೆದುಕೊಂಡಿರುವ ಉದಾಹರಣೆಯೇ ಇಲ್ಲ.

ಬೆಂಗಳೂರಿನ ಒಂದು ಪ್ರತಿಷ್ಠಿತ ಸಂಸ್ಥೆಯು 2019ರಲ್ಲಿ 20 ಅಧ್ಯಾಪಕರನ್ನು ಕ್ಷುಲ್ಲಕ ಕಾರಣ ನೀಡಿ ಅಮಾನತುಗೊಳಿಸಿತ್ತು. ಇದನ್ನು ಒಂದಷ್ಟು ಮಂದಿ ಮಂಡಳಿಯ ಗಮನಕ್ಕೆ ತಂದರು. ವಿಪರ್ಯಾಸವೆಂದರೆ, ಮಂಡಳಿಯು ತನಿಖೆಯ ನೆಪವೊಡ್ಡಿ ಮೂವರನ್ನು ದೆಹಲಿಗೆ ಬರಹೇಳಿತು. ಮೊದಲೇ ಕೆಲಸ ಕಳೆದುಕೊಂಡವರು, ಪ್ರಯಾಣಕ್ಕೆ ಹೇಗೋ ದುಡ್ಡು ಹೊಂದಿಸಿಕೊಂಡು ದೆಹಲಿಗೆ ಹೋಗಿ ಬಂದದ್ದಾಯಿತು. ಆದರೆ ಇಂದಿಗೂ ಅವರಿಗೆ ನ್ಯಾಯ ದೊರೆತಿಲ್ಲ. ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ.

ಇತ್ತ ವಿಶ್ವವಿದ್ಯಾಲಯಗಳು, ಕಂಡರೂ ಕಾಣದಂತೆ ಕಾಲೇಜು ಆಡಳಿತ ಮಂಡಳಿಗಳ ನೀತಿ–ನಿಲುವುಗಳ ವಿಷಯದಲ್ಲಿ ಕೈಕಟ್ಟಿ ಕುಳಿತಿವೆ. ಇನ್ನು ಸರ್ಕಾರವು ಸರ್ಕಾರಿ ಅಧ್ಯಾಪಕ ವೃಂದ ಮತ್ತು ಅಲ್ಲಿಯ ಕಾಲೇಜು ನಿರ್ವಹಣೆಗೇ ಕಷ್ಟಪಡುತ್ತಿರುವಾಗ, ಖಾಸಗಿ ಸಂಸ್ಥೆಗಳ ಸಮಸ್ಯೆಗಳಿಗೆ ಅದರ ಸ್ಪಂದನೆಯನ್ನು ನಿರೀಕ್ಷಿಸುವುದಾದರೂ ಹೇಗೆ?

ರಾಜಾರೋಷವಾಗಿ ಭ್ರಷ್ಟಾಚಾರಕ್ಕೆ ಇಳಿಯುವುದರಲ್ಲಿ ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿ ಇರುತ್ತವೆ. ಇದರ ಫಲವಾಗಿ, ಬಹಳಷ್ಟು ಶಿಕ್ಷಕರು ಸೋಲು, ಅಸಹಾಯಕತೆ, ಅವಮಾನದ ಮಧ್ಯೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಗೆ ತಮ್ಮನ್ನು ಏನೂ ಮಾಡಲಾಗದು ಎನ್ನುವ ಧಾಡಸಿ ಪ್ರವೃತ್ತಿಯು ಸಂಸ್ಥೆಗಳಲ್ಲಿ ಬೆಳೆದಿರುವುದು ವಿಷಾದನೀಯ.

ಲಾಕ್‌ಡೌನ್‌ ನೆಪದಲ್ಲಿ ಎಷ್ಟೋ ಶಿಕ್ಷಣ ಸಂಸ್ಥೆಗಳು ಕಳೆದ ತಿಂಗಳು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಅರ್ಧ ವೇತನ ನೀಡಿವೆ. ಯಾವುದೇ ದೇಶದ ಶಿಕ್ಷಣ ವ್ಯವಸ್ಥೆಯು ಆಯಾ ದೇಶದ ಹವಾಗುಣ, ಮಣ್ಣು, ಅಲ್ಲಿಯ ಜನರ ನಂಬಿಕೆಗಳು, ಸಂಸ್ಕೃತಿ, ಇವೆಲ್ಲವುಗಳ ಆಧಾರದ ಮೇಲೆ ರೂಪುಗೊಂಡಿರುತ್ತದೆ. ರಾಷ್ಟ್ರದ ಹಿತದಲ್ಲಿ ಶಿಕ್ಷಣ, ಶಿಕ್ಷಣದ ಹಿತದಲ್ಲಿ ಶಿಕ್ಷಕ ಮತ್ತು ಶಿಕ್ಷಕನ ಹಿತದಲ್ಲಿ ಸಮಾಜ ಎಂಬುದು ಭಾರತದ ನಂಬಿಕೆ. ಇದನ್ನರಿತರೆ, ಶಿಕ್ಷಣದ ಮೂಲಕ ಎಲ್ಲಾ ರಂಗಗಳನ್ನು ನಿಯಂತ್ರಿಸಲು, ಸದೃಢ ಸ್ವಾಭಿಮಾನಿ ಸಮಾಜ ಕಟ್ಟಲು ಸಾಧ್ಯವಿದೆ. ಇಂತಹ ಆಶಯವನ್ನು ಕಾರ್ಯರೂಪಕ್ಕೆ ತರುವ ಭವಿಷ್ಯದ ಪ್ರಜೆಗಳಿಗೆ ಉತ್ತಮ ಶಿಕ್ಷಣ ನೀಡುವ ಹೊಣೆ ಶಿಕ್ಷಕನ ಮೇಲಿದೆ. ಹಾಗಾಗಿ ಶಿಕ್ಷಕನ ಹಿತ ಕಾಪಾಡುವುದು ಸರ್ಕಾರ ಮತ್ತು ಸಮಾಜದ ಬಹುದೊಡ್ಡ ಜವಾಬ್ದಾರಿ.

ಸಂಕಷ್ಟದ ಈ ಸಮಯದಲ್ಲಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ತಪ್ಪದೇ ವೇತನ ನೀಡುವ ಮೂಲಕ ಕೊರೊನಾ ಮಹಾಮಾರಿಯ ವಿರುದ್ಧ ಒಗ್ಗೂಡಿ ಹೋರಾಡಬೇಕಾಗಿದೆ. ಅಲ್ಲದೆ, ಶಿಕ್ಷಣ ಸಂಸ್ಥೆಗಳು ತಾವಾಗೇ ಮುಂದೆ ಬಂದು, ಒಂದಿಷ್ಟು ಸಮಾಜಮುಖಿ ಕೆಲಸಗಳಿಗೆ
ಕೈಜೋಡಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು