ಸೋಮವಾರ, ಮೇ 16, 2022
24 °C
ದೈವ, ನಂಬಿಕೆಗಳು ಬೇರೆ ಬೇರೆಯಾದರೂ ಹಣತೆಗಳ ಬೆಳಕು ಒಂದೇ

ಸಂಗತ| ವಿಚಾರಭೇದ ಮತ್ತು ಮಾನವೀಯತೆ

ಬಿ.ಎಸ್‌.ಭಗವಾನ್‌ Updated:

ಅಕ್ಷರ ಗಾತ್ರ : | |

Prajavani

ಭಿನ್ನಾಭಿಪ್ರಾಯಗಳ ಅಭಿವ್ಯಕ್ತಿಗೆ ಶಿಷ್ಟ ಮಾರ್ಗಗಳು ಧಾರಾಳವಾಗಿವೆ. ವಿಚಾರಭೇದ ದ್ವೇಷವಾಗಬೇಕಿಲ್ಲ. ನಮ್ಮ ನಮ್ಮ ಅಭಿಪ್ರಾಯ, ಭಿನ್ನಾಭಿಪ್ರಾಯಗಳೊಂದಿಗೆ ಸಹಬಾಳ್ವೆಯ ಹಾದಿ ಕಂಡುಕೊಳ್ಳುವಷ್ಟು ಪ್ರಬುದ್ಧರೂ ಆಗಬೇಕಿದೆ. ಪುರುಷನಿಗೆ ಹೋಲಿಸಿದರೆ ಸ್ತ್ರೀಯು ತಾಳ್ಮೆ, ಸಹನೆ, ಕ್ಷಮಾಗುಣದಲ್ಲಿ ಒಂದು ಕೈ ಮೇಲೆಂದು ನಮ್ಮ ಸಮಾಜದ ದೃಢವಾದ ಪರಂಪರಾಗತ ನಂಬಿಕೆ, ಭರವಸೆ. ಹೀಗಿರುವಾಗ ವಕೀಲೆಯೊಬ್ಬರು, ಇನ್ನೂ ನ್ಯಾಯದಾನ ಪ್ರಕ್ರಿಯೆಯಲ್ಲಿರುವಾಗಲೇ ಏಕಾಏಕಿ ಅದೂ ನ್ಯಾಯಾಲಯದ ಆವರಣದಲ್ಲೇ, ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರ ಮುಖಕ್ಕೆ ಮಸಿ ಬಳಿದಿದ್ದು ತೀವ್ರ ಆತಂಕ ಮತ್ತು ಬೇಸರದ ಸಂಗತಿ.

ಹಿರಿ ವಯಸ್ಸು, ಪ್ರಾಧ್ಯಾಪನದ ಓದು ಬರಹ ಹಾಗೂ ಬೋಧನಾನುಭವವಾದರೂ ಪರಿಗಣನೆಗೆ ಬಂದು ಆವೇಶದ ಕೈಗಳನ್ನು ತಡೆಯಬಹುದಿತ್ತು. ಈ ನಡೆಯಿಂದ ವಿಚಾರವನ್ನು ವಿಚಾರದಿಂದಲೇ ಅನುಸಂಧಾನಿಸಬೇಕಾದ ವೃತ್ತಿಯ ಹಿರಿಮೆಗೆ ಧಕ್ಕೆ, ಸಮಾಜಕ್ಕೆ ತಪ್ಪು ಸಂದೇಶ. ಈ ಸುದ್ದಿಯ ಹಿಂದೆಯೇ ಒಂದು ‘ದೈವವನ್ನು’ ನಿಂದಿಸಿದ್ದಕ್ಕಾಗಿ ಇಂತಹವರ ಮುಖಕ್ಕೆ ಮಸಿ ಬಳಿದರೆ ಒಬ್ಬ ಮಹಿಳಾ ರಾಜಕಾರಣಿ ಲಕ್ಷ ರೂಪಾಯಿಯ ಬಹುಮಾನ ಘೋಷಿಸುತ್ತಾರೆ. ಸಂವೇದನಾಶೀಲರನ್ನಷ್ಟೆ ಸಂವೇದನಾರಹಿತರನ್ನೂ ಗೌರವಯುತವಾಗಿ ಒಳಗೊಳ್ಳುವ ಅಹಿಂಸೆ ಎಂಬ ಪರಮಾಸ್ತ್ರವು ನ್ಯಾಯದಿಂದ ಯಾರಿಗೂ ವಿನಾಯಿತಿಯನ್ನೇನೂ ನೀಡದು ಎಂದರು ಗಾಂಧೀಜಿ. ಅಹಿಂಸೆಯು ಪ್ರೇಮ ಮತ್ತು ವೈರತ್ವ– ಇವೆರಡರಲ್ಲಿ ಪ್ರೇಮವನ್ನು ಆರಿಸಿಕೊಳ್ಳುತ್ತದೆ. ಸರ್ವದಾ ಜಾಗೃತವಾದ ಅಂತಃಸಾಕ್ಷಿ ಎನ್ನುವುದಿದೆ.

ಧರ್ಮಗಳು ಮನುಷ್ಯರನ್ನು ದಿವ್ಯತೆಗೊಯ್ಯುವ ಕಟ್ಟುಪಾಡುಗಳ ನಿರ್ಮಿತಿಗಳು. ವ್ಯವಸ್ಥಿತ ಬದುಕೇ ಧರ್ಮ ಸ್ಥಾಪನೆಯ ಗುರಿ. ಮೂಲತಃ ಧರ್ಮಗಳಲ್ಲಿ ಭೇದವಿಲ್ಲ. ಒಂದು ಅರ್ಥದಲ್ಲಿ ಮಾನವ ಸಂತತಿಯೇ ಜಗತ್ತಿನಲ್ಲಿ ಅತಿ ಪ್ರಗತಿ ಹೊಂದಿದ ಸಂತತಿ ಎಂದಮೇಲೆ ಮತ, ಧರ್ಮಗಳ ಗೊಡವೆಯ ಅಗತ್ಯವೇ ಬಾರದು. ಧರ್ಮಗ್ರಂಥಗಳನ್ನು ಪರಾಮರ್ಶಿಸಿಯೇ ಒಬ್ಬ ಮತ್ತೊಬ್ಬನಿಗೆ ಹಿಂಸಿಸಕೂಡದೆಂದು ಅರಿಯಬೇಕಿಲ್ಲ. ಆ ಪಾಠಕ್ಕೆ ಸಾಮಾನ್ಯ ಪ್ರಜ್ಞೆಯೇ ಸಾಕು. ಮನುಷ್ಯನಿಗೂ ಮಿಗಿಲಾದ ಮತ, ಧರ್ಮವಿಲ್ಲ.

ನಮ್ಮ ಸಮಾಜದಲ್ಲಿ ಮಾನವೀಯತೆ ಬಹುಒಪ್ಪಿತ ಮೌಲ್ಯಗಳಲ್ಲೊಂದು. ದುರ್ದೈವವೆಂದರೆ ಅದು ಅತಿ ಕಡಿಮೆ ಅರ್ಥೈಸಿಕೊಂಡ ಮೌಲ್ಯವೂ ಹೌದು! ಲಾಂಛನಗಳಿಂದ ದೂರವಾದಷ್ಟೂ ಧರ್ಮವು ಸಾರ್ವತ್ರಿಕ ತತ್ವಗಳಿಗೆ ಸಮೀಪವಾಗುತ್ತದೆ. ಅವರವರ ಜಗುಲಿಗಳು ಬೇರೆ ಬೇರೆ. ಸ್ಥಾಪಿಸಿದ ದೈವ, ಧರ್ಮಗಳು ಬೇರೆ ಬೇರೆ. ಆದರೆ ಹಚ್ಚಿಟ್ಟ ಹಣತೆಗಳ ಬೆಳಕು ಒಂದೇ. ವರ್ತಮಾನವನ್ನು ಸಕಾರಾತ್ಮಕವಾಗಿ ಪ್ರಭಾವಿಸು ವಂತಹ ಗತದ ಪಾತ್ರಗಳು, ವೃತ್ತಾಂತಗಳು, ಸನ್ನಿವೇಶಗಳು ಸ್ವೀಕಾರಾರ್ಹ. ಆದರೆ ಮನುಷ್ಯ ಮನುಷ್ಯರ ನಡುವೆ ಅಡ್ಡಗೋಡೆಗಳನ್ನು ನಿರ್ಮಿಸುವಂತಹ ಪ್ರಸಂಗಗಳನ್ನು ನಿರ್ಲಕ್ಷಿಸುವುದೇ ವಿವೇಕ.

ಸುಮಾರು ಎರಡು ಸಹಸ್ರಮಾನ ವರ್ಷಗಳ ಹಿಂದೆಯೇ ಕಾಳಿದಾಸ ಉದ್ಗರಿಸಿದ್ದು: ‘ಪುರಾಣವೆಂದಾಕ್ಷಣ ಶ್ರೇಷ್ಠವೆಂದಾಗಲೀ ಹೊಸ ಕೃತಿಯೆಂದಮಾತ್ರಕ್ಕೆ ತಿರಸ್ಕಾರಾರ್ಹವೆಂದಾಗಲೀ ಅಲ್ಲ. ಸಂತರು ಪರೀಕ್ಷಿಸುತ್ತಾರೆ, ಮೂಢರು ಇತರರು ಹೇಳಿದ್ದನ್ನೇ ಸಮ್ಮತಿಸುತ್ತಾರೆ’.

ಕಾನೂನನ್ನು ಕೈಗೆ ತೆಗೆದುಕೊಂಡರೆ ಎಂತಹ ಗತಿ ಪ್ರಾಪ್ತವಾದೀತೆನ್ನಲು ಒಂದು ನೀತಿ ಕಥೆ ಉಲ್ಲೇಖನೀಯ. ಒಬ್ಬನು ಸಂತೆಗೆ ಬೈಸಿಕಲ್ಲೇರಿ ಹೊರಡುತ್ತಾನೆ. ಮರದ ಬಳಿ ಬೈಸಿಕಲ್ ನಿಲ್ಲಿಸಿ ದಿನಸಿ, ಹಣ್ಣು, ತರಕಾರಿ ವಗೈರೆ ಖರೀದಿಸಿ ಚೀಲಗಳನ್ನು ಹೊತ್ತು ಮರದ ಬಳಿ ಬಂದಾಗ ಬೈಸಿಕಲ್ ಮಾಯವಾಗಿರುತ್ತದೆ. ಗಾಬರಿಯಿಂದ ಸಮೀಪದ ಹಳ್ಳಿಯ ನ್ನೆಲ್ಲ ಸುತ್ತಾಡುತ್ತಾನೆ. ಅರೆ! ಅಲ್ಲೊಂದೆಡೆ ಮನೆಯ ಹಿತ್ತಲಿನಲ್ಲಿ ಅವನದೇ ಬೈಸಿಕಲ್. ಬೇಲಿ ಹಾರಿದ್ದೇ ಅದನ್ನು ಹೊರಗೆ ತರುತ್ತಿದ್ದಾಗ ಆ ಮನೆಯ ಮಾಲೀಕನ ಕೈಗೆ ಸಿಕ್ಕಿ ಬೀಳುತ್ತಾನೆ. ‘ಬೈಸಿಕಲ್ ನಿನ್ನದೇ ಇರಬಹುದು, ಆದರೆ ಕಳ್ಳನ ಹಣೆಪಟ್ಟಿಯಂತೂ ಈಗ ನಿನ್ನದು’ ಅಂತ ಅವನ ಮೇಲೆ ಕೇಸ್ ದಾಖಲಾಗುತ್ತದೆ. ತಾನೇ ಬೈಸಿಕಲ್ಲಿನ ಒಡೆಯನೆಂದು ಸಾಬೀತಾಗಿ ಅಂತೂ ಆತ ಅದನ್ನು ಪಡೆಯುತ್ತಾನೆ.

ಈಚೆಗಂತೂ ಚಳವಳಿ, ಆಂದೋಲನಗಳ ಹೆಸರಿ ನಲ್ಲಿ ಕಾನೂನನ್ನು ವಶಪಡಿಸಿಕೊಳ್ಳುವ ಸಂದರ್ಭಗಳು ವಿಪರೀತವೆನ್ನಿಸುತ್ತಿವೆ. ಬೇಡಿಕೆಗಳನ್ನು ಪ್ರಭುತ್ವದ ಗಮನಕ್ಕೆ ತರಲು ಅನುಸರಿಸುವ ಮಾರ್ಗಗಳು ತೀರಾ ಬಾಲಿಶ. ರಸ್ತೆ, ರೈಲು ಮಾರ್ಗಕ್ಕೆ ತಡೆ, ವಿಮಾನ ನಿಲ್ದಾಣಕ್ಕೆ ಮುತ್ತಿಗೆ, ಅಂಚೆ ಕಚೇರಿಗೆ ಬೀಗ. ಇಲ್ಲೊಂದು ಸೂಕ್ಷ್ಮ ಪ್ರಶ್ನೆ ಉದ್ಭವಿಸು ತ್ತದೆ. ನಮ್ಮೂರಿಗೆ ರಸ್ತೆ ನಿರ್ಮಿಸಿಕೊಡಿ, ರೈಲು ನಿಲುಗಡೆಯಿರಲಿ, ವಿಮಾನ ನಿಲ್ದಾಣವಿರಲಿ ಮುಂತಾದ ಮೊರೆಗಳೆಲ್ಲಿ? ಮಂಜೂರಾಗಿ ಕನಸು ನನಸಾದಾಗ ಚಳವಳಿಯ ಹೆಸರಿನಲ್ಲಿ ಅವಕ್ಕೆ ತಡೆ, ಮುತ್ತಿಗೆ, ಬೀಗ ಎಲ್ಲಿ?

ಆರು ಮಂದಿಯಿದ್ದರೆ ಏಳು ಅಭಿಪ್ರಾಯಗಳಿರುತ್ತವೆ ಎನ್ನುವ ಮಾತಿದೆ. ‘ಒಪ್ಪದಿರಲು ಒಪ್ಪೋಣ’ ಎಂಬ ನಿರ್ಣಯ ತಳೆದರೂ ವಿವಾದಕ್ಕೆ ತೆರೆ ಬೀಳುತ್ತದೆ. ಭೂತವನ್ನು ವಾದ ಪ್ರತಿವಾದಗಳು ರಥದಲ್ಲಿ ಕೂರಿಸಿ ದಿಬ್ಬಣ ಒಯ್ದರೆ, ಪ್ರಸ್ತುತ ಗಹಗಹಿಸಿ ನಗುತ್ತದೆ.

ಗೊಂಬೆಯನ್ನು ಮಗುವೊಂದು ಎತ್ತಿ ಮುದ್ದಾಡುತ್ತಿದೆ. ಇದು ನಿಜವಾದದ್ದಲ್ಲ, ಇಗೋ ನೋಡು ಅಂತ ಗೊಂಬೆಗೆ ಸೂಜಿ ಚುಚ್ಚಿದಿರಿ ಅನ್ನಿ. ಮಗು ಪಡುವ ಬಾಧೆ ಅಷ್ಟಿಷ್ಟಲ್ಲ. ಮಗುವನ್ನು ಅದರ ಪಾಡಿಗೆ ಬಿಡುವುದೇ ಸರಿ. ಚುಚ್ಚಿದ ಪ್ರಮಾದ, ಮಗುವಿನ ಕೆಂಗಣ್ಣು- ಎರಡೂ ಸಲ್ಲದು. ಕಾಲವೇ ಮಗುವಿಗೆ ಸರಿ-ತಪ್ಪು ತಿಳಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು