ಮಂಗಳವಾರ, ಏಪ್ರಿಲ್ 7, 2020
19 °C
ದಕ್ಷಿಣ ಭಾರತದ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕವು ಅಕ್ಕಪಕ್ಕದ ರಾಜ್ಯಗಳಿಗೆ ನೀರು ಸಾಗಿಸುವ ಕಾರಿಡಾರ್ ಅಷ್ಟೇ ಆಗದಿರಲಿ!

ಸಂಗತ| ನದಿ ಜೋಡಣೆ: ತರತಮ ಬೇಡ

ಸಂಗಮೇಶ ಆರ್. ನಿರಾಣಿ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಹೇರಳವಾದ ಜಲಸಂಪತ್ತು ಇದ್ದರೂ ಅದು ಪ್ರತಿ ಪ್ರಾಂತ್ಯಕ್ಕೂ ಸರಿಯಾಗಿ ಹಂಚಿಕೆಯಾಗಿಲ್ಲ. ಹಿಮಾಲಯ ಪರ್ವತ ಹಾಗೂ ಪಶ್ಚಿಮಘಟ್ಟಗಳು ಭಾರತದ ಪ್ರಮುಖ ನದಿಗಳ ಉಗಮ ಸ್ಥಾನಗಳಾಗಿವೆ. ಒಟ್ಟು ಜಲಸಂಪತ್ತಿನ ಪರಿಪೂರ್ಣ ಬಳಕೆಗಾಗಿ ಹಾಗೂ ಪ್ರವಾಹ ನಿಯಂತ್ರಣಕ್ಕಾಗಿ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನದಿ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರ ಆಸಕ್ತಿಯಿಂದ
ಪರಿಶೀಲಿಸುತ್ತಿದೆ.

ದಕ್ಷಿಣ ಭಾರತದ ಪ್ರಮುಖ ನದಿಗಳನ್ನು ಪರಸ್ಪರ ಬೆಸೆಯುವ ಮೂಲಕ ಜಲಸಂಪನ್ಮೂಲ ಸದ್ಬಳಕೆಯ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದರಡಿ, ಹಿಮಾಲಯದ 14 ನದಿಗಳು ಮತ್ತು 16 ಪೆನಿನ್ಸುಲಾರ್ ನದಿಗಳು ಎಂದು ವಿಂಗಡಿಸಲಾಗಿದೆ. ಮಹಾನದಿ ಮತ್ತು ಗೋದಾವರಿ ನದಿ ಕಣಿವೆ ಪ್ರದೇಶವು ಹೆಚ್ಚುವರಿ ಜಲಸಂಪನ್ಮೂಲವನ್ನು ಹೊಂದಿದೆ. ಎಲ್ಲ ಬಳಕೆಯ ನಂತರವೂ ಲಭ್ಯವಿರುವ ಜಲಸಂಪನ್ಮೂಲವನ್ನು ನೀರಿನ ಅಭಾವವಿರುವ ನದಿ ಕಣಿವೆಗಳಿಗೆ ತಿರುಗಿಸುವ ಮೂಲಕ ದಕ್ಷಿಣ ಭಾರತದ ಪ್ರಮುಖ ನದಿ ಕಣಿವೆಗಳನ್ನು ಸಮೃದ್ಧಗೊಳಿಸಲು ಮಹಾನದಿ- ಗೋದಾವರಿ- ಕೃಷ್ಣಾ- ಪೆನ್ನಾರ್- ಕಾವೇರಿ- ವೈಗೈ- ಗುಂಡಾರ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ.

ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು 9 ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತಿ ಹಂತದಲ್ಲೂ ಕರ್ನಾಟಕದ ಭಾಗವಹಿಸುವಿಕೆ ಅವಶ್ಯವಾಗಿದೆ. ಆದರೆ ನೀರು ಹಂಚಿಕೆಯಲ್ಲಿ ಮಾತ್ರ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಯೋಜನೆಯ ಮುಖ್ಯ ಉದ್ದೇಶವೇ ಕೊರತೆಯಾದ ಜಲಾನಯನ ಪ್ರದೇಶವನ್ನು ಸಮೃದ್ಧಗೊಳಿಸು
ವುದು. ಕೃಷ್ಣಾ ಕಣಿವೆಯಲ್ಲಿ ಅತಿಹೆಚ್ಚು ಬಯಲುಸೀಮೆ ಪ್ರದೇಶವಿದೆ. ಆಲಮಟ್ಟಿ ಅಣೆಕಟ್ಟೆಗೆ ಹೊಂದಿಕೊಂಡ ಸುತ್ತಲಿನ ಪ್ರದೇಶದಲ್ಲಿಯೇ ನೀರಾವರಿ ಕೊರತೆ ಇದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ಕೊಪ್ಪಳ, ಯಾದಗಿರಿ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿಗೆ ಉತ್ತೇಜನ ನೀಡಲು ಸದವಕಾಶಗಳಿವೆ. ಕೃಷ್ಣೆಯ ಉಪನದಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶವು ನಿರಂತರವಾಗಿ ನೀರಿನ ಕೊರತೆ ಅನುಭವಿಸುತ್ತಿದೆ. ಆದರೆ ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕದ ವಿಷಯದಲ್ಲಿ ಈ ಯಾವುದೇ ಗಂಭೀರ ಸಮಸ್ಯೆಗಳು ಪರಿಗಣನೆಗೇ ಬಂದಿಲ್ಲ. ಕೃಷ್ಣಾ ಮತ್ತು ಕಾವೇರಿಯ ಎಲ್ಲ ಭಾಗಿದಾರ ರಾಜ್ಯಗಳ ಹಿತ ಕಾಯುವ ಬದಲು, ಆಂಧ್ರ ಮತ್ತು ತಮಿಳುನಾಡಿಗೇ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ವರದಾ- ಬೇಡ್ತಿ ನದಿ ಜೋಡಣೆಗೆ, ಸ್ಥಳೀಯರ ವಿರೋಧದಿಂದ ಸಾಧ್ಯತಾ ವರದಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರವು ನೇತ್ರಾವತಿ ನದಿ ನೀರನ್ನು ಎತ್ತಿನಹೊಳೆ ಯೋಜನೆಯಡಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಹೇಮಾವತಿ- ನೇತ್ರಾವತಿ ನದಿ ಜೋಡಣೆ ಯೋಜನೆಯ ಪ್ರಸ್ತಾವ ನಿಂತುಹೋಯಿತು. ಇನ್ನು ಗೋದಾವರಿ- ಕೃಷ್ಣಾ- ಕಾವೇರಿ ನದಿ ಜೋಡಣೆ ಯೋಜನೆಯಡಿ ಕರ್ನಾಟಕಕ್ಕೆ ಏನೂ ಪಾಲಿಲ್ಲದಂತಾಗಿದೆ. ಹಾಗಾದರೆ ರಾಷ್ಷ್ರೀಯ ನದಿ ಜೋಡಣೆಯಡಿ ಕರ್ನಾಟಕಕ್ಕೆ ದೊರೆಯುವ ಕೊಡುಗೆಯಾದರೂ ಏನು?

ಪಕ್ಕದ ರಾಜ್ಯಗಳಿಗೆ ನೀರು ಸಾಗಿಸಲು ಕೇವಲ ಕಾರಿಡಾರ್ ರೂಪದಲ್ಲಿ ನಮ್ಮ ರಾಜ್ಯದ ನೀರಾವರಿ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುವುದು ಆರೋಗ್ಯಕರ ಸಂಗತಿಯಲ್ಲ. ಕೃಷ್ಣಾ ಮತ್ತು ಕಾವೇರಿ ನಮ್ಮ ರಾಜ್ಯದ ಪ್ರಮುಖ ನದಿ ಕಣಿವೆಗಳು. ಹೀಗಾಗಿ ನಮಗೆ ನ್ಯಾಯಯುತ ಪಾಲು ನೀಡದೇ ಈ ಯೋಜನೆ ಅನುಷ್ಠಾನಗೊಳಿಸುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆ
ಯಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಎಲ್ಲವನ್ನೂ ಕೇಂದ್ರವು ಸಮಾನ ದೃಷ್ಟಿಯಲ್ಲಿ ನೋಡಬೇಕು.

ಪೆನಿನ್ಸುಲಾರ್ ನದಿ ಜೋಡಣೆ ಯೋಜನೆಗಾಗಿ ಕೇಂದ್ರ ಸರ್ಕಾರ ₹ 60,000 ಕೋಟಿಗೂ ಅಧಿಕ ಹಣ ವಿನಿಯೋಗಿಸಲು ಸಜ್ಜಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ನೀರಿನ ಅಗತ್ಯದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಸ್ಪಷ್ಟ ಅರಿವಿದೆ. ಪ್ರಸ್ತುತ ಸರ್ಕಾರದಲ್ಲಿ ಉತ್ತರ ಕರ್ನಾಟಕದಿಂದ ಇಬ್ಬರು ಉಪಮುಖ್ಯಮಂತ್ರಿಗಳಿದ್ದಾರೆ. ಇದೇ ಭಾಗದ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದರೆ, ಬಿ.ಸಿ. ಪಾಟೀಲ ಕೃಷಿ ಸಚಿವರಾಗಿದ್ದಾರೆ. ಎಲ್ಲರೂ ಒಂದಾಗಿ ದುಡಿದರೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡು ಕೃಷಿಯಲ್ಲಿ ಅದ್ಭುತ ಪ್ರಗತಿ ಸಾಧಿಸಬಹುದು.

ಮಹಾನದಿ- ಗೋದಾವರಿ- ಕೃಷ್ಣಾ- ಕಾವೇರಿ ನದಿ ಜೋಡಣೆ ಯೋಜನೆಯಡಿ ಕರ್ನಾಟಕಕ್ಕೆ 164 ಟಿಎಂಸಿ ಅಡಿ ನೀರು ದೊರೆತು, ಅದು ಕೃಷ್ಣಾ- ಕಾವೇರಿ ಕಣಿವೆಗಳಲ್ಲಿ ಸಮರ್ಪಕವಾಗಿ ಬಳಕೆಯಾಗಬೇಕು. ಅತಿಹೆಚ್ಚು ನೀರಿನ ಅಭಾವವನ್ನು ಹೊಂದಿರುವ ಮಲಪ್ರಭಾ ಅಚ್ಚುಕಟ್ಟು ಪ್ರದೇಶವನ್ನು ಸಮೃದ್ಧಗೊಳಿಸುವ ಸಂಕಲ್ಪ ನಮ್ಮದಾಗಬೇಕು. ಕೃಷ್ಣಾ ಕಣಿವೆಯ ರೈತ ಬಾಂಧವರಿಗೆ ಕೃಷ್ಣೆಯ ಬಗ್ಗೆ ಮೊದಲು ಸ್ವಾಭಿಮಾನದ ಭಾವ ಬೆಳೆಯಬೇಕು. ಜನಪ್ರತಿನಿಧಿಗಳು ಪಕ್ಷಾತೀತವಾಗಿ ಇಚ್ಛಾಶಕ್ತಿ ಪ್ರಕಟಿಸಿ ಯೋಜನೆಯ ಗರಿಷ್ಠ ಲಾಭ ಪಡೆಯುವಂತೆ ನೋಡಿಕೊಳ್ಳಬೇಕು.

ಕುವೆಂಪು ಆಶಿಸಿದಂತೆ ಕಾವೇರಿ, ಕೃಷ್ಣೆಯರು ಮೈದೊಳೆವ ಈ ನಾಡು ನಲುನಾಡು ಆಗಬೇಕು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)