ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ರೈತರಿಗೆ ನೆರವಾಗದ ಸಾಲ ಮನ್ನಾ

Last Updated 31 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ರಾಷ್ಟ್ರದ ಒಟ್ಟು ಭೂ ಹಿಡುವಳಿದಾರರ ಪೈಕಿ ಶೇ 86ರಷ್ಟು ಹಿಡುವಳಿದಾರರು ಅತಿಸಣ್ಣ ಮತ್ತು ಸಣ್ಣ ರೈತರೆಂದು ಸರ್ಕಾರವೇ ಪರಿಗಣಿಸಿದ್ದು, ದಿನದಿಂದ ದಿನಕ್ಕೆ ಅವರ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಎರಡು ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ
ಹಿಡುವಳಿದಾರರಾಗಿ, ದುರ್ಬಲ ವರ್ಗಕ್ಕೆ ಸೇರಿದ ಇವರು ಅನೇಕ ಅವಕಾಶಗಳಿಂದ ವಂಚಿತರು. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತ ಬೇಟೆಗೋಸ್ಕರ ಜೋರಾಗಿ ಸದ್ದು ಮಾಡುವ, ಸಾರ್ವಜನಿಕ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವ, ಸರ್ಕಾರಗಳ ದೃಷ್ಟಿಯಲ್ಲಿ ಸಾಧನೆಗಳೆಂದೇ(!) ಬಿಂಬಿತವಾಗಿರುವ ‘ಸಾಲ ಮನ್ನಾ’ ಯೋಜನೆಗಳ ಲಾಭದಿಂದ ಅಸಂಖ್ಯಾತ ಸಣ್ಣ ಮತ್ತು ಅತಿಸಣ್ಣ ರೈತರು ವಂಚಿತರಾಗಿರುವುದು ಸಾಬೀತಾಗಿದೆ.

ಗ್ರಾಮೀಣ ಜನರೊಂದಿಗೆ ನಿಕಟ ಸಂಪರ್ಕವುಳ್ಳ, ಸುದೀರ್ಘ ಇತಿಹಾಸ ಹೊಂದಿರುವ ಕೃಷಿ ಸಹಕಾರಿ ಸಂಘಗಳು ನೀಡಿದ ಒಟ್ಟು ಸಾಲದ ಪ್ರಮಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಿಕ್ಕ ಪಾಲು ಸಣ್ಣದಾಗಿತ್ತು ಎಂಬ ವಾಸ್ತವವನ್ನು ಅಖಿಲ ಭಾರತ ಸಹಕಾರಿ ಪತ್ತಿನ ಪುನರ್ ಪರಿಶೀಲನಾ ಸಮಿತಿ (ವೆಂಕಟಪ್ಪಯ್ಯ ಸಮಿತಿ) ತನ್ನ ವರದಿಯಲ್ಲಿ (1969) ವಿವರವಾಗಿ ತಿಳಿಸಿದೆ. ಉತ್ತಮ ಆರ್ಥಿಕ ಸ್ಥಿತಿ ಹೊಂದಿದ ವಾಣಿಜ್ಯ ಬ್ಯಾಂಕುಗಳು ಬಡ ಕೃಷಿಕರಿಗೆ ಸಾಲ ನೀಡಲು ಮುಂದಾಗಬೇಕೆಂದು ಸಮಿತಿ ಶಿಫಾರಸು ಮಾಡಿತ್ತು.

ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ಗ್ರಾಮೀಣ ಪ್ರದೇಶದಿಂದ ಠೇವಣಿ ಸಂಗ್ರಹಿಸಲು ತೋರಿಸುವಷ್ಟು ಆಸಕ್ತಿಯನ್ನು ಆ ಭಾಗದ ಜನರಿಗೆ ಸಾಲ ನೀಡಲು ತೋರಿಸುತ್ತಿಲ್ಲ ಎಂಬ ಆರೋಪ 70ರ ದಶಕದಿಂದಲೇ ಇದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲ ನೀಡಲು ಸಾರ್ವಜನಿಕ ಬ್ಯಾಂಕುಗಳು ಹಿಂದೇಟು ಹಾಕುತ್ತವೆ ಎಂಬ ಸತ್ಯವನ್ನು ಸರ್ಕಾರ ನೇಮಿಸಿದ ತಜ್ಞರ ಸಮಿತಿ ನೀಡಿದ ವರದಿಗಳೂ ಉಲ್ಲೇಖಿಸಿವೆ.

ಗ್ರಾಮೀಣ ಭಾರತದ ದುರ್ಬಲ ವರ್ಗಗಳಿಗೆ ಅಗ್ಗದ ದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ 1975ರಲ್ಲಿ ಪ್ರಾರಂಭವಾದ ಗ್ರಾಮೀಣ ಪ್ರಾದೇಶಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 2005ರ ನಂತರ ಮಹತ್ವದ ಬದಲಾವಣೆಗಳಾದವು. ವಾಣಿಜ್ಯ ಬ್ಯಾಂಕುಗಳಂತೆ ವ್ಯವಹರಿಸಲು ಪ್ರಾರಂಭಿಸಿದ ಆರ್‌ಆರ್‌ಬಿಗಳು, ಮೂಲ ಉದ್ದೇಶದಿಂದ ದೂರ ಸರಿದದ್ದರಿಂದ ಅವು ನೀಡಿದ ಸಾಲದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಪಾಲು ಗಣನೀಯವಾಗಿ ಇಳಿದಿದೆ. ಪರಿಣಾಮವಾಗಿ ಸಾಲ ಮನ್ನಾ ಯೋಜನೆಗಳಿಂದ ಇವರಿಗೆ ಆದ ಅನುಕೂಲವೂ ನಗಣ್ಯವಾಗಿದೆ.

2008- 09ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾದ ಮೆಗಾ ಕೃಷಿ ಸಾಲ ಮನ್ನಾ ಯೋಜನೆ ಒಟ್ಟು ₹ 70 ಸಾವಿರ ಕೋಟಿಯದ್ದಾಗಿತ್ತು. 2013ರ ಮಾರ್ಚ್ ತಿಂಗಳಿನಲ್ಲಿ ಹೊರಬಂದ ಸಿಎಜಿ ವರದಿಯು ಈ ಸಾಲ ಮನ್ನಾ ಯೋಜನೆಯ ವೈಫಲ್ಯಗಳನ್ನು ತೆರೆದಿಟ್ಟಿತು. ಅನೇಕ ಅನರ್ಹ ರೈತರು ಯೋಜನೆಯ ಲಾಭ ಗಿಟ್ಟಿಸಿಕೊಂಡದ್ದನ್ನು ವರದಿಯು ಬಹಿರಂಗಪಡಿಸಿತು. ಯೋಜನೆಯ ಲಾಭ ಪಡೆಯಬೇಕಾಗಿದ್ದ ಅನೇಕ ಸಣ್ಣ ಮತ್ತು ಅತಿಸಣ್ಣ ರೈತರನ್ನು ಬ್ಯಾಂಕುಗಳು ಪರಿಗಣಿಸಿರಲಿಲ್ಲ.

2016ರ ಜೂನ್‌ನಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ವರದಿಯು ‘ಅತಿ ಕಡಿಮೆ ಭೂಮಿ ಹೊಂದಿದವರಿಗೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ಸಾಲ ನೀಡದೆ ಹೋಗಿದ್ದರಿಂದ ಅವರು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯುತ್ತಿದ್ದಾರೆ’ ಎಂಬ ಸತ್ಯವನ್ನು ಬಹಿರಂಗಗೊಳಿಸಿತ್ತು. ಅವರಲ್ಲಿ ಅನೇಕರು ದುಬಾರಿ ಬಡ್ಡಿಯ ಈ ಸಾಲ ಮರುಪಾವತಿಸಲಾಗದೆ ಒದ್ದಾಡುತ್ತಿದ್ದರು. ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಉದಯಿಸಿದ ಸಣ್ಣ ಬ್ಯಾಂಕುಗಳಿಂದಲೂ ಹೆಚ್ಚಿನ ಸಾಧನೆಯೇನೂ ಆಗುತ್ತಿಲ್ಲ. ಸಾಲ ಮನ್ನಾ ಘೋಷಿಸಿದ ರಾಜ್ಯಗಳಲ್ಲೂ ರೈತರ ಆತ್ಮಹತ್ಯೆಗಳು ನಿಂತಿಲ್ಲ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಸಾಲ ಮನ್ನಾ ವಿಚಾರದಲ್ಲೇ ಪ್ರಧಾನಿ ಮೋದಿಯ ನಿದ್ದೆಗೆಡಿಸಲು ಯೋಚಿಸುತ್ತಿರುವುದು ದೊಡ್ಡ ವಿಪರ್ಯಾಸ.

ಕೇಂದ್ರ ಸರ್ಕಾರ ಪ್ರತಿ ವರ್ಷವೂ ಬಜೆಟ್‌ನಲ್ಲಿ ಕೃಷಿ ಸಾಲದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಆದರೆ ಹೆಚ್ಚಳವಾದ ಪ್ರಮಾಣದ ಅರ್ಧದಷ್ಟೂ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹೋಗುತ್ತಿಲ್ಲ ಎಂಬುದನ್ನು ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸುತ್ತಿವೆ. ಹತ್ತು ವರ್ಷಗಳ ಹಿಂದೆ ಒಟ್ಟು ಕೃಷಿ ಸಾಲದ ಮೊತ್ತದಲ್ಲಿ ಸಣ್ಣ ಸಾಲಗಳ (₹2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತ) ಪಾಲು ಶೇ 45ರಷ್ಟಿತ್ತು. ಈಗ ಅದು ಶೇ 40ಕ್ಕೆ ಇಳಿದಿದೆ. ಹೀಗಾಗಿ ಸಾಲ ಮನ್ನಾ ಮುಂದಿನ ದಿನಗಳಲ್ಲೂ ಸಣ್ಣ ರೈತರ ವರ್ಗಕ್ಕೆ ಸಾಧುವಾಗುವುದು ಅಷ್ಟರಲ್ಲೇ ಇದೆ.

ಈವರೆಗಿನ ಅನುಭವಗಳು ಸ್ಪಷ್ಟಪಡಿಸುವ ಅಂಶವೆಂದರೆ, ಸಾಲ ಮನ್ನಾ ಜಾರಿಗೊಳಿಸಿದ ರಾಜ್ಯಗಳಿಗೆ ಸಂಪನ್ಮೂಲದ ಕೊರತೆ ತೀವ್ರವಾಗಿ ಕಾಡುವುದರಿಂದ ಕೃಷಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಕೂಡ ಕಷ್ಟವಾಗಿದೆ. ಆದ್ದರಿಂದ ಸಾಲ ಮನ್ನಾದಿಂದ ಸಣ್ಣ ರೈತರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT