ಮಕ್ಕಳ ಕಲಿಕೆ ಕೇಂದ್ರ ಬಿಂದುವಾಗಲಿ

7
ಶಿಕ್ಷಣದ ನೀತಿಯನ್ನು ಸರ್ಕಾರದ ಹಂತದಲ್ಲೇ ದಿಢೀರನೆ ಬದಲಿಸುವುದು ಸಮಂಜಸವಲ್ಲ

ಮಕ್ಕಳ ಕಲಿಕೆ ಕೇಂದ್ರ ಬಿಂದುವಾಗಲಿ

Published:
Updated:
Prajavani

ಶಿಕ್ಷಣ ಮಾಧ್ಯಮದಂತಹ ಸಂಕೀರ್ಣ ವಿಷಯ ವಿಧಾನಮಂಡಲದಲ್ಲಿ ಪರಿಶೀಲನೆಗೆ ಒಳಪಡಬೇಕು. ಆ ವೇಳೆ, ಸರ್ಕಾರವು ಸಮಗ್ರ ದೃಷ್ಟಿಕೋನದಿಂದ ರೂಪಿಸಿದ ಟಿಪ್ಪಣಿಯನ್ನು ಮಂಡಿಸಿ ಚರ್ಚೆಗೆ ಅರ್ಥ ತುಂಬಬೇಕು. ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸುವ ವಿಚಾರದಲ್ಲಿ ಇದು ಆಗಿಲ್ಲ. ಇಂಗ್ಲಿಷ್‌ ಮಾಧ್ಯಮದಿಂದಾಗುವ ‘ಒಳಿತು’, ಕನ್ನಡ ಮಾಧ್ಯಮದಿಂದಾಗುವ ‘ಅನನುಕೂಲ’ ಕುರಿತ ಪ್ರಶ್ನೆಗಳಿಗೆ ಸ್ಪಷ್ಟೀಕರಣ ಬೇಕಲ್ಲವೇ?

ಕಾಂಗ್ರೆಸ್ ಪಕ್ಷದ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಕುರಿತು ಯಾವುದೇ ಮಾತಿಲ್ಲ. ಬದಲಾಗಿ, ‘ಕಲಿಕೆ’ಗೆ ಒತ್ತು ಕೊಡಲಾಗಿದೆ (ಪುಟ 2). ಜೆಡಿಎಸ್ ಪ್ರಣಾಳಿಕೆಯಲ್ಲಿ ‘ಸ್ಪೋಕನ್ ಇಂಗ್ಲಿಷ್ ಕೇಂದ್ರಗಳನ್ನು ಅಸ್ತಿತ್ವಕ್ಕೆ ತರಲಾಗುವುದು’ ಎಂಬ ಸ್ವಾಗತಾರ್ಹ ಆಶ್ವಾಸನೆ ಇದೆ. ‘ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿ ನಂತರ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತರಲಿದ್ದೇವೆ’ ಎಂದು ಹೇಳಿರುವುದರಲ್ಲಿ (ಪುಟ 20) ವಚನಬದ್ಧತೆ ಕಂಡುಬರುತ್ತದೆ. ಈಗ ಬೇರೆ ಧ್ವನಿ ಏಕೆ?

ದಶಕಗಳಿಂದ ಜಾರಿಯಲ್ಲಿರುವ, ನಾಡಿನ ಭವಿಷ್ಯದ ಮೇಲೆ ಆಳವಾದ ಪರಿಣಾಮ ಬೀರುವ, ಮೂಲಭೂತ ಸ್ವರೂಪದ ನೀತಿಯನ್ನು ಸರ್ಕಾರದ ಹಂತದಲ್ಲೇ ತಟಕ್ಕನೆ ಬದಲಾಯಿಸುವುದು ಸಮಂಜಸವಲ್ಲ. ಭಾಷೆಯನ್ನು ಸಂಭಾಷಣೆ ರೂಪದಲ್ಲಿ ಮೊದಲು ಕಲಿಯಬೇಕು. ನಂತರ ಎರಡನೇ ತರಗತಿ ಮಧ್ಯಭಾಗದಿಂದ ಇಂಗ್ಲಿಷ್‌ ಭಾಷೆಯ ಬರವಣಿಗೆಗೆ ಪ್ರೇರೇಪಿಸಬಹುದು. 14 ವರ್ಷಗಳ ಹಿಂದೆ ಪ್ರಾಂತೀಯ ಇಂಗ್ಲಿಷ್ ಭಾಷಾ ಕಲಿಕೆ ಮತ್ತು ಅಧ್ಯಯನ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಮಕ್ಕಳು 90 ಇಂಗ್ಲಿಷ್ ಪದಗಳನ್ನು ದಿನನಿತ್ಯ ಮತ್ತು ಸುಮಾರು 150 ಪದಗಳನ್ನು ಆಗಾಗ ಸಹಜವಾಗಿ ಬಳಸುತ್ತಿದ್ದುದನ್ನು ದಾಖಲಿಸಲಾಗಿದೆ. ಪದೇ ಪದೇ ಉಪಯೋಗದಲ್ಲಿದ್ದ ಪದಗಳನ್ನು ವಿವಿಧ ರೀತಿಯಲ್ಲಿ ಮಕ್ಕಳೇ ಜೋಡಿಸಿ ವಾಕ್ಯಗಳನ್ನು ರಚಿಸುವ ಪ್ರಕ್ರಿಯೆಯನ್ನು ನಾನು ನೋಡಿದ್ದೇನೆ. ಈ ಸುಲಭ ಮಾರ್ಗದಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆಗೆ ನಾವು ಆದ್ಯತೆ ಕೊಡಬೇಕು.

ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬಲ್ಲ ಯುವ ಜನಾಂಗಕ್ಕೆ ಆರ್ಥಿಕ ಅವಕಾಶಗಳ ಬಾಗಿಲು ಹೆಚ್ಚು ತೆರೆದಿರುತ್ತದೆ. ಸಮಾಜದಲ್ಲಿ ಒಂದು ‘ಸ್ಥಾನಮಾನ’ ದೊರಕುತ್ತದೆ ಎನ್ನುವ ನಂಬಿಕೆ ಪೋಷಕರದ್ದು. ಜನಾಭಿಪ್ರಾಯದ ಹಿಂದಿದ್ದ ಆತಂಕ ಮತ್ತು ಆಕಾಂಕ್ಷೆಯನ್ನು ಗುರುತಿಸಿದ್ದರೆ 14 ವರ್ಷಗಳ ಹಿಂದೆಯೇ ಮೇಲೆ ವಿಶ್ಲೇಷಿಸಿರುವ ಸುಧಾರಣೆ ಜಾರಿಗೆ ತರಬಹುದಿತ್ತು.

ಮಕ್ಕಳು ಬದುಕಿನ ಹಲವು ವಿಷಯಗಳನ್ನು ಭಾಷಾ ಕೌಶಲದ ಮೂಲಕ ತಿಳಿದುಕೊಳ್ಳುತ್ತಾರೆ. ಇಂಥ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಕನ್ನಡದ ಪದಗಳ ಶಬ್ದ, ಸಂಕೇತ ಮತ್ತು ಅರ್ಥವನ್ನು ಜೊತೆಗೂಡಿಸುವ ಸಾಮರ್ಥ್ಯ ಬೆಳೆಯುತ್ತದೆ. ಮಾತೃಭಾಷೆ ಬಗ್ಗೆ ಜ್ಞಾನ, ಅದರಲ್ಲಿ ಸಾಕ್ಷರತೆ, ಮಾತುಗಾರಿಕೆ, ಪರಿಕಲ್ಪನೆಗಳ ಕಲಿಕೆ ಎಲ್ಲವೂ ಇಂಗ್ಲಿಷ್ ಕಲಿಯಲು ಸಹಾಯಕವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಇಂಗ್ಲಿಷ್‌ ಪಠ್ಯಪುಸ್ತಕವನ್ನು ಎರಡನೇ ತರಗತಿಯಿಂದ ಒದಗಿಸುವುದು ಸೂಕ್ತ. ಕಾರಣ, ಪಠ್ಯ ಪುಸ್ತಕಗಳನ್ನು ಶಿಕ್ಷಕರು ಔಪಚಾರಿಕ ಹಾಗೂ ‘ನೆನಪಿನ’ ಪಾಠಕ್ಕೆ ಉಪಯೋಗಿಸುವ ಸಾಧ್ಯತೆ ಹೆಚ್ಚು.

ಮಾತೃಭಾಷೆಯಿಂದ ಕಲಿತ ಕಲ್ಪನೆಗಳನ್ನು ಮತ್ತೊಂದು ಭಾಷೆಯ ಕಲಿಕೆಗೆ ಸಾಧನವನ್ನಾಗಿ ಬಳಸಬಹುದು. ಆದರೆ ಇಂತಹ ಆನ್ವಯಿಕ ಕಲಿಕೆಗೆ, ಎರಡನೇ ಭಾಷೆಯಲ್ಲಿ (ಇಂಗ್ಲಿಷ್) ಮೌಖಿಕ, ವ್ಯಾವಹಾರಿಕ ಅಥವಾ ಸಂಭಾಷಣೆಯ ಕೌಶಲವನ್ನು ಗಳಿಸಿಕೊಳ್ಳುವುದು ಅವಶ್ಯಕವೆಂದು ಹಲವು ಅಧ್ಯಯನಗಳು ಹೇಳಿವೆ.

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 1ನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಅಳವಡಿಸುವ ಪ್ರಸ್ತಾಪವನ್ನು ಸಚಿವ ಸಂಪುಟಕ್ಕೆ ಸಲ್ಲಿಸಿದ್ದೆ. ಅದಕ್ಕೆ ಕೆಲವು ಸಾಹಿತಿಗಳು ಆಕ್ಷೇಪಿಸಿ ಆ ಪ್ರಸ್ತಾವವನ್ನು ‘ನಯವಂಚಕತನ’ ಎಂದು ಟೀಕಿಸಿದರು. ಇದರಿಂದಾಗಿ ಚುನಾವಣೆ ಹೊಸ್ತಿಲಲ್ಲಿ ದೊಡ್ಡ ರಂಪ ಆಗಬಹುದು ಎಂದು ಈ ವಿಚಾರದಲ್ಲಿ ಮುಂದಡಿ ಇಡದಂತೆ ಕೃಷ್ಣ ಅವರನ್ನು ಸಚಿವರೊಬ್ಬರು ತಡೆದಿದ್ದರು ಎನ್ನುವ ಸುದ್ದಿ ಹರಡಿತ್ತು.

ಮಕ್ಕಳ ನಡವಳಿಕೆ, ಸಾಮಾಜಿಕ– ಸಾಂಸ್ಕೃತಿಕ ಮೌಲ್ಯಗಳ ಅಳವಡಿಕೆ ಮೇಲೆ ಮಾತೃಭಾಷೆಯ ಪ್ರಭಾವ ದಟ್ಟವಾದುದು. ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಕೆಯು ಮನೆಯೊಳಗಿನ ಪರಿಸರಕ್ಕೆ ಹೊರತಾದುದು. ಔಪಚಾರಿಕ ಶಿಕ್ಷಣದ ಪಠ್ಯವಸ್ತು ಮತ್ತು ಪಠ್ಯಕ್ರಮದ ಚೌಕಟ್ಟಿನೊಳಗೆ ಇದನ್ನು ಕಲಿಯಬೇಕು. ಈ ಸ್ಥಿತ್ಯಂತರ ಸುಸೂತ್ರವಾಗಿರಲು ಸಾಧ್ಯವಿಲ್ಲ. ಗ್ರಾಮೀಣ ಬಡಕುಟುಂಬಗಳ, ಕೆಳ ಜಾತಿಗಳ ಮಕ್ಕಳಿಗೆ ಇದರಿಂದ ಹೆಚ್ಚಿನ ಅಡಚಣೆ ಆಗುವುದು ಖಚಿತ. ಆದರೂ, ಅಂಥ ಹಿನ್ನೆಲೆಯ ಮಕ್ಕಳಿಗೆ ಇಂಗ್ಲಿಷ್ ಹೆಚ್ಚು ಅವಕಾಶಗಳನ್ನು ತಂದುಕೊಡುತ್ತದೆ ಎಂಬ ಪೋಷಕರ ಗ್ರಹಿಕೆಯನ್ನು ತಳ್ಳಿಹಾಕುವ ಮನೋಧೋರಣೆ ಕೂಡದು.

ಮಾಧ್ಯಮ ಪ್ರಶ್ನೆ ಹಾಗಿರಲಿ, ಇಂಗ್ಲಿಷ್‌ ಭಾಷಾ ಕಲಿಕೆಯನ್ನೂ ವಿರೋಧಿಸಿ, ಚಳವಳಿಯ ಸಾಧ್ಯತೆಯನ್ನು ಮುಂದಿಟ್ಟಿದ್ದ ಕೆಲವರು ಇತ್ತೀಚೆಗೆ 6-8ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಹಸಿರು ನಿಶಾನೆ ತೋರಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಕ್ಷೇತ್ರದ ಕ್ರಾಂತಿ, ದೇಶವಿದೇಶಗಳ ವ್ಯಾವಹಾರಿಕ ಪರ್ಯಟನೆಗಳ ಸವಾಲುಗಳನ್ನು ಎದುರಿಸುವಲ್ಲಿ, ಕನ್ನಡಕ್ಕೆ ಯಾವುದೇ ಅಪಾಯವಾಗುವ ಸಾಧ್ಯತೆ ಇಲ್ಲವಾದ್ದರಿಂದ, ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಕಲಿಯುವುದು ಪೂರಕವಾದ ಅಂಶವೇ ಸರಿ. ಪಾಶ್ಚಿಮಾತ್ಯ ದೇಶಗಳಲ್ಲಿ ಬಹುಭಾಷೆಗಳ ಜೊತೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮಕ್ಕೆ ಕೊಟ್ಟಿರುವ ಪ್ರಾಧಾನ್ಯವನ್ನು ನಮ್ಮ ಸರ್ಕಾರಗಳು ಗಮನಿಸಿದರೆ ಇಂಗ್ಲಿಷ್ ಮಾಧ್ಯಮದ ಪ್ರಶ್ನೆ ಗೌಣವಾಗುತ್ತದೆ.

ಕಡೆಯಲ್ಲೊಂದು ಮಾತು: ಇಂಗ್ಲಿಷ್‍ನ ಅಲ್ಪಾವಧಿ (15 ದಿನಗಳು) ತರಬೇತಿಯಿಂದ ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಸರ್ಕಾರದ ಉದ್ದೇಶವನ್ನು (ದುರ್ಬಲರ ಸಬಲೀಕರಣ) ಈಡೇರಿಸುವ ಶಿಕ್ಷಕರನ್ನು ಸಜ್ಜುಗೊಳಿಸಲು ಹಲವಾರು ವರ್ಷಗಳೇ ಹಿಡಿದೀತು. ಸದ್ಯಕ್ಕಂತೂ ಅದು ಅಪ್ರಾಯೋಗಿಕ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !