ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸೊಳ್ಳೆ ಕಡಿತ– ಸುರಕ್ಷತೆಯ ಸವಾಲು

Published 18 ಆಗಸ್ಟ್ 2023, 23:03 IST
Last Updated 18 ಆಗಸ್ಟ್ 2023, 23:03 IST
ಅಕ್ಷರ ಗಾತ್ರ

ಆ ರೈತರ ದನದ ಕೊಟ್ಟಿಗೆ ಅಗ್ನಿ ಅವಘಡದಲ್ಲಿ ಸಂಪೂರ್ಣ ಸುಟ್ಟುಹೋಗಿತ್ತು. ಇದಾಗಿದ್ದು ರಾತ್ರಿ ಸಮಯದಲ್ಲಿ. ಮನೆಯೊಳಗೆ ಮಲಗಿದ್ದವರ ಅರಿವಿಗೆ ಬರುವ ಮುನ್ನವೇ ಕೊಟ್ಟಿಗೆ ಉರಿದು ಹೋಗಿತ್ತು. ಕಟ್ಟಿಹಾಕಿದ್ದ ಐದು ಜಾನುವಾರುಗಳಲ್ಲಿ ಎರಡು ಕುತ್ತಿಗೆಗೆ ಕಟ್ಟಿದ್ದ ಕಣ್ಣಿ (ಹಗ್ಗ) ತುಂಡು ಮಾಡಿಕೊಂಡು ತಪ್ಪಿಸಿಕೊಂಡಿದ್ದರೆ ಮತ್ತೆ ಮೂರು ದನಗಳು ಬೆಂಕಿಗೆ ಬಲಿಯಾಗಿದ್ದವು!

ಇಂತಹದ್ದೊಂದು ಅನಾಹುತಕ್ಕೆ ಪ್ರಮುಖ ಕಾರಣ ಮನೆಯವರ ಬೇಜವಾಬ್ದಾರಿತನ. ಅವರ ಮನೆಯಿರುವುದು ಜಮೀನಿನ ನಡುವೆ. ಮುಂಭಾಗ ಭತ್ತದ ಗದ್ದೆ, ಹಿಂಭಾಗದಲ್ಲಿ ಅಡಿಕೆ ತೋಟ. ಸಹಜವಾಗಿಯೇ ಅಲ್ಲಿ ಸೊಳ್ಳೆಕಾಟ ವಿಪರೀತ. ಅದರಲ್ಲೂ ಕತ್ತಲು ಕವುಚುತ್ತಿರುವ ವೇಳೆಯಲ್ಲಿ ಜಾನುವಾರುಗಳಿಗೆ ಮುತ್ತಿಗೆ ಹಾಕಿ ರಕ್ತ ಹೀರುತ್ತಿದ್ದ ಸೊಳ್ಳೆಗಳಿಂದ ರಕ್ಷಿಸಲು ಕೊಟ್ಟಿಗೆಯಲ್ಲಿ ಅಡಿಕೆ ಸಿಪ್ಪೆಯ ಹೊಗೆ ಹಾಕುತ್ತಿದ್ದರು. ಆ ದಟ್ಟ ಹೊಗೆಯಿಂದಾಗಿ ಕೀಟಗಳು ದೂರವಾಗಿ ದನಕರುಗಳು ನೆಮ್ಮದಿಯಾಗಿ ಮಲಗಲಿ ಎಂಬ ಕಾಳಜಿ.

ಸಂಜೆಯ ಸಮಯದಲ್ಲಿ ತಗಡಿನ ಡಬ್ಬಿಗೆ ಸಿಪ್ಪೆ ತುಂಬಿ ಕೆಂಡ ಸುರಿಯುತ್ತಿದ್ದರು. ರಾತ್ರಿ ಮಲಗುವಾಗ ತಪ್ಪದೆ ಬೆಂಕಿ ಆರಿಸುವ ಅಭ್ಯಾಸ. ಅವತ್ತು ಹಾಗೆ ಮಾಡಲು ಮರೆತಿದ್ದರಿಂದ ದೊಡ್ಡ ಪ್ರಮಾದವಾಗಿತ್ತು. ಗಾಳಿಯಲ್ಲಿ ಕಿಡಿ ಹಾರಿ ಕೊಟ್ಟಿಗೆಗೆ ಹಾಸಿದ್ದ ದರುಗಿಗೆ ತಗುಲಿತ್ತು. ಅಲ್ಲಿಂದ ಪಕ್ಕದ ಭಾಗದಲ್ಲಿ ಕೂಡಿಟ್ಟಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಇಡೀ ಕೊಟ್ಟಿಗೆಯನ್ನು ಸುಟ್ಟಿದ್ದಲ್ಲದೆ ಆಕಳುಗಳನ್ನೂ ಆಹುತಿ ಪಡೆದಿತ್ತು!

ಹೌದು, ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಸೊಳ್ಳೆಗಳು, ಕಚ್ಚುವ ನೊಣ, ನುಸಿಗಳನ್ನು ಓಡಿಸಲು ಹೊಗೆ, ಧೂಮ ಹಾಕುವ ಅಭ್ಯಾಸ ಹಲವೆಡೆ ಇದೆ. ಜಾನುವಾರುಗಳಿಗೆ ಕೀಟಬಾಧೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸುವ ದಿಸೆಯಲ್ಲಿ ಇಂತಹ ಸಾಂಪ್ರದಾಯಿಕ ಕ್ರಮಗಳು ಅನಿವಾರ್ಯವಾದರೂ ತುಸು ಎಚ್ಚರ ತಪ್ಪಿದರೆ ಆಗುವ ಹಾನಿಯೂ ತುಂಬಾ ದೊಡ್ಡದು. ಅದರಲ್ಲೂ ಮುಂಗಾರು ಏರುಪೇರಾಗಿರುವ ಈ ಬಾರಿ ಸೊಳ್ಳೆಗಳ ಕಾಟವೂ ಹೆಚ್ಚಿದೆ. ಆಗಾಗ್ಗೆ ಬೀಳುತ್ತಿರುವ ಸಣ್ಣ ಮಳೆಯಿಂದಾಗಿ ಅಲ್ಲಲ್ಲಿ ನಿಂತಿರುವ ನೀರು, ಸೊಳ್ಳೆಗಳು ಮೊಟ್ಟೆಯಿಡಲು, ಸಂತಾನಾಭಿವೃದ್ಧಿ ಮಾಡಲು ಪ್ರಶಸ್ತ ಸ್ಥಳ. ತಾಪಮಾನದ ಏರಿಕೆ, ತತ್ಸಂಬಂಧದ ವಿಕೋಪಗಳ ಕಾರಣ ಕೀಟಗಳ ಸಂಖ್ಯೆ ತೀವ್ರವಾಗಿ ವೃದ್ಧಿಯಾಗಿರುವ ಈ ವೇಳೆಯಲ್ಲಿ, ಅವುಗಳ ಕಡಿತದಿಂದ ಪಾರಾಗುವುದು ಜನ, ಜಾನುವಾರುಗಳಿಗೆ ದೊಡ್ಡ ಸವಾಲು.

ಸೊಳ್ಳೆಗಳು ಕಡಿತದಿಂದ ಉರಿ, ನವೆ, ಚರ್ಮದ ಅಲರ್ಜಿಯನ್ನಷ್ಟೇ ತರುವುದಿಲ್ಲ, ಹಲವು ರೋಗಾಣುಗಳ ವಾಹಕಗಳು ಸಹ ಇವಾಗಿರುತ್ತವೆ. ಮಾನವನಲ್ಲಿ ಮಲೇರಿಯಾ, ಡೆಂಗಿ, ಚಿಕೂನ್‍ಗುನ್ಯ, ಆನೆಕಾಲು ರೋಗ, ಹಳದಿ ಜ್ವರ, ಮೆದುಳು ಜ್ವರದಂತಹ ಹತ್ತಾರು ರೋಗಗಳನ್ನು ಹರಡಿಸುತ್ತಾ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಸವಾಲೊಡ್ಡುತ್ತಿವೆ. ಜಾನುವಾರುಗಳಲ್ಲಿ ನೀಲಿನಾಲಿಗೆ ರೋಗ, ಎಫಿಮೆರಾಲ್ ಜ್ವರ, ಚರ್ಮಗಂಟು ರೋಗದ ಕ್ರಿಮಿಗಳನ್ನು ಹರಡಿಸುವಲ್ಲಿ ಇವುಗಳದ್ದೇ ಮುಖ್ಯ ಪಾತ್ರ. ಹೈನೋತ್ಪಾದನೆಯಲ್ಲೂ ಸೊಳ್ಳೆಗಳೇ ದೊಡ್ಡ ಆಪತ್ತು.

ಗುಂಪು ಗುಂಪಾಗಿ ದಾಳಿಯಿಡುವ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ರಾಸುಗಳು ಜೋರಾಗಿ ಕತ್ತು ಆಡಿಸುವುದು, ಬಾಲದಲ್ಲಿ ಹೊಡೆದುಕೊಳ್ಳುವುದು, ಕುಣಿಯುವುದು ಮಾಡುತ್ತವೆ. ಇದು ಮೆಲುಕು ಕ್ರಿಯೆಗೆ ಭಂಗ ತರುತ್ತದೆ. ಮೇಯುವಾಗ ಹಾಗೆಯೇ ನುಂಗಿದ ಆಹಾರವನ್ನು ವಿಶ್ರಾಂತಿ ಸಮಯದಲ್ಲಿ ಹೊಟ್ಟೆಯ ಮೆಲುಕು ಚೀಲದಿಂದ ಮರಳಿ ಬಾಯಿಗೆ ತಂದುಕೊಂಡು ಜೊಲ್ಲುರಸದೊಂದಿಗೆ ಚೆನ್ನಾಗಿ ಜಗಿದು ಪುನಃ ನುಂಗುವ ಮೆಲುಕು ಕ್ರಿಯೆ ಜಾನುವಾರುಗಳ ಸ್ವಾಸ್ಥ್ಯದ ದೃಷ್ಟಿಯಿಂದ ತುಂಬಾ ಮಹತ್ವದ್ದು. ಸೊಳ್ಳೆಗಳ ಕಾಟ ತೀವ್ರವಾಗಿರುವಾಗ ಅವುಗಳನ್ನು ಓಡಿಸುವತ್ತಲೇ ಚಿತ್ತ ನೆಟ್ಟಿರುವುದರಿಂದ ಮೆಲುಕು ಹಾಕುವ ಪ್ರಕ್ರಿಯೆಗೆ ತೀವ್ರ ಅಡಚಣೆಯಾಗುತ್ತದೆ. ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯದೆ ಹಾಲಿನ ಇಳುವರಿ ಜೊತೆಗೆ ಗುಣಮಟ್ಟವೂ (ಡಿಗ್ರಿ) ಕುಸಿಯುತ್ತದೆ. ಕೀಟಬಾಧೆ ಒತ್ತಡ ಉಂಟುಮಾಡುವುದರಿಂದ ಕಾರ್ಟಿಸಾಲ್‍ನಂತಹ ಒತ್ತಡದ ಹಾರ್ಮೋನ್‍ಗಳು ಹೆಚ್ಚಿಗೆ ಸ್ರವಿಸಿ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳಿಸುವ ಜೊತೆಗೆ ಹೈನು ರಾಸುಗಳ ರೋಗನಿರೋಧಕ ಶಕ್ತಿಯೂ ದುರ್ಬಲವಾಗುತ್ತದೆ!

ರಾಸಾಯನಿಕ ಸೊಳ್ಳೆನಾಶಕಗಳ ಬಳಕೆ ಜನ, ಜಾನುವಾರು, ಪರಿಸರದ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ, ಕೀಟಗಳ ನಿಯಂತ್ರಣಕ್ಕಾಗಿ ನಿಸರ್ಗಸ್ನೇಹಿ ಉಪಾಯಗಳು ಸೂಕ್ತ. ಹಲವು ಹೈನುಗಾರರು ಮನೆಯೊಳಗೆ ಬಳಸುವಂತೆ ಕೊಟ್ಟಿಗೆಗೂ ಸೊಳ್ಳೆಪರದೆ ಕಟ್ಟಿ ತಮ್ಮ ಜಾನುವಾರುಗಳನ್ನು ಸೊಳ್ಳೆಗಳಿಂದ ರಕ್ಷಿಸುತ್ತಿದ್ದಾರೆ. ಕರ್ಪೂರ ಉರಿಸುವುದು, ಬೇವು-ತೆಂಗಿನೆಣ್ಣೆ ಸವರುವುದು, ಸೊಳ್ಳೆ ವಿಕರ್ಷಕ ಅಗರಬತ್ತಿ ಬಳಕೆ, ಕಣ್ಗಾವಲಿನಲ್ಲಿ ಬೇವು, ಲಕ್ಕಿಸೊಪ್ಪಿನ ಹೊಗೆ ಹಾಕುವುದು, ತ್ಯಾಜ್ಯಗಳ ಸಮರ್ಪಕ ನಿರ್ವಹಣೆ, ಸುತ್ತಲೂ ಸ್ವಚ್ಛತೆ ಕಾಪಾಡುವುದು, ನೀರು ಅಲ್ಲಲ್ಲಿ ನಿಲ್ಲದಂತೆ ಎಚ್ಚರ ವಹಿಸುವುದು ಸೊಳ್ಳೆಗಳ ಪರಿಣಾಮಕಾರಿ ನಿಯಂತ್ರಣದ ಕೆಲವು ವಿಧಾನಗಳು.

ಆಗಸ್ಟ್ 20 ‘ವಿಶ್ವ ಸೊಳ್ಳೆ ದಿವಸ’. 1897ರ ಇದೇ ದಿನ, ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್, ಸೊಳ್ಳೆಗಳೇ ಮಲೇರಿಯಾ ರೋಗಾಣುಗಳ ವಾಹಕಗಳು ಎಂದು ನಿಖರವಾಗಿ ಪತ್ತೆಹಚ್ಚಿದ್ದು. ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡಬಹುದಾದ ವಿವಿಧ ಕಾಯಿಲೆಗಳು, ನಿಯಂತ್ರಣ ಕುರಿತಾಗಿ ಅರಿವು ಮೂಡಿಸುವ ದಿನವಾಗಿ ಇದು ಆಚರಣೆಯಲ್ಲಿದೆ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶುಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT