ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನಗೆ ಒಗ್ಗರಣೆ: ಹಾಕಿ ಮಣೆ

Published 31 ಮಾರ್ಚ್ 2024, 23:43 IST
Last Updated 31 ಮಾರ್ಚ್ 2024, 23:43 IST
ಅಕ್ಷರ ಗಾತ್ರ

ಆ ಕನ್ನಡ ಸಿನಿಮಾಗಳು ಕಪ್ಪು ಬಿಳುಪಾದರೇನು? ಪ್ರೇಕ್ಷಕರಲ್ಲಿ ಅವು ಪುಟಿಸುತ್ತಿದ್ದ ಗೊಳ್ಳನೆಯ ನಗು ರಂಗುರಂಗಿನದು. ಸ್ವತಃ ಕೆಮ್ಮುತ್ತಲೇ ವೈದ್ಯ ತನ್ನ ಖಾಸಾ ರೋಗಿಯನ್ನು ‘ಈಗ ಹೇಗಿದೆ ದೊರೆ ಕೆಮ್ಮು?’ ಅಂತ ವಿಚಾರಿಸುವುದು, ಮನೆಯ ಸೇವಕ ಸುಣ್ಣ ಮಿಕ್ಕಿತೆಂದು ಕಾರಿಗೆ ಬಳಿಯುವುದು ಅಥವಾ ‘ನಾಯಿ ಕಚ್ಚದು ತಾನೆ?’ ಎನ್ನುವ ಅತಿಥಿಗೆ ಮನೆಯೊಡೆಯ ‘ನೀವು ಒಳಗೆ ಬಂದ್ಮೇಲೆ ನೋಡ್ಬೇಕು’ ಎಂದು ಸಮಜಾಯಿಷಿ ನೀಡುವುದು... ತೆರೆಯ ಮೇಲಿನ ಇಂತಹ ದೃಶ್ಯಗಳು ಇಂದಿಗೂ ಕಚಗುಳಿಯಿಡುತ್ತವೆ.

ಅದು ದಟ್ಟ ಅರಣ್ಯದಲ್ಲಿ ನಾಯಕ ಹಾಡುತ್ತ ಅಡ್ಡಾಡುವ ದೃಶ್ಯ. ಹಿಂದಿನ ಸಾಲಿನಲ್ಲಿ ‘ಇವನೊಂದಿಗೆ ಹಾರ್ಮೋನಿಯಂ, ತಬಲ ಬಾರಿಸುವವರೂ ಕಾಡಿಗೆ ಬಂದ್ರ?’ ಅಂತ ಪೋರನೊಬ್ಬ ತನ್ನ ಅಪ್ಪನನ್ನು ವಿಚಾರಿಸಿದ್ದ! ಟಾಕೀಸಿನ ಸೂರು ಹಾರುವಂತೆ ಪ್ರೇಕ್ಷಕರು ನಕ್ಕಿದ್ದು ಮರೆಯುವಂತಿಲ್ಲ. ಸ್ವತಃ ಟಾಕೀಸಿನ ಮಾಲೀಕನೇ ಬಂದು ಮಗುವಿನ ಕೆನ್ನೆ ಚಿವುಟಿ ‘ಮರಿ, ಸಿನಿಮಾನೇ ಬೇರೆ, ಪ್ರಪಂಚವೇ ಬೇರೆ’ ಅಂತ ಮುದ್ದಿಸಿದ್ದ. ಚಿತ್ರ ನಿರ್ಮಾಪಕರು ಮೊದಲು ನರಸಿಂಹರಾಜು ಅವರನ್ನು ಗೊತ್ತು ಮಾಡಿಕೊಂಡೇ ಮುಂದಿನ ಯೋಜನೆಗೆ ಸಿದ್ಧರಾಗುತ್ತಿದ್ದರು. ಅಂದಿನ ಕನ್ನಡ ಸಿನಿಮಾಗಳು ಗಂಭೀರ ಹಾಸ್ಯಕ್ಕೆ ಎಂತಹ ಆದ್ಯತೆ ನೀಡುತ್ತಿದ್ದವೆನ್ನಲು ಇದಕ್ಕೂ ಪುರಾವೆ ಬೇಕೆ?

ನಗಿಸುವ ಸಲುವಾಗಿಯೇ ಒಂದು ಸಂದರ್ಭವನ್ನು ಸೃಷ್ಟಿಸಿಕೊಳ್ಳುವುದು ನೀರಸವಾಗುತ್ತದೆ. ಸೋಗಿನ ನಗೆಪಟುತ್ವಕ್ಕೆ ಸಭೆಯಿಂದ ನೈಜ ಕರತಾಡನ ನಿರೀಕ್ಷಿಸುವುದು ತಾನೆ ಹೇಗೆ? ಅಂತೆಯೆ ನಗಿಸುವ ನಿಮಿತ್ತ ಸುಳ್ಳು ಹೇಳುವುದು ಅಥವಾ ಪ್ರಕರಣಗಳನ್ನು ತಿರುಚುವುದು ಸರಿಯಲ್ಲ. ಸಭಿಕರು ‘ತೌಡು ಕುಟ್ಟುವ’ ತಮಾಷೆಗಳನ್ನು ಸಮ್ಮತಿಸುವಷ್ಟು ಅಪ್ರಬುದ್ಧರಲ್ಲ. ನಾವು ಸಾದರಪಡಿಸುವ ವಿಡಂಬನೆ ನಮ್ಮ ವ್ಯಕ್ತಿತ್ವ
ವನ್ನು ಬಿಂಬಿಸಬೇಕು. ಪರಿಹಾರಪರ, ಶಬ್ದಪರ ಮತ್ತು ಅರ್ಥಪರವಾದ ಹಾಸ್ಯ ಸರ್ವರಿಗೂ ಪ್ರಿಯವಾಗು
ತ್ತದೆ. ಪರರನ್ನು ಗುರಿಯಾಗಿಸಿಕೊಂಡ ಹಾಸ್ಯ ಸರ್ವತ್ರ ಕೂಡದು. ಮತ್ತೊಬ್ಬರನ್ನು ಹಂಗಿಸಿ ನಾವು ನಗಬೇಕಾ
ದ್ದಿಲ್ಲ, ನಗಿಸಬೇಕಾದ್ದಿಲ್ಲ. ಎಚ್ಚರ ತಪ್ಪಿ ಆಡಿದ ಮಾತನ್ನು ಹಿಂಪಡೆಯಲಾಗದು.

ಜಾಗರೂಕತೆಯ ಜಾಣ ನುಡಿಯಾದ ಹಾಸ್ಯ ಒಂದು ಜಾದೂ ಅಲ್ಲ. ಅದು ಸಮಯಪ್ರಜ್ಞೆಯಿಂದ ಉದ್ಗರಿಸಿ ನಮ್ಮನ್ನು ವರ್ತಮಾನದಲ್ಲಿ ಇರಿಸುವ ಸಹಜ ಮಾರ್ಗ. ಮನೆಯಿಂದ ಹೊರಡುವಾಗ ಛತ್ರಿ ಮರೆತು ಬಂದಿರಲ್ಲ ಅಂತ ನಿಮ್ಮನ್ನು ಪರಿಚಿತ
ರೊಬ್ಬರು ಪ್ರಶ್ನಿಸುತ್ತಾರೆನ್ನಿ. ‘ಪರವಾಗಿಲ್ಲ ಬಿಡಿ, ನೀವಿದ್ದೀರಲ್ಲ’ ಎಂಬ ನಿಮ್ಮ ಉತ್ತರ ನಿಸ್ಸಂದೇಹವಾಗಿ ಇಬ್ಬರನ್ನೂ ನಗಿಸಿರುತ್ತದೆ! ನಾವು ಉಲಿಯುವ ಮೊನಚು ನಮ್ಮ ಕಡು ವೈರಿಗಳ ನಡುವೆಯೂ ತತ್ಕಾ
ಲಕ್ಕಾದರೂ ಒಂದು ತಡೆಗೋಡೆ ನಿರ್ಮಿಸಿರುತ್ತದೆ. ಅನೇಕರಿಗೆ ರಾಜಕೀಯಕ್ಕೆ ಸಂಬಂಧಿಸಿದ ವಿಡಂಬನೆ ಹಿಡಿಸದು. ಕಾರಣವೆಂದರೆ, ರಾಜಕಾರಣಿಗಳ ಪೈಕಿ ಕೆಲವರಾದರೂ ನಾಳೆ ‘ಚುನಾಹಿತ’ರಾಗಿಬಿಡುತ್ತಾರೆ!

ಮಹಾಕವಿ ಕಾಳಿದಾಸ ತನ್ನ ನಾಟಕಗಳಲ್ಲಿ ಸೊಗಸಾಗಿ ವ್ಯಂಗ್ಯ, ವಿಡಂಬನೆಗಳನ್ನು ಬರಮಾಡಿಕೊಂಡಿದ್ದಾನೆ. ‘ಅಭಿಜ್ಞಾನ ಶಾಕುಂತಲ’ ನಾಟಕದಲ್ಲಿ ದುಷ್ಯಂತನಿಗೆ ತಾನು ಬಿಡಿಸಿದ ಶಕುಂತಲೆಯ ಚಿತ್ರ ಏಕೊ ಅಪೂರ್ಣ ಎನ್ನಿಸುತ್ತದೆ. ಇದನ್ನು ಗಮನಿಸುವ ವಿದೂಷಕ ಮೆಲುಧ್ವನಿಯಲ್ಲಿ ‘ಚಿತ್ರಪಟದ ತುಂಬ ನೇತಾಡುವ ಗಡ್ಡಗಳುಳ್ಳ ಋಷಿಗಳು ಇರಬಹುದಿತ್ತೇನೊ?’ ಎನ್ನುತ್ತಾನೆ. ಕವಿಯ ಹಾಸ್ಯಪ್ರಜ್ಞೆ ನಿಜಕ್ಕೂ ಅದೆಷ್ಟು ಪ್ರಖರ. ಕ್ಷೇಮೇಂದ್ರ 11ನೇ ಶತಮಾನ
ದಲ್ಲಿದ್ದ, ಕಾಶ್ಮೀರದ ಕ್ರಾಂತಿಕಾರಿ ಸಂಸ್ಕೃತ ಕವಿ. ಆತ ತನ್ನ ‘ದೇಶೋಪದೇಶ’ ಕೃತಿಯಲ್ಲಿ ‘ಅವನೋ ಕಲಹಪ್ರಿಯ ಹಾಗೂ ನಪುಂಸಕ ಲಿಂಗ ಮಾತ್ರ ಗೊತ್ತಿರುವ ವ್ಯಾಕರಣ ಪಂಡಿತ’ ಎಂದು ಒಬ್ಬನನ್ನು ವಿಡಂಬಿಸುವುದು ಗಮನ ಸೆಳೆಯುತ್ತದೆ. ಹಾಸ್ಯ ಒಂದು ‘ರಹಸ್ಯ ಒಗ್ಗರಣೆ’. ನಾವು ಎದುರುಗೊಳ್ಳುವ ಪ್ರತಿಯೊಂದು ಘಟನೆ ಮತ್ತು ಸಂಗತಿಯಲ್ಲೂ ಒಂದು ನಗು ಅಂತರ್ಗತವಾಗಿರುತ್ತದೆ. ಯಾವುದೇ ಪರಿಸ್ಥಿತಿ ತಮಾಷೆಗೆ ನಿಲುಕದಷ್ಟು ಗೋಜಲಲ್ಲ. ‘ನಾಲ್ಕು ಚಕ್ರಗಳ ಹಾರುವ ಯಂತ್ರ’ ಎಂದೊಡನೆ, ಇದ್ಯಾವುದಪ್ಪ ಹೊಸ ವಿಮಾನ ಎನ್ನಿಸುತ್ತದೆ. ಆದರೆ ಅದು ನೊಣಗಳ ಹಿಂಡು ಬೆನ್ನೇರಿದ ಕಸದ ಲಾರಿ!

ಹಾಸ್ಯಪ್ರಜ್ಞೆಗೆ ಪರ್ಯಾಯ ಹೆಸರೇ ಆಗಿದ್ದರು ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ ಮುತ್ಸದ್ದಿ ಸರ್ ವಿನ್‍ಸ್ಟನ್ ಚರ್ಚಿಲ್. ಆ ದಿಸೆಯಲ್ಲಿನ ಅವರ ಬಗೆಗಿನ ವೃತ್ತಾಂತಗಳಿಗೆ ಲೆಕ್ಕವಿಲ್ಲ. ಒಮ್ಮೆ ಚರ್ಚಿಲ್ಲರನ್ನು ಕಂಡ ಮಹಿಳೆಯೊಬ್ಬಳು ‘ಸರ್, ನಾನು ನಿಮ್ಮ ಪತ್ನಿಯಾ
ಗಿದ್ದರೆ ನಿಮಗೆ ವಿಷಪೂರಿತ ಚಹಾ ನೀಡುತ್ತಿದ್ದೆ’ ಎಂದಳು. ಒಡನೆಯೆ ಚರ್ಚಿಲ್ ಹೇಳಿದರಂತೆ, ‘ಮೇಡಂ, ನೀವು ನನ್ನ ಪತ್ನಿಯಾಗಿದ್ದರೆ ನಾನು ಆ ಚಹಾ ಕುಡಿಯುತ್ತಿದ್ದೆ!’ ಸಾಧು ಸಂತರು, ವಿಜ್ಞಾನಿಗಳು, ದಾರ್ಶನಿಕರು, ಸಾಧಕರು ಹಾಸ್ಯಪ್ರಿಯತೆಯನ್ನು ಬದಿಗಿರಿಸಿದ ನಿದರ್ಶನಗಳೇ ಇಲ್ಲ. ವಿನೋದದಿಂದಲೇ ತಿಳಿಗೇಡಿತನದ ಅನಾವರಣ, ಅನಿಷ್ಟ ನಿವಾರಣ ಎನ್ನುವುದು ಅವರೆಲ್ಲರ ದೃಢ ನಿಲುವು.

ಮಹಾತ್ಮ ಗಾಂಧಿ ‘ನನಗೆ ಹಾಸ್ಯ ಮನೋಭಾವ ಇರದಿದ್ದರೆ ನಾನು ಹುಚ್ಚನಾಗುತ್ತಿದ್ದೆ’ ಎನ್ನುತ್ತಿದ್ದರು. ‘ನಿಘಂಟು ಬ್ರಹ್ಮ’ ಖ್ಯಾತಿಯ ಪ್ರೊ. ಜೀ.ವಿ. ಅವರನ್ನು ಸಂದರ್ಶಿಸಿದವರಿಗೆ ಅವರ ಮನೆಯ ಸ್ಮರಣಿಕೆಗಳ ಓರಣ ಕಣ್ತಪ್ಪುವುದುಂಟೇ? ಅಭಿಮಾನಿಗಳ ವಾರೆನೋಟಕ್ಕೆ ಪ್ರೊಫೆಸರರ ಪ್ರತಿಕ್ರಿಯೆ ನಿರಾಳವಾಗಿರುತ್ತಿತ್ತು: ‘ನೋಡಿ, ಮೊದಲು ಯಾರೋ ಒಂದು ತಪ್ಪು ಮಾಡಿದರು. ಅದನ್ನೇ ಉಳಿದವರೂ ಹಿಂಬಾಲಿಸಿದರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT