ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವನ್ಯಜೀವಿಯ ಅಂಗಾಂಗ: ಪ್ರಬಲ ಸಂದೇಶ ರವಾನೆಯಾಗಲಿ

Published 27 ಅಕ್ಟೋಬರ್ 2023, 23:46 IST
Last Updated 27 ಅಕ್ಟೋಬರ್ 2023, 23:46 IST
ಅಕ್ಷರ ಗಾತ್ರ

ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಜಾರಿಯ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿ, ಯಾರ ಬಳಿಯಾದರೂ ವನ್ಯಜೀವಿಗಳಿಗೆ ಸಂಬಂಧಿಸಿದ ಚರ್ಮ, ದಂತ, ಉಗುರಿನಂತಹ ವಸ್ತುಗಳಿದ್ದರೆ ಸರ್ಕಾರಕ್ಕೆ ಒಪ್ಪಿಸಬೇಕು ಅಥವಾ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಇಟ್ಟುಕೊಳ್ಳಬಹುದು ಎಂದು ಹೇಳಿತ್ತು. ತದನಂತರ, ರಾಜ್ಯ ಸರ್ಕಾರವೂ ಕೆಲವು ಬಾರಿ ಸುತ್ತೋಲೆ ಹೊರಡಿಸಿ, ಇಂತಹುದೇ ಸೂಚನೆ ನೀಡಿತ್ತು.

ಖ್ಯಾತನಾಮರು ಹುಲಿ ಉಗುರಿನ ಲಾಕೆಟ್‌ಗಳು, ಪೆಂಡೆಂಟ್‌ಗಳನ್ನು ಈವರೆಗೆ ಸಾರ್ವಜನಿಕವಾಗಿ ಪ್ರದರ್ಶಿಸುತ್ತಾ, ವನ್ಯಜೀವಿಗಳ ಸಂತತಿಯ ಕುಸಿತಕ್ಕೆ ಪರೋಕ್ಷವಾಗಿ ಕಾರಣರಾಗಿರುವುದು ಈ ನಾಡಿನ ದುರಂತ. ಟಿ.ವಿ. ಚಾನೆಲ್‌ವೊಂದರ ರಿಯಾಲಿಟಿ ಷೋ ‘ಬಿಗ್‌ಬಾಸ್’ ಸ್ಪರ್ಧಿಯೊಬ್ಬರ ಕತ್ತಿನಲ್ಲಿ ಇತ್ತೀಚೆಗೆ ತೂಗಾಡುತ್ತಿದ್ದ ಹುಲಿ ಉಗುರು ಆ ಸ್ಪರ್ಧಿಯ ಕುತ್ತಿಗೆಗೆ ಕಾನೂನು ಕುಣಿಕೆ ಬಿಗಿಯುವಂತೆ ಮಾಡಿದ ನಂತರ ಈ ವಿದ್ಯಮಾನ ಇನ್ನಿಲ್ಲದಂತೆ ಸುದ್ದಿ ಮಾಡುತ್ತಿದೆ.

ಅರಣ್ಯ ಇಲಾಖೆಯು ಮೈಕೊಡವಿ ಎದ್ದು, ಈ ದಿಸೆಯಲ್ಲಿ ಎಲ್ಲೆಡೆಯೂ ಕಾರ್ಯಾಚರಣೆ ನಡೆಸುತ್ತಿದೆ. ಕೆಲವು ಚಿತ್ರನಟರು ತಮ್ಮಲ್ಲಿದ್ದ ಹುಲಿ ಉಗುರನ್ನು ಇಲಾಖೆಗೆ ಒಪ್ಪಿಸಿ, ತಮಗೆ ಕಾನೂನಿನ ಅರಿವಿರಲಿಲ್ಲ ಎಂದು ಹೇಳಿಕೆ ನೀಡಿ, ಸಂಕಷ್ಟದಿಂದ ಪಾರಾದೆವು ಎಂದುಕೊಂಡಿದ್ದಾರೆ. ಕಾನೂನಿನ ಕುರಿತ ಅರಿವಿನ ಕೊರತೆಯ ಕಾರಣಕ್ಕೆ ಯಾರಿಗೇ ಆಗಲಿ ಶಿಕ್ಷೆಯಿಂದ ವಿನಾಯಿತಿ ಸಿಗುವುದಿಲ್ಲವೆಂದು ಸಂವಿಧಾನ ಎತ್ತಿ ಹೇಳಿದೆ. ಇದನ್ನು ಸಾರ್ವಜನಿಕರು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಯ್ದೆ ಪ್ರಕಾರ, ಯಾವುದೇ ಆರೋಪಿಯು ಇಂತಹ ಪ್ರಕರಣದಲ್ಲಿ ಸಿಲುಕಿದರೆ, ತಾನು ಅಪರಾಧಿಯಲ್ಲ ಎಂದು ಸಾಬೀತುಪಡಿಸುವ ಕಾನೂನು ಪ್ರಕ್ರಿಯೆಯ ಹೊಣೆಯನ್ನು ಖುದ್ದು ಹೊತ್ತುಕೊಳ್ಳಬೇಕು. ಆದರೆ ಈಗ, ಅವರು ಇಲಾಖೆಗೆ ಒಪ್ಪಿಸಿದ ಹುಲಿ ಉಗುರುಗಳು ಅಸಲಿಯೋ ನಕಲಿಯೋ ಎಂಬುದನ್ನು ಕಂಡುಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ
ಕಳುಹಿಸಿರುವುದು ತಾರತಮ್ಯದ ನಡೆಯಾಗುತ್ತದೆ.

ಬಂಗಾರದ ಆಭರಣ ಮಳಿಗೆಗಳ ಕೆಲವು ಮಾಲೀಕರು ತಮ್ಮ ಗ್ರಾಹಕರಿಗೆ ಹುಲಿ ಉಗುರಿನ ಲಾಕೆಟ್, ಆನೆ ಬಾಲದ ಕೂದಲಿನ ಉಂಗುರಗಳನ್ನು ಮಾಡಿಕೊಡುವುದಾಗಿ ಆಮಿಷ ಒಡ್ಡುವುದು, ಅನುಕೂಲಸ್ಥರು ಇವರ ಬಲೆಗೆ ಬೀಳುವುದು ಸಾಮಾನ್ಯವಾಗಿದೆ. ದೊಡ್ಡ ಮಟ್ಟದ ಈ ದಂಧೆಯ ಮೂಲವನ್ನು ಇಲಾಖೆ ಶೋಧಿಸಬೇಕಾಗಿದೆ. ಈ ಮೊದಲು ಶಿವಮೊಗ್ಗದಲ್ಲಿ ಕೃಷಿಕರೊಬ್ಬರು ಅಕ್ರಮವಾಗಿ ಅಳವಡಿಸಿಕೊಂಡಿದ್ದ ವಿದ್ಯುತ್ ತಂತಿಗೆ ಸಿಲುಕಿ ಸತ್ತ ಎರಡು ಆನೆಗಳ ಬಾಲದಲ್ಲಿ ಕೂದಲುಗಳನ್ನು ಕಿತ್ತು ಸಾಗಿಸಿದ್ದರಲ್ಲಿ ತನ್ನ ಸಿಬ್ಬಂದಿಯೇ ಶಾಮೀಲಾಗಿದೆ ಎಂಬ ಸಾರ್ವಜನಿಕ ಸಂಶಯವನ್ನು ಇಲಾಖೆ ಎದುರಿಸಿತ್ತು. ಅಂತೂ ಈ ಪ್ರಕರಣ ತನಿಖೆಗೆ ಒಳಪಡದೇ ಮುಕ್ತಾಯಗೊಂಡಿತು.

ವೈಜ್ಞಾನಿಕವಾಗಿ ಹುಲಿ ಉಗುರಿನಲ್ಲಾಗಲಿ ಅಥವಾ ಕಾಡುಕೋಣದ ಕೊಂಬಿನಲ್ಲಾಗಲಿ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ, ಮನುಷ್ಯರ ಕೂದಲು ಹಾಗೂ ಉಗುರಿನಲ್ಲಿರುವ ಕೆರಟಿನ್ ಎಂಬ ರಾಸಾಯನಿಕ ಅಂಶವೇ ವನ್ಯಜೀವಿಗಳ ಉಗುರಿನಲ್ಲೂ ಇರುತ್ತದೆ ಎಂಬುದು ಅರ್ಥವಾದರೆ, ಎಷ್ಟೋ ವನ್ಯಜೀವಿಗಳ ಸಂರಕ್ಷಣೆಯಾಗುತ್ತದೆ. ಷೋಕಿಗಾಗಿಯೋ ಮೂಢನಂಬಿಕೆಯ ನೆಲೆಯಲ್ಲಿಯೋ ಹುಲಿ ಉಗುರನ್ನು ಧರಿಸುವ ಶ್ರೀಮಂತರು ಖುದ್ದಾಗಿ ಹುಲಿ ಬೇಟೆಯಾಡುವುದಿಲ್ಲ. ಆದರೆ ವನ್ಯಜೀವಿಗಳನ್ನು ಬೇಟೆಯಾಡಿ, ಅವುಗಳ ಅಂಗಾಂಗ ಹಾಗೂ ಮಾಂಸವನ್ನು ಮಾರುವ ದಂಧೆಕೋರರಿದ್ದಾರೆ.

ವನ್ಯಜೀವಿಗಳ ಸಂರಕ್ಷಣೆಗೆ ಕುತ್ತಾಗಿರುವ ಇನ್ನೊಂದು ಗಂಭೀರವಾದ ಸಂಗತಿ ಮಲೆನಾಡಿನಲ್ಲಿದೆ. ಅದೇ ಅಕ್ರಮ ಬಂದೂಕು. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಅನುಮತಿ ಪಡೆಯದ ಸುಮಾರು 5,000 ಬಂದೂಕುಗಳಿವೆ. ಇವುಗಳಿಗೆ ಬೇಕಾದ ಗನ್ ಪೌಡರ್, ಚರೆ, ಗುಂಡುಗಳನ್ನು ಅನಿಯಂತ್ರಿತವಾಗಿ ಮಲೆನಾಡಿನಲ್ಲಿ ಮಾರಲಾಗುತ್ತಿದೆ. ಶಸ್ತ್ರಾಸ್ತ್ರ ಸಂಗ್ರಹದ ವಿಷಯ ನೇರವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲವಾದರೂ, ಅದು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅಕ್ರಮ ಬಂದೂಕು ತಯಾರಿಕಾ ಘಟಕಗಳನ್ನು ಹಾಗೂ ಹಾಲಿ ಅಕ್ರಮ ಬಂದೂಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ.

ಕೆಲ ವರ್ಷಗಳ ಹಿಂದೆ ರಾಜ್ಯ ಅರಣ್ಯ ಪಡೆಯ ಮುಖ್ಯಸ್ಥರಾಗಿದ್ದವರ ಐಷಾರಾಮಿ ಕೊಠಡಿಯಲ್ಲಿ, ಅವರ ಕುರ್ಚಿಯ ಹಿಂಭಾಗದಲ್ಲಿ ಸುಮಾರು 6 ಅಡಿ ಉದ್ದದ ಆನೆ ದಂತದ ಜೋಡಿಯನ್ನು ಕಮಾನಿನ ರೀತಿ ಜೋಡಿಸಿಡಲಾಗಿತ್ತು. ‘ಇದೇನು ಸ್ವಾಮಿ, ಆನೆದಂತವನ್ನು ಹೀಗೆ ಬಳಸಿಕೊಳ್ಳುವುದು ಅಪರಾಧವಲ್ಲವೇ?’ ಎಂದು ಕೇಳಿದಾಗ, ‘ಇಲ್ಲ, ಈ ದಂತಗಳು ನಮ್ಮ ಇಲಾಖೆಯ ಹೆಮ್ಮೆ’ ಎಂದು ಅವರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಇದಕ್ಕೆ ಸರ್ಕಾರ ಅನುಮತಿ ನೀಡಿರಬಹುದು. ಆದರೆ, ಇಲಾಖೆಯ ಒಬ್ಬ ಉನ್ನತಾಧಿಕಾರಿ ಆನೆ ದಂತವನ್ನು ಹೀಗೆ ಪ್ರದರ್ಶನಕ್ಕೆ ಇಟ್ಟರೆ, ನೈತಿಕವಾಗಿ ಅದು ಸಾರ್ವಜನಿಕರಿಗೆ ಯಾವ ಬಗೆಯ ಸಂದೇಶವನ್ನು ನೀಡಬಹುದು? ಇಲಾಖೆ ಇದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕಾಗಿದೆ.

ಲಾಗಾಯ್ತಿನಿಂದ ಮನೆಯಲ್ಲಿ ಇಟ್ಟುಕೊಂಡ ಕಾಡುಕೋಣ, ಕಾನುಕುರಿ, ಜಿಂಕೆಯ ಕೊಂಬುಗಳನ್ನು ನಿಗದಿತ ಸಮಯದಲ್ಲಿ ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಪ್ರಕಟಣೆ ನೀಡಲು, ಅದಕ್ಕೆ ತಪ್ಪಿದರೆ ಮತ್ತು ಅಕ್ರಮವಾಗಿ ಬಂದೂಕುಗಳನ್ನು ಹೊಂದಿದ್ದರೆ ಕಠಿಣ ಕ್ರಮ ಜರುಗಿಸಲು ಇಲಾಖೆ ಹಿಂಜರಿಯುವುದಿಲ್ಲ ಎಂಬ ಬಲವಾದ ಸಂದೇಶವನ್ನು ನೀಡುವುದು, ಮುಂದಿನ ದಿನಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT