ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಚಂದ್ರಯಾನ ಮಾಡಬೇಕೇ?

ಪಯಣಿಸುವ ಸುವರ್ಣಾವಕಾಶ ‘ಅರ್ಹ’ರಿಗೆ ಲಭ್ಯವಿದೆ
Last Updated 22 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಹೌದು, ನಿಮಗೆ ಚಂದ್ರಯಾನ ಮಾಡುವ ಅಭಿಲಾಷೆ ಯಿದ್ದರೆ ಅದಕ್ಕೊಂದು ಅಪೂರ್ವ ಅವಕಾಶ ಈಗ ಲಭ್ಯವಿದೆ. ಅಂತರಿಕ್ಷ ವಿಜ್ಞಾನದ ಮುಂಚೂಣಿ ಕೆಲಸ ಮಾಡುವ ‘ನಾಸಾ’ ತಾನು ಉಡಾಯಿಸುವ ಆಕಾಶನೌಕೆಯಲ್ಲಿ ಕುಳಿತು ಚಂದ್ರನಲ್ಲಿಗೆ ಪಯಣಿಸುವ ಸುವರ್ಣಾವಕಾಶವನ್ನು ಕಲ್ಪಿಸಿದೆ. ಅದಕ್ಕೆಂದೇ ನಾಗರಿಕರಿಂದ ಅರ್ಜಿ ಆಹ್ವಾನಿಸಿದೆ.

ಹ್ಞಾಂ! ಸ್ವಲ್ಪ ನಿಧಾನಿಸಿ. ಓಡೋಡಿ ಬಂದು ಕರವಸ್ತ್ರ ಹಾಕಿ ಸರ್ಕಾರಿ ಬಸ್ಸಿನ ಸೀಟ್ ಹಿಡಿಯುವಷ್ಟು ಸಲೀಸಲ್ಲ ಇದು. ಚಂದ್ರನ ಮೇಲೆ ಟೂರ್ ಹೋಗಲು ವಿಶೇಷ ವಿದ್ಯಾರ್ಹತೆ, ಅನುಭವವನ್ನು ನಿಗದಿಗೊಳಿಸಿ ನಾಸಾ ಪ್ರಕಟಣೆ ನೀಡಿದೆ. ವಿಷಯ ತಿಳಿದ ಕೆಲ ದಿನಗಳಲ್ಲೇ ಸಾವಿರಾರು ಅರ್ಜಿಗಳು ಸಲ್ಲಿಕೆಯಾದವು. 2017ರಲ್ಲಿ ಇದೇ ರೀತಿ ಅರ್ಜಿ ಕರೆದಾಗ ಬರೋಬ್ಬರಿ 18,300 ಅರ್ಜಿಗಳು ನಾಸಾಗೆ ಸಲ್ಲಿಕೆಯಾಗಿದ್ದವು. ಅದರಲ್ಲಿ ಕೇವಲ 12 ಜನ ಆಯ್ಕೆಯಾಗಿದ್ದರು. ಅವರಲ್ಲಿ ಒಬ್ಬರು ಆರೋಗ್ಯದ ಕಾರಣ ನೀಡಿ ನಿವೃತ್ತಿ ಬಯಸಿದ್ದರು. ಉಳಿದ ಹನ್ನೊಂದು ಜನ ಈ ವರ್ಷದ ಜುಲೈನಲ್ಲಿ ಅಂತರಿಕ್ಷಯಾನ ಮಾಡಿ, ಅವರಲ್ಲಿ ಕೆಲವರು ಚಂದ್ರನ ಮೇಲೆ ಇಳಿಯಲು ಮಾಡಿರುವ ಎಲ್ಲ ತಯಾರಿಯು ಮುಕ್ತಾಯದ ಹಂತದಲ್ಲಿದೆ.

ಚಂದ್ರನು ಭೂಮಿಯ ನೈಸರ್ಗಿಕ ಉಪಗ್ರಹವಾಗಿ ಇದ್ದುಕೊಂಡು ಬರಿಕಣ್ಣಿಗೆ ಕಾಣಿಸಿಕೊಂಡು, ಹುಣ್ಣಿಮೆ– ಗ್ರಹಣಗಳನ್ನುಂಟು ಮಾಡಿ, ಕವಿ- ಲೇಖಕರಿಗೆ ಸ್ಫೂರ್ತಿ ತುಂಬಿ, ನಮ್ಮೆಲ್ಲರಲ್ಲಿ ಅಪಾರ ಕುತೂಹಲ, ಅಚ್ಚರಿ ಮತ್ತು ಪ್ರಶ್ನೆಗಳನ್ನು ಅನಾದಿ ಕಾಲದಿಂದಲೂ ಮೂಡಿಸುತ್ತಾ ಬಂದಿದ್ದಾನೆ. ವಿಜ್ಞಾನ– ತಂತ್ರಜ್ಞಾನದ ಬೆಳವಣಿಗೆಯ ಫಲವಾಗಿ, ರಾಕೆಟ್‍ನ ಗರ್ಭದಲ್ಲಿ ಕುಳಿತು ಚಂದ್ರನೆಡೆಗೆ ಪ್ರಯಾಣ ಮಾಡಿ, ಅಲ್ಲಿನ ನೆಲ ಸ್ಪರ್ಶಿಸಿ, ಓಡಾಡಿ, ಕುಣಿದಾಡಿ, ಚಿಕ್ಕಪುಟ್ಟ ಪ್ರಯೋಗ ಮಾಡಿ, ಕಣಿವೆಯ ಶಿಲೆಗಳನ್ನು ಭೂಮಿಗೆ ತಂದು, ಅಲ್ಲಿ ಏನಿದೆ, ಏನಿಲ್ಲ ಎಂಬ ವಿಷಯಗಳನ್ನು ಕೇಳುತ್ತ ಹಲವು ದಶಕಗಳೇ ಕಳೆದಿವೆ.

ಶ್ರೀಮಂತ ದೇಶಗಳು ತಮ್ಮ ಶಕ್ತ್ಯಾನುಸಾರ ಗಗನಯಾತ್ರಿಗಳನ್ನು ಕಳಿಸಿ ತಮಗೆ ಬೇಕಾದ ಮಾಹಿತಿಯನ್ನು ಕಲೆಹಾಕಿಕೊಂಡು, ಬಹುಪಾಲು ಮುಚ್ಚಿಟ್ಟು, ಉಳಿದದ್ದನ್ನು ಜಗತ್ತಿಗೆ ಹೇಳುವುದು ರೂಢಿಯಾಗಿದೆ. ನಾವೂ ಇತ್ತೀಚೆಗೆ ನಮಗೆ ಕಾಣಿಸದ ಚಂದ್ರನ ಭಾಗದಲ್ಲಿ ಮಾನವರಹಿತ ನೌಕೆಯನ್ನಿಳಿಸಲು ಮಾಡಿದ ಪ್ರಯತ್ನ ಸ್ವಲ್ಪದರಲ್ಲಿ ವಿಫಲವಾಗಿತ್ತು. ಈ ಮಧ್ಯೆ, ವಿಶ್ವದ ಅನೇಕ ರಾಷ್ಟ್ರಗಳು ಚಂದ್ರನ ಅಂಗಳಕ್ಕೆ ಮನುಷ್ಯನನ್ನು ಕಳಿಸುವ ಯೋಜನೆ ಹಾಕಿಕೊಂಡಿವೆ. 2022ಕ್ಕೆ ನಾವು ಸಹ ಚಂದ್ರನ ನೆಲದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಉಮೇದಿನಿಂದ, ಆಯ್ದ ನಾಲ್ಕು ಜನರಿಗೆ ತರಬೇತಿಯನ್ನೂ ಪ್ರಾರಂಭಿಸಿದ್ದೇವೆ.

ಇದೇ ತಿಂಗಳ 2ರಿಂದ ಪ್ರಾರಂಭವಾಗಿರುವ ಅರ್ಜಿ ಸಲ್ಲಿಕೆ ಪ್ರಕ್ರಿಯೆ 31ರ ಮಧ್ಯರಾತ್ರಿ ಕೊನೆಗೊಳ್ಳಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಜೀವವಿಜ್ಞಾನ, ಎಂಜಿನಿಯರಿಂಗ್ ವಿಜ್ಞಾನ, ಭೌತವಿಜ್ಞಾನ, ಕಂಪ್ಯೂಟರ್ ಅಥವಾ ಗಣಿತದಲ್ಲಿ ಪರಿಣತಿ ಇರುವವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ವೈದ್ಯಕೀಯ ಕಲಿತವರಿಗೂ ಅವಕಾಶವಿದೆ.

ಇದರ ಜೊತೆಗೆ, ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಎರಡು ವರ್ಷಗಳ ಕೆಲಸದ ಅನುಭವವಿರಬೇಕು ಅಥವಾ ವಿಮಾನ ಹಾರಾಟ ಸಂಸ್ಥೆಗಳಲ್ಲಿ ಒಂದು ಸಾವಿರ ಗಂಟೆಗಳ ಕಾಲ ಜೆಟ್ ವಿಮಾನದ ಪರೀಕ್ಷಾರ್ಥ ಸ್ವತಂತ್ರ ಹಾರಾಟ ನಡೆಸಿರಬೇಕು. ಇದಲ್ಲದೆ ನಾಸಾದವರು ನಡೆಸುವ ದೀರ್ಘ ಅಂತರಿಕ್ಷ ಹಾರಾಟದ ಅನುಭವ ಹೊಂದಿ, ಕನಿಷ್ಠ ಆರರಿಂದ ಒಂದು ವರ್ಷ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ ನಂತರ, ಮುಂದಿನ ಹಂತದಲ್ಲಿ ಚಂದ್ರನೆಡೆಗೆ ಪಯಣ ಮಾಡಲು
ಅನುಮತಿ ನೀಡಲಾಗುತ್ತದೆ.

ಈಗ ಆಯ್ಕೆಯಾಗುವ ಅಭ್ಯರ್ಥಿಗಳು 2024ರಲ್ಲಿ ನಾಸಾ ಯೋಜಿಸಿರುವ ಆರ್ಟೆಮಿಸ್ ಚಂದ್ರಯಾನದ ಆಸುಪಾಸಿನ ದಿನಗಳಲ್ಲಿ ನಭಕ್ಕೆ ಚಿಮ್ಮಲ್ಪಡಲಿದ್ದಾರೆ. ಹಣಕಾಸಿನ ನೆರವು ಸರಿಯಾಗಿ ಸಿಕ್ಕರೆ 2030ರ ವೇಳೆಗೆ ಮತ್ತೆರಡು ಯಾನಗಳು ನಡೆಯಲಿದ್ದು, ಚಂದ್ರನ ಮೇಲೆ ಶಾಶ್ವತ ಮಾನವ ನಿಲ್ದಾಣವೊಂದನ್ನು ಸ್ಥಾಪಿಸುವ ಉದ್ದೇಶ ನಾಸಾಗಿದೆ.

ಗಗನಯಾತ್ರಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾದ ಸ್ಟೀವ್ ಕೊಯೆರ್ನರ್, ‘ಗಗನಯಾತ್ರಿಯಾಗುವ ಕೆಲಸ ಸುಲಭದ್ದೇನೂ ಅಲ್ಲ, ಹಲವು ಕಠಿಣ ಪರೀಕ್ಷೆಗಳಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಗುರುತ್ವರಹಿತ ವಾತಾವರಣದಲ್ಲಿ ದೀರ್ಘಕಾಲ ಇರುವುದು ಕೆಲವೊಮ್ಮೆ, ಕೆಲವರಿಗೆ ಅತ್ಯಂತ ಅಪಾಯಕರ ಎನಿಸಬಹುದು. ಆದ್ದರಿಂದ ಗಗನಯಾತ್ರಿಗಳು ತಾವು ಪ್ರತಿನಿಧಿಸುವ ಕ್ಷೇತ್ರದ ಪ್ರತಿಕೂಲ ವಾತಾವರಣದಲ್ಲಿ ಕೆಲಸ ಮಾಡಿದ ಅನುಭವವಿದ್ದರೆ, ಬಾಹ್ಯಾಕಾಶದ ಸವಾಲುಗಳನ್ನು ಸುಲಭವಾಗಿ ಎದುರಿಸಬಲ್ಲರು’ ಎಂದಿದ್ದಾರೆ.

328 ದಿನಗಳ ದಾಖಲೆಯ ದೀರ್ಘ ಅಂತರಿಕ್ಷ ವಾಸ್ತವ್ಯ ಮಾಡಿದ್ದ ಕ್ರಿಸ್ಟಿನಾ ಕೋಚ್, ಗಗನಯಾನ ಕೈಗೊಳ್ಳುವು ದಕ್ಕೂ ಮುನ್ನ ಅಂಟಾರ್ಕ್‌ಟಿಕಾದ ವಿಷಮಶೀತ ಪ್ರದೇಶದಲ್ಲಿ ತಿಂಗಳುಗಟ್ಟಲೆ ವಾಸ್ತವ್ಯ ಹೂಡಿ ಸಂಶೋಧನೆ ಕೈಗೊಂಡಿದ್ದರಿಂದ, ಅವರ ಅಂತರಿಕ್ಷ ವಾಸ್ತವ್ಯದ ಏರಿಳಿತ– ತೊಂದರೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ನಾಸಾದ 23ನೇ ತಂಡವು ಅಂತರಿಕ್ಷಯಾನದ ಅತ್ಯಗತ್ಯ ತರಬೇತಿಗೆ ಸಿದ್ಧಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT