ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ದುರ್ಬಲ ಬುನಾದಿ ಮೇಲೆ ಶಿಕ್ಷಣ ಸೌಧ

ಶೈಕ್ಷಣಿಕ ಕೌಶಲದ ತೀವ್ರ ಕೊರತೆ ಎದುರಿಸುತ್ತಿರುವ ಯುವಜನ ಚುನಾವಣೆಯಲ್ಲಿ ಅದ್ಯಾವ ವಿವೇಚನೆಯಿಂದ ಭಾಗವಹಿಸಲು ಸಾಧ್ಯ?
Published 19 ಜನವರಿ 2024, 22:25 IST
Last Updated 19 ಜನವರಿ 2024, 22:25 IST
ಅಕ್ಷರ ಗಾತ್ರ

ಕನ್ನಡ ಮಾತೃಭಾಷೆಯ 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಎರಡನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ಕೊಟ್ಟು ಓದಲು ಹೇಳಿದಾಗ, ಶೇ 26.5ರಷ್ಟು ಮಂದಿಗೆ ಸರಾಗವಾಗಿ ಓದಲು ಬರಲಿಲ್ಲ. ಅದೇರೀತಿ, ಶೇ 43.7ರಷ್ಟು ಮಕ್ಕಳಿಗೆ ಇಂಗ್ಲಿಷ್ ವಾಕ್ಯಗಳನ್ನು ಓದಲು ಬರಲಿಲ್ಲ. ಓದಲು ಬಂದವರಲ್ಲಿಯೂ ಶೇ 26.7ರಷ್ಟು ಮಕ್ಕಳಿಗೆ ತಾವು ಓದಿದ ವಾಕ್ಯಗಳ ಅರ್ಥ ಗೊತ್ತಿರಲಿಲ್ಲ. ಮೂರಂಕಿಯ ಸಂಖ್ಯೆಯೊಂದನ್ನು ಒಂದಂಕಿಯ ಸಂಖ್ಯೆಯಿಂದ ಭಾಗಿಸಲು ಹೇಳಿದಾಗ, ಶೇ 56.7ರಷ್ಟು ಮಕ್ಕಳು ಮಾತ್ರ ಅದನ್ನು ಮಾಡುವುದರಲ್ಲಿ ಯಶಸ್ವಿಯಾದರು.

ಯಾವ ಸಾಕ್ಷರತಾ ಕೌಶಲಗಳನ್ನು, ಹೆಚ್ಚೆಂದರೆ ಮೂರನೇ ತರಗತಿಯಲ್ಲಿ ಕಲಿತು ಮುಗಿಸಬೇಕಾಗಿತ್ತೋ ಅವು ಸುಮಾರು ಮಕ್ಕಳಲ್ಲಿ ಹತ್ತನೇ ತರಗತಿಯಲ್ಲಿಯೂ ಕಂಡುಬರಲಿಲ್ಲ.

ಇವು ‘ಆ್ಯನ್ಯುಯಲ್ ಸ್ಟೇಟಸ್ ಆಫ್‌ ಎಜುಕೇಷನ್ ರಿಪೋರ್ಟ್ (ಏಸರ್)- ಬಿಯಾಂಡ್ ಬೇಸಿಕ್ಸ್’ ಎಂಬ ಸಮೀಕ್ಷಾ ವರದಿಯಲ್ಲಿ ಕಂಡುಬಂದ ಅಂಕಿಅಂಶಗಳು. ಈ ಸಮೀಕ್ಷೆಯನ್ನು ಪ್ರಥಮ್ ಎಂಬ ಸ್ವಯಂಸೇವಾ ಸಂಸ್ಥೆಯು 2005ರಿಂದ ಎರಡು ವರ್ಷಗಳಿಗೊಮ್ಮೆ ನಡೆಸುತ್ತಾ ಬಂದಿದೆ. 2023ರ ಸಮೀಕ್ಷೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ 26 ರಾಜ್ಯಗಳಲ್ಲಿನ 28 ಗ್ರಾಮಾಂತರ ಜಿಲ್ಲೆಗಳ 14-18ರ ವಯೋಮಾನದ 34,745 ವಿದ್ಯಾರ್ಥಿಗಳನ್ನು ಒಳಗೊಳ್ಳಲಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯ ನಡೆಸುವ ನ್ಯಾಷನಲ್ ಅಚೀವ್‍ಮೆಂಟ್ ಸರ್ವೆ ಮತ್ತು ಏಸರ್ ನಡೆಸುವ ಸಮೀಕ್ಷೆಯ ಕಾರ್ಯವಿಧಾನಗಳು ಸ್ವಲ್ಪಮಟ್ಟಿಗೆ ಭಿನ್ನವಾಗಿದ್ದರೂ ಗ್ರಾಮೀಣ ಭಾರತದಲ್ಲಿನ ಶೈಕ್ಷಣಿಕ ಪರಿಸ್ಥಿತಿಯ ಕುರಿತು ಆ ಸಮೀಕ್ಷೆಯೂ ಇಂಥ ಕೊರತೆಗಳನ್ನು ಎತ್ತಿತೋರಿಸುತ್ತದೆ.

ರಾಜ್ಯ ಶಿಕ್ಷಣ ಇಲಾಖೆಯ ಶಾಲಾ ಪಠ್ಯಪುಸ್ತಕಗಳ ಮುನ್ನುಡಿಯಲ್ಲಿ, ‘ಶಾಲಾ ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು’, ‘ಶಿಕ್ಷಣವನ್ನು ಇಂದಿನ ಮತ್ತು ಭವಿಷ್ಯದ ಜೀವನಾವಶ್ಯಕತೆಗಳಿಗೆ ಹೊಂದುವಂತೆ ಮಾಡುವುದು’, ‘ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ’, ‘ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿಪಡಿಸುವುದು’ ಎಂಬಂತಹ ಮಹತ್ವಾಕಾಂಕ್ಷೆಯ ಧ್ಯೇಯಗಳನ್ನು ಘೋಷಿಸಲಾಗಿದೆ. ಆದರೆ, ಇಲಾಖೆಯು ರೂಪಿಸುವ ಪಠ್ಯಪುಸ್ತಕಗಳಲ್ಲಾಗಲೀ ಬೋಧನಾ ಕ್ರಮದಲ್ಲಾಗಲೀ ಈ
ಉದ್ದೇಶ ಈಡೇರಿಕೆಗೆ ಅಗತ್ಯವಾದ ತಂತ್ರಗಳು ಕಾಣಿಸುವುದಿಲ್ಲ.

ಉಲ್ಲೇಖಿತ ಸಮೀಕ್ಷೆಯಲ್ಲಿ ಹೇಳಿರುವ ಹಾಗೆ, 9ನೇ ತರಗತಿಯ ಕಾಲುಭಾಗದಷ್ಟು ವಿದ್ಯಾರ್ಥಿಗಳಿಗೆ 2ನೇ ತರಗತಿಯ ಕನ್ನಡ ಪಾಠವನ್ನೂ ಓದಲು ಬರುವುದಿಲ್ಲ. ಇಂಥ ದುರ್ಬಲವಾದ ಭಾಷಾ ಮಾಧ್ಯಮದ ಮೂಲಕವೇ ಈ ಮಕ್ಕಳು ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಕಲಿಯುತ್ತಾರೆ, ಪಾಸೂ ಆಗುತ್ತಾರೆ ಎನ್ನುವುದು ಒಂದು ‘ಪವಾಡ’ವೇ ಸರಿ.

ಇನ್ನು, ಶಾಲೆಯಲ್ಲಿನ ಕಲಿಕೆ ಮುಂದಿನ ಜೀವನದಲ್ಲಿ ಪ್ರಯೋಜನಕ್ಕೆ ಬರುವ ವಿಚಾರವನ್ನು ನೋಡೋಣ. ಏಸರ್ ಸಮೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ, ಇಷ್ಟು ಗಂಟೆಗೆ ಮಲಗಿದ ಮಗು ಇಷ್ಟು ಗಂಟೆಗೆ ಎದ್ದಿತು ಎಂದಾದರೆ, ಅದು ಒಟ್ಟು ಎಷ್ಟು ಗಂಟೆ ನಿದ್ರೆ ಮಾಡಿತು ಎಂದು ಲೆಕ್ಕಹಾಕಿ ಹೇಳಲು ಶೇ 45ರಷ್ಟು ಮಕ್ಕಳಿಗೆ ಮಾತ್ರ ಸಾಧ್ಯವಾಯಿತು. ಒಂದು ಅಳತೆಪಟ್ಟಿಯ ಮೇಲೆ ಒಂದು ವಸ್ತುವನ್ನು ‘0’ಯಿಂದ ಇರಿಸಿ, ಅದು ಎಷ್ಟು ಇಂಚು ಉದ್ದ ಇದೆ ಹೇಳಿ ಎಂದರೆ, ಶೇ 85ರಷ್ಟು ಮಕ್ಕಳು ಸರಿಯಾಗಿ ಹೇಳಿದರು. ಅದೇ ವಸ್ತುವನ್ನು ಸ್ಕೇಲಿನ ಮೇಲೆ ಬೇರೆ ಕಡೆ ಇಟ್ಟು ಕೇಳಿದಾಗ, ಶೇ 40ರಷ್ಟು ಮಕ್ಕಳು ಮಾತ್ರ ಸರಿಯಾಗಿ ಹೇಳಿದರು. ನಿರ್ಜಲೀಕರಣ ನಿವಾರಣೆಗೆ (ಡೀಹೈಡ್ರೇಷನ್‌) ಕೊಡುವ ಓಆರ್‌ಎಸ್ ಪ್ಯಾಕೆಟ್‌ನ ಮೇಲೆ, ಅದನ್ನು ಬಳಸಲು ಕೊಟ್ಟಿರುವ ಸೂಚನೆಗಳನ್ನು ಓದಲು ಹೇಳಿದಾಗ, 11ನೇ ತರಗತಿಯ ವಿದ್ಯಾರ್ಥಿ
ಗಳಲ್ಲಿ ಶೇ 65.1ರಷ್ಟು ಮಕ್ಕಳಿಗೆ ಮಾತ್ರ ಓದಲು ಸಾಧ್ಯವಾಯಿತು.

ಯಾವುದೇ ದೇಶದ ಯುವಜನ, ಲೋಕತಂತ್ರದ ಪೋಷಕರು ಮತ್ತು ಸಂರಕ್ಷಕರು. ಒಂದು ಅಂದಾಜಿನ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಾರು 15 ಕೋಟಿ ಯುವಜನ ತಮ್ಮ ಮೊದಲ ಮತಾಧಿಕಾರವನ್ನು ಚಲಾಯಿಸಲಿದ್ದಾರೆ. ಎಲ್ಲಾ ಪಕ್ಷದವರು ತಮ್ಮ ಗೆಲುವಿಗಾಗಿ ಈ ನಾಗರಿಕ ವರ್ಗದ ಮೇಲೆ ಕಣ್ಣಿಟ್ಟಿರುತ್ತಾರೆ. ಇವರನ್ನು ಓಲೈಸಲು ಹಲವಾರು ತಂತ್ರಗಳನ್ನು ಹೂಡುತ್ತಾರೆ. ಮೇಲೆ ಉಲ್ಲೇಖಿಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಯುವಜನರಲ್ಲಿ ಲಕ್ಷಾಂತರ ಮಂದಿಗೆ ಮತದ ಹಕ್ಕು ದೊರಕುತ್ತದೆ. ಮೂಲಭೂತ ಶೈಕ್ಷಣಿಕ ಕೌಶಲದ ತೀವ್ರ ಕೊರತೆ ಇರುವ ಈ ಯುವಜನ ಚುನಾವಣೆಯಲ್ಲಿ ಅದ್ಯಾವ ವಿವೇಚನೆಯಿಂದ ಭಾಗವಹಿಸಲು ಸಾಧ್ಯ? ಇಂಥ ಮತದಾರರನ್ನು ಹಲವಾರು ಆಮಿಷಗಳಿಗೆ ಬಲಿಯಾಗಿಸಿ ವೋಟನ್ನು ಗಿಟ್ಟಿಸಲು ಪ್ರತಿಯೊಬ್ಬ ಅಭ್ಯರ್ಥಿ ಹೊಂಚುಹಾಕುತ್ತಾರೆ. ಶಾಲಾ ಶಿಕ್ಷಣವೇ ಇಷ್ಟೊಂದು ಅಧೋಗತಿಯಲ್ಲಿ ಇರುವಾಗ, ಇಂಥ ದುರ್ಬಲ ಬುನಾದಿಯ ಮೇಲೆ ಕಟ್ಟಲಾಗುವ ದೇಶದ ಲೋಕತಂತ್ರವು ಇನ್ನೆಷ್ಟು ಸದೃಢವಾಗಿರಲು ಸಾಧ್ಯ?

ಇದೆಲ್ಲ ಗೊತ್ತಿದ್ದರೂ ಸರ್ಕಾರಗಳು ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಒದಗಿಸಬೇಕಾದ ಹೆಚ್ಚು ಹೆಚ್ಚು ಅನುದಾನ, ಮೂಲ ಸೌಕರ್ಯಗಳ ಪೂರೈಕೆ, ಶಿಕ್ಷಕರ ತರಬೇತಿ ಮತ್ತು ನೇಮಕಾತಿಯ ಕಡೆಗೆ ಗಂಭೀರವಾಗಿ ಗಮನಹರಿಸದೇ ಇರುವುದು, ಇದ್ದಷ್ಟು ಅನುದಾನವನ್ನೇ ಕಡಿತಗೊಳಿಸುವುದು ದೀರ್ಘಾ
ವಧಿಯಲ್ಲಿ ಅತ್ಯಂತ ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT