ಸೋಮವಾರ, ಆಗಸ್ಟ್ 15, 2022
27 °C
ಕ್ಷುದ್ರಗ್ರಹಗಳೆಂಬ ಅನಪೇಕ್ಷಿತ ಅತಿಥಿಗಳು ನಮ್ಮ ಮೇಲಿನ ತೂಗುಗತ್ತಿಗಳು

ಸಂಗತ: ಕ್ಷುದ್ರಗ್ರಹ ನಿಗ್ರಹಕ್ಕೆ ನೇಸರನ ನೆರವು?

ಬಿ.ಎಸ್‌.ಭಗವಾನ್ Updated:

ಅಕ್ಷರ ಗಾತ್ರ : | |

Prajavani

ಅಸಂಖ್ಯ ಕಿರು ಆಕಾಶಕಾಯಗಳು ಭುವಿಯತ್ತ ಬರುತ್ತವಲ್ಲ, ವಿಮಾನಕ್ಕೆ ಹಕ್ಕಿ ಡಿಕ್ಕಿಯಾದಂತೆ ಅವು ಅಪ್ಪಳಿಸಿ ಏನಾದರೂ ಅನಾಹುತವಾದರೆ? ಅವು ಹೆಸರಿಗಷ್ಟೇ ‘ಕ್ಷುದ್ರಗ್ರಹ’ಗಳು. ಪತನಗೊಂಡರೆ ಆಸುಪಾಸಿನಲ್ಲಿ ಸೃಷ್ಟಿಸುವ ರಾದ್ಧಾಂತವೋ ಮನುಕುಲಕ್ಕೆ ತಿಳಿದಿರುವ ಯಾವುದೇ ವಿಪತ್ತಿಗಿಂತಲೂ ಬಹು ರೌದ್ರ, ಅತಿ ಘೋರ.

ಕ್ಷುದ್ರಗ್ರಹಗಳು ಸೌರವ್ಯೂಹದ ಸದಸ್ಯರೇ. ವಿಶೇಷವಾಗಿ ಮಂಗಳ ಮತ್ತು ಗುರುಗ್ರಹದ ನಡುವೆ ಅವು ದಟ್ಟೈಸಿದ್ದು, ವಿವಿಧ ಪಥಗಳಲ್ಲಿ ಸೂರ್ಯನನ್ನು ಬಳಸುತ್ತವೆ. ಹಾಗಾಗಿ ಈ ವ್ಯೋಮ ವಲಯವನ್ನು ‘ಕ್ಷುದ್ರಗ್ರಹಗಳ ಅಡ್ಡ’ ಎನ್ನೋಣ! ಇದೇ ವರ್ಷ ಅಕ್ಟೋಬರ್‌ನಲ್ಲಿ ಡಿಡಿಮೊಸ್ ಎಂಬ 550 ಮೀಟರ್ ಅಡ್ಡಗಲದ ಕ್ಷುದ್ರಗ್ರಹವೊಂದು ಧರೆಯ ಬಳಿ ಸುಳಿಯುವ ಸಾಧ್ಯತೆಯಿದೆ. ಇವ ತನ್ನ ಸುತ್ತ ಬಳಸುವ 150 ಮೀಟರ್ ಅಡ್ಡಗಲದ ‘ಮರಿಕಾಯ’ದ ಸಮೇತ ಬರುವವ ಎನ್ನುವುದೇ ಹೆಚ್ಚುವರಿ ಆತಂಕ. ಕೊಲೆಗಡುಕನನ್ನು ಹತ್ತಿಕ್ಕುವುದರ ಮೊದಲ ಹಂತವೇ ಅವನನ್ನು ಗುರುತಿಸುವುದು ತಾನೆ? ‘ನಾಸಾ’ದ ವಿಜ್ಞಾನಿಗಳು ಡಿಡಿಮೊಸ್‍ನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದಾರೆ.

ಯಾವುದೇ ಒಂದು ಆಕಾಶಕಾಯ ಗುರುತ್ವ ಪ್ರಭಾವಿತ ಸಂಬದ್ಧ ರಚನೆ. ಹಗಲಿರುಳೆನ್ನದೆ ಉಲ್ಕೆಗಳೆಂಬ ಸಣ್ಣ ಪುಟ್ಟವು ಭೂಮಿಯತ್ತ ಬಂದು ವಾಯುಮಂಡಲದೊಂದಿಗೆ ಘರ್ಷಿಸಿ ಸಿಡಿದುಬೀಳುತ್ತಿರುತ್ತವೆ. ಹಾಗಾಗಿ ಆಕಾಶಕಾಯಗಳು ದಿಕ್ಕೆಟ್ಟು ಭೂಮಿಗೆ ಯಾವುದೇ ಕ್ಷಣ ಬಡಿಯುವುದು ಸಾಮಾನ್ಯ, ಸಂಭಾವ್ಯ. ಕ್ಷುದ್ರಗ್ರಹಗಳೆಂಬ ಆ ಅನಪೇಕ್ಷಿತ ಅತಿಥಿಗಳು ನಿಜಕ್ಕೂ ನಮ್ಮ ಮೇಲಿನ ತೂಗುಗತ್ತಿಗಳು. ಏನೂ ಆಗದು, ಬಿಡಿ ಎಂದುಕೊಂಡರೂ ಸ್ವಲ್ಪಮಟ್ಟಿಗಾದರೂ ಅವು ನಮ್ಮ ನಿರಾಳತೆ ಕಸಿದಿವೆ.

2016ರಲ್ಲಿ ವಿಶ್ವಸಂಸ್ಥೆ ನಿರ್ಣಯಿಸಿದಂತೆ, ಪ್ರತಿ ವರ್ಷ ಜೂನ್ 30ರಂದು ‘ವಿಶ್ವ ಕ್ಷುದ್ರಗ್ರಹಗಳ ದಿನ’ ಆಚರಿಸಲಾಗುತ್ತಿದೆ. ಜನಸಾಮಾನ್ಯರಲ್ಲಿ ಆಗಸದ ಪ್ರಜ್ಞೆ ಯನ್ನು ಪುಟಿದೆಬ್ಬಿಸುವುದೇ ಅಭಿಯಾನದ ಉದ್ದೇಶ.

30.6.1908, ಬೆಳಿಗ್ಗೆ 7. 14ರ ಸಮಯ. ರಷ್ಯಾದ ಸೈಬೀರಿಯ ಪ್ರಾಂತ್ಯದ ತುಂಗಾಸ್ಕ ನದಿಯ ಸಮೀಪ 8 ಕಿ.ಮೀ. ಎತ್ತರದಲ್ಲಿ ದಿಢೀರನೆ ಭಾರಿ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸುತ್ತಲ 100 ಚದರ ಕಿ.ಮೀ. ವ್ಯಾಪ್ತಿಯ ಸುಮಾರು ಎಂಟು ಕೋಟಿ ದೇವದಾರು ಮರಗಳು ಗಳಿಗೆಯಲ್ಲಿ ಸುಟ್ಟು ಕರಕಲಾಗಿದ್ದವು. ನಿರ್ಜನ ಪ್ರದೇಶವಾಗಿದ್ದರಿಂದ ಮೂರ್ನಾಲ್ಕು ಮಂದಿ ಮಾತ್ರವೆ ಜೀವತೆತ್ತರೇನೊ? ಸರಿ, ಈ ಪರಿ ಸಿಡಿದ ಕಾಯ 40 ಮೀಟರ್‌ ಅಗಲದ ಕ್ಷುದ್ರಗ್ರಹ, ಸುದೈವವಶಾತ್ ಗಾಳಿಯೊಡನೆ ಘರ್ಷಿಸಿ ಚೆಲ್ಲಾಪಿಲ್ಲಿಯಾಯಿತು. ನೆಲಕ್ಕಪ್ಪಳಿಸಿದ್ದರೆ ಆಗಲಿದ್ದ ಘೋರ ಅನಾಹುತ ಊಹಾತೀತ. ‘ತುಂಗಾಸ್ಕ ಘಟನೆ’ ಎಂದೇ ಈ ಆಕಸ್ಮಿಕವು ಇತಿಹಾಸದಲ್ಲಿ (ಕು)ಖ್ಯಾತವಾಯಿತು.

ಕೇವಲ ಒಂದು ಕಿ.ಮೀ. ವ್ಯಾಸದ ಕ್ಷುದ್ರಕಾಯ ತಾಸಿಗೆ 60,000 ಕಿ.ಮೀ. ವೇಗದಲ್ಲಿ ನೆಲಕ್ಕಪ್ಪಳಿಸಿ ದಿಢೀರನೆ ಎಬ್ಬಿಸುವ ದೂಳು ಮತ್ತು ಕಲ್ಲು ಚೂರುಗಳು ಹಲವು ದಿನಗಳವರೆಗೆ ಸೂರ್ಯನನ್ನೇ ಮರೆಮಾಚಿರುತ್ತವೆ. ಅಷ್ಟೇ ಅಲ್ಲ, ಅಂತರಗ್ರಹ ಆಗಸದಲ್ಲಿ ಆ ತುಣುಕುಗಳು ‘ತೇಲುವ ಕಸ’. ಇನ್ನು ಸಾಗರ ಪ್ರದೇಶದಲ್ಲಿ ಬಿದ್ದರೆ ಗೊತ್ತೇ ಇದೆ, ಧರೆಯನ್ನೇ ಆಪೋಶನ ತೆಗೆದುಕೊಳ್ಳುವ ಭೀಕರ ಸುನಾಮಿ ಕಟ್ಟಿಟ್ಟ ಬುತ್ತಿ.

6.6 ಕೋಟಿ ವರ್ಷಗಳ ಹಿಂದೆ 10 ಕಿ.ಮೀ. ವ್ಯಾಸದ ಕ್ಷುದ್ರಗ್ರಹ ಭೂಮಿಗಪ್ಪಳಿಸಿ ಡೈನೊಸಾರ್ ಸಂಕುಲ ಸೇರಿದಂತೆ ಭೂಮಿಯ ಮುಕ್ಕಾಲು ಪಾಲು ಪ್ರಾಣಿವೈವಿಧ್ಯವನ್ನು ನಿರ್ನಾಮಗೊಳಿಸಿತು ಎನ್ನಲಾಗಿದೆ. ಭೂಮಿಗೆ ಅಪ್ಪಳಿಸುವ ಮುನ್ನವೇ
ಕ್ಷುದ್ರಗ್ರಹಗಳನ್ನು ನಿಗ್ರಹಿಸುವ ಯೋಜನೆಗಳನ್ನು ‘ನಾಸಾ’ ರೂಪಿಸಿದೆ. ವಿನಾಶಕಾರಿಯಾದವನ್ನು ಬೇಟೆಯಾಡಿ ಅವುಗಳಿಂದ ಆಗಬಹುದಾದ ಕಠೋರ ರಾದ್ಧಾಂತ ಮುಂಗಾಣುವುದು ‘ನಾಸಾ’ದ ಸಂಕಲ್ಪ.

ಭೂಮಿಯ ಹತ್ತಿರಕ್ಕೆ ಬರಲೆತ್ನಿಸುವ ಆಗಂತುಕ ಕಾಯಗಳ ಹರಣ ಕಾರ್ಯಾಚರಣೆ ಖಗೋಳಯಾತ್ರಿಗಳ ಹೊಣೆಯಲ್ಲ. ಅದು ಸಿನಿಮಾಗಳಲ್ಲಷ್ಟೆ! ಅಲ್ಲಿ ನಾಯಕ ತಾನು ಪಯಣಿಸುವ ಗಗನನೌಕೆಯ ಕಿಂಡಿಯ ಮೂಲಕ ದಾಳಿಯಿಡಲು ಭೂಮಿಯತ್ತ ಹೊರಟಿರುವ ಕಾಯವನ್ನು ಹೊಂಚು ಹಾಕಿ ಛಿದ್ರಗೊಳಿಸುತ್ತಾನೆ! ಈ ದಿಸೆಯಲ್ಲಿ ಒಂದು ಸಿದ್ಧಾಂತವಿದೆ. ಸೌರವ್ಯೂಹ ರೂಪುಗೊಳ್ಳುವ ಕಾಲಕ್ಕೆ ಮಂಗಳ ಮತ್ತು ಗುರುಗ್ರಹಗಳ ಮಧ್ಯೆ ಒಂದು ಗ್ರಹವಿತ್ತು. ಎಷ್ಟಾದರೂ ಗುರು ದೈತ್ಯ. ಸ್ವಲ್ಪದರಲ್ಲೇ ತಾರೆಯಾಗುವ ಅವಕಾಶ ಕಳೆದುಕೊಂಡ ನತದೃಷ್ಟ ಅನ್ನಿ. ಆ ಅಮಾಯಕ ಗ್ರಹದ ಕಕ್ಷೆಗೆಡಿಸಿ ಅದನ್ನು ನುಚ್ಚುನೂರಾಗಿಸಿ ಮಿಲಿಯಾಂತರ ಬಂಡೆಗಳಾಗಿಸಿರಬಹುದು. ಗ್ರಹಗಳ ಬಳಿ ಸುಪ್ತವಾಗಿರುವುದು ಕ್ಷುದ್ರಗ್ರಹಗಳ ಜಾಯಮಾನ. ಅವುಗಳಲ್ಲಿ ಜೀವವೈವಿಧ್ಯವಿಲ್ಲ. ಅವಕ್ಕೆ ಉಪಗ್ರಹಗಳಿಲ್ಲ. ಭೂಮಿಯತ್ತ ಧಾವಿಸುವ ಅಪಾಯಕಾರಿ ಕ್ಷುದ್ರಗ್ರಹಗಳನ್ನು ಗಗನ ನೌಕೆಗಳಿಂದ ಡಿಕ್ಕಿ ಹೊಡೆಸಿ ಅವುಗಳ ಪಥಗಳನ್ನು ಬದಲಿಸುವುದು ಉಪಾಯ.

ಮ್ಯಾಡ್ರಿಡ್ ತಾಂತ್ರಿಕ ವಿಶ್ವವಿದ್ಯಾಲಯದ ಸಿ.ಬಾಂಬ್ರಡೆಲ್ಲಿ ಹಾಗೂ ಜಿ.ಪಿಲೇಜ್ ಎಂಬ ವಿಜ್ಞಾನಿಗಳು ಒಂದು ಹೊಸ ತಂತ್ರ ರೂಪಿಸಿದ್ದಾರೆ. ಸಂಶೋಧನಾರ್ಥವಾಗಿ ಸುಳಿದಾಡುವ ಗಗನನೌಕೆಯಲ್ಲಿ ‘ಐಯಾನ್ ಥ್ರಸ್ಟರ್’ ಎಂಬ ಉಪಕರಣವಿರಿಸುವುದು, ವಿನಾಶಕಾರಿ ಕ್ಷುದ್ರಗ್ರಹವನ್ನು ಗುರಿಯಾಗಿಸಿ ಅದರ ಮೇಲ್ಮೈನಲ್ಲಿ ನೋದಕ ಬಲ ಸೃಷ್ಟಿಸುವುದರ ಮೂಲಕ ಕ್ಷುದ್ರಗ್ರಹದ ದಿಕ್ಕು ತಪ್ಪಿಸುವುದು, ಸೌರಶಕ್ತಿಯನ್ನು ಬಳಸಿಕೊಂಡು ಆಗಂತುಕ ಕಾಯಗಳಿಗೆ ನೂಕು ಬಲ ಒದಗಿಸುವ ಚಿಂತನೆಯೂ ನಡೆದಿದೆ. ಲೇಸರ್ ಬಳಸಿ ಕ್ಷುದ್ರಗ್ರಹವನ್ನೇ ಕರಕಲಾಗಿಸುವ ಆಲೋಚನೆಯಂತೂ ಭರ್ಜರಿ ಮಹತ್ವ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು