ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪದ ಊರುಗೋಲು ಎಲ್ಲಿವರೆಗೆ?

ವಿಮೋಚನೆಯ ದಾರಿ ಕಾಣದ ದಮನಿತ ಸಮುದಾಯಗಳು ತಮ್ಮ ಇಂದಿನ ದುಃಸ್ಥಿತಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ
Last Updated 1 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ದಮನಿತ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ಕನಸು ಕರ್ನಾಟಕದಲ್ಲಿ ಸಂಪೂರ್ಣವಾಗಿ ಹಿನ್ನೆಲೆಗೆ ಸರಿದು ಎಷ್ಟೋ ವರ್ಷಗಳಾಗಿವೆ. ಎಪ್ಪತ್ತು ವರ್ಷ ದಾಟಿರುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಆರೋಗ್ಯಕರ ಬೆಳವಣಿಗೆಯಲ್ಲ. ಅದರಲ್ಲೂ ವಿಶೇಷವಾಗಿ 1983ರ ನಂತರದ ಕರ್ನಾಟಕದ ರಾಜಕೀಯ ಚುನಾವಣೆಗಳು, ಅಧಿಕಾರದ ಗದ್ದುಗೆಯನ್ನು ವಶಪಡಿಸಿಕೊಳ್ಳಲು ಫ್ಯೂಡಲ್ ಸಮುದಾಯಗಳ ನಡುವಿನ ಹೋರಾಟ ಎಂದು ಚರಿತ್ರೆ ಹೇಳುತ್ತದೆ. ಈ ಹೋರಾಟ ಯಾವುದೇ ತಾತ್ವಿಕ ಸಿದ್ಧಾಂತಗಳಿಗಾಗಲೀ ಅಥವಾ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ರಚನಾತ್ಮಕ ರಾಜಕೀಯ ವ್ಯವಸ್ಥೆಯ ಅನುಷ್ಠಾನಕ್ಕಾಗಲೀ ಅಲ್ಲ. ಅಧಿಕಾರದ ಪಾರಮ್ಯಕ್ಕಾಗಿ. ಈಗಿನ ಚುನಾವಣೆಯೂ ಇದಕ್ಕೆ ಹೊರತಲ್ಲ.

ಸಂಖ್ಯಾಬಲವಿಲ್ಲದ ಕೆಳ ಸಮುದಾಯಗಳು ಸಾಮಾಜಿಕ ನ್ಯಾಯದಿಂದ ವಂಚಿತವಾಗುತ್ತಲೇ ಇರುತ್ತವೆ. ರಾಜಕೀಯ ಆಸರೆಯಿಲ್ಲದ ದಮನಿತ ಸಮುದಾಯಗಳು ಬದುಕುತ್ತಿರುವುದು ಪರಾವಲಂಬಿ ವ್ಯವಸ್ಥೆಯಲ್ಲಿ. ಹಾಗೆಂದು ರಾಜಕೀಯ ಪ್ರಾತಿನಿಧ್ಯವೊಂದೇ ಎಲ್ಲ ಶಾಪಕ್ಕೂ ವಿಮೋಚನೆಯ ಅಸ್ತ್ರವೆಂದು ಭಾವಿಸಬೇಕಿಲ್ಲ. ಆದರೆ, ಅದು ಒಂದು ಮಾರ್ಗ ಅಷ್ಟೆ. ಜಾತಿ ವ್ಯವಸ್ಥೆಯ ಕಠಿಣ ರೂಢಿಗಳು ದಮನಿತ ಸಮುದಾಯಗಳನ್ನು ಹೆಚ್ಚು ಪರಾವಲಂಬಿಗಳನ್ನಾಗಿಸಿವೆ. ಇಂಥ ವ್ಯವಸ್ಥೆಯಿಂದ ವಿಮೋಚನೆಗೊಳ್ಳುವುದೇ ಈ ಎಲ್ಲ ಜಟಿಲ ಪ್ರಶ್ನೆಗಳಿಗೆ ಇರುವ ಉತ್ತರ.

ಬಿ.ಆರ್‌.ಅಂಬೇಡ್ಕರ್ ಅವರು ಕಂಡುಕೊಂಡ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ವಿಮೋಚನೆಗೊಳ್ಳುವ ಪರಿಪೂರ್ಣತೆಯ ನುಡಿಗಟ್ಟು ದಲಿತ ಸಮುದಾಯವನ್ನು ಹೊರತುಪಡಿಸಿ, ಇತರ ದಮನಿತ ಸಮುದಾಯಗಳನ್ನು ಹೆಚ್ಚು ಆಕರ್ಷಿಸಲಿಲ್ಲ ಎನ್ನುವುದು ಕೌತುಕದ ಸಂಗತಿ. ಒಂದು ಬಗೆಯ ಸಾಮಾಜಿಕ ಶಿಕ್ಷಣದ ಕೊರತೆಯಿಂದಾಗಿ, ಜಾತಿ ವ್ಯವಸ್ಥೆಯಲ್ಲಿ ನಲುಗುತ್ತಿರುವ ಸಣ್ಣ ಸಣ್ಣ ಅವಮಾನಿತ ಸಮುದಾಯಗಳೆಲ್ಲ ಒಂದೇ ಎನ್ನುವ ವಿಶಾಲ ತಾತ್ವಿಕ ದರ್ಶನವನ್ನು ಇವು ಪಡೆದುಕೊಳ್ಳಲಿಲ್ಲ. ತಮ್ಮ ಇಂದಿನ ದುಃಸ್ಥಿತಿಗೆ ಕಾರಣವಾಗಿರುವ ಜಾತಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಆಲೋಚನೆ, ಕ್ರಿಯಾಶೀಲತೆ ಅಲೆಮಾರಿಗಳನ್ನೂ ಒಳಗೊಂಡ ದಮನಿತ ಸಮುದಾಯಗಳ ಅರಿವಿಗೆ ಬರಬೇಕಾಗಿದೆ. ತಮ್ಮ ಬೆನ್ನಹಿಂದೆ ಹುಟ್ಟಿದ ಇತರ ಕೆಳಜಾತಿಗಳ ಸಾಮಾಜಿಕ ಸ್ಥಿತಿಗತಿಯ ಸ್ವರೂಪ ಒಂದೇ ಆಗಿದ್ದರೂ ಈ ಸಮುದಾಯಗಳು ಪರಸ್ಪರ ಒಗ್ಗೂಡದೆ ದ್ವೀಪಗಳಂತೆ ಉಳಿದುಬಿಟ್ಟಿವೆ. ಈ ಹಿನ್ನೆಲೆಯಲ್ಲಿ, ದಿಕ್ಕೆಟ್ಟ ಸಮುದಾಯಗಳನ್ನು ಜೋಡಿಸುವ ಪ್ರಯತ್ನವೂ ನಡೆಯಬೇಕಾಗಿದೆ.

ಮೇಲು ಸಂಸ್ಕೃತಿಯಲ್ಲಿರುವ ಜಾತಿ ಪದ್ಧತಿಯ ರೂಢಿಯನ್ನು ತಮ್ಮ ಸಹ ಸಮುದಾಯಗಳ ಮೇಲೆ ಪ್ರಯೋಗಿಸುವ ವಿಲಕ್ಷಣ ಮನಸ್ಥಿತಿಯೂ ಇವರಿಗೆ ಬಂದುಬಿಟ್ಟಿದೆ. ಕ್ಷೌರಿಕ ಸಮುದಾಯದವರು ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುವುದು, ಗೊಲ್ಲರು ದಲಿತರನ್ನು ಹಟ್ಟಿಗಳಿಂದ ಆಚೆ ನಿಲ್ಲಿಸುವುದು, ದಲಿತರು ದಕ್ಕಲಿಗರನ್ನು ತಮ್ಮ ಹಟ್ಟಿಗೆ ಸೇರಿಸದಿರುವುದು, ಇವರೆಲ್ಲರೂ ಸೇರಿ ಕೊರಚ ಸಮುದಾಯದವರನ್ನು ಆಚೆ ತಳ್ಳಿರುವುದು; ಇವೆಲ್ಲಾ ಭಾರತದ ಜಾತಿ ಪದ್ಧತಿಯಲ್ಲಿ ಆಳವಾಗಿ ಬೇರೂರಿರುವ ಪ್ರತ್ಯೇಕಿಸುವ ಆಚರಣೆಗಳು. ಅತ್ಯಂತ ತಳದಲ್ಲಿರುವ ಈ ಸಮುದಾಯಗಳು ತಮ್ಮ ಸಾಂಸ್ಕೃತಿಕ ನೆಲೆಯಿಂದ ದೂರ ಸರಿಯುತ್ತಾ, ಪ್ರಚಲಿತದಲ್ಲಿ ಅಸ್ತಿತ್ವದಲ್ಲಿರುವ ತಮ್ಮದಲ್ಲದ ಸಾಂಸ್ಕೃತಿಕ ನಡಾವಳಿಗಳನ್ನು ಜಡವಾಗಿ ಸ್ವೀಕರಿಸುತ್ತಿವೆ. ಇದೇ ಈ ಹೊತ್ತಿನ ಆತಂಕ.

ಅಸ್ಪೃಶ್ಯತೆಯ ಕಠೋರ ಆಚರಣೆ, ಏಕರೂಪ ಸಂಸ್ಕೃತಿ ಹೇರಿಕೆಯಂತಹ ಕುರೂಪಗಳನ್ನು ಹೊಂದಿದ್ದರೂ ‘ನಾವೆಲ್ಲಾ ಹಿಂದೂ’ ಎಂಬ ಮೋಹದ ಮಾತುಗಳು ಆತ್ಮವಂಚನೆಯಿಂದ ಕೂಡಿವೆ. ದಮನಿತ ಸಮುದಾಯಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಬಳಸಿಕೊಳ್ಳುವ ಕುಶಲ ಕಲೆಯನ್ನು ಮೇಲು ಸಮುದಾಯಗಳು ಕರಗತ ಮಾಡಿಕೊಂಡಿವೆ. ಕೆಳ ಸಮುದಾಯಗಳ ಮಿದುಳಿನಲ್ಲಿ ಧರ್ಮ, ಅನ್ಯಮತದ ಬಗೆಗೆ ದ್ವೇಷ ತುಂಬಿ ಅವರನ್ನು ಬಲಿಪಶುಗಳಂತೆ ಬಳಸಿಕೊಳ್ಳುತ್ತಿವೆ. ಪ್ರಚೋದನೆಯಿಂದ ಕೋಮುಗಲಭೆಗಳಲ್ಲಿ ಭಾಗಿಯಾಗುವವರು, ದೊಂಬಿ, ಹತ್ಯೆಯಂಥ ಪ್ರಕರಣಗಳಲ್ಲಿ ಅಪರಾಧಿಗಳಾಗುವವರು ಈ ಸಮುದಾಯಗಳ ಯುವಕರೇ ಆಗಿರುತ್ತಾರೆ. ಇದರಿಂದ ಇವರ ಕುಟುಂಬದ ಮೇಲೆ ಉಂಟಾಗಿರುವ ಭೀಕರ ಪರಿಣಾಮಗಳನ್ನು ಸಾಮಾಜಿಕ, ಆರ್ಥಿಕ ಅಧ್ಯಯನದ ಕೋಷ್ಟಕಗಳು ತಿಳಿಸುತ್ತವೆ.ಚುನಾವಣಾ ರಾಜಕಾರಣವೂಅಸಂಘಟಿತ ಜಾತಿಗಳನ್ನು, ಕೊಳ್ಳುವ ಸರಕಾಗಿ ಪರಿಗಣಿಸುತ್ತದೆ (ವೋಟ್‌ ಬ್ಯಾಂಕ್‌). ಇವೆಲ್ಲ ಕೆಳಜಾತಿಗಳ ಆತ್ಮಗೌರವವನ್ನೇ ನಾಶ ಮಾಡುತ್ತವೆ.

ಕಾನೂನು ರೂಪಿಸುವ ಅಧಿಕಾರದ ನಿರ್ವಹಣೆ, ರಾಜಕೀಯ ಪ್ರಾತಿನಿಧ್ಯ, ಉನ್ನತ ಶಿಕ್ಷಣ, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅವಕಾಶಗಳಿಂದ ದಮನಿತ ಸಮುದಾಯಗಳು ವಂಚಿತವಾಗುತ್ತಿವೆ. ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ಸಾಮಾಜಿಕ ಮುಂದಾಳತ್ವದ ಗುಣವನ್ನು ಪಡೆಯದ ಈ ಸಮುದಾಯಗಳು ಮೇಲಿನವರ ಮುಂದೆ ಮಂಡಿಯೂರಬೇಕಾದ ಸ್ಥಿತಿ ಮುಂದುವರಿಯುತ್ತಿದೆ.

‘ಕರುಣೆ’, ‘ಅನುಕಂಪ’ಗಳೆಂಬ ಊರುಗೋಲು ಇವರನ್ನು ಬಹುದೂರ ನಡೆಸಲಾರದು. ಬದಲಿಗೆ ಇವರಲ್ಲಿರುವ ಕೌಶಲ, ಪಾರಂಪರಿಕ ಜ್ಞಾನಕ್ಕೆ ಅವಕಾಶ ಕಲ್ಪಿಸಿಕೊಡುವ ಹೊಣೆಯನ್ನು ಪ್ರಭುತ್ವ ಹೊರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT