ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭ್ರಷ್ಟಾಚಾರದ ಸೋಂಕಿಗೆ ಬೇಕಿದೆ ಮದ್ದು

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಭ್ರಷ್ಟಾಚಾರ ವಿರೋಧಿ ದಿನವನ್ನು ಇತ್ತೀಚೆಗಷ್ಟೇ ಜಾಗತಿಕವಾಗಿ ಆಚರಿಸಿದ್ದೇವೆ. ಈ ವರ್ಷದ ಘೋಷವಾಕ್ಯ ‘ಭ್ರಷ್ಟಾಚಾರದ ವಿರುದ್ಧ ವಿಶ್ವವನ್ನು ಒಗ್ಗೂಡಿಸುವುದು’ ಎಂದಾಗಿದೆ. ಆಚರಣೆಗಿಂತ ಆತ್ಮಾವಲೋಕನ ಮತ್ತು ಕನಿಷ್ಠ ಮಟ್ಟದಲ್ಲಾದರೂ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಮೊದಲ ಹೆಜ್ಜೆ ಇಡಬೇಕೆಂದು ಗಣ್ಯರು ಕರೆ ನೀಡಿದ್ದೂ ಆಯಿತು. ಆದರೆ, ಭ್ರಷ್ಟಾಚಾರ ನಿರ್ಮೂಲನೆಯ ಸಾಧ್ಯಮಾರ್ಗಗಳ ಸುಳಿವು ಸಿಗದೆ, ಯಥಾಪ್ರಕಾರ ಆಚರಣೆಗಷ್ಟೇ ಅದು ಸೀಮಿತಗೊಂಡಿತು.

ಸರ್ವವ್ಯಾಪಿಯಾಗಿರುವ ಭ್ರಷ್ಟಾಚಾರದ ಬೇರನ್ನು ಕಿತ್ತೊಗೆಯುವುದೇನೂ ಸಲೀಸಲ್ಲ. ಅದರ ಆಳ-ಅಗಲ, ಹರವು-ವಿಸ್ತಾರಗಳೆಲ್ಲ ಅಂಕೆಗೂ ನಿಲುಕದಂತಹವು. ಅದೀಗ ಮನುಷ್ಯನ ಮೂಲಗುಣವಾಗಿಬಿಡುವ ಅಪಾಯವೂ ಇದೆ. ಲಂಚ, ಭ್ರಷ್ಟಾಚಾರ, ವಂಚನೆ ಬಗೆಗಿನ ಸಾರ್ವಜನಿಕ ಲಜ್ಜೆಯು ಕ್ರಮೇಣ ಮಾಯವಾಗಿ, ಈಗ ಸಾಮಾನ್ಯ ವಿದ್ಯಮಾನದಂತಾಗಿದೆ. ಭ್ರಷ್ಟಾಚಾರದ ನಂಜು ಗ್ಯಾಂಗ್ರಿನ್‍ನಂತೆ ಹಬ್ಬಿ, ಸಮಾಜದ ಹಲವು ಅವಯವ ಗಳನ್ನು ಕೊಳೆಸುತ್ತದೆ. ಎಲ್ಲ ಸಮಾಜಘಟಕಗಳಿಗೂ ಆ ಬಗ್ಗೆ ಅರಿವಿದೆಯಾದರೂ ಚಿಕಿತ್ಸಕ ವೈದ್ಯರು ಯಾರು ಎಂಬುದಷ್ಟೇ ಯಕ್ಷಪ್ರಶ್ನೆ.

ಜನಸೇವೆಗೆಂದೇ ನೇಮಿಸಿದ ಸರ್ಕಾರಿ ನೌಕರರಲ್ಲಿ ಕೆಲವರು ತಾವು ಮಾಡಲೇಬೇಕಾದ ಪ್ರತಿ ಕೆಲಸಕ್ಕೂ ಇಷ್ಟಿಷ್ಟು ಎಂದು ದರ ನಿಗದಿಗೊಳಿಸಿ ಸಾರ್ವಜನಿಕರನ್ನು ಕಾಡುತ್ತಲೇ ಇದ್ದಾರೆ. ಹಿಂದೊಮ್ಮೆ ‘ಕಚೇರಿಯೆದುರು ಲಂಚದ ದರಪಟ್ಟಿ ಹಾಕಿಬಿಡಿ’ ಅನ್ನುವ ಕೂಗೂ ಎದ್ದಿತ್ತು. ಹಾಗಾದಾಗಲೂ ಕೆಲವು ಸಮಯ ಸರಿದ ಮೇಲೆ ಅದೂ ಸಾಮಾನ್ಯಎಂಬಂತಾಗಿ, ಲಂಚದ ದರದ ಮೇಲಷ್ಟು ಲಂಚ ಬೇಡುವ ದಿನಗಳೂ ಬಂದುಬಿಡಬಹುದು ಎಂಬ ಆತಂಕ ಕೆಲವರಿಗೆ ಬಂತು!

ಎಲ್ಲ ಕಾಲದಲ್ಲೂ ಹಣಕ್ಕೆ ಪ್ರಾಶಸ್ತ್ಯ ಇತ್ತಾದರೂ ಹಿಂದೆಲ್ಲಾ ಅದು ನಿಯತ್ತಿನ ದುಡಿಮೆ ಹಾಗೂ ಸಾತ್ವಿಕ ಬದುಕಿನ ಇತಿಮಿತಿಯಲ್ಲಿ ಇರುತ್ತಿತ್ತು. ದುಡ್ಡಿದ್ದ ಕೆಲವರದು ಮಾತ್ರ ದೌಲತ್ತು, ಧಾರ್ಷ್ಟ್ಯ, ದರ್ಪ, ದೌರ್ಜನ್ಯದ ಬದುಕು. ಆದರೆ ಇಂದು ಎಲ್ಲರೂ ದುಡ್ಡಿನ ಹಿಂದೆ ಹೊರಟವರೇ. ಉದಾತ್ತ ನಿಲುವು ಮತ್ತು ಪ್ರೌಢಿಮೆಯನ್ನು ಮೆರೆಯಬೇಕಾದ ಹಿರಿಯರನೇಕರ ಬಾಯಲ್ಲೂ ಭ್ರಷ್ಟರ ಗುಣಗಾನ. ಧನದಾಹ, ಅಧಿಕಾರದ ಜಪ ಮತ್ತು ಜಾತಿಧರ್ಮಗಳ ಕುರಿತ ಅಂಧಾಭಿಮಾನದ ನಿಲುವುಗಳು ಹೊಸ ತಲೆಮಾರುಗಳ ದಿಕ್ಕು ತಪ್ಪಿಸುತ್ತಿವೆ. ಹಳ್ಳಿಮನೆಯಲ್ಲೊಬ್ಬರು ‘ಈ ಸಲ ವೋಟಿಗೆ ಸಾವಿರ ಇಡದೇ ಹೋದರೆ ನಾವ್ಯಾರೂ ಮತಗಟ್ಟೆಗೆ ಹೆಜ್ಜೆ ಇಡಲ್ಲ!’ ಅಂದಿದ್ದನ್ನು ನೆನೆದರೆ ನಾಳೆಗಳ ಬಗ್ಗೆ ದಿಗಿಲಾಗುತ್ತದೆ. ಸಮಾಜ ನೆಮ್ಮದಿ ಕಳೆದುಕೊಂಡಿದೆ.

ಈಗೆಲ್ಲಾ ಪಂಚಾಯಿತಿ ಚುನಾವಣೆ ಗೆಲ್ಲುತ್ತಲೇ ಕಮಿಷನ್, ಪರ್ಸೆಂಟೇಜ್ ಬಗ್ಗೆ ಮಾತನಾಡುವ ಅರೆಬರೆ ಅಕ್ಷರಸ್ಥ ಹಳ್ಳಿಗರು ಬಹಳ. ಅಲ್ಲೂ ಈಗ ಗೆದ್ದುಬರಬೇಕೆಂದರೆ ಮನೆಗಿಷ್ಟು, ವೋಟಿಗಿಷ್ಟು ನೋಟು ಎಂದು ಲಕ್ಷಲಕ್ಷ ಚೆಲ್ಲಬೇಕಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಭ್ರಷ್ಟಾಚಾರದ ತಾಯಿಬೇರು ಚುನಾವಣಾ ವ್ಯವಸ್ಥೆ. ಹಣ ಚೆಲ್ಲಿ ಚುನಾವಣೆ ಗೆದ್ದು ಅಧಿಕಾರದ ಬಲದಲ್ಲಿ ನಡೆಸುವ ಎಲ್ಲ ಬಗೆಯ ಅಕ್ರಮಗಳಿಗೂ ಚುನಾವಣಾ ವ್ಯವಸ್ಥೆಯ ಸುಧಾರಣೆಯಿಂದಷ್ಟೇ ತಕ್ಕಮಟ್ಟಿಗೆ ಪರಿಹಾರ ಸಿಕ್ಕೀತು.

ಎಲ್ಲ ಕ್ಷೇತ್ರಗಳೂ ಕಲುಷಿತಗೊಂಡಿರುವ ಹೊತ್ತಿನಲ್ಲಿ ನೈತಿಕತೆಯ ಪುನರುತ್ಥಾನದ ಬಗೆ ಯಾವುದು? ‘ಉಳ್ಳವರು ಶಿವಾಲಯವ ಮಾಡುವರು..’ ಎಂಬ ವಿಡಂಬನೆಯಲ್ಲಿ ‘ದೇಹವೇ ದೇಗುಲ’ ಚಿಂತನೆಯನ್ನು ಮುನ್ನೆಲೆಗೆ ತಂದು, 800 ವರ್ಷಗಳ ಹಿಂದೆಯೇ ಸಮಾಜ ಸುಧಾರಣೆಗೆ ಹಂಬಲಿಸಿದ್ದರು ಬಸವಣ್ಣ. ಆದರೆ ದೇವರಿಗೆ ಕಾಣಿಕೆ, ಹರಕೆ, ಪೂಜೆಯನ್ನೊಪ್ಪಿಸಿ ಅಪರಾಧವನ್ನು ಮರೆಸಿ ದೇವರನ್ನೇ ವಂಚಿಸುತ್ತೇವೆ ಎಂಬ ಭ್ರಾಂತಿಗೂ ಈಗ ಕೊರತೆ ಇಲ್ಲ.

ಭಾರತದಂತಹ ದೇಶದಲ್ಲಿ ಭ್ರಷ್ಟಾಚಾರ, ಅನಾಚಾರದ ಹೆಚ್ಚಳಕ್ಕೆ ಜಾತಿ ಪದ್ಧತಿಯೂ ಒಂದು ಕಾರಣ. ತಪ್ಪಿತಸ್ಥನ ತಪ್ಪಿನ ಪ್ರಮಾಣ ನಿರ್ಧಾರ ಆಗುವುದು ಅವನ ಜಾತಿ, ಧರ್ಮ, ಪಕ್ಷಸಿದ್ಧಾಂತಗಳ ಆಧಾರದಲ್ಲಿ! ಅವನು ತನ್ನ ಅಥವಾ ತಾನೊಪ್ಪುವ ಪಕ್ಷ, ಪಂಗಡಕ್ಕೆ ಸೇರಿದವನಾಗಿದ್ದರೆ ಮನಸ್ಸು ಅನೈತಿಕತೆಯ ಸಮರ್ಥನೆಗೆ ಸ್ವತಃ ನಿಂತುಬಿಡುತ್ತದೆ. ಹಾಗೆಯೇ ಭಿನ್ನ ಪಂಗಡದವನಾದರೆ, ಮಾಡಿರಬಹುದಾದ ಮನುಷ್ಯಸಹಜ, ಕ್ಷುಲ್ಲಕ ತಪ್ಪಿಗೂ ಉಗ್ರವಾಗಿ ಖಂಡಿಸುವ, ನಿಂದಿಸುವ ಅಮಾನವೀಯ ಹಂತಕ್ಕೆ ಇಳಿಯಲಾಗುತ್ತದೆ. ಹೀಗಾಗಿ, ಇಲ್ಲಿ ಸರಿತಪ್ಪುಗಳ ತಾತ್ವಿಕತೆಯೂ ತಪ್ಪಾಗಿಯೇ ನಿರೂಪಿತವಾಗುತ್ತದೆ.

ವಂಚನೆ, ಭ್ರಷ್ಟಾಚಾರದ ನಿರ್ಮೂಲನೆಗೆ ಕಠಿಣ ಕಾನೂನು, ಸರ್ಕಾರದ ಇಚ್ಛಾಶಕ್ತಿ ಮಾತ್ರ ಸಾಲದು, ನೈತಿಕತೆ ಮತ್ತು ಮಾನವೀಯ ಸಮಾಜವನ್ನು ರೂಪಿ ಸಲು ಎಲ್ಲರೂ ಬದ್ಧರಾಗಬೇಕು. ಸಮಾಜದಲ್ಲಿ ಹಣ, ಆಸ್ತಿ, ಅಂತಸ್ತು, ಅಧಿಕಾರಕ್ಕಿಂತ ಮನುಷ್ಯನ ಪ್ರಾಮಾಣಿಕತೆಗೆ, ಶ್ರಮಸಂಸ್ಕೃತಿಯ ನೈಜ ವ್ಯಕ್ತಿ
ತ್ವಕ್ಕೆ ಹೆಚ್ಚು ಬೆಲೆ ಸಿಗುವಂತಾಗಬೇಕು. ಹಣವಂತರು, ಅಧಿಕಾರಸ್ಥರ ಬದಲು ವಿದ್ಯಾವಂತರು, ಜ್ಞಾನವಂತರು, ಸರಳಜೀವಿಗಳು, ಪರೋಪಕಾರಿಗಳು ಮತ್ತು ಜೀವಪರರನ್ನು ಸಮಾಜವು ಪ್ರಜ್ಞಾಪೂರ್ವಕವಾಗಿ ಆದರಿಸುವಂತೆ ಆಗಬೇಕು. ತಪ್ಪನ್ನು ತಪ್ಪೆಂದು ಹೇಳುವ, ಕೆಟ್ಟದ್ದನ್ನು ಖಂಡಿಸುವ ಅಥವಾ ತಿರಸ್ಕರಿಸುವ, ಅದೂ ಸಾಧ್ಯವಾಗದಿದ್ದಲ್ಲಿ ನಿರ್ಲಕ್ಷಿಸುವ ಮನೋಭಾವ ಬೆಳೆಯದಿದ್ದಲ್ಲಿ ಸತ್ಯ ಸೊರಗುತ್ತದೆ. ಸಾತ್ವಿಕತೆ ಸೋಲಬೇಕಾಗುತ್ತದೆ. ಬೆಳೆಯುವ ಎಳೆಯರೆದುರು ತೋರುವ ಆದರ್ಶವು ಮೌಲ್ಯಯುತವಾಗಿರಬೇಕು. ಇಲ್ಲದಿದ್ದಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗಿರಲಿ, ಮುಂದಿನ ತಲೆಮಾರು ಕನಿಷ್ಠ ಮಾನವೀಯತೆಯನ್ನೂ ಉಳಿಸಿಕೊಳ್ಳದೆ ಹೋದರೂ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT