ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯುವ ಕರವೇ... ಕೊಲ್ಲದಿರು

ಚಂಚಲ ಮನಸ್ಸಿನಿಂದ ಮಕ್ಕಳೊಟ್ಟಿಗೆ ಸಾವಿಗೆ ಶರಣಾಗುವವರು, ಮಕ್ಕಳ ಹುಟ್ಟಿಗೆ ಕಾರಣರಾದ ತಮಗೆ, ಅವರನ್ನು ಕೊಲ್ಲುವ ಅಧಿಕಾರವೂ ಇದೆ ಎಂದು ಯಾಕೆ ಭಾವಿಸಬೇಕು?
ಪ.ರಾಮಕೃಷ್ಣ ಶಾಸ್ತ್ರಿ
Published 8 ಫೆಬ್ರುವರಿ 2024, 18:54 IST
Last Updated 8 ಫೆಬ್ರುವರಿ 2024, 18:54 IST
ಅಕ್ಷರ ಗಾತ್ರ

ಕುಡುಕ ಗಂಡನಿಂದ ಬೇಸತ್ತು ಮಕ್ಕಳ ಜೊತೆಗೂಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ, ವಿಚ್ಛೇದಿತ ಪತಿಯ ಮೇಲಿನ ದ್ವೇಷದಿಂದ ಪುಟ್ಟ ಮಗನನ್ನು ಕೊಂದ ಅಮ್ಮ... ಇತ್ತೀಚೆಗೆ ಸಂಭವಿಸಿದ ಇಂತಹ ಸರಣಿ ದುರಂತಗಳ ಹಿಂದೆ ಹೆತ್ತ ತಾಯಿಯೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾಳೆ. ಹೆತ್ತು ಹೊತ್ತು ಎದೆ ಹಾಲನ್ನೂಡಿ ಬೆಳೆಸಿದ ತಾಯಂದಿರು ತಮ್ಮ ಬದುಕನ್ನು ಅರ್ಧದಲ್ಲೇ ಮುಗಿಸಿಕೊಳ್ಳುವುದರ ಜೊತೆಗೆ, ಬಾಳಿ ಬದುಕಬೇಕಿದ್ದ ಮಕ್ಕಳನ್ನು ಕೂಡ ಅಕಾಲಿಕ ಸಾವಿಗೆ ದೂಡುವ ಸುದ್ದಿ ಮೈಯಲ್ಲಿ ನಡುಕ ಹುಟ್ಟಿಸುತ್ತದೆ.

ಕೆಟ್ಟ ಮಗನಿರಬಹುದು, ಕೆಟ್ಟ ತಾಯಿ ಇರಲಾರಳು ಎಂಬುದು ಪ್ರಪಂಚವೇ ಒಪ್ಪಿಕೊಂಡ ಸತ್ಯ. ಆತ್ಮಹತ್ಯೆಯ ದೃಢ ನಿರ್ಧಾರ ತಳೆದ ಜೀವಗಳಿಗೆ ಇಂತಹ ಯಾವ ಸಂಗತಿಯೂ ನೆನಪಿಗೆ ಬರುವುದಿಲ್ಲ. ನೊಂದವರು, ಬೆಂದವರು, ಅನ್ಯ ದಾರಿಯೇ ಇಲ್ಲ ಎಂದುಕೊಂಡವರು ಕಟ್ಟಕಡೆಯ ನಿರ್ಣಯ ಕೈಗೊಳ್ಳುವಾಗಲೂ ತಾವಿಲ್ಲವಾದರೆ ತಮ್ಮ ಮಕ್ಕಳು ಅನಾಥರಾಗಬಹುದು, ಅವರಿಗೆ ಬದುಕುವ ದಾರಿ ತಿಳಿಯದೇ ಹೋಗಬಹುದು ಎಂದುಕೊಳ್ಳುವುದು ಅರ್ಥಹೀನ.

ಕಷ್ಟಗಳಿರಬಹುದು, ಹಾಗೆಂದು ಆತ್ಮಹತ್ಯೆಯ ನಿರ್ಧಾರಕ್ಕೆ ಗಟ್ಟಿಯಾಗುವ ತಾಯಂದಿರು ಪ್ರಪಂಚ ತಿಳಿಯದವರೇನಲ್ಲ. ಹುಟ್ಟುವಾಗ ಎರಡೂ ಕೈಗಳು, ಕಾಲುಗಳು, ಕಣ್ಣುಗಳಿಲ್ಲದವರು ಕೂಡ ಹೆತ್ತವರಿಗೆ ಭಾರವಾದ ಉದಾಹರಣೆಗಳು ಕಡಿಮೆ. ಲೋಕೋತ್ತರ ಕೀರ್ತಿಗೆ ಭಾಜನರಾದ ಹಲವರು ಅಂಗಾಂಗ ನ್ಯೂನತೆ ಹೊತ್ತು ವಿಶ್ವದ ಬೆಳಕು ಕಂಡವರು. ಇಂತಹ ಉದಾಹರಣೆಗಳು
ಹೆಚ್ಚಿನವರಿಗೆ ಗೊತ್ತಿದೆ. ಕೈಕಾಲು ಗಟ್ಟಿಯಾಗಿದ್ದು ಪ್ರೌಢ ವಯಸ್ಸಿಗೆ ಕಾಲಿಡುತ್ತಿರುವ ಮಕ್ಕಳಿಗೆ ಹಿರಿಯರ ಶಾಶ್ವತ ಅನುಪಸ್ಥಿತಿ ಎದುರಾದರೂ ಅವರನ್ನು ಸೋಲಿಗೆ ದೂಡುವಷ್ಟು ನಮ್ಮ ಸಾಮಾಜಿಕ ಸಹೃದಯ ವ್ಯವಸ್ಥೆಯು ಮರಗಟ್ಟಿಲ್ಲ. ಹೆತ್ತವರನ್ನು ಕಳೆದುಕೊಂಡ ಯಾವ ಮಕ್ಕಳನ್ನೂ ತಬ್ಬಲಿಯಾಗಲು ಬಿಡದೆ, ಬದುಕಿನ ತೀರ ತಲುಪಿಸಲು ಕೈಹಿಡಿದು ನಡೆಸಬಲ್ಲ ಬಂಧುತ್ವ ಭಾವವು ಮೃತಾವಸ್ಥೆ ತಲುಪಿಲ್ಲ.

‘ನನ್ನ ಮಕ್ಕಳಿಗೆ ನನ್ನನ್ನು ಬಿಟ್ಟರೆ ಇನ್ನೊಬ್ಬರಿಲ್ಲ’ ಎಂಬ ನಿರ್ಣಯಕ್ಕೆ ಬಂದು, ಚಂಚಲ ಮನಸ್ಸಿನಿಂದ ನೇಣಿನ ಕುಣಿಕೆಗೆ ಕೊರಳೊಡ್ಡುವ ಜನನಿ, ಜನಕರು, ಮಕ್ಕಳ ಹುಟ್ಟಿಗೆ ಕಾರಣರಾದ ತಮಗೆ, ಅವರನ್ನು ಕೊನೆಗಾಣಿಸುವ ಅಧಿಕಾರವೂ ಇದೆ ಎಂದು ಯಾಕೆ ಭಾವಿಸಬೇಕು? ನಿಸರ್ಗವು ಬಂಜೆಯಲ್ಲ. ಕನಕದಾಸರು ಹೇಳಿದಂತೆ, ‘ಕಲ್ಲೊಳಗೆ ಹುಟ್ಟಿದ ಕಪ್ಪೆಗೆ ಅಲ್ಲಿ ಉದಕವ ಕೊಡುವ’ ಒಂದು ವ್ಯವಸ್ಥೆ ಇದೆ ಎಂಬುದು ಯಾರ ಊಹೆಗೂ ನಿಲುಕದಂತೆ ಕೆಲಸ ಮಾಡುತ್ತದೆ. ಬಂಧುಗಳಿಲ್ಲ ಎಂದು ಮರುಗದಂತೆ ಮಕ್ಕಳನ್ನು ಎದೆಗಾನಿಸಿಕೊಳ್ಳುವ ಭಾವನಾತ್ಮಕ ಹಿತಸ್ಪರ್ಶ ಇಡೀ ಸಮಾಜದಿಂದ ಸಿಗುತ್ತದೆ.

‘ನನ್ನ ಕಂದನಿಗೆ ಯಾವುದೋ ಅಪರೂಪದ ಕಾಯಿಲೆ ಬಂದಿದೆ, ಚಿಕಿತ್ಸೆಗೆ ಹಣವಿಲ್ಲ’ ಎಂದು ಸಹಾಯಕ್ಕಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮೊರೆಯಿಡುವ ಅದೆಷ್ಟೋ ಪೋಷಕರು, ಒಂದು ತಾಸಿನ ಒಳಗೇ ‘ಅಗತ್ಯವಿರುವಷ್ಟು ಹಣ ಬಂದಿದೆ. ಇನ್ನು ಕಳುಹಿಸಬೇಡಿ’ ಎಂದು ಕೇಳಿಕೊಳ್ಳುವಷ್ಟು ಹಣಕಾಸಿನ ನೆರವು ಹರಿದುಬಂದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ವ್ಯಾವಹಾರಿಕ ಸೋಲು, ಬ್ಯಾಂಕ್‌ ಸಾಲದ ಹೊರೆ ಎಂದೆಲ್ಲ ಬದುಕಿಗೆ ವಿದಾಯ ಹೇಳುವ ವಯಸ್ಕರು, ಬಾಳಿ ಬದುಕುವ ಎಲ್ಲ ಅರ್ಹತೆಯನ್ನೂ ಹೊಂದಿದ ಜೀವಗಳಿಗೆ ಇತಿಶ್ರೀ ಹೇಳಬಾರದು.

ಆತ್ಮಹತ್ಯೆ ಎಂಬುದು ಕ್ಷಣದಲ್ಲಿ ಬರುವ ಆಲೋಚನೆ, ಆ ಕ್ಷಣದಲ್ಲಿ ಅದರಿಂದ ವಿಮುಖರಾದರೆ ಮತ್ತೆಂದಿಗೂ ಅಂತಹ ಸಾಹಸ ಮಾಡುವುದಿಲ್ಲ ಎಂಬ ಸಾಮಾನ್ಯ ನಂಬಿಕೆಯಿದೆ. ಹೊಸ ಬದುಕು ಕಂಡುಕೊಳ್ಳಲು ಅವರೊಂದು ಅವಕಾಶ ಪಡೆಯಬಹುದಲ್ಲವೇ? ಪ್ರಪಂಚದಲ್ಲಿ ಪರಿಹಾರ ಮಾರ್ಗವೇ ಇಲ್ಲದ ಸಮಸ್ಯೆ ಯಾವುದೂ ಇರುವುದಿಲ್ಲ.

ತನಗೊದಗಿದ ಸಂಕಷ್ಟವನ್ನು ಗೆಳೆಯರು, ಬಂಧುಗಳ ಬಳಿ ಹಂಚಿಕೊಂಡಾಗ ದೊರೆಯುವ ಸಲಹೆಗಳಿಂದ, ಇಕ್ಕಟ್ಟಿನಿಂದ ಪಾರಾಗುವ ಒಂದು ಆಧಾರ ತಂತು ಹೊಳೆಯದೇ ಹೋಗುವುದಿಲ್ಲ. ಬದುಕೆಂದರೆ ಏನೆಂದೇ ತಿಳಿಯದ ಎಳೆಯ ಮಕ್ಕಳಿಗೂ ಸಾವಿನ ಭೀಕರ ಸ್ಥಿತಿಯ ಅರಿವು ಮೂಡಿಸಲು ಮುಂದಾಗಬಾರದು. ಮಗು ಸಣ್ಣ ಜ್ವರದಿಂದ ಬಳಲಿದರೂ ಮಗುವಿಗಿಂತ ಹೆಚ್ಚು ವೇದನೆಯಿಂದ ಚಡಪಡಿಸುವ ತಾಯಿಯು ಮರಣದ ಕಡೆಯ ಕ್ಷಣ ತಲುಪುವವರೆಗೂ ಒದ್ದಾಡುವ ಎಳೆಯ ಜೀವದ ಅವಸ್ಥೆಯನ್ನು ಸಹಿಸಿಕೊಳ್ಳಬಲ್ಲೆ ಎಂದು ಹೇಗೆ ಎದೆ ಗಟ್ಟಿ ಮಾಡಿಕೊಳ್ಳುತ್ತಾಳೆ?

ಯಾವ ತಾಯಿಯೇ ಆಗಲಿ, ಪ್ರಪಂಚದ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಮಕ್ಕಳು ತಮ್ಮ ಅನುಪಸ್ಥಿತಿಯನ್ನು ಎದುರಿಸುವಂತೆ ಮಾಡದೆ, ಎದುರಾದ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲಲು ಅವಕಾಶಗಳ ಆಕಾಶವನ್ನು ಬೊಗಸೆಯಲ್ಲಿ ಹಿಡಿದುಕೊಳ್ಳಬೇಕು. ತಾವೂ ಬದುಕಿ, ತಮ್ಮ ಮಕ್ಕಳನ್ನು ಸದೃಢಗೊಳಿಸುವ ಮೂಲಕ ಬದುಕಿನ ವಿಜಯವನ್ನು ಎತ್ತಿ ತೋರಿಸಬೇಕು.

ಭವಿಷ್ಯದ ಪೀಳಿಗೆ ಅವರ ಈ ಕೊಡುಗೆಗೆ ಕೃತಜ್ಞವಾಗಿರುತ್ತದೆ. ಅವರಲ್ಲಿ ಬದುಕುವ ಛಲ ಇನ್ನಷ್ಟು ಶಕ್ತಿಯುತವಾಗುತ್ತದೆ. ಯಾರ ಬದುಕೂ ಸುಖದ ಹಾಸಿಗೆಯಲ್ಲ, ಸಮಸ್ಯೆಗಳಿಂದ ಮುಕ್ತನಾದ ಮನುಷ್ಯನಿಲ್ಲ. ಬದುಕಿ ಬಾಳುವ ಛಲದಿಂದ ವಿಮುಖರಾಗಿ ತನ್ನವರ ಜೀವ ಕಸಿದುಕೊಳ್ಳುವ ಹಕ್ಕು ತಮಗಿದೆ ಎಂದು ಅನಾಹುತ ತಂದುಕೊಳ್ಳುವವರು ಮತ್ತೊಮ್ಮೆ, ಮಗದೊಮ್ಮೆ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT