ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ‘ಬಿಳಿ ಬಂಗಾರ’: ಬೇಡಿಕೆ ಭರಪೂರ

ಹತ್ತಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು, ಗುಜರಾತ್‌ ಮಾದರಿಯಲ್ಲಿ ಅವರಿಗೆ ದೇಶದಾದ್ಯಂತ ತೆರಿಗೆ ವಿನಾಯಿತಿಯನ್ನು ವಿಸ್ತರಿಸಬೇಕಾಗಿದೆ
Published 6 ಅಕ್ಟೋಬರ್ 2023, 23:32 IST
Last Updated 6 ಅಕ್ಟೋಬರ್ 2023, 23:32 IST
ಅಕ್ಷರ ಗಾತ್ರ

ಬಸವರಾಜ ಶಿವಪ್ಪ ಗಿರಗಾಂವಿ

ವಿಶ್ವದಾದ್ಯಂತ 2019ರಿಂದ ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತಿದೆ. ಆಫ್ರಿಕಾದಲ್ಲಿ ಕಾಟನ್-4 ಎಂದು ಕರೆಯಲಾಗುವ, ಹತ್ತಿ ಬೆಳೆಯುವ ದೇಶಗಳಾದ ಬೆನಿನ್, ಬುರ್ಕಿನಾ ಫಾಸೊ, ಚಾಡ್ ಹಾಗೂ ಮಾಲಿಯಲ್ಲಿ ವಿಶ್ವ ವಾಣಿಜ್ಯ ಸಂಘಟನೆಯು (ಡಬ್ಲ್ಯುಟಿಒ) 2009ರ ಅಕ್ಟೋಬರ್ 7ರಂದು ಇಂತಹದ್ದೊಂದು ದಿನ ಆಚರಿಸಲು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡಿತು. ನಂತರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆಯು ಹತ್ತಿಯ ಆರೋಗ್ಯಕರ ಬಳಕೆಯನ್ನು ಮನಗಂಡು, 2021ರ ಮಹಾ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿತು. ಈ ಮೂಲಕ ಪ್ರತಿವರ್ಷ ಅ. 7ರಂದು ಅಧಿಕೃತವಾಗಿ ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತಿದೆ.

ಹತ್ತಿಯು ಅರಿವೆಯಾಗಿ ಮಾತ್ರ ಉಪಯೋಗವಾಗದೆ ಆಹಾರವಾಗಿಯೂ ಮನುಕುಲದ ಅವಶ್ಯಕತೆಯನ್ನು ಪೂರೈಸುತ್ತಿರುವುದು ವಿಶೇಷ. ಪ್ರಸ್ತುತ ವಿಶ್ವದಾದ್ಯಂತ ಅಂದಾಜು 80 ದೇಶಗಳಲ್ಲಿ 10 ಕೋಟಿ ಕುಟುಂಬಗಳು ಹತ್ತಿಯಿಂದ ನೇರವಾದ ಪ್ರಯೋಜನ ಪಡೆಯುತ್ತಿವೆ. ಇವರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಪಾಲ್ಗೊಂಡಿರುವುದು ವಿಶೇಷ. ಹತ್ತಿಯು ಸಮಾಜದಲ್ಲಿನ ಪ್ರತಿಯೊಬ್ಬರೂ ಮರ್ಯಾದೆಯಿಂದ, ಆರೋಗ್ಯಕರವಾಗಿ ಹಾಗೂ ಆರಾಮದಾಯಕವಾಗಿ ಬದುಕಲು ಬಹಳ ಅವಶ್ಯ. ಅದರಂತೆ ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಗಳಾದ ಇಂಟರ್‌ನ್ಯಾಷನಲ್‌ ಟ್ರೇಡ್‌ ಸೆಂಟರ್‌ ಹಾಗೂ ಡಬ್ಲ್ಯುಟಿಒ ಸಹ ಹತ್ತಿಯ ಉತ್ಪಾದನೆ ಮತ್ತು ಅದರ ವ್ಯಾಪಾರವನ್ನು ಉತ್ತೇಜಿಸಲು ಹಾಗೂ ಸ್ಥಳೀಯ ಸಂಸ್ಕರಣಾ ಸಾಮರ್ಥ್ಯವನ್ನು ಸುಧಾರಿಸಲು ಸಿ-4 ರಾಷ್ಟ್ರಗಳಿಗೆ ವಿಶೇಷ ಸಹಕಾರವನ್ನು ನೀಡಿವೆ.

ಒಂದು ಅಂದಾಜಿನ ಪ್ರಕಾರ, ಒಂದು ಟನ್ ಹತ್ತಿಯು ಸರಾಸರಿ ಐದು ಜನರಿಗೆ ಉದ್ಯೋಗ ಒದಗಿಸುತ್ತದೆ. ವಿಶ್ವದ ಒಟ್ಟು ಹತ್ತಿ ಉತ್ಪಾದನೆಯ ಶೇ 80ರಷ್ಟನ್ನು ಉಡುಪುಗಳಿಗಾಗಿ ಬಳಸಲಾಗುತ್ತಿದೆ. ಇನ್ನುಳಿದ ಶೇ 15ರಷ್ಟು ಗೃಹೋಪಯೋಗಿ ಹಾಗೂ ಶೇ 5ರಷ್ಟು ಇತರ ಕಾರಣಗಳಿಗಾಗಿ ಬಳಕೆಯಾಗುತ್ತಿದೆ. ವಿಶ್ವದ ಕೃಷಿಯಲ್ಲಿನ ಶೇ 3ರಷ್ಟು ಪ್ರದೇಶವನ್ನು ಹತ್ತಿ ಕೃಷಿಯು ಆಕ್ರಮಿಸಿಕೊಂಡಿದೆ. ಹತ್ತಿ ಬೀಜದ ಎಣ್ಣೆಯನ್ನು ಅಡುಗೆ, ಸೌಂದರ್ಯವರ್ಧಕ, ಸಾಬೂನು ಹಾಗೂ ಪಶು ಆಹಾರವಾಗಿ ಬಳಸಲಾಗುತ್ತಿದೆ. ಚೀನಾ, ಭಾರತ, ಯುಎಸ್‍ಎ, ಬ್ರೆಜಿಲ್ ಹಾಗೂ ಪಾಕಿಸ್ತಾನ ಅತಿಹೆಚ್ಚು ಹತ್ತಿ ಬೆಳೆಯುವ ದೇಶಗಳಾಗಿವೆ.

ಹತ್ತಿ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳಿವೆ. ಅವುಗಳೆಂದರೆ, ಹತ್ತಿ ಗಿಡದಲ್ಲಿ ಯಾವುದೇ ನಿರುಪಯುಕ್ತ ತ್ಯಾಜ್ಯ ಇರುವುದಿಲ್ಲ. ಹತ್ತಿಯು ನಾರು ಹಾಗೂ ಬಟ್ಟೆಯಾದರೆ, ಬೀಜವು ಎಣ್ಣೆಯಾಗುವುದರಿಂದ ಆಹಾರವಾಗಿ ಪರಿವರ್ತನೆಯಾಗುತ್ತದೆ. ಕಾಂಡವು ಭೂಮಿಗೆ ಮರಳಿ ಸೇರ್ಪಡೆಯಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಹತ್ತಿ ಬೀಜವನ್ನು ಭೂಮಿಯ ಮೇಲೆ ಮಾತ್ರವಲ್ಲ, ದೂರದ ಚಂದ್ರಲೋಕದಲ್ಲಿಯೂ ಬೆಳೆಯಲಾಗಿತ್ತಂತೆ. ಚೀನಾವು 2019ರ ಜನವರಿಯಲ್ಲಿ ನಡೆಸಿದ ತನ್ನ ಚಂದ್ರಯಾನದಲ್ಲಿ ಆಕಾಶನೌಕೆಯೊಂದಿಗೆ ಹತ್ತಿ ಬೀಜಗಳನ್ನು ಕಳುಹಿಸಿಕೊಟ್ಟಿತ್ತಂತೆ. ಆದರೆ ಇವು ಮೊಳಕೆ ಒಡೆಯಲು ಪ್ರಾರಂಭಿಸಿದರೂ ಅಲ್ಲಿದ್ದ ಚಳಿಯ ಪರಿಣಾಮದಿಂದ ನಾಶವಾದವು ಎಂದು ಆ ದೇಶ ಹೇಳಿಕೊಂಡಿದೆ.

ಬಹುತೇಕ ಕಡೆ ನೋಟುಗಳನ್ನು ಹತ್ತಿಯಿಂದ ತಯಾರಿಸಲಾಗುತ್ತದೆ. ಹೆಚ್ಚಿನವರು ನೋಟುಗಳು ಕಾಗದದಿಂದ ತಯಾರಾಗುತ್ತವೆ ಎಂದು ತಿಳಿದಿದ್ದಾರೆ. ಒಂದು ವೇಳೆ ಕಾಗದದಿಂದ ತಯಾರಾಗಿದ್ದರೆ ಅವು ಸ್ವಲ್ಪ ಒದ್ದೆಯಾದರೂ ನಿರುಪಯುಕ್ತವಾಗುತ್ತಿದ್ದವು. ವಿಶ್ವದ ಬಹುಪಾಲು ರಾಷ್ಟ್ರಗಳು ತಮ್ಮ ಕರೆನ್ಸಿ ನೋಟುಗಳನ್ನು ತಯಾರಿಸಲು ಶೇ 75ರಷ್ಟು ಹತ್ತಿ ಹಾಗೂ ಶೇ 25ರಷ್ಟು ಲಿನಿನ್ ಮಿಶ್ರಣವನ್ನು ಬಳಸುತ್ತವೆ. ಹತ್ತಿ ಕೃಷಿಯು 5,000 ವರ್ಷಗಳಷ್ಟು ಹಿಂದೆಯೇ ಭಾರತ, ಈಜಿಪ್ಟ್‌ ಹಾಗೂ ಅಮೆರಿಕದಲ್ಲಿನ ಪ್ರಾಚೀನ ನಾಗರಿಕತೆಗಳಲ್ಲಿ ಪ್ರಚಲಿತದಲ್ಲಿತ್ತು ಎಂದು ನಂಬಲಾಗಿದೆ.

ಹತ್ತಿಯಲ್ಲಿ ನಾಲ್ಕು ಪ್ರಭೇದಗಳಿದ್ದು, ಪ್ರತಿಯೊಂದು ಪ್ರಭೇದವೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. 1793ರಲ್ಲಿ ಅಮೆರಿಕದ ಸಂಶೋಧಕ ಎಲಿ ವಿಟ್ನಿ ಅವರು ಕಂಡುಹಿಡಿದ ಹತ್ತಿಯ ರಾಟೆ ಹಾಗೂ ಅದರ ಪರಿಣಾಮಕಾರಿ ಬಳಕೆಯು ಹತ್ತಿ ಉತ್ಪಾದನೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿತು. ಹತ್ತಿ ಬೆಳೆಯು ಕಡಿಮೆ ನೀರನ್ನು ಬೇಡುವ ವಾಣಿಜ್ಯ ಬೆಳೆಯಾಗಿದೆ. ಹತ್ತಿ ಬಟ್ಟೆಯು ಫ್ಯಾಷನ್ ಉದ್ಯಮದ ಪ್ರಧಾನ ವಸ್ತುವಾಗಿದೆ. ಬೇರೆ ವಸ್ತುಗಳಿಂದ ತಯಾರಿಸಿದ ಫ್ಯಾಷನ್‌ ಉಡುಪುಗಳಿಗೆ ಹತ್ತಿ ಫ್ಯಾಷನ್‌ ಉಡುಪುಗಳ ರೀತಿಯಲ್ಲಿ ಜನರ ಮನಗೆಲ್ಲಲು ಇಂದಿನವರೆಗೂ ಸಾಧ್ಯವಾಗಿಲ್ಲ.

‘ಬಿಳಿ ಬಂಗಾರ’ ಎಂದು ಕರೆಯಲಾಗುವ ಹತ್ತಿಯ ಬೇಡಿಕೆಯಲ್ಲಿ ಭಾರತವು ವಿಶ್ವದ ಶೇ 25ರಷ್ಟು ಪಾಲನ್ನು ಪೂರೈಸುತ್ತಿದೆ. ಅತಿಹೆಚ್ಚು ಸ್ವದೇಶಿ ಬೇಡಿಕೆಯನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಅಂದಾಜು 5 ಕೋಟಿ ಜನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹತ್ತಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಹತ್ತಿ ಬೇಡಿಕೆಯು ವಿಶ್ವದಾದ್ಯಂತ ಹೆಚ್ಚಾಗಿದ್ದರೂ ಬೆಳೆಗಾರರು ಪ್ರಮುಖವಾಗಿ ಮಧ್ಯವರ್ತಿಗಳ ಹಾವಳಿ, ಪ್ರತಿಕೂಲ ಹವಾಮಾನ ಹಾಗೂ ಅನಿಶ್ಚಿತ ಬೆಲೆಯ ಪರಿಣಾಮದಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರ ಸುಧಾರಣೆಗಾಗಿ ಗುಜರಾತ್‌ ಮಾದರಿಯಲ್ಲಿ ಹತ್ತಿ ಬೆಳೆಗಾರರಿಗೆ ತೆರಿಗೆ ವಿನಾಯಿತಿಯನ್ನು ದೇಶದಾದ್ಯಂತ ವಿಸ್ತರಿಸಬೇಕು. ದೇಶದಲ್ಲಿರುವ ಬಹುತೇಕ ಸ್ಪಿನ್ನಿಂಗ್ ಮಿಲ್ಲುಗಳು ಆಡಳಿತದಲ್ಲಿನ ಏರುಪೇರುಗಳಿಂದ ನಷ್ಟ ಅನುಭವಿಸುತ್ತಿವೆ. ಇದಕ್ಕಾಗಿ ಸರ್ಕಾರವು ಸ್ಥಳೀಯ ಮಟ್ಟದಲ್ಲಿ ಹತ್ತಿ ಬೆಳೆಗಾರರನ್ನು ಒಳಗೊಂಡ ಸಮನ್ವಯ ಸಮಿತಿಗಳನ್ನು ರಚಿಸಬೇಕಾದುದು ಅತ್ಯಂತ ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT