ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಗೋಮೂತ್ರವೇ ಮದ್ದು

Last Updated 15 ಮಾರ್ಚ್ 2020, 18:24 IST
ಅಕ್ಷರ ಗಾತ್ರ

ಬೆಕ್ಕಣ್ಣ ಪೇಪರು ಹಿಡಿದು ಬಲು ಖುಷಿಯಲ್ಲಿ ಕೂತಿತ್ತು.

‘ನೋಡೀಯಿಲ್ಲೋ... ಈಗ ಇಡೀ ವಿಶ್ವ, ಭಾರತಕ್ಕೆ ನಮಸ್ಕಾರ ಮಾಡೂಹಂಗ ಆತು. ಹಿಂಗೆಲ್ಲ ಆಗತೈತಿ ಅಂತ ಸಾವಿರಾರು ವರ್ಷದ ಹಿಂದೆ ಗೊತ್ತಿದ್ದೇ ನಮ್ಮೋರು ನಮಸ್ಕಾರ ಮಾಡದು ಕಂಡು ಹಿಡಿದಿದ್ರು. ಟ್ರಂಪಣ್ಣ ಸೈತ ಬ್ಯಾರೆ ದೇಶದವ್ರನ್ನು ಭೆಟ್ಟಿಯಾದಾಗ ನಮಸ್ಕಾರ ಮಾಡಾಕ ಹತ್ಯಾನ. ಏನೇ ಅಂದ್ರೂ ನಮ್ಮ ದೇಶದ ಸಂಸ್ಕೃತಿ ಭಯಂಕರ ದೊಡ್ಡದು’ ಎಂದು ಉದ್ಗರಿಸುತ್ತ ಫೋಟೊ ತೆರೆತೆರೆದು ತೋರಿಸಿತು.

‘ಪಾಪ... ಜ್ಯೋತಿರಾರಾಧ್ಯಂಗ ಕಾಂಗಿ ವೈರಸ್ಸು ಅಟ್ಯಾಕ್ ಆಗಿ, ಉಸಿರಾಡಾಕ ಆಗಿರಲಿಲ್ಲಂತ. ಅವನನ್ನ ನಮ್ಮ ಮೋಶಾಟ್ಲರ್ ಹೆಂಗ ರಕ್ಷಣೆ ಮಾಡಿ, ಕಮಲಕ್ಕನ ಮನಿಗಿ ಸೇರಿಸಿದ್ರು. ನಾಕೇ ದಿನದಾಗ ಜಬರ್ದಸ್ತ್ ಉಸಿರಾಡಕ್ಕೆ ಹತ್ಯಾನ’ ಎಂದು ಅಭಿಮಾನದಿಂದ ಹೇಳಿತು.

‘ಮೊದ್ಲು ಕಮಲಕ್ಕಂಗೆ ಬೈತಿದ್ದ, ಈಗ ನಮ್ಮ ದೇಶ ಅವರ ಕೈಯಾಗೆ ಸುರಕ್ಷಿತ ಐತಿ ಅಂತ ಕೊಂಡಾಡಕ್ಕೆ ಹತ್ಯಾನ. ಕೊರೊನಾಕ್ಕಿಂತ ಮೊದ್ಲು ಈ ಪಕ್ಷಾಂತರ ವೈರಸ್ಸಿಗಿ ಲಸಿಕೆ ಹಾಕಬೇಕು’ ಎಂದೆ. ನನ್ನ ಮಾತು ಕಿವಿಗೆ ಹಾಕಿಕೊಳ್ಳದೇ, ‘ಪಾಪ ನಮ್ಮ ಮುಕೇಶಣ್ಣ ರಗಡ್ ಕಷ್ಟಪಟ್ಟು ದುಡಿದು, ರೊಕ್ಕ ಮಾಡಿದ್ದ. ಷೇರು–ಕರಡಿ ಅವನ್ನೂ ಹಿಂಡಿ ಹಿಪ್ಪೆ ಮಾಡೈತಂತ...’ ಎಂದು ಲೊಚಗುಟ್ಟಿದ ಬೆಕ್ಕಣ್ಣ ಮೂತಿಗೊಂದು ಮಾಸ್ಕ್ ಸಿಕ್ಕಿಸಿಕೊಂಡು ಹೊರಟಿತು. ‘ಇಲ್ಲೂ ಗೋಮೂತ್ರ ಪಾರ್ಟಿ ಮಾಡ್ತಾರಂತ, ನಾನೂ ಒಂದು ಗ್ಲಾಸ್ ಏರಿಸಿ ಬರ್ತೀನಿ’.

‘ಅದ್ ಗೋಮೂತ್ರ ಅಲ್ಲಲೇ, ಬೆಂಗಳೂರಿನ ಬೀದಿದನದ ಉಚ್ಚೆ, ಅದ್ರಾಗೆ ಬರೀ ಪ್ಲಾಸ್ಟಿಕ್, ಪೇಪರ‍್ರು ಅದೂ ಇದೂ ಕಸ ತಿಂದಿದ್ದರ ರಸ ಇರತೈತಿ. ಅದ್ರ ಬದ್ಲಿಗೆ ಮಂಗಳೂರಾಗ ಭಾರೀ ಅಪರೂಪದ ಕೊರೊನಾ ಮೀನು ಸಿಕ್ಕಾವಂತ, ಅಲ್ಲೀಗರ ಹೋಗು’ ಎಂದೆ.

‘ನೀ ಏನರ ಒಂದ್ ಒದರಬ್ಯಾಡ. ಛಲೋ ಗೋಶಾಲೆಯಲ್ಲಿ ಸಾವಯವ ಹುಲ್ಲು ತಿಂದ ಹಸುಗಳು ಹಾಕಿದ ಮೂತ್ರ ಕೊಡ್ತಾರಂತ. ಎಲ್ಲಾದಕ್ಕೂ ಗೋಮೂತ್ರವೇ ಮದ್ದು ಅಂತ ವಾಟ್ಸಾಪ್ ವಿ.ವಿಯ ವೇದದಾಗೆ ಹೇಳ್ಯಾರ’ ಎಂದು ವಿತಂಡವಾದ ಹೂಡಿ ಓಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT