ಬ್ಯಾಂಕ್‌ ವಿಲೀನ: ಈಡೇರಿತೇ ಗುರಿ?

ಶನಿವಾರ, ಏಪ್ರಿಲ್ 20, 2019
29 °C

ಬ್ಯಾಂಕ್‌ ವಿಲೀನ: ಈಡೇರಿತೇ ಗುರಿ?

Published:
Updated:
Prajavani

ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗ ಮಹತ್ತರ ಬದಲಾವಣೆಗಳು. 2017ರ ಏಪ್ರಿಲ್ 1ರಂದು, ರಾಷ್ಟ್ರದ ಅತಿದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ತನ್ನ ಐದು ಸಹವರ್ತಿ ಬ್ಯಾಂಕ್‌ಗಳನ್ನು ತನ್ನೊಳಗೆ ವಿಲೀನಗೊಳಿಸಿದ ಬೆನ್ನಲ್ಲೇ, ಇದೇ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ, ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿದೆ. ಹಲವಾರು ಆರ್ಥಿಕ ತಜ್ಞರು, ಬ್ಯಾಂಕ್ ಗ್ರಾಹಕರು ಹಾಗೂ ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ಈ ವಿಲೀನ ಪ್ರಕ್ರಿಯೆಯು ಹಂತ ಹಂತವಾಗಿ ಕಾರ್ಯಗತವಾಗುತ್ತಿರುವ ಔಚಿತ್ಯವು ಚರ್ಚಾಸ್ಪದವಾಗಿದೆ.

ವಿಶ್ವದಾದ್ಯಂತ ಬಹುತೇಕ ದೇಶಗಳು ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಕಡೆಗೆ ಹೊರಳುತ್ತಿರುವ ಪ್ರವೃತ್ತಿಯು ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯಕರ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರೇರಣೆ ನೀಡಿತು. ಬ್ಯಾಂಕ್ ವಿಲೀನೀಕರಣವೂ ಆರ್ಥಿಕ ಸುಧಾರಣೆಗಳ ಒಂದು ಭಾಗವೇ ಆಗಿದೆ. ಈ ಪ್ರಕ್ರಿಯೆಯು ಆತುರದಿಂದ ನಡೆದ ಕಾರ್ಯವೇನಲ್ಲ. ಬದಲಾದ ಸನ್ನಿವೇಶದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ, ಬ್ಯಾಂಕುಗಳ ಸಾಲದ ಗುಣಮಟ್ಟದ ವಿಮರ್ಶೆಯ ನಂತರ, ಬ್ಯಾಂಕ್‌ಗಳು ಗಳಿಸುವ ಆದಾಯ ಹಾಗೂ ಲೆಕ್ಕಾಚಾರದ ವಿಧಾನಗಳು ಕೂಡ ಬದಲಾವಣೆಗಳನ್ನು ಕಂಡವು. ತನ್ಮೂಲಕ, ಬ್ಯಾಂಕ್‌ಗಳ ಲಾಭದ ಮಟ್ಟವೂ ಕುಸಿತಗೊಂಡು, ವಸೂಲಾಗದ ಸಾಲಗಳ (ಎನ್‌ಪಿಎ) ಪ್ರಮಾಣವು ಏರಿಕೆಯ ಹಾದಿಯಲ್ಲಿ ಸಾಗಿತ್ತು.

ಆರ್ಥಿಕ ಕ್ಷೇತ್ರದ ಆರೋಗ್ಯಕರ ಬಲವರ್ಧನೆಯನ್ನು ಬೆಂಬಲಿಸುವ ಸಲುವಾಗಿ, 1991ರಲ್ಲೇ ಅಂದಿನ ಸರ್ಕಾರವು ಆರ್ಥಿಕ ತಜ್ಞ ನರಸಿಂಹನ್ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಯಿತು. ಆ ಸಮಿತಿಯ ಶಿಫಾರಸುಗಳಲ್ಲಿ ಬ್ಯಾಂಕ್ ವಿಲೀನದ ಪ್ರಸ್ತಾವವು ಪ್ರಮುಖ ವಿಷಯವಾಗಿತ್ತು. ಅದರಂತೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪುನರ್‌ ವಿಂಗಡಣೆಗೆ ನಾಂದಿಯಾಯಿತು. ಜಾಗತಿಕ ಮಟ್ಟದ 3ರಿಂದ 4 ದೊಡ್ಡ ಬ್ಯಾಂಕ್‌ಗಳು, ರಾಷ್ಟ್ರ ಮಟ್ಟದ 8ರಿಂದ 10 ಬ್ಯಾಂಕ್‌ಗಳು, ಪ್ರಾದೇಶಿಕ ಹಾಗೂ ಸ್ಥಳೀಯ ಮಟ್ಟದ ಕೆಲವು ಬ್ಯಾಂಕ್‌ಗಳೆಂಬ ಮೂರು ಹಂತದ ಬ್ಯಾಂಕಿಂಗ್ ವ್ಯವಸ್ಥೆ ಹೊಂದಲು ನಿರ್ಧರಿಸಲಾಯಿತು.

ದೊಡ್ಡ ಮಟ್ಟದ ಬ್ಯಾಂಕ್‌ಗಳಿಂದ ಹೆಚ್ಚಿನ ಬಂಡವಾಳದ ಆಕರ್ಷಣೆ, ಉನ್ನತ ತಂತ್ರಜ್ಞಾನದ ಅಳವಡಿಕೆ, ಲಾಭದಾಯಕತೆ, ಆಸ್ತಿಗಳ ಗುಣಮಟ್ಟದ ಹೆಚ್ಚಳ ಹಾಗೂ ಕಾರ್ಯದಕ್ಷತೆಯಲ್ಲಿ ಸುಧಾರಣೆಗಳು ಅಪೇಕ್ಷಣೀಯ ಅಂಶಗಳಾಗಿದ್ದವು.

ಆದರೆ, ಸುದೀರ್ಘ ಕಾಲದ ಹಾಗೂ ಹೆಚ್ಚು ಸಂಕೀರ್ಣವಾದ ಬ್ಯಾಂಕ್ ವಿಲೀನದ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅತ್ಯಂತ ಸೂಕ್ಷ್ಮ ಸಮಸ್ಯೆಗಳಾದ ಮಾನವ ಸಂಪನ್ಮೂಲದ ಜವಾಬ್ದಾರಿಯುತ ಪುನರ್ ವ್ಯವಸ್ಥೆ, ಶಾಖೆಗಳ ಏಕೀಕರಣ, ಗ್ರಾಹಕರ ಹಿತರಕ್ಷಣೆ, ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಗಳ ಸಮರ್ಥ ನಿರ್ವಹಣೆ, ವ್ಯವಹಾರದ ಹೊಂದಾಣಿಕೆ, ಬಂಡವಾಳದ ಸ್ಪರ್ಧಾತ್ಮಕ ನಿಯೋಜನೆ ಮುಂತಾದ ಗಂಭೀರ ವಿಷಯಗಳಿಂದಾಗಿ ಈ ಪ್ರಕ್ರಿಯೆಯನ್ನು ಹೆಚ್ಚು ಎಚ್ಚರಿಕೆಯಿಂದ ಕಾರ್ಯರೂಪಕ್ಕೆ ತರಬೇಕಾದ ಸಂದಿಗ್ಧ ಎದುರಾಯಿತು.

ಭಾರತೀಯ ಸ್ಟೇಟ್ ಬ್ಯಾಂಕ್‌ನೊಳಗೆ ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ಕಾರ್ಯವು ಈ ನಿಟ್ಟಿನಲ್ಲಿ ಅಷ್ಟೊಂದು ಸಂಕೀರ್ಣವಾಗಿ ಇರಲಿಲ್ಲವೆಂದೇ ಹೇಳಬಹುದು. ಏಕೆಂದರೆ, ಆ ಸಹವರ್ತಿ ಬ್ಯಾಂಕ್‌ಗಳ ಕಾರ್ಯವೈಖರಿಯು ಒಂದೇ ರೀತಿಯಲ್ಲಿತ್ತು. ಅವುಗಳೆಲ್ಲವೂ ಹೆಚ್ಚಿನಂಶ ಎಸ್‌ಬಿಐ ಅಧೀನದಲ್ಲೇ ಇದ್ದಂಥವು. ಇದಕ್ಕೆ ತದ್ವಿರುದ್ಧವಾಗಿ ಈಗ, ವಿಭಿನ್ನ ರೀತಿಯ ಕಾರ್ಯ ನಿರ್ವಹಣೆಯ ದೇನಾ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಲಾಗಿದೆ.

ಯಾವುದೇ ಪ್ರಮುಖ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲು ಕೆಲವು ಅಡೆತಡೆಗಳನ್ನು ಕ್ರಮಿಸಬೇಕಾಗುತ್ತದೆ. ಅದಕ್ಕೆ ಕಾಲಾವಕಾಶವೂ ಬೇಕಾಗುತ್ತದೆ. ತಕ್ಷಣದ ಪ್ರತಿಫಲಾಪೇಕ್ಷೆ ಇಲ್ಲಿ ಸಾಧ್ಯವಾಗದ ಮಾತು. ಭಾವನಾತ್ಮಕ ಸಂಗತಿಗಳಿಗೆ ಬೆಲೆಯೂ ಇರುವುದಿಲ್ಲ. ಅಭಿವೃದ್ಧಿಯೊಂದೇ ಅದರ ಮೂಲಮಂತ್ರ.

ಇದೀಗ, ವಿಲೀನ ಪ್ರಕ್ರಿಯೆ ಮುಗಿದು ಎರಡು ವರ್ಷಗಳ ನಂತರ, ಎಸ್‌ಬಿಐ ಸ್ವಲ್ಪ ಕಾಲದ ನಷ್ಟದ ಸುಳಿಯಿಂದ ಹೊರಬಂದು, ಲಾಭದ ಹಾದಿಗೆ ಮರಳುತ್ತಿದೆ. ಆದರೂ ಗ್ರಾಹಕರ ಒಟ್ಟು ಅಭಿಪ್ರಾಯದ ಪ್ರಕಾರ, ಸೇವೆಯಲ್ಲಿ ವಿಳಂಬ, ಬ್ಯಾಂಕ್‌ನ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಗ್ರಾಹಕರ ಮೇಲೆ ಹೇರಿಕೆ, ಗ್ರಾಮೀಣ ಪ್ರದೇಶದ ಗ್ರಾಹಕರ ಮೇಲೆ ತಂತ್ರಜ್ಞಾನದ ಬಲವಂತದ ಹೇರಿಕೆ, ಸ್ಥಳೀಯ ಭಾಷಾ ಜ್ಞಾನವಿಲ್ಲದ ಸಿಬ್ಬಂದಿಯ ನಿಯೋಜನೆ... ಮುಂತಾದ ಸಮಸ್ಯೆಗಳು ಕಾಡುತ್ತಿವೆ.

ಒಟ್ಟಾರೆ, ಯಾವುದೇ ಪ್ರಮುಖ ನಿರ್ಧಾರವು ಸಂಬಂಧಿಸಿದ ಪಾಲುದಾರರಾದ ಷೇರುದಾರರು, ಗ್ರಾಹಕರು ಹಾಗೂ ನೌಕರರ ಹಿತಾಸಕ್ತಿಯನ್ನು ಕಾಪಾಡುವುದು ಅಪೇಕ್ಷಣೀಯ ಮತ್ತು ಪ್ರಮುಖ ಗುರಿಯೂ ಹೌದು. ಸಾಮಾಜಿಕ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಂತೂ, ಲಾಭ ಗಳಿಕೆಯೊಂದೇ ಮಾನದಂಡ ಆಗಬಾರದು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !