ಮಂಗಳವಾರ, ಮೇ 18, 2021
24 °C

ನೀವು ಕೂಡ ಸೆಲ್ಫಿ ವ್ಯಸನಿಗಳೇ ?

ಆರ್. ಶ್ರೀನಾಗೇಶ್ Updated:

ಅಕ್ಷರ ಗಾತ್ರ : | |

ಶ್ರೀಲಂಕಾದಿಂದ ಒಂದು ಯುವಜನರ ತಂಡ ಬಂದಿದೆ. ಅವರನ್ನು ಬೆಂಗಳೂರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತಿದ್ದೆ. ಅವರು ಸ್ಥಳಗಳನ್ನು ನೊಡುವುದಕ್ಕಿಂತ ಸೆಲ್ಫಿಗಳನ್ನು ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು! ಮದುವೆ ಮನೆಗಳಲ್ಲಿ, ಪಾರ್ಕ್‌ಗಳಲ್ಲಿ, ಮಾಲ್‍ಗಳಲ್ಲಿ, ಎಲ್ಲೆಲ್ಲಿಯೂ ಸೆಲ್ಫಿಗಳನ್ನು ತೆಗೆದುಕೊಳ್ಳುವವರ ಹಾವಳಿ.

ಕೆಲವರಿಗೆ ಇದೇ ಗೀಳಾಗಿಬಿಟ್ಟಿರುತ್ತದೆ. ಅಪಾರ ಕೀಳರಿಮೆ ಇರುವವರು ಇತರರ ಮೆಚ್ಚುಗೆ ಗಳಿಸಲು ಹೆಚ್ಚು ಸೆಲ್ಫಿಗಳನ್ನು ತೆಗೆದುಕೊಂಡು ಅಂತರ್ಜಾಲದಲ್ಲಿ ಹಾಕುತ್ತಾರೆ. ಅದಕ್ಕೆ ಬರುವ ಲೈಕ್‍ಗಳನ್ನು ಗಮನಿಸಿ, ನಿರೀಕ್ಷಿಸಿದಷ್ಟು ಬಂದಿರದಿದ್ದರೆ ಮತ್ತಷ್ಟು ಖಿನ್ನತೆಗೆ ಜಾರುತ್ತಾರೆ.

ನೀವೂ ಅಂತಹ ವ್ಯಸಿನಗಳೇ?
ಬಹುತೇಕ ವ್ಯಸನಿಗಳು ಈ ಪ್ರಶ್ನೆಗೆ ಇಲ್ಲ ಎಂದೇ ಉತ್ತರಿಸುತ್ತಾರೆ! ಸೆಲ್ಫಿ ತೆಗೆದುಕೊಳ್ಳದೇ ಹೋದರೆ ಮನಸ್ಸು ತುಡಿಯುತ್ತಿರುವುದೇ? ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸೆಲ್ಫಿಗಳನ್ನು ತೆಗೆದುಕೊಳ್ಳುವಿರಾ? ಅದರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎನಿಸುತ್ತದೆ, ಆದರೆ ಆಗುತ್ತಿಲ್ಲವೇ? ಸೆಲ್ಫಿಗೆ ಮೆಚ್ಚುಗೆಗಳು ಬಾರದಿದ್ದರೆ, ಕಡಿಮೆಯಾದರೆ ನೊಂದುಕೊಳ್ಳುವಿರಾ? ಸೆಲ್ಫಿ ತೆಗೆದುಕೊಳ್ಳುವ ವಿಷಯವನ್ನೇ ಯೋಚಿಸಿಕೊಂಡು ಹೇಗೆಲ್ಲ ತೆಗೆದುಕೊಳ್ಳಬೇಕು ಎಂದು ಪ್ಲಾನ್ ಮಾಡುವುದರಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವಿರಾ? ಕರ್ತವ್ಯಗಳಿಗೂ ಗಮನ ಕೊಡದೇ ಸೆಲ್ಫಿಗೆ ಆದ್ಯತೆ ಕೊಡುವಿರಾ? ಜೊತೆಯಲ್ಲಿರುವವರನ್ನು ನಿರ್ಲಕ್ಷಿಸಿಸಿ ಆದರೂ ನಿಮ್ಮ ಸೆಲ್ಫಿಗೆ ಹೆಚ್ಚು ಸಮಯ ಕೊಡುವಿರಾ?

ಈ ಪ್ರಶ್ನೆಗಳಿಗೆ ನೀವು ಕೊಡುವ ಉತ್ತರಗಳು, ನೀವು ವ್ಯಸನಿಗಳಾಗಿದ್ದೀರಾ ಎನ್ನುವುದನ್ನು ಎತ್ತಿತೋರಿಸುತ್ತವೆ. ಕೀಳರಿಮೆ ಇರುವವರನ್ನು ಮಾತ್ರವಲ್ಲದೆ ಕೆಲವು ಮಾನಸಿಕ ತೊಳಲಾಟಗಳಲ್ಲಿ ಇರುವವರನ್ನೂ ಈ ವ್ಯಸನ ಕಾಡುತ್ತದೆ.

ಅಮೆರಿಕದ 17ರ ವಯಸ್ಸಿನ ಹುಡುಗನೊಬ್ಬನಿಗೆ ಈ ಗೀಳು ಎಷ್ಟು ಕಾಡಿತ್ತು ಎಂದರೆ ಮೆಚ್ಚುಗೆಗಳು ಕಡಿಮೆಯಾಗಿದ್ದಕ್ಕೆ ಸಾಯುವ ನಿರ್ಧಾರಕ್ಕೂ ಬಂದಿದ್ದ. ಅದೃಷ್ಟವಶಾತ್ ಅದರಿಂದ ಹೊರಬರುವುದು ತನಗೆ ಒಳ್ಳೆಯದು ಎಂದುಕೊಂಡು ತಜ್ಞರ ನೆರವು ಪಡೆದು ಗೀಳಿನಿಂದ ಆಚೆ ಬಂದ.

ಯಾವುದೇ ಗೀಳನ್ನು ಅಂಟಿಸಿಕೊಳ್ಳುವುದು ಸುಲಭ. ಬಿಡಿಸಿಕೊಳ್ಳುವುದು ಕಷ್ಟ. ಅದನ್ನೇ ಮಾರ್ಕ್ ಟ್ವೇನ್ ವ್ಯಂಗ್ಯವಾಗಿ ಹೇಳುತ್ತಾನೆ- ಸಿಗರೇಟ್ ಸೇವನೆಯನ್ನು ಬಿಟ್ಟು ಬಿಡುವುದು ತುಂಬಾ ಸುಲಭ. ನಾನು ಅದೆಷ್ಟೋ ಬಾರಿ ಸೇದುವುದನ್ನು ಬಿಟ್ಟು ಬಿಟ್ಟಿದ್ದೇನೆ.

ಈಗಾಗಲೇ ಗೀಳಿನತ್ತ ಸಾಗುತ್ತಿದ್ದರೆ, ದಿನವೂ ಎಷ್ಟು ಸೆಲ್ಫಿ ತೆಗೆದುಕೊಂಡಿರಿ ಎಂದು ದಿನಚರಿ ಬರೆದು ಕಡಿಮೆ ಮಾಡಿಕೊಳ್ಳುವತ್ತ ದೃಢ ಪ್ರಯತ್ನ ಮಾಡಬೇಕು.

ಕಲಿಯುವ ವಯಸ್ಸು ನಿಮ್ಮದು ಎನ್ನುವುದರ ಜೊತೆಗೆ ಉದ್ವೇಗದ ವಯಸ್ಸು ಕೂಡ. ಬಯಕೆಗಳು ಕೂಡಲೇ ಈಡೇರಿ ಬಿಡಬೇಕು ಎನ್ನುವ ತುಡಿತವಿರುವ ವಯಸ್ಸು. ಈ ವಿಷಯದಲ್ಲಿ ಸಹನೆಯನ್ನು ಬೆಳೆಸಿಕೊಳ್ಳದಿದ್ದರೆ, ನಿರೀಕ್ಷೆಯನ್ನು ನಿಭಾಯಿಸುವುದನ್ನು ಕಲಿಯದಿದ್ದರೆ, ಜೀವನದಲ್ಲಿ ಬರುವ ವಿವಿಧ ಸಮಸ್ಯೆಗಳನ್ನು ಎದುರಿಸಲು ಅಶಕ್ತರಾಗುವಿರಿ. ಬುದ್ಧಿವಂತರು ಹಾಗಾಗಲು ಬಿಡುವುದಿಲ್ಲ ಎನ್ನುವುದನ್ನು ಮರೆಯದಿರಿ! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು