ಭಾನುವಾರ, ಮೇ 22, 2022
24 °C
ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಜನ ಸೂಕ್ತ ಮಾರ್ಗ ಅನುಸರಿಸಬೇಕು. ಇಲ್ಲದಿದ್ದರೆ ದೇವರು, ನಂಬಿಕೆಯ ಹೆಸರಿನಲ್ಲಿ ಜನರ ಶೋಷಣೆ ನಡೆಯುತ್ತಲೇ ಇರುತ್ತದೆ

ಮೌಢ್ಯ, ಭಕ್ತಿ, ವೈಜ್ಞಾನಿಕ ಮನೋವೃತ್ತಿ

ಈ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಋಷಿವ್ಯಾಲಿ ಶಾಲೆಗೆ ಹೆಸರಾದ ಸ್ಥಳ. ಇಂಥ ಸ್ಥಳದಲ್ಲಿ, ರಾಸಾಯನಿಕ ವಿಜ್ಞಾನದಲ್ಲಿ ಪಿಎಚ್.ಡಿ ಪಡೆದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿರುವ ತಂದೆ, ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ, ಗಣಿತದಲ್ಲಿ ಚಿನ್ನದ ಪದಕ ಪಡೆದ ತಾಯಿ ‘ಮತ್ತೆ ಹುಟ್ಟಿ ಬರಲಿದ್ದಾರೆ’ ಎಂದು ನಂಬಿ, ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಇತ್ತೀಚೆಗೆ ದಾರುಣವಾಗಿ ಕೊಲೆ ಮಾಡಿರುವ ಕೃತ್ಯ ಎಲ್ಲರೂ ತಲೆ ತಗ್ಗಿಸುವಂಥದ್ದು.

ಮಾಟ, ಮಂತ್ರ, ಅತೀಂದ್ರಿಯ ಶಕ್ತಿ, ಪುನರ್ಜನ್ಮದ ಮೇಲೆ ನಂಬಿಕೆಯಿದ್ದ ಈ ಕುಟುಂಬದ ಸದಸ್ಯರೆಲ್ಲರೂ ಈ ಕೃತ್ಯದ ಭಾಗವಾಗಿರುವುದು ಮತ್ತೊಂದು ಆಘಾತಕಾರಿ ಸುದ್ದಿ. ಲಾಕ್‍ಡೌನ್ ಸಮಯದಲ್ಲಿ ಅನುಮಾನಾಸ್ಪದವಾಗಿ ಮನೆಯಲ್ಲಿ ಉಳಿದಿದ್ದ ಈ ಕುಟುಂಬ, ಅತೀಂದ್ರಿಯ ಶಕ್ತಿಯ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿದೆ ಎಂದು ಹೇಳಲಾಗಿದೆ.

ಇದೊಂದು ಪ್ರತ್ಯೇಕ ಪ್ರಕರಣವಲ್ಲ. ಆಂಧ್ರಪ್ರದೇಶದ ಒಂಗೋಲ್‍ನಲ್ಲಿ ಭಾನಾಮತಿ ಆಗಿದೆ ಎಂದು ಮಗನೊಬ್ಬ ತನ್ನ ತಾಯಿಯ ಕತ್ತು ಕತ್ತರಿಸಿದ್ದಾನೆ. ಮಾಟ, ಮಂತ್ರ, ಭಾನಾಮತಿ ಹೆಸರಿನಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ ಮುಂದುವರಿದಿದೆ. ಕೆಲ ವರ್ಷಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ನಡೆದ ಒಂದು ಘಟನೆ: ಸಣ್ಣ ಎಂಬ ವ್ಯಕ್ತಿಯಿದ್ದ. ಅವನ ಮೈಮೇಲೆ ದೇವರು ಬರುತ್ತಿತ್ತು ಎಂದು ಹೇಳಲಾಗುತ್ತಿತ್ತು. ಹೀಗಾಗಿ ಅವನು ದೇವರು ಬರುವ ಸಣ್ಣ ಎಂದೇ ಹೆಸರಾಗಿದ್ದ. ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ ಸಣ್ಣನ ಬಳಿ ಕರೆತಂದಳು. ಆಕೆಯ ಮೇಲೆ ಸಣ್ಣನ ಕಣ್ಣು ಬೀಳುತ್ತದೆ. ಈ ಕಾಯಿಲೆ ವಾಸಿಯಾಗಲು ರಾತ್ರಿ ವೇಳೆ ಕಾಡಿನೊಳಗೆ ಹೋಗಿ ಪೂಜೆ ಮಾಡಬೇಕೆನ್ನುತ್ತಾನೆ.

ಅದರಂತೆ ಮೂವರೂ ಕಾಡಿಗೆ ಹೋಗುತ್ತಾರೆ. ಸಣ್ಣ ಪೂಜೆ ಮಾಡಿ ಮುಗಿಸಿದ ನಂತರ ದೇವರು ಬಂದವನಂತೆ ನಟಿಸಿ, ವ್ಯಕ್ತಿಯ ಎದೆಯ ಮೇಲೆ ಕುಳಿತು ಆತನ ಎದೆಗೆ ಇರಿಯುತ್ತಾನೆ. ಆತ ಸ್ಥಳದಲ್ಲೇ ಮೃತಪಟ್ಟ. ಇದರಿಂದ ಆತನ ಹೆಂಡತಿಯೂ ಗಾಬರಿಯಾಗುತ್ತಾಳೆ. ನಂತರ ತನಿಖೆಯಾಗಿ ಸಣ್ಣ ಜೈಲಿಗೆ ಹೋಗಿ ಬಂದ.

ಅನೇಕ ವರ್ಷಗಳ ಹಿಂದೆ, ಪ್ರಪಂಚ ಅಂತ್ಯವಾಗುತ್ತಿದೆ ಎಂದು ಒಂದು ಸಮುದಾಯದ ಜನ ಒಟ್ಟಾಗಿ ಪ್ರಾರ್ಥನಾ ಮಂದಿರವೊಂದರಲ್ಲಿ ಕೈಗಳನ್ನು ಕಿಟಕಿಯ ಸರಳುಗಳಿಗೆ ಸರಪಳಿಯಿಂದ ಬಿಗಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿತ್ತು.

ಹೀಗೆ ದೇವರು, ನಂಬಿಕೆಯ ಹೆಸರಿನಲ್ಲಿ ಜನರ ಶೋಷಣೆ ನಡೆಯುತ್ತಲೇ ಇದೆ. ಇಲ್ಲಿ ಅಕ್ಷರಸ್ಥರು, ಅನಕ್ಷರಸ್ಥರೆಂಬ ಭೇದವಿಲ್ಲ. ಎಲ್ಲರೂ ಶೋಷಣೆಗೆ ಒಳಗಾಗುವವರೇ. ಬಾಹ್ಯಾಕಾಶ ವಿಜ್ಞಾನಿಯೊಬ್ಬರು ಇತ್ತೀಚೆಗೆ ಉಪನ್ಯಾಸವನ್ನು ನಡೆಸಿಕೊಟ್ಟರು. ಕೊನೆಯಲ್ಲಿ ವ್ಯಕ್ತಿಯೊಬ್ಬರು ‘ಗ್ರಹ, ನಕ್ಷತ್ರಗಳ ಹೆಸರಿನಲ್ಲಿ ಗ್ರಹಚಾರ ದೋಷ ಎಂದು ಜನರಲ್ಲಿ ಭಯವನ್ನುಂಟು ಮಾಡಲಾಗುತ್ತಿದೆ. ಈ ಗ್ರಹ, ನಕ್ಷತ್ರಗಳು ನಿರ್ಜೀವ ವಸ್ತುಗಳು. ಅವುಗಳ ಮೇಲೆ ನಮ್ಮ ಯಂತ್ರಗಳು ಇಳಿದಿವೆ. ಅವುಗಳ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಯಾಕೆ ನೀವು ಜನರಿಗೆ ತಿಳಿಸಿ ಧೈರ್ಯ ತುಂಬಬಾರದು’ ಎಂದರು. ಅದಕ್ಕೆ ಉಪನ್ಯಾಸಕರು, ‘ನೋಡಿ, ನಾವು ಜ್ಯೋತಿಷ ತಿಳಿದವರಲ್ಲ, ನಮಗೆ ತಿಳಿಯದ ವಿಷಯದ ಬಗ್ಗೆ ಹೇಳಲು ಸಾಧ್ಯವಿಲ್ಲ’ ಎಂದರು.

ಮನುಷ್ಯ ತನ್ನ ಜ್ಞಾನ, ಪರಿಶ್ರಮ, ಅನುಭವ ಮತ್ತು ಸಜ್ಜನರ ನೆರವಿನಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅದರ ಬದಲು ಯಂತ್ರ, ಮಂತ್ರಗಳ ಮೊರೆ ಹೋಗುವುದರಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವು ವಿಜ್ಞಾನಿಗಳು, ಖ್ಯಾತ ಆಟಗಾರರು, ಚಲನಚಿತ್ರ ತಾರೆಯರು, ರಾಜಕಾರಣಿಗಳು ಸಾರ್ವಜನಿಕವಾಗಿ ನಿರ್ವಹಿಸುವ ಹೋಮ, ಹವನಗಳಂಥವು ಮುಗ್ಧರಿಗೆ ಬೇರೆಯದ್ದೇ ಸಂದೇಶವನ್ನು ರವಾನಿಸುತ್ತವೆ.

ಕೆಲವು ಸರ್ಕಾರಿ ಕಚೇರಿಗಳಲ್ಲಿ ‘ಪವಿತ್ರವಾದ ಗಂಗಾಜಲ ಲಭ್ಯ’ ಎಂಬ ನಾಮಫಲಕ ಹಾಕಲಾಗಿದೆ ಮತ್ತು ದೇವರ ಪ್ರಸಾದವನ್ನು ಮಾರಾಟ ಮಾಡಲಾಗುತ್ತದೆ. ಇದು ಸರ್ಕಾರದ ಕೆಲಸವೇ? ತನ್ನ ಅಂಗಡಿಯಲ್ಲಿ ವ್ಯಾಪಾರವಾಗಿಲ್ಲ ಎಂದು ಯಾರದೋ ಸಲಹೆ ಮೇರೆಗೆ ಬಡ ವ್ಯಾಪಾರಿ ‘ತಡೆ’ ಒಡೆಸುತ್ತಾನೆ. ಅಣ್ಣನು ತಮ್ಮನಿಗೆ ಮಾಟ ಮಾಡಿದ್ದಾನೆಂದು ಹೇಳಿ ಅವರ ನಡುವೆಯೇ ದ್ವೇಷ ಹುಟ್ಟಿಸುವ ಮೋಸಗಾರ ಮಾಂತ್ರಿಕರಿದ್ದಾರೆ.

ಮದುವೆ ಆಗದಿರುವುದಕ್ಕೆ, ಮಕ್ಕಳಾಗದಿರುವುದಕ್ಕೆ ಎಲ್ಲಕ್ಕೂ ಆ ಬಗ್ಗೆ ಜ್ಞಾನವೇ ಇಲ್ಲದ ಮಂತ್ರವಾದಿಗಳನ್ನು, ಭವಿಷ್ಯ ಹೇಳುವವರನ್ನು ಆಶ್ರಯಿಸುತ್ತಾರೆ. ಕೊನೆಯಲ್ಲಿ ಮೋಸವಾದಾಗ ಎಲ್ಲವೂ ಬಯಲಾಗಿರುತ್ತದೆ. ಆದ್ದರಿಂದ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರಿಯಾದ ಮಾರ್ಗವನ್ನು ಅನುಸರಿಸಲು ಜನ ಮುಂದಾಗಬೇಕು, ಅದುವೇ ವೈಜ್ಞಾನಿಕ ಮಾರ್ಗ.

ಎಲ್ಲದಕ್ಕೂ ಕಾರ್ಯಕಾರಣ ಸಂಬಂಧವಿರುತ್ತದೆ. ಎಲ್ಲವನ್ನೂ ಏನು, ಏಕೆ ಎಂದು ಪ್ರಶ್ನಿಸಿ ನಂತರ ಮುನ್ನಡೆಯಬೇಕು. ಆಗ ಅನಾಹುತಗಳಿಗೆ ಕಡಿವಾಣ ಹಾಕಲು ಸಾಧ್ಯ.

ಲೇಖಕ: ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.