ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಾಡಾನೆ ಕಾಟಕ್ಕಿದೆ ಪರಿಹಾರ!

ನಾಡಿಗೆ ನುಗ್ಗುವ ಆನೆಗಳ ಮಾಹಿತಿ ಪಡೆಯಲು ದಕ್ಷಿಣ ಆಫ್ರಿಕಾ ಅನುಸರಿಸುತ್ತಿರುವ ಮಾರ್ಗ ನಮಗೆ ಮಾದರಿಯಾಗಬಹುದು
Last Updated 19 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮಲೆನಾಡಿನಲ್ಲಿ ವನ್ಯಜೀವಿಗಳ ಜೊತೆಗಿನ ಸಂಘರ್ಷ ದಿಂದಾಗಿ ರೈತರ ಗೋಳು ಹೇಳತೀರದಾಗಿದೆ. ಕೃಷಿ ಭೂಮಿಗೆ ದಾಳಿಯಿಟ್ಟು, ಬಾಳೆ, ತೆಂಗು, ಅಡಿಕೆ ತೋಟಗಳನ್ನು ನೆಲಸಮ ಮಾಡಿ ಹೋಗುವ ಕಾಡಾನೆಗಳ ಹಾವಳಿಯಿಂದ ಅವರು ತತ್ತರಿಸಿ ಹೋಗಿದ್ದಾರೆ. ಯಾವುದೇ ಫಸಲನ್ನು ಕೂಡ ನಿರಾತಂಕವಾಗಿ ಮನೆಗೆ ತರುವಂತಿಲ್ಲ.

ಇನ್ನೊಂದೆಡೆ, ಪುಂಡಾನೆ ಕಾಲ್ತುಳಿತಕ್ಕೆ ಬಲಿಯಾ ದವರ ಕಂಬನಿಯ ಕತೆಗಳು ಮನ ಮಿಡಿಯುತ್ತಿವೆ. ಸರ್ಕಾರವು ಕೃಷಿಹಾನಿಗೆ, ಜೀವಹಾನಿಗೆ ಪರಿಹಾರ ವೆಂದು ಕಿಂಚಿತ್ತು ಹಣ ಕೊಡುತ್ತದೆ ನಿಜ. ಆದರೆ ಇವು ಶಾಶ್ವತ ಪರಿಹಾರಗಳಲ್ಲ. ನಿರ್ಭೀತಿಯಿಂದ, ನಿಶ್ಚಿಂತೆಯಿಂದ ಬೆಳೆ ಮಾಡಲು ರೈತನಿಗೆ ಧೈರ್ಯವೇ ಇಲ್ಲದಂತಾಗಿದೆ.

ಅರಣ್ಯನಾಶ ಹಾಗೂ ಆನೆಗಳ ಮೇವಿನ ಕೊರತೆಗೆ ಹಲವು ಕಾರಣಗಳಿವೆ. ಮನುಷ್ಯ ಮತ್ತು ವನ್ಯಮೃಗಗಳ ನಡುವಿನ ಸಂಘರ್ಷದ ವಿಷಯದಲ್ಲಿ ಒಂದು ನಿಖರ ತೀರ್ಮಾನಕ್ಕೆ ಬರಲು ಅರಣ್ಯ ಇಲಾಖೆ ಸೋತಿರುವುದು ಸುಸ್ಪಷ್ಟವಾಗಿದೆ. ಇಂತಹ ಸಮಯದಲ್ಲಿ, ಆನೆಗಳು ಬೆಳೆಯಿರುವ ತೋಟದ ಸನಿಹ ಬರುವುದನ್ನು ಮೊದಲೇ ತಿಳಿದುಕೊಂಡು, ಅವುಗಳ ಹಿಂಡನ್ನು ದೂರ ಓಡಿಸಲು ಸಾಧ್ಯವೆಂಬುದನ್ನು ದಕ್ಷಿಣ ಆಫ್ರಿಕಾದ ಭೂವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನಮ್ಮ ಮಲೆನಾಡಿನ ರೈತರೂ ಆನೆ ಹಾವಳಿಯಿಂದ ರಕ್ಷಣೆ ಪಡೆಯಲು ಸಿಸ್ಮೊಮೀಟರ್ ಅಳವಡಿಕೆಯ ಈ ತಂತ್ರಜ್ಞಾನ ನೆರವಾದೀತೇ ಎಂಬುದು ಅಧ್ಯಯನಕ್ಕೆ ಯೋಗ್ಯವಾಗಿದೆ. ವಾಸ್ತವವಾಗಿ ಈ ಉಪಕರಣ ನೆಲ ದಲ್ಲಿ ಅಳವಡಿಸಿದಾಗ ಭೂಮಿಯ ಕಂಪನ ಹೆಚ್ಚುತ್ತಿರುವುದನ್ನು ಧ್ವನಿಯಂತ್ರದ ಮೂಲಕ ಬಿತ್ತರಿಸಿ, ಭೂಕಂಪದ ಅಪಾಯದಿಂದ ಪಾರಾಗುವಂತೆ ಎಚ್ಚರಿಸಲು ಬಳಕೆಯಾಗುತ್ತದೆ. ಚಂಡಮಾರುತ, ಹಿಮಕುಸಿತದಂತಹ ಅಪಾಯಕಾರಿ ಸನ್ನಿವೇಶಗಳನ್ನು ಮುಂದಾಗಿಯೇ ತಿಳಿಸುತ್ತದೆ.

ದಕ್ಷಿಣ ಆಫ್ರಿಕಾದ ಈಶಾನ್ಯದಲ್ಲಿರುವ ಅಭಯಾರಣ್ಯದಲ್ಲಿ ಬಿಳಿ ಆನೆಗಳ ವಂಶ ನಶಿಸುವುದಕ್ಕೆ ಕಾರಣ ಕಳ್ಳಬೇಟೆಗಾರರು. ಈ ಆನೆಗಳ ಸಂರಕ್ಷಣೆಗಾಗಿ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಅಲಿವರ್ ಲ್ಯಾಂಬ್ ಅವರು ಭೂಕಂಪದ ಮುನ್ಸೂಚನೆ ನೀಡುವ ಸಿಸ್ಮೊಮೀಟರ್ ಸಾಧನಗಳನ್ನು ಅಲ್ಲಲ್ಲಿ ಅಳವಡಿಸಿದರು. ಆನೆಗಳು ನಡೆದಾಡುವಾಗ ನೆಲದಲ್ಲಿ 110 ಡೆಸಿಬಲ್ ಪ್ರಮಾಣದ ಕಂಪನವುಂಟಾ ಗುತ್ತದೆ. ಅಲ್ಲಿ ಅಳವಡಿಸಿದ್ದು ಭೂಕಂಪನ ತಿಳಿಸು ವಂತಹ ಶಕ್ತಿಶಾಲಿ ಉಪಕರಣವಲ್ಲ. 400 ಮೀಟರ್ ದೂರದವರೆಗೆ ಈ ಧ್ವನಿಕಂಪನವನ್ನು ಒಯ್ಯಬಲ್ಲ ಸಾಮಾನ್ಯ ಉಪಕರಣ. ಅದಕ್ಕೆ ಸೂಕ್ಷ್ಮ ಮೈಕ್ರೊಫೋನ್ ಅಳವಡಿಸಿದ್ದರಿಂದ ಆನೆಗಳ ಪಾದಗಳಿಂದ ಉಂಟಾಗುವ ಕಂಪನ ದೊಡ್ಡದಾಗಿಯೇ ಕೇಳಿಸುತ್ತದೆ. ಆನೆಗಳ ಕಿವಿಗೆ ರೇಡಿಯೊ ಕಾಲರ್ ಸಿಕ್ಕಿಸುವ ಅಗತ್ಯವೇ ಇಲ್ಲದೆ, ಅವು ಎಷ್ಟಿವೆ, ಎಲ್ಲಿವೆ ಎನ್ನುವುದನ್ನು ಕುಳಿತಲ್ಲಿಂದಲೇ ತಿಳಿಯಲು ಅದು ನೆರವಾಯಿತು.

ಆನೆಗಳು ಎಲ್ಲಿವೆ ಎಂಬುದು ಗೊತ್ತಾದ ಮೇಲೆ ಅವುಗಳ ರಕ್ಷಣೆಗೂ ಧಾವಿಸಬಹುದು. ಹಿಂಡಿನಿಂದ ಬೇರ್ಪಟ್ಟ ಪುಂಡಾನೆ ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಹಿಂಡಿಗೆ ಸೇರಿಸಬಹುದು ಎಂಬುದನ್ನು ಲ್ಯಾಂಬ್ ತೋರಿಸಿಕೊಟ್ಟರು. ಬಳಿಕ ಈ ಭೂಕಂಪಸೂಚಕ ಉಪಕರಣವು ಆನೆ ಸಂರಕ್ಷಣೆ
ಯಲ್ಲಿ ಮಹತ್ವದ ಸಹಾಯ ಮಾಡುತ್ತಿದೆ. ಇದಕ್ಕಾಗಿ 20 ಹರ್ಟ್ಸ್ ಸಂವೇದನೆಗಿಂತಲೂ ಕಡಿಮೆ ಶಕ್ತಿಯ
ಉಪಕರಣಗಳನ್ನು ಸಿದ್ಧಪಡಿಸಲಾಗಿದೆ.

ಭೂಕಂಪವನ್ನು ತಿಳಿಸುವ ಸಾಧನದ ಬೆಲೆ ಲಕ್ಷಾಂತರ ರೂಪಾಯಿ ಇದೆ ಎನ್ನಲಾಗಿದೆ. ಆದರೆ ಆನೆಗಳ ಬರುವಿಕೆಯನ್ನು ತಿಳಿಸುವ ಉಪಕರಣವನ್ನು ಕೆರೊಲಿನಾದ ತಂತ್ರಜ್ಞರು ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸುತ್ತಿದ್ದಾರಂತೆ. ಆನೆಗಳ ಹಿಂಡು 165 ಅಡಿ ದೂರ ತಲುಪಿದಾಗ ಅದು ಎಚ್ಚರಿಕೆಯ ಗಂಟೆಯನ್ನು ಜೋರಾಗಿ ಬಡಿಯುವ ಮೂಲಕ ಜಾಗೃತಗೊಳಿಸು ತ್ತದೆ. ಅವುಗಳು ಓಡಿಕೊಂಡು ಬರುತ್ತಿವೆಯೇ ನಡೆದಾಡಿಕೊಂಡು ಬರುತ್ತಿವೆಯೇ ಎಂಬುದನ್ನು ಸುಲಭವಾಗಿ ಅರಿತು, ದೂರ ಓಡಿಸುವುದಾಗಲೀ ಬೆಳೆ ಸಂರಕ್ಷಣೆ ಮಾಡುವುದಾಗಲೀ ಸಾಧ್ಯವಿದೆ. ಭೂ ರೂಪ ಶಾಸ್ತ್ರ, ಮಣ್ಣಿನ ಸ್ಥಿತಿಗತಿಗೆ ಅನುಸಾರವಾಗಿ ಉಪ ಕರಣಗಳ ಸಂಖ್ಯೆ ಎಷ್ಟಿರಬೇಕೆಂದು ನಿರ್ಧರಿಸಬೇಕಾಗುತ್ತದೆ. ಇದೇ ಸಾಧನದಲ್ಲಿ ಶಕ್ತಿಶಾಲಿ ಮೈಕ್ರೊಫೋನ್ ಜೋಡಿಸಿಕೊಳ್ಳುವುದರಿಂದ, ಕಿಲೊಮೀಟರ್ ವ್ಯಾಪ್ತಿ ಯಲ್ಲಿ ಆನೆಗಳು ಬರುತ್ತಿರುವುದನ್ನು ಸಹ ತಿಳಿಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಮಲೆನಾಡಿನ ಕಾಡಿನ ಪರಿಸರದಲ್ಲಿರುವ ಆನೆಗಳ ಆಹಾರ ಮೂಲ ಮತ್ತು ನೀರಿನ ಆಶ್ರಯದ ಸ್ಥಳಗಳಲ್ಲಿ ಸಿಸ್ಮೊಮೀಟರ್ ಅಳವಡಿಸುವ ಪ್ರಯೋಗವನ್ನು ಅರಣ್ಯ ಇಲಾಖೆ ಮಾಡಿದರೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲು ಸಾಧ್ಯವೇ? ಇದು ಯೋಚಿಸಬೇಕಾದ ಸಂಗತಿ. ಸರ್ಕಾರ ಪ್ರಾಯೋಗಿಕವಾಗಿ ಈ ಸಾಧನದ ಇತಿಮಿತಿ ಮತ್ತು ಸಾಫಲ್ಯದ ಬಗೆಗೆ ವಿಜ್ಞಾನಿಗಳ ಸಲಹೆ ಪಡೆಯಲು ಮುಂದಾಗಬಹುದು. ಕಾಡಂಚಿನ ರೈತರಿಗೆ ಆನೆಗಳ ಬರುವಿಕೆಯ ಬಗೆಗೆ ಮುನ್ಸೂಚನೆ ದೊರೆತರೆ, ಅವುಗಳಿಂದ ಕೃಷಿಗೆ ಆಗುವ ಸರಿಪಡಿಸಲಾಗದ ಹಾನಿಯನ್ನು ನಿವಾರಿಸಿಕೊಳ್ಳುವುದು ಸುಲಭವೂ ಆಗಬಹುದು.

ದಕ್ಷಿಣ ಆಫ್ರಿಕಾದಲ್ಲಿ ಆನೆಗಳು ಕೃಷಿಗೆ ಮಾಡುವ ಹಾನಿಯನ್ನು ತಡೆಯಲು ಒಣಗಿದ ಆನೆಲದ್ದಿಗೆ ಒಣಮೆಣಸಿನಕಾಯಿ ಸೇರಿಸಿ ಬೆಂಕಿ ಹಚ್ಚುತ್ತಾರೆ. ಅದರ ಹೊಗೆಯಿಂದ ಕಣ್ಣಿನಲ್ಲಿ ಉರಿಯುಂಟಾಗಿ ಆನೆಗಳು ದೂರ ಓಡುತ್ತವೆ. ಇಂತಹ ಪ್ರಯೋಗಗಳ ಮೂಲಕ ಸಮಸ್ಯೆಗೊಂದು ಪರಿಹಾರ ಪಡೆಯಲು ಚಿಂತನೆಗೆ ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT