ಇಲ್ಲಿಲ್ಲ ನಕಲು; ಗುಣಮಟ್ಟವೇ ಸವಾಲು

ಮಂಗಳವಾರ, ಏಪ್ರಿಲ್ 23, 2019
31 °C

ಇಲ್ಲಿಲ್ಲ ನಕಲು; ಗುಣಮಟ್ಟವೇ ಸವಾಲು

Published:
Updated:
Prajavani

‘ನಕಲು ತಂತ್ರದ ಅಸಲಿ ಬಣ್ಣ’ ಎಂಬ ಎಸ್.ರವಿಪ್ರಕಾಶ್ ಅವರ ಲೇಖನ ಪ್ರಸ್ತುತವಾಗಿತ್ತು (ಸಂಗತ,  ಏ. 1). ಆದರೆ ಲೇಖಕರು ಶಿಕ್ಷಕರನ್ನು ಸಾಮೂಹಿಕವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಂತೆ ಭಾಸವಾಗುತ್ತದೆ. ದೂರ ನಿಂತು ನೋಡುವವರಿಗೆ ಶಿಕ್ಷಣ ವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿಗಳಾಗಲೀ, ಶಿಕ್ಷಕರು ಎದುರಿಸುತ್ತಿರುವ ಸವಾಲುಗಳಾಗಲೀ ತಿಳಿಯದು. ಹಾಗಾಗಿ ಫಲಿತಾಂಶ ಕುಸಿತಕ್ಕೆ ಎಲ್ಲರೂ ಶಿಕ್ಷಕರನ್ನು ನೇರ ಹೊಣೆ ಮಾಡುತ್ತಾರೆ.

ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಿಸುವ ನಮ್ಮ (ದಕ್ಷಿಣ ಕನ್ನಡ) ಜಿಲ್ಲೆಯ ಬಗ್ಗೆ ಹೇಳುವುದಾದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ತಾಲ್ಲೂಕು ಶಿಕ್ಷಣಾಧಿಕಾರಿಗಳು ಆಗಾಗ ಸಭೆ ಕರೆದು, ಫಲಿತಾಂಶ ಉತ್ತಮಪಡಿಸಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಅಗತ್ಯ ಸಲಹೆಗಳನ್ನು ನೀಡುತ್ತಾರೆ. ಆಗಾಗ ಅವರು ಶಾಲೆಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ವಿಷಯವಾರು ಶಿಕ್ಷಕರ ಎಸ್ಎಸ್ಎಲ್‌ಸಿ ಕ್ರಿಯಾ ಯೋಜನೆಯನ್ನು ಪರಿಶೀಲಿಸುತ್ತಾರೆ. ಜೂನ್ ತಿಂಗಳ ಪ್ರಾರಂಭದಿಂದಲೇ ಎಲ್ಲಾ ಶಾಲೆಗಳಲ್ಲೂ ವಿಶೇಷ ತರಗತಿಗಳು (ಶಾಲಾ ಅವಧಿಗೆ ಮೊದಲು ಹಾಗೂ ನಂತರ ತಲಾ ಒಂದು ಗಂಟೆ) ಪ್ರಾರಂಭವಾಗುತ್ತವೆ. ಭಾನುವಾರ ಹಾಗೂ ರಜಾ ದಿನಗಳಲ್ಲೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿ, ಅದನ್ನು ಅವರು ಅಭ್ಯಾಸ ಮಾಡುವಂತೆ ನಿರಂತರ ಪ್ರೋತ್ಸಾಹಿಸಲಾಗುತ್ತದೆ. ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಸಮಾನವಾಗಿ ಹಂಚಲಾಗುತ್ತದೆ ಮತ್ತು ಆ ಶಿಕ್ಷಕರು ಅವರ ಕಲಿಕಾ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ.

ಡಿಸೆಂಬರ್ ತಿಂಗಳಲ್ಲಿ ಮೊದಲು ಪಾಠಗಳ ಬೋಧನೆ ಮುಗಿಸಿ ಪುನರಾವರ್ತನೆ ಆರಂಭಿಸಲಾಗುತ್ತದೆ. ಉತ್ತರಗಳನ್ನು ಬರೆದು ಅಭ್ಯಾಸ ಮಾಡಿಸುವುದು, ಗುಂಪು ಕಲಿಕೆ ಇತ್ಯಾದಿಗಳನ್ನು ಮಾಡಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದವರಿಗಾಗಿ ಕೆಲವು ಕಡೆ ರಾತ್ರಿ ಶಾಲೆಗಳನ್ನು ನಡೆಸಲಾಗುತ್ತದೆ. ಪರೀಕ್ಷಾ ಸಿದ್ಧತೆ ಕುರಿತು ತಜ್ಞರಿಂದ ತರಬೇತಿ ಕೊಡಿಸಲಾಗುತ್ತದೆ. ತಾಲ್ಲೂಕಿನ ವಿಷಯ ಪರಿಣತ ಶಿಕ್ಷಕರಿಂದ ಕೆಲವು ದಿನಗಳ ಕಾಲ ಇತರ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತದೆ. ಇಷ್ಟೆಲ್ಲಾ ಹೆಣಗಾಡಿದರೂ ಕೆಲವು ವಿದ್ಯಾರ್ಥಿಗಳಾದರೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಶಿಕ್ಷಕರಾದ ನಮ್ಮನ್ನು ಚಿಂತೆಗೀಡುಮಾಡುತ್ತದೆ. ಇನ್ನಷ್ಟು ಉತ್ತಮ ಫಲಿತಾಂಶ ದಾಖಲಿಸುವಂತೆ ಇಲಾಖಾಧಿಕಾರಿಗಳಿಂದ ನಮ್ಮ ಮೇಲೆ ಒತ್ತಡ ಪ್ರಾರಂಭವಾಗುತ್ತದೆ.

ಆದರೆ, ಪರೀಕ್ಷೆಯ ವೇಳೆ ನಕಲು ಮಾಡುವ ಕ್ರಮ ನಮ್ಮ ಜಿಲ್ಲೆಯಲ್ಲಿ ರೂಢಿಯಲ್ಲಿಲ್ಲ (ಎಲ್ಲಾದರೂ ವಿರಳ ಪ್ರಕರಣಗಳು ಇರಬಹುದೇನೋ). ಶಿಕ್ಷಕರು ನಕಲಿಗೆ ಸಹಕರಿಸುವ ವ್ಯವಸ್ಥೆ ನಮಗಂತೂ ಅಪರಿಚಿತ. ಎಲ್ಲಾದರೂ ಶಿಕ್ಷಕರು ನಕಲಿಗೆ ಸಹಕರಿಸಿದರೆ ಅದಕ್ಕೆ ಫಲಿತಾಂಶ ಉತ್ತಮಪಡಿಸುವಂತೆ ಇಲಾಖೆಯು ನಿರಂತರ, ತೀವ್ರ ಒತ್ತಡ ಹೇರುತ್ತಿರುವುದೇ ಪ್ರತ್ಯಕ್ಷ ಕಾರಣವಾಗಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದಲ್ಲಿ ಕಂಡುಬರುತ್ತಿರುವ ತೀವ್ರ ಕೊರತೆ ಇನ್ನೊಂದು ಬಲವಾದ ಕಾರಣ. ಅದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ, ಸರ್ಕಾರಿ ಶಾಲೆಗಳ ಬಹುಸಂಖ್ಯಾತ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಹಿನ್ನೆಲೆಯಿಲ್ಲ. ಪೋಷಕರ ಅನಕ್ಷರತೆ, ಬಡತನ, ಮನೆಯಲ್ಲಿ ಕಲಿಕಾ ವಾತಾವರಣವೇ ಇಲ್ಲದಿರುವುದು, ಶಾಲಾ ಅವಧಿಗಿಂತ ಮೊದಲು ಅಥವಾ ನಂತರ ಮಕ್ಕಳು ಶಿಕ್ಷಣದ ಅಭ್ಯಾಸವನ್ನೇ ಮಾಡದೆ ಇರುವಂತಹ ಸನ್ನಿವೇಶ ಇರುವುದು (ದುಡಿಮೆಗೆ ಹೋಗುವುದು, ಮೊಬೈಲ್ ಹಾಗೂ ಟಿ.ವಿ ಹಾವಳಿ) ಇವೆಲ್ಲವೂ ಇನ್ನಿತರ ಮಹತ್ವದ ಕಾರಣಗಳಾಗಿವೆ.

ವಿದ್ಯಾರ್ಥಿಗಳು ಕಲಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದರೆ ನಪಾಸು ಪದ್ಧತಿ ಮತ್ತೆ ಜಾರಿಗೆ ಬರಲೇಬೇಕು.  ಏಳನೇ ತರಗತಿಯಲ್ಲಿ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಡೆಸಬೇಕು. (ಅಲ್ಲಿ ನಪಾಸು ಮಾಡಬಹುದು ಅಥವಾ ಅತ್ಯಂತ ಕನಿಷ್ಠ ಅಂಕ ಗಳಿಸಿದವರಿಗೆ ಪಾಸ್ ಕ್ಲಾಸ್ ಎಂದು ಪ್ರಮಾಣಪತ್ರ ನೀಡಬಹುದು). ಹೇಗೆ ಕಲಿತರೂ, ಎಷ್ಟು ಕನಿಷ್ಠ ಅಂಕ ಬಂದರೂ ಪಾಸಾಗುವ ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪರೀಕ್ಷೆಗೆ ಓದಿ ಸಿದ್ಧರಾಗಬೇಕೆಂಬ ಯೋಚನೆ ಹೇಗೆ ತಾನೇ ಬರಲು ಸಾಧ್ಯ? ಅಷ್ಟೂ ಸಮಯವನ್ನು ಆಟದಲ್ಲಿ ಅಥವಾ ಟಿ.ವಿ. ವೀಕ್ಷಣೆಯಲ್ಲಿ ಕಳೆಯಲು ಅವರು ಯೋಚಿಸುತ್ತಾರೆ.

ಈಗ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇಲ್ಲ. ಕೆಲವೆಡೆ ಅಗತ್ಯ ಸಂಖ್ಯೆಯ ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ನೀಗಬೇಕು. ಶಿಕ್ಷಕರನ್ನು ಇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಲ್ಲಿಸಬೇಕು. ವೈಯಕ್ತಿಕ ಕೆಲಸಗಳಿಗಾಗಿ ಶಾಲಾ ಅವಧಿಯಲ್ಲಿ ಶಾಲೆಯ ಹೊರಗುಳಿಯುವ ಶಿಕ್ಷಕರಿಗೆ ಸೂಕ್ತ ಶಿಕ್ಷೆಯಾಗಬೇಕು. ಸಾರ್ವಜನಿಕರು, ಪೋಷಕರು ಹಾಗೂ ಅಧಿಕಾರಿಗಳು ಸಾರಾಸಗಟಾಗಿ ಎಲ್ಲಾ ಶಿಕ್ಷಕರನ್ನೂ ಒಂದೇ ತಕ್ಕಡಿಯಲ್ಲಿ ತೂಗದೆ ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಫಲಿತಾಂಶ ಬರುವಾಗ ಎಚ್ಚೆತ್ತುಕೊಳ್ಳದೆ ವರ್ಷಾರಂಭದಲ್ಲೇ ಶೈಕ್ಷಣಿಕ ಚಟುವಟಿಕೆಗಳನ್ನು, ಶಿಕ್ಷಕರ ಬೋಧನಾ ಕ್ರಮ/ ಅಕ್ರಮಗಳನ್ನು ಪರಿಶೀಲಿಸುತ್ತಿರಬೇಕು. ಹೀಗೆ ಮಾಡಿದರೆ ಫಲಿತಾಂಶ ಉತ್ತಮಗೊಳ್ಳುವುದಷ್ಟೇ ಅಲ್ಲ, ಗುಣಮಟ್ಟವೂ ಸುಧಾರಿಸುತ್ತದೆ.

ಲೇಖಕಿ: ಸಹಾಯಕ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಕೆಯ್ಯೂರು, ಪುತ್ತೂರು ತಾಲ್ಲೂಕು

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !