ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಿನಿಗಿ ಚರ್ಚೆ; ಸಂವಾದದ ಮುದ

Last Updated 18 ಫೆಬ್ರುವರಿ 2019, 20:32 IST
ಅಕ್ಷರ ಗಾತ್ರ

ಸುಧೀಂದ್ರ ಕುಲಕರ್ಣಿಯವರ ‘ಮರುಭೂಮಿಯಲ್ಲಿ ಸೌಹಾರ್ದದ ಬೀಜ’ ಲೇಖನದ (ಪ್ರ.ವಾ., ಫೆ. 13) ‘ಸಂವಾದವನ್ನು ಸಂಸ್ಕೃತಿಯಾಗಿ ಹೊಂದಿರುವ ದಾರಿಯನ್ನು ಅಳವಡಿಸಿಕೊಳ್ಳುತ್ತೇವೆ; ಅನ್ಯೋನ್ಯ ಗ್ರಹಿಕೆಯನ್ನು ವಿಧಾನ ಮತ್ತು ಮಾನದಂಡವಾಗಿ ಇರಿಸಿಕೊಳ್ಳುತ್ತೇವೆ’ ಎಂಬ ಸಾಲುಗಳು ಅತ್ಯಂತ ಪ್ರಮುಖ ಸಂದೇಶವನ್ನು ಧ್ವನಿಸುವಂತಹವು. ಜಗತ್ತಿನೆಲ್ಲೆಡೆ ಅನುಮಾನ, ಮನಸ್ತಾಪ, ದ್ವೇಷ, ಹಿಂಸೆ ತಾಂಡವವಾಡಲು ನಾವು ಇತರರ ಬಗ್ಗೆ ಹೊಂದಿರಬಹುದಾದ ಅನುಮಾನ, ಪೂರ್ವಗ್ರಹಗಳು ಪ್ರಮುಖ ಕಾರಣಗಳೆನ್ನಬಹುದು. ಮುಕ್ತ ಹಾಗೂ ಪರಿಣಾಮಕಾರಿ ಸಂವಾದದ ಮೂಲಕ ನಮ್ಮ ಆಲೋಚನೆ, ವಿಚಾರಗಳಲ್ಲಿ ಸ್ಪಷ್ಟತೆಯನ್ನು ತಂದುಕೊಳ್ಳಬಹುದು. ಜೊತೆಗೆ ಸಮಾಜದಲ್ಲಿ ಸಾಮರಸ್ಯಕ್ಕೆ ಸಹಕಾರಿ.

ಇಬ್ಬರು ವ್ಯಕ್ತಿಗಳ ನಡುವೆ ಅಥವಾ ಒಂದು ಸಭೆಯಲ್ಲಿ ಸಂವಹನ ನಡೆಯುವ ಸಂದರ್ಭದಲ್ಲಿ ಕೆಲವೊಮ್ಮೆ ಕೆಲವರು ಭಾವುಕವಾಗಿ ವಿಚಾರಗಳನ್ನು ಮಂಡಿಸುತ್ತಾರೆ. ತಮ್ಮ ವಿಚಾರವೇ ಸರಿ ಎಂಬ ಧೋರಣೆಯೊಂದಿಗೆ ಆಕ್ರೋಶ, ಆಕ್ರಮಣಕಾರಿ ವರ್ತನೆಗಳನ್ನೂ ತೋರುತ್ತಾರೆ. ಇನ್ನು ಕೆಲವರು ಇತರರ ಮಾತುಗಳನ್ನು ಆಲಿಸದೆ ತಮ್ಮದೇ ಅಭಿಪ್ರಾಯ, ವಿಚಾರಗಳನ್ನು ಪ್ರತಿಪಾದಿಸುತ್ತಾ ವಾದ, ಸಂಘರ್ಷಕ್ಕಿಳಿಯುವುದನ್ನು ನೋಡುತ್ತೇವೆ. ಇಂತಹ ಸನ್ನಿವೇಶದಲ್ಲಿ ಇತರರ ವಿಚಾರ, ಬುದ್ಧಿಶಕ್ತಿಗಳ ಲಾಭ ಪಡೆಯುವ ಅಮೂಲ್ಯ ಅವಕಾಶದಿಂದ ವಂಚಿತರಾಗುವ ಕಾರಣ, ಸಾಮಾಜಿಕ ಸಾಮರಸ್ಯ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ ಎನ್ನಬಹುದು.

ಮಾತು, ಮೌನ ಸಂವಹನಕ್ಕೆ ಅಗತ್ಯವಾದವು. ಕೆಲವರು ಮೌನ ಬಂಗಾರ, ಮಾತು ಬೆಳ್ಳಿ ಎಂದು ಮೌನಕ್ಕೆ ಹೆಚ್ಚು ಮಣೆ ಹಾಕುತ್ತಾರೆ. ಆದರೆ ಅಗತ್ಯ ಸನ್ನಿವೇಶದಲ್ಲಿ ಆಡುವ ಮಾತುಗಳು ಮೌನಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಬಲ್ಲವು. ಮಾತು, ಮೌನದ ಹದವಾದ ಮಿಶ್ರಣವು ಬಹಳಷ್ಟು ಪರಿಣಾಮಕಾರಿ.

ಮಾತನಾಡುವ ಕೌಶಲ ಕಲಿಸಲು ಶಾಲೆಗಳಲ್ಲಿ ಭಾಷಣ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ ಇತರರ ಮಾತುಗಳನ್ನು ಸಾವಧಾನ ಹಾಗೂ ಮುಕ್ತ ಮನಸ್ಸಿನಿಂದ ಆಲಿಸಿ, ಸಂವಾದ ಮಾಡುವ ಕೌಶಲ ಕಲಿಸುವ ಚಟುವಟಿಕೆಗಳನ್ನು ಆಯೋಜಿಸುವುದು ಕಡಿಮೆ ಅಥವಾ ಇಲ್ಲವೆನ್ನಬಹುದು. ಇನ್ನು ಕಚೇರಿಗಳಲ್ಲಿ ಪರಿಣಾಮಕಾರಿ ಸಂವಾದಗಳಿಗೆ ಎಡೆ ಮಾಡುವ ಅವಕಾಶಗಳನ್ನು ಸೃಷ್ಟಿ ಮಾಡುವುದಿಲ್ಲ. ಮುಕ್ತ ಸಂವಾದಗಳಿಗೆ ತೆರೆದುಕೊಳ್ಳಬೇಕಾದ ಸಾಮಾಜಿಕ ಸಮಾರಂಭಗಳಲ್ಲೂ ಕೆಲವೊಮ್ಮೆ ಯಾವುದೋ ಆಂತರಿಕ ಅಜೆಂಡಾದೊಂದಿಗೆ ಪ್ರಾರಂಭದಿಂದಲೇಮುಕ್ತತೆಗೆ ಅವಕಾಶವನ್ನು ನಿರಾಕರಿಸಲಾಗಿರುತ್ತದೆ. ಕೆಲವೊಮ್ಮೆ ಮುಕ್ತ ಸಂವಾದಕ್ಕೆ ಅವಕಾಶ ನೀಡಿ ಆಯೋಜಿಸುವ ಸಾರ್ವಜನಿಕ ಸಮಾರಂಭಗಳೂ ಮುಕ್ತ ಸಂವಾದಕ್ಕೆ ತೆರೆದುಕೊಳ್ಳಲು ಸಿದ್ಧವಿಲ್ಲದ ಕೆಲವರ ಆಕ್ರೋಶಗಳಿಗೆ ತುತ್ತಾಗಿರುತ್ತವೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಚಿಂತನಶೀಲ, ಪರಿವರ್ತನಶೀಲ ಮುಕ್ತ ಚಿಂತನೆಗಳಿಗೆ ಎಷ್ಟರಮಟ್ಟಿಗೆ ತಮ್ಮನ್ನು ತಾವು ತೆರೆದುಕೊಂಡಿವೆ ಎಂಬುದು ಸ್ವ-ಅವಲೋಕನ ಮಾಡಿಕೊಳ್ಳಬೇಕಾದ ವಿಚಾರ. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೋ ಒಂದು ವಿಚಾರದ ವಾದವನ್ನೇ ಪ್ರಬಲವಾಗಿ ಮಂಡಿಸುತ್ತಾ ಇತರರ ದೃಷ್ಟಿಕೋನಗಳನ್ನು ಅಲ್ಲಗಳೆಯುತ್ತಾ ಪರಸ್ಪರ ಕಾಲೆಳೆಯುವುದನ್ನು ಕಾಣುತ್ತೇವೆ.

ಚರ್ಚೆಗೂ ಸಂವಾದಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸಿಕೊಳ್ಳುವುದು ಅಗತ್ಯ. ಚರ್ಚೆಯಲ್ಲಿ ನಿರ್ದಿಷ್ಟ ವಿಷಯದ ಕುರಿತು ಹಲವರ ಅಭಿಪ್ರಾಯಗಳನ್ನು ಪಡೆಯುವ ಮೂಲಕ ವಿಚಾರ ವಿನಿಮಯ ಮಾಡಲಾಗುತ್ತದೆ. ಚರ್ಚೆಯ ಉದ್ದೇಶ ಬಹುತೇಕ ಒಂದು ನಿರ್ದಿಷ್ಟ ವಿಷಯ ಕುರಿತಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿರುತ್ತದೆ. ಆದರೆ ಸಂವಾದ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ವಿಷಯದ ಬಗ್ಗೆ ಅರ್ಥಪೂರ್ಣ ವಿಚಾರ ವಿನಿಮಯ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ತೊಡಗಿರುವವರು ತಮ್ಮ ವಿಚಾರಗಳನ್ನು ಬಲವಾಗಿ, ಶಕ್ತಿಯುತವಾಗಿ ಪ್ರತಿಪಾದಿಸುವುದಿಲ್ಲ. ಮುಕ್ತ ಮನಸ್ಸಿನಿಂದ ಅಭಿಪ್ರಾಯ, ವಿಚಾರಗಳನ್ನು ಪ್ರಸ್ತುತಪಡಿಸುತ್ತಾರೆ. ಇತರರ ಅಭಿಪ್ರಾಯ, ವಿಚಾರ
ಗಳನ್ನೂ ಮುಕ್ತವಾಗಿ ಆಲಿಸುವ ಸೌಜನ್ಯ, ಪ್ರೌಢಿಮೆ ತೋರುವುದರ ಜೊತೆಗೆ ತಮ್ಮ ಆಲೋಚನೆ, ವಿಚಾರಗಳನ್ನು ಮರು ವಿಮರ್ಶೆಗೆ ಒಳಪಡಿಸಲೂ ಸಿದ್ಧರಿರುತ್ತಾರೆ.

ಸಂವಾದದಲ್ಲಿ ಭಾಗವಹಿಸುವ ಎಲ್ಲರಿಗೂ ಎಲ್ಲರ ಬುದ್ಧಿಶಕ್ತಿಯ ಪ್ರಯೋಜನ ದೊರೆಯುತ್ತದೆ. ಸಂವಾದ ಪ್ರಕ್ರಿಯೆಯು ಒಂದು ವಿಷಯದ ಬಗ್ಗೆ ಯಾವುದೇ ಖಚಿತ ನಿರ್ಧಾರಗಳಿಗೆ ಬರಲಾಗದೇ ಹೋಗಬಹುದು. ಸಂವಾದ ಪೂರ್ಣಗೊಂಡ ನಂತರವೂ ಒಂದಷ್ಟು ಪ್ರಶ್ನೆಗಳು ಉಳಿದುಕೊಳ್ಳಬಹುದು. ನಮ್ಮೊಳಗೆ ಹಾಗೂ ಇತರರೊಳಗೆ ಉಳಿದುಕೊಳ್ಳುವ ಇಂತಹ ಪ್ರಶ್ನೆಗಳು ಒಂದು ಸಮುದಾಯದ ಜೀವಂತಿಕೆಯ ಸಂಕೇತವಾಗುತ್ತವೆ. ಒಂದು ಚಲನಶೀಲ ಸಮಾಜದ ಪ್ರತೀಕವಾಗಿ ತೋರುತ್ತವೆ.

ಶಾಲೆಗಳಲ್ಲಿ ಭಾಷಣ, ಚರ್ಚಾ ಸ್ಪರ್ಧೆಗಳ ಜೊತೆಗೆ ಪರಿಣಾಮಕಾರಿ ಸಂವಾದಗಳನ್ನೂ ಹಮ್ಮಿಕೊಂಡಲ್ಲಿ ಭವಿಷ್ಯದ ಸಮಾಜ ಮುಕ್ತತೆಗೆ ತೆರೆದುಕೊಳ್ಳುತ್ತದೆ. ಸಂಸ್ಥೆಗಳು ಅರ್ಥಪೂರ್ಣ ಸಂವಾದಗಳಿಗೆ ತಮ್ಮನ್ನು ತೆರೆದುಕೊಂಡು ವಿಭಿನ್ನ ನಿಲುವು, ವ್ಯಕ್ತಿತ್ವ, ವೈವಿಧ್ಯಗಳನ್ನು ತಮ್ಮ ಪೂರ್ವಗ್ರಹಗಳಾಚೆ ಒಪ್ಪಿಕೊಂಡು, ಪ್ರತಿಕ್ರಿಯಿಸುವತ್ತ ಬದಲಾದರೆ ಪ್ರಜ್ಞಾವಂತ ಸಮಾಜದ ಸೃಷ್ಟಿಗೆ ದಾರಿಯಾಗುತ್ತದೆ. ಇದರಿಂದ ವಿಭಿನ್ನ ಆಲೋಚನೆ, ಚಿಂತನೆಗಳುಳ್ಳ ಜನರು ಪರಸ್ಪರ ಗೌರವ, ಸಹಬಾಳ್ವೆ, ಸಾಮರಸ್ಯದಿಂದ ಬದುಕುವ ಸಹನಶೀಲ ಸಮಾಜ ನಮ್ಮದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT