ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಂವಿಧಾನ ಸಾಕ್ಷರರಾಗೋಣ

ನಾವು ಈಗ ‘ಪ್ರಜೆ’ಗಳಲ್ಲ ‘ನಾಗರಿಕರು’ ಎಂಬುದನ್ನು ಅರಿಯೋಣ
Published 26 ನವೆಂಬರ್ 2023, 18:42 IST
Last Updated 26 ನವೆಂಬರ್ 2023, 18:42 IST
ಅಕ್ಷರ ಗಾತ್ರ

‘ಭಾರತದ ಸಂವಿಧಾನದಲ್ಲಿ ಪ್ರಸ್ತಾವನೆಯು ಚಿಕ್ಕ ಆದರೆ ಬಹಳ ಮಹತ್ವಪೂರ್ಣವಾದ ಭಾಗ. ಅದು, ‘ಭಾರತದ ಜನತೆಯಾದ ನಾವು, ನಮಗೆ ನಾವೇ ಈ ಸಂವಿಧಾನವನ್ನು ಕೊಟ್ಟುಕೊಂಡಿದ್ದೇವೆ’ ಎಂದು ಹೇಳುತ್ತದೆ. ಇದು, ಭಾರತದ ಜನರು ‘ಪ್ರಜೆಗಳು’ ಎನ್ನುವ ಸ್ಥಿತಿಯಿಂದ ‘ನಾಗರಿಕರು’ ಎನ್ನುವ ಸ್ಥಾನಕ್ಕೆ ಆದ ಪರಿವರ್ತನೆಯನ್ನು ಸೂಚಿಸುತ್ತದೆ’– ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‍ ಅವರು ನಾಗಪುರದಲ್ಲಿ ಮಹಾರಾಷ್ಟ್ರ ನ್ಯಾಷನಲ್‌ ಲಾ ಯೂನಿವರ್ಸಿಟಿಯ ಮೊದಲ ಪದವಿ ಪ್ರದಾನ ಸಮಾರಂಭದಲ್ಲಿ ಹೇಳಿದ ಮಾತಿದು.

ನಿಜ, ನಾವು ಪ್ರಜೆಗಳಲ್ಲ, ನಾಗರಿಕರು. ‘ಪ್ರಜೆ’ ಎಂದರೆ, ಇನ್ನೊಬ್ಬ ಆಳರಸನಿಗೆ ಅಧೀನನಾಗಿರುವ ಪರತಂತ್ರ ವ್ಯಕ್ತಿ. ಭಾರತದ ಇತಿಹಾಸದಲ್ಲಿ ಶತಶತಮಾನಗಳ ಕಾಲ ನಾವು ಚಕ್ರವರ್ತಿಗಳು, ರಾಜಮಹಾರಾಜರು, ಸುಲ್ತಾನರು, ನವಾಬರ ವಿಧೇಯ ಪ್ರಜೆಗಳಾಗಿದ್ದೆವು. ಆದರೆ ಕೊನೆಯದಾಗಿ, ವಸಾಹತುಶಾಹಿ ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ನಾವು ಯಾರ ಪ್ರಜೆಯೂ ಆಗಿಲ್ಲ. ನಾವು ಈ ದೇಶದ ನಾಗರಿಕರು.

ಇನ್ನೊಂದು ಗಮನಾರ್ಹ ಅಂಶವಿದೆ. ನಮಗೆ ಸ್ವಾತಂತ್ರ್ಯ ದೊರೆತಿದ್ದು 1947ರ ಆಗಸ್ಟ್ 15ರಂದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಆಗಲೂ ನಾವು ಪೂರ್ಣ ಸ್ವತಂತ್ರರಾಗದೆ, ಭಾರತೀಯ ಸ್ವಾತಂತ್ರ್ಯ ಕಾಯ್ದೆ– 1947ರ ಅಡಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕಾಮನ್‍ವೆಲ್ತ್‌ಗೆ ಸೇರಿದ ಒಂದು ಡೊಮಿನಿಯನ್ ದೇಶವಾಗಿದ್ದೆವು. ಆಗಲೂ ಬ್ರಿಟಿಷ್ ಚಕ್ರವರ್ತಿಯ ಕಡೆಯಿಂದ ಮೌಂಟ್ ಬ್ಯಾಟನ್ ನಮ್ಮ ಗವರ್ನರ್ ಜನರಲ್ ಆಗಿದ್ದರು. 1950ರ ಜನವರಿ 26ರಂದು ನಮ್ಮದೇ ಆದ ಭಾರತ ಸಂವಿಧಾನ ಜಾರಿಗೆ ಬಂದ ನಂತರವಷ್ಟೇ ನಮ್ಮದು ಸಾರ್ವಭೌಮ (ಸರ್ವತಂತ್ರ ಸ್ವತಂತ್ರ) ಗಣರಾಜ್ಯವಾಗಿದ್ದು. ಪ್ರಜೆಗಳಾಗಿದ್ದ ನಾವು ಅಧಿಕೃತವಾಗಿ ನಾಗರಿಕರು ಎಂಬ ಸ್ಥಾನವನ್ನು ಪಡೆದಿದ್ದು ಅಂದಿನಿಂದಲೇ.

ಶತಮಾನಗಳಿಂದ ಅನೇಕ ಬಗೆಯ ಪ್ರಭುಗಳ ಆಳ್ವಿಕೆಯ ಅಡಿಯಾಳಾಗಿ ಬದುಕಿದ ನಮಗೆ ಈಗಲೂ ನಮ್ಮನ್ನು ನಾವು ಪ್ರಜೆ ಎಂದು ಕರೆದುಕೊಳ್ಳುವ ದೌರ್ಬಲ್ಯ. ಎಷ್ಟರಮಟ್ಟಿಗೆ ಎಂದರೆ, ಶಾಲೆಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ಶಿಕ್ಷಣ ಇಲಾಖೆ ನೀಡಿರುವ ಆದೇಶದ ಅನುಸಾರ ಇರುವ ಸಂವಿಧಾನದ ಪ್ರಸ್ತಾವನೆಯಲ್ಲಿಯೂ ‘ವಿ ದ ಪೀಪಲ್ ಆಫ್‌ ಇಂಡಿಯಾ’ ಎಂಬುದಕ್ಕೆ ಕನ್ನಡದಲ್ಲಿ ‘ಭಾರತದ ಪ್ರಜೆಗಳಾದ ನಾವು’ ಎಂದೇ ಇದೆ. ಡೆಮಾಕ್ರಸಿ ಎಂಬುದಕ್ಕೆ ‘ಪ್ರಜಾಪ್ರಭುತ್ವ’ ಎಂಬ ಪದವನ್ನು ಬಳಸುತ್ತೇವೆ. ಈಗಲೂ ಚುನಾಯಿತ ಪ್ರತಿನಿಧಿಯೊಬ್ಬರು ಲೋಕತಾಂತ್ರಿಕ ಸ್ಥಾನವನ್ನು ವಹಿಸಿಕೊಳ್ಳುವುದನ್ನು ‘ಪಟ್ಟಾಭಿಷೇಕ’ ಎನ್ನುತ್ತೇವೆ. ಅಂಥವರ ಮಗನನ್ನು ಯುವರಾಜ ಎಂದು ಕರೆಯುತ್ತೇವೆ... ಹಳೆಯ ಚಾಳಿ ಸುಟ್ಟರೂ ಹೋಗದು!

ಭಾಷಾ ಮನೋವಿಜ್ಞಾನದ ಪ್ರಕಾರ, ನಾವು ಬಳಸುವ ಪದಗಳು ನಮ್ಮ ಮನಃಸ್ಥಿತಿ, ನಮ್ಮ ವ್ಯಕ್ತಿತ್ವ ವನ್ನು ಬಿಂಬಿಸುತ್ತವೆ. ಹಾಗೆಯೇ ನಾವು ಬಳಸುವ ಪದಗಳು ನಮ್ಮ ಮನೋವೃತ್ತಿಯನ್ನು ರೂಪಿಸುತ್ತವೆ ಕೂಡ. ಆದ್ದರಿಂದ ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರದ ಮೂಲವಾಗಿರುವ ನಮ್ಮನ್ನು ಪಟ್ಟಭದ್ರ ಹಿತಾಸಕ್ತಿಗಳು ಈಗಲೂ ಪರಾಧೀನವಾದ ಪ್ರಜೆಗಳ ಸ್ಥಿತಿಯಲ್ಲಿಯೇ ಮುಂದುವರಿಸಿಕೊಂಡು ಹೋಗುವಂತೆ ಮಾಡುತ್ತಿರುವ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು.

ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಪ್ರಧಾನಿಯವರೆಗೆ ಸ್ಥಾನ ದೊರಕಿರುವುದು ಜನರ ಆಯ್ಕೆಯ ದೆಸೆಯಿಂದಾಗಿ. ಅವರೂ ಮತ್ತು ಸರ್ಕಾರಿ ಅಧಿಕಾರಿಗಳು ಜನರ ಸೇವೆಗಾಗಿ ಜನರೇ ಸಂಬಳ, ಸಾರಿಗೆ, ಮನೆ, ಆಳುಕಾಳು ಒದಗಿಸಿ ನೇಮಿಸಿರುವ ಜನಸೇವಕರು. ಇದು ಲೋಕತಂತ್ರದ ಮೂಲ ಸೆಲೆಯಾಗಬೇಕು. ಈ ಸ್ಥಿತಿಯ ಅರಿವು ಬಿ.ಆರ್‌. ಅಂಬೇಡ್ಕರ್‌ ಅವರಿಗಿಂತ ಗಹನವಾಗಿ ಇನ್ಯಾರಿಗೆ ಇರಲು ಸಾಧ್ಯ? ಅವರು ಹೇಳುತ್ತಾರೆ, ‘ನಮ್ಮ ದೇಶದಲ್ಲಿ ಲೋಕತಂತ್ರದ ಮೌಲ್ಯವು ಹುಟ್ಟಿನಿಂದಲೇ ಪಡೆದುಬರುವ ನೈಜವಾದ ಸಂವೇದನೆಯಲ್ಲ. ಮೂಲಭೂತವಾಗಿ ಅಸಮಾನವಾದ ಸಮಾಜದಲ್ಲಿ ಇದು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕಾದ ಪರಿಕಲ್ಪನೆ, ಪ್ರವೃತ್ತಿ’. 70 ವರ್ಷಗಳ ಹಿಂದೆ ಅವರು ವ್ಯಕ್ತಪಡಿಸಿದ್ದ ಈ ಅಭಿಪ್ರಾಯವು ಈಗಲೂ, ಬಹುಶಃ ಇನ್ನೂ ಹೆಚ್ಚು ಸಂಗತವಾಗಿದೆ.

ಮೂಲಭೂತವಾಗಿ ವಿಶ್ವಮಾನವನಾಗಿ ಹುಟ್ಟಿದ ಮಗುವನ್ನು ಕೆಲವೇ ಸಮಯದಲ್ಲಿ ಅದಕ್ಕೆ ‘ನಾಮಕರಣ’ ಮಾಡುವ ಮೂಲಕ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಲಾಗುತ್ತದೆ. ನಂತರ ಬೆಳೆಯುವ ಕುಟುಂಬ, ಸಮುದಾಯ, ಮಠ, ಮಸೀದಿ, ಗುರುದ್ವಾರ, ಚರ್ಚು, ಧರ್ಮಗುರುಗಳು, ಶಾಲೆಗಳು, ಸರ್ಕಾರಗಳ ಕೃಪೆಯಿಂದಾಗಿ ನಮ್ಮ ಮಕ್ಕಳು ಜನತಂತ್ರದ ಕಟ್ಟಾಳುಗಳಾಗಿ ಬೆಳೆಯುವ ಬದಲು ಹಲವಾರು ಭೇದಭಾವ, ತಾರತಮ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತವೆ. ನಾವು ವಯಸ್ಕರಂತೂ ಇಂಥ ಅಸಾಂವಿಧಾನಿಕ ಮೌಲ್ಯಗಳಲ್ಲಿ ಮುಳುಗಿ ತೇಲುತ್ತಿರುತ್ತೇವೆ. ಇಂಥ ‘ನಾಗರಿಕ’ರಿಂದ ಲೋಕತಂತ್ರದ ಯಶಸ್ಸು ಹೇಗೆ ಸಾಧ್ಯ? ಶತಮಾನಗಳ ನಂತರ ‘ನಾಗರಿಕ’ರಾಗಿದ್ದ ನಮ್ಮನ್ನು ಮತ್ತೊಮ್ಮೆ ‘ವಿಧೇಯ ಪ್ರಜೆ’ಗಳನ್ನಾಗಿ ಮಾಡಲಾಗುತ್ತಿದೆ.

ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನ ಅಂಗೀಕಾರವಾಗಿದ್ದ ಕಾರಣಕ್ಕಾಗಿ ನ. 26ನ್ನು ‘ರಾಷ್ಟ್ರೀಯ ಸಂವಿಧಾನ ದಿನ’ ಎಂದು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಲೋಕತಂತ್ರ ಹಾಗೂ ಅದರಲ್ಲಿ ನಮ್ಮ ಸ್ಥಾನ ಮತ್ತು ಮಾನವು ಅಪಾಯಕ್ಕೆ ಒಳಗಾಗಿರುವ ಕುರಿತು ಗಂಭೀರವಾಗಿ ಚಿಂತಿಸೋಣ. ಸಂವಿಧಾನ ಸಾಕ್ಷರರಾಗೋಣ, ಇತರರಲ್ಲಿಯೂ ಸಂವಿಧಾನ ಸಾಕ್ಷರತೆಯನ್ನು ಪಸರಿಸೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT