ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ: ಜಾರಿ ತಡವಾದದ್ದೇಕೆ?

ಅಂಗೀಕೃತವಾಗಿ ಎರಡು ತಿಂಗಳ ಬಳಿಕ ಜಾರಿಯಾದುದಕ್ಕೆ ಬೇರೆಯದೇ ಕಾರಣವಿದೆ
ಅಕ್ಷರ ಗಾತ್ರ

ಜನವರಿ 26ರಂದೇ ಏಕೆ ಗಣರಾಜ್ಯೋತ್ಸವ? ಹೌದಲ್ಲವೇ? ಗಣರಾಜ್ಯ ದಿನ ಎಂದರೆ ಭಾರತ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತಂದ ದಿನ. ಆದರೆ, ಭಾರತ ಸಂವಿಧಾನವು ಪೂರ್ತಿ ಸಿದ್ಧವಾಗಿ, ಸಂವಿಧಾನ ರಚನಾ ಸಭೆಯು ಅದನ್ನು 1949ರ ನವೆಂಬರ್ 26ರಂದೇ ಅಂಗೀಕರಿಸಿತ್ತು. ಆ ದಿನವನ್ನು 2015ರಿಂದೀಚೆ ನಾವು ಭಾರತ ಸಂವಿಧಾನ ದಿನವೆಂದು ಆಚರಿಸುತ್ತಿದ್ದೇವೆ. ಸಂವಿಧಾನ ನವೆಂಬರ್ 26ರಂದೇ ಅಂಗೀಕೃತವಾಗಿದ್ದರೆ ಅದನ್ನು ರಾಷ್ಟ್ರದಲ್ಲಿ ಜಾರಿಗೆ ಕೊಡಲು ಎರಡು ತಿಂಗಳು ತಡಮಾಡಿದ್ದು ಏಕೆ? ಬೇಕಾದ ಸಿದ್ಧತೆ ಮಾಡಿಕೊಳ್ಳುವುದಕ್ಕೇ? ಅಲ್ಲ. ಈ ತೀರ್ಮಾನಕ್ಕೆ ಮಹತ್ವದ ಕಾರಣಗಳಿದ್ದವು.

ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಬ್ರಿಟಿಷ್ ಸರ್ಕಾರವು ತೀರ್ಮಾನಿಸಿತು. ಆದನ್ನು ಆಗಸ್ಟ್ 15ರಂದು ಘೋಷಿಸಬೇಕು ಎಂದು ತೀರ್ಮಾನಿಸಿದ್ದು ಭಾರತೀಯರಲ್ಲ, ಆಗ ವೈಸ್‌ರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್. ಆಗಸ್ಟ್ 15, ಎರಡನೇ ಜಾಗತಿಕ ಯುದ್ಧದಲ್ಲಿ ಬ್ರಿಟನ್ ಸೇರಿದ ಹಾಗೆ ಅಲೈನ್ ರಾಷ್ಟ್ರಗಳಿಗೆ ಜಪಾನ್ ಶರಣಾಗತಿಯಾದ ದಿನ. ಮೌಂಟ್‍ ಬ್ಯಾಟನ್ ಆಗ್ನೇಯ ಏಷ್ಯಾದ ಕಮಾಂಡಿನ ಸುಪ್ರೀಂ ಅಲೈಡ್ ಕಮಾಂಡರ್ ಆಗಿದ್ದರು ಮತ್ತು ಜಪಾನಿನ ಶರಣಾಗತಿಯನ್ನು ಸಿಂಗಪುರದಲ್ಲಿ ಒಪ್ಪಿಕೊಂಡಿದ್ದು ಇವರೇ ಆಗಿದ್ದರು. 1947ರ ಆಗಸ್ಟ್ 15, ಜಪಾನಿನ ಶರಣಾಗತಿಯ ಎರಡನೇ ವಾರ್ಷಿಕೋತ್ಸವವಾಗಿತ್ತು! ಎಂದರೆ, ಇತಿಹಾಸಜ್ಞ ರಾಮಚಂದ್ರ ಗುಹಾ ಹೇಳುವ ಹಾಗೆ, ‘ಕೊನೆಗೂ ಬಂದ ಸ್ವಾತಂತ್ರ್ಯವು ರಾಷ್ಟ್ರೀಯವಾದಿ ಅಭಿಮಾನಕ್ಕಿಂತ ಸಾಮ್ರಾಜ್ಯಶಾಹಿ ಅಹಂಕಾರವನ್ನು ಅನುರಣಿಸುವ ದಿನದಂದು ಬಂದಿತು’.

ಭಾರತೀಯರಿಗೆ ಉಳಿದಿದ್ದ ಇನ್ನೊಂದು ರಾಷ್ಟ್ರೀಯ ಸಮ್ಮಾನದ ಅವಕಾಶವೆಂದರೆ, ಭಾರತ ಸಂವಿಧಾನವನ್ನು ಜಾರಿಗೆ ನೀಡಲು ರಾಷ್ಟ್ರೀಯವಾದ ಅಭಿಮಾನದ ಪ್ರತೀಕವಾದ ದಿನವನ್ನು ಆಯ್ಕೆ ಮಾಡಿಕೊಳ್ಳುವುದು. ಅದುವೇ ಜನವರಿ 26. ಇದರ ರಾಷ್ಟ್ರೀಯ ಮಹತ್ವವೇನು?

ಭಾರತಕ್ಕೆ ಸ್ವಾತಂತ್ರ್ಯ ಬರುವ 17 ವರ್ಷ ಮುಂಚೆಯೇ, 1930ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲಾಹೋರಿನಲ್ಲಿ ನಡೆದ ತನ್ನ ವಾರ್ಷಿಕ ಅಧಿವೇಶನದಲ್ಲಿ ಭಾರತಕ್ಕೆ ‘ಪೂರ್ಣ ಸ್ವರಾಜ್ಯ’ವನ್ನು ಘೋಷಿಸಿತ್ತು. ಅಂದು ಜನವರಿ 26 ಆಗಿತ್ತು. ಅದಕ್ಕೂ ಮುಂಚೆ 1929ರ ಡಿಸೆಂಬರ್ 31ರ ಮಧ್ಯರಾತ್ರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ಜವಾಹರಲಾಲ್ ನೆಹರೂ ಅವರು ಭಾರತದ ಸ್ವರಾಜ್ಯದ ಪ್ರತೀಕವಾದ (ಮಧ್ಯದಲ್ಲಿ ಅಶೋಕ ಚಕ್ರದ ಬದಲು ಚರಕದ ಚಿತ್ರವಿರುವ) ತ್ರಿವರ್ಣ ಧ್ವಜವನ್ನು ಲಾಹೋರಿನ ರಾವಿ ನದಿಯ ದಡದಲ್ಲಿ ಹಾರಿಸಿದ್ದರು. 1930ರ ಜನವರಿ 26 ಅನ್ನು ಸ್ವಾತಂತ್ರ್ಯ ಘೋಷಣೆಯ ಗಡುವಿನ ದಿನವನ್ನಾಗಿ ನಿಗದಿಪಡಿಸಿ ದ್ದರು. ಅಂದು, ಅಧಿವೇಶನದಲ್ಲಿ ಸೇರಿದ್ದ ಬೃಹತ್ ಸಮಾವೇಶದಲ್ಲಿ ಭಾರತೀಯರು ಅಂಗೀಕರಿಸಿದ ಠರಾವಿನ ಪಠ್ಯದ ಕೆಲವು ಭಾಗ ಹೀಗಿತ್ತು: ‘ಯಾವುದೇ ಸರ್ಕಾರವು ಜನರ ನೈಜ ಹಕ್ಕುಗಳನ್ನು ಕಸಿದುಕೊಂಡಲ್ಲಿ, ಅವರನ್ನು ತುಳಿದಲ್ಲಿ ಅಂಥ ಸರ್ಕಾರವನ್ನು ಬದಲಾಯಿಸುವ ಅಥವಾ ರದ್ದು ಪಡಿಸುವ ಹಕ್ಕೂ ಜನತೆಗೆ ಇದೆ... ಆದ್ದರಿಂದ ಪೂರ್ಣ ಸ್ವರಾಜ್ಯದ ಸ್ಥಾಪನೆಗಾಗಿ ನಾವು ಅಮಾನವೀಯ ಬ್ರಿಟಿಷ್ ಸರ್ಕಾರವನ್ನು ಅಂತ್ಯಗೊಳಿಸುವ ಪಣವನ್ನು ತೊಡುತ್ತೇವೆ’. 1930ರಿಂದ 17 ವರ್ಷಗಳ ಕಾಲ ಭಾರತೀಯರು ಜನವರಿ 26ರಂದು ದೇಶದಾದ್ಯಂತ ‘ಪೂರ್ಣ ಸ್ವರಾಜ್ಯ ದಿನ’ವನ್ನು ಆಚರಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿದರು.

ಈ ಕಾರಣಗಳಿಗಾಗಿ ಭಾರತೀಯರ ಸ್ವಾಭಿಮಾನದ ಪ್ರತೀಕವಾದ ಆ ದಿನದಂದೇ ತನ್ನನ್ನು ‘ಸಾರ್ವಭೌಮ, (ಸಮಾಜವಾದಿ, ಮತಧರ್ಮ ನಿರಪೇಕ್ಷ) ಜನಸತ್ತಾತ್ಮಕ ಗಣರಾಜ್ಯ’ವನ್ನಾಗಿ ಜಗತ್ತಿನೆದುರು ಘೋಷಿಸಲು, ಸಂವಿಧಾನವನ್ನು ರಾಷ್ಟ್ರದಲ್ಲಿ ಜಾರಿಗೆ ಕೊಡಲು, ಸಿದ್ಧವಾಗಿ ಎರಡು ತಿಂಗಳು ತಡವಾದರೂ ಅಡ್ಡಿಯಿಲ್ಲ ವೆಂದು (1950ರ) ಜನವರಿ 26 ಅನ್ನು ಭಾರತವು ಆಯ್ಕೆ ಮಾಡಿಕೊಂಡಿತು.

ವಾಸ್ತವವಾಗಿ, 1947ರಲ್ಲಿ ‘ಸ್ವಾತಂತ್ರ್ಯ’ ಬಂದಿದ್ದರೂ 1950ರ ಜನವರಿ 26, ಎಂದರೆ ತನ್ನದೇ ಸಂವಿಧಾನ ಜಾರಿಗೆ ಕೊಡುವವರೆಗೆ ಭಾರತವು ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿರದೆ, ‘ಅರೆ-ಸ್ವಾಯತ್ತತೆ ಯೊಂದಿಗೆ ಬ್ರಿಟಿಷ್ ಆಧಿಪತ್ಯವನ್ನು ಒಪ್ಪಿಕೊಂಡೇ ಮುಂದುವರಿಯುವ ‘ಡೊಮೆನಿಯನ್’ ರಾಷ್ಟ್ರ’ ಆಗಿತ್ತು. 1950ರ ಜನವರಿ 26ರಂದು, ಬ್ರಿಟಿಷರ ಕೊನೆಯ ಗವರ್ನ್‌ಮೆಂಟ್‌ ಆಫ್ ಇಂಡಿಯಾ ಆ್ಯಕ್ಟ್– 1935ರ ಜಾಗದಲ್ಲಿ, ಭಾರತದ ಸ್ವ-ಆಳ್ವಿಕೆಯ ದಾರಿದೀಪವಾದ ಸಂವಿಧಾನ ಜಾರಿಗೆ ಬಂದ ಕ್ಷಣದಿಂದ ಭಾರತವು ಸಾರ್ವಭೌಮ ರಾಷ್ಟ್ರವಾಯಿತು.

ನಮ್ಮಲ್ಲಿ ಈಗಲೂ ಬಹುತೇಕ ಜನರಿಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ನಡುವೆ ವ್ಯತ್ಯಾಸವೇ ಗೊತ್ತಿಲ್ಲದ ಸ್ಥಿತಿಯಿದೆ. ಅಂದು, ರಾಷ್ಟ್ರ ಮಟ್ಟದಿಂದ ಹಿಡಿದು ಗ್ರಾಮ ಪಂಚಾಯಿತಿಯ ವರೆಗೆ ಎಲ್ಲ ಕಡೆ ಜನಪ್ರತಿನಿಧಿಗಳು ತಮ್ಮ ಸಾಧನೆಗಳ ತುತ್ತೂರಿಯನ್ನು ಊದುತ್ತಾ ಹಳಸಿದ ಭಾಷಣಗಳನ್ನು ಮಾಡುವುದಾದರೆ ಜನರಿಗೆ ಈ ದಿನಗಳ ಮಹತ್ವ ಅರ್ಥವಾಗುವುದಾದರೂ ಹೇಗೆ? ಈಗ ನಿಮಗೆ ಗಣರಾಜ್ಯೋತ್ಸವದ ಮಹತ್ವ ಅರ್ಥವಾಗಿದ್ದರೆ, ಅಂದು ಭಾರತದ ಧ್ವಜವನ್ನು ಹಾರಿಸಿ, ಸಂವಿಧಾನವನ್ನು ಪ್ರತಿನಿಧಿಸುವ ಪ್ರಸ್ತಾವನೆಯ ಕನ್ನಡ ಆವೃತ್ತಿಯನ್ನು ಇಡಿ. ಈ ದಿನದ ಮಹತ್ವವನ್ನು ಎಲ್ಲರಿಗೂ ಅರ್ಥ ಮಾಡಿಸುವ ಪ್ರಯತ್ನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT