ಶುಕ್ರವಾರ, ಫೆಬ್ರವರಿ 26, 2021
27 °C
ಬದುಕನ್ನು ಬದುಕಿರುವ ತನಕವೂ ಪ್ರೀತಿಸಬೇಕು. ಮರಣಕ್ಕಿಂತ ಜೀವನ ಮಿಗಿಲೆಂಬ ಧೋರಣೆಯಿರಬೇಕು. ಇಂದು ವಿಶ್ವ ಆತ್ಮಹತ್ಯೆ ತಡೆ ದಿನ

ಆತ್ಮವಿಶ್ವಾಸದ ಅಂತ್ಯವೇ ಆತ್ಮಹತ್ಯೆ

ಬಿಂಡಿಗನವಿಲೆ ಭಗವಾನ್ Updated:

ಅಕ್ಷರ ಗಾತ್ರ : | |

ವಿಶ್ವದಲ್ಲಿ ವರ್ಷಕ್ಕೆ ಸುಮಾರು ಹತ್ತು ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. 2023ರ ವೇಳೆಗೆ ಈ ಪ್ರಮಾಣ 12.5 ಲಕ್ಷ ಆದೀತೆಂದು ಅಂದಾಜು. ಒಂದು ದಿನಕ್ಕೆ ಬದುಕಿಗೆ ವಿದಾಯ ಹೇಳುವವರು ಸರಾಸರಿ 3,000 ಮಂದಿ. ಆತ್ಮಹತ್ಯೆಗೆ ಯತ್ನಿಸುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು. ಆತ್ಮಹತ್ಯೆಗೆ ಯತ್ನಿಸುವವರಲ್ಲಿ ಸುದೈವವಶಾತ್ ಶೇಕಡ ಐವರಿಗಷ್ಟೇ ದುರಂತ ಯಶಸ್ಸು. ಈ ಶೇಕಡಾವಾರನ್ನು ತಗ್ಗಿಸುವುದು ಎಲ್ಲರ ಹೊಣೆ.

ಬಡತನ, ನಿರುದ್ಯೋಗ, ಪ್ರೇಮಭಂಗ, ತೀವ್ರ ಅನಾರೋಗ್ಯ, ಕೈಗಡ, ಸಾಮಾಜಿಕ ಬಹಿಷ್ಕಾರ, ಆಪ್ತರ ಸಾವು, ಮೌಢ್ಯ... ಇವೆಲ್ಲಾ ಸ್ವಹತ್ಯೆಗೆ ಪ್ರಚೋದಿಸುವ ಪ್ರಮುಖ ಕಾರಣಗಳು. ಮನೋವಿಜ್ಞಾನಿ ಜೆಸ್ಸಿ ಬಿರಿಂಗ್ ಇತ್ತೀಚಿನ ‘ಸೈಂಟಿಫಿಕ್ ಅಮೆರಿಕನ್’ಗೆ ಬರೆದ ಲೇಖನದಲ್ಲಿ ‘ಉದ್ವೇಗಗಳ ಸುನಾಮಿಯೇ ಸ್ವಹತ್ಯೆಗೆ ಪ್ರೇರಣೆ’ ಎಂದಿದ್ದಾರೆ. ಮಾನಸಿಕ ದೌರ್ಬಲ್ಯದ ಒಂದು ಲಕ್ಷಣವಾಗಿ ಸ್ವಹತ್ಯೆಗೆ ಎಡತಾಕುವುದನ್ನು ಪರಿಗಣಿಸಬೇಕು. ಪರರ ನಿಂದನೆ, ಅವಮಾನ ತಪ್ಪಿಸಿದರೆ ಆತ್ಮಹತ್ಯೆ ಪ್ರವೃತ್ತಿಗೆ ಗಮನಾರ್ಹವಾಗಿ ಕಡಿವಾಣ ಹಾಕಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ. ವಿಪರ್ಯಾಸವೆಂದರೆ ಕ್ಯಾನ್ಸರ್‌ಪೀಡಿತರನ್ನು ಅತ್ಯಂತ ಶ್ರದ್ಧೆಯಿಂದ ಉಪಚರಿಸಲಾಗುತ್ತದೆ. ಆದರೆ ಮಾನಸಿಕ ಖಿನ್ನತೆಗೊಳಗಾದವರ ಬಗ್ಗೆ ಆ ಕಾಳಜಿಯಿಲ್ಲ.

ಬದುಕನ್ನು ಕೊನೆಗಾಣಿಸಿಕೊಳ್ಳುವುದು, ತಪ್ಪಾದ ದಿಕ್ಕಿನಲ್ಲಿ ದೊಡ್ಡ ನಿರ್ಧಾರ. ಒಬ್ಬರ ಆತ್ಮಹತ್ಯೆಯಿಂದ ಒಂದು ಕುಟುಂಬದ ಬದುಕು ಅಧೋಗತಿಗೆ ಬರುವುದಿದೆ. ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತಾರೆ, ಜೀವನ್ಮುಕ್ತರಾಗುತ್ತಾರೆ. ಆದರೆ ಈ ಆಯ್ಕೆಯ ಬೆಲೆ ಅವಲಂಬಿತರ ದುಃಖ, ಸಂಕಟ. ಸ್ವಹತ್ಯೆ ವೈಯಕ್ತಿಕವಾದರೂ ಅದರ ಪರಿಣಾಮ ಸಾಮಾಜಿಕ. ಒಂದು ಆತ್ಮಹತ್ಯೆಗೆ ನಾವು ಊಹಿಸಲೂ ಆಗದ ಸಣ್ಣ ಕಾರಣವೂ ಸಾಕು. ಅಂತೆಯೇ ಅದನ್ನು ತಡೆಗಟ್ಟಲೂ ಸಹ. ಖಿನ್ನತೆ ಕಾಡಿ ಇನ್ನು ಜೀವಿಸಿದ್ದು ಸಾಕೆಂದು ನಿಶ್ಚಯಿಸಿ ಒಬ್ಬ ನದಿಗೆ ಹಾರಿಕೊಳ್ಳಲು ಸಿದ್ಧನಾಗಿದ್ದಾನೆಂದು ಕಲ್ಪಿಸಿಕೊಳ್ಳೋಣ. ಅದನ್ನು ಗಮನಿಸಿದವರೊಬ್ಬರ ‘ಹೇಗಿದ್ದೀರಿ’ ಎಂಬ ಪ್ರಶ್ನೆಯೇ ಆತನ ನಿರ್ಧಾರ ಬದಲಿಸಿಕೊಳ್ಳಲು ಪ್ರೇರಣೆಯಾಗಬಹುದು. ಪತಿಯು ಅಪಘಾತದಲ್ಲಿ ಮರಣಿಸಿದ ದುಃಖವನ್ನು ಸಹಿಸಲಾಗದೆ, ನೇಣು ಬಿಗಿದುಕೊಳ್ಳಲು ಮುಂದಾದ ಸತಿಯು ತನ್ನ ಕೂಸನ್ನು ನೆನೆದು, ಹೊಣೆಯರಿತು ಘೋರ ತೀರ್ಮಾನದಿಂದ ಹಿಂದೆ ಸರಿಯಬಹುದು.

‘ನನ್ನನ್ನು ಆತ್ಮಹತ್ಯೆಯೆಂಬ ಭೂತ ಎಂದೂ ಕಾಡಿಲ್ಲ’ ಎನ್ನುವವರನ್ನೂ ‘ನಿಮ್ಮ ಮನೆಯ ಕಂಬಳಿಯಡಿ ಅದು ದೂಳಾಗಿ ಅವಿತಿರಬಹುದು. ಒಮ್ಮೆ ಗುಡಿಸಿಬಿಡಿ’ ಅಂತ ಎಚ್ಚರಿಸಬೇಕು. ಮನೋವಿಜ್ಞಾನಿಗಳು, ‘ಸ್ವಹತ್ಯೆಗೆ ಮುಂದಾಗುವವರ ಪೈಕಿ ಕೆಲವರು ಯಾರಾದರೂ ತಮ್ಮನ್ನು ಕಾಪಾಡಲಿ ಎಂದೇ ಹಪಹಪಿಸುತ್ತಾರೆ’ ಎನ್ನುತ್ತಾರೆ. ಅಂಥವರ ಸಂಖ್ಯೆ ಅಧಿಕವಾದಷ್ಟೂ ಸಮಾಜ ಬಲಗೊಳ್ಳುವುದು. ತಮಗಾಗದವರ ಶಿಕ್ಷೆಗೆ ಒತ್ತಾಯಿಸುವುದಕ್ಕೋ ಇಲ್ಲವೆ ಕಠಿಣ ಸನ್ನಿವೇಶಗಳ ನಿರ್ವಹಣೆಗೋ ಆತ್ಮಹತ್ಯಾ ಪ್ರಯತ್ನ ಪರೋಕ್ಷ ಅಸ್ತ್ರವಾಗಬಹುದು. ಕೆಲ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಕಾರಣ ‘ಬದುಕಲಾಗದು’ ಎನ್ನುವುದಲ್ಲ, ‘ಒಂಟಿಯಾಗಿ ಬದುಕಲಾಗದು’ ಎಂಬುದಾಗಿರುತ್ತದೆ.

ನಮ್ಮ ದಿನಮಾನಗಳ ಗುಣಮಟ್ಟ ಅಖೈರಾಗಿರುವುದು ನಮ್ಮ ಕೈಯಲ್ಲೇ. ಅದು ನಾವು ಒಡನಾಡುವ ವ್ಯಕ್ತಿಗಳು, ಸಂದರ್ಭಗಳಲ್ಲಿಲ್ಲ. ಸಣ್ಣ ಪುಟ್ಟ ಸಮಸ್ಯೆ, ಸಂಗತಿಗಳಿಗೆಲ್ಲ ವಿಪರೀತಾರ್ಥ ಪೋಣಿಸಿ ಸಂಕೀರ್ಣವಾಗಿಸುವವರು ನಾವೇ. ಎಂಥ ಸವಾಲಿಗೂ ಪರಿಹಾರ ಲಭ್ಯ. ‘ಈಸಬೇಕು, ಇದ್ದು ಜಯಿಸಬೇಕು’, ‘ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಬೇಡಿರೊ ಹುಚ್ಚಪ್ಪಗಳಿರಾ’ ಮುಂತಾದ ದಾಸವರೇಣ್ಯರ ಕಿವಿಮಾತುಗಳು ಸಾರ್ವಕಾಲಿಕ. ಜೈಲಿಗೆ ಹೋದವರು ಬಿಡುಗಡೆಯಾಗಿ ಬಂದ ಮೇಲೆ ಸಮಾಜ ಅವರನ್ನು ಎಲ್ಲರಂತೆಯೇ ನೋಡಬೇಕು. ಇಲ್ಲವಾದರೆ ಅವರು ಮಾನಸಿಕ ಬಂದಿಗಳಾದಾರು. ಅಂಥವರಿಗೆ ಮತ್ತೆ ಜೈಲು ಇಲ್ಲವೇ ಆತ್ಮಹತ್ಯೆ ಎಂಬ ಎರಡೇ ಆಯ್ಕೆಗಳಾಗಿಬಿಡುವ ಅಪಾಯವಿದೆ.

‌ಯಾತನೆ, ಪರಿತಾಪ, ತಳಮಳ, ತಲ್ಲಣಕ್ಕೆ ಯಾರೂ ಹೊರತಲ್ಲ. ‘ನಾನು ಸಂತೋಷವಾಗಿದ್ದೇನೆ, ಸವಾಲುಗಳಿಲ್ಲ’ ಎಂಬ ಹುಸಿ ಘನತೆಯಿಂದ ಮುಕ್ತವಾಗಿ ಆಪ್ತರಲ್ಲಿ ಸಲಹೆ, ಮಾರ್ಗದರ್ಶನ ಪಡೆಯುವುದರಿಂದ ಲಾಭವಿದೆ. ಹಾಗೆ ಸಹಾಯಕ್ಕೆ ಮೊರೆಹೋದರೆ ಆತ್ಮೀಯರಿಗೆ ಅದು ಹೊರೆಯೇನಲ್ಲ. ‘ನನ್ನ ಮೇಲೆ ಇಷ್ಟು ವಿಶ್ವಾಸವಿರಿಸಿ ಬಂದರಲ್ಲ’ ಎಂದು ಅವರು ಹರ್ಷಿಸುತ್ತಾರೆ. ಸೋಲು, ನಿರಾಸೆ, ಅಸಹಾಯಕತೆ ಸೊರಗಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಅದನ್ನು ವಿವರಿಸಿ ಪ್ರಲಾಪಿಸಬೇಕಿಲ್ಲ. ನೆರವಿನ ಪಡೆ ಕಟ್ಟುವುದು ಸಲ್ಲ. ಯಾರಲ್ಲಿ ಹೇಳಿಕೊಂಡರೆ ಯುಕ್ತವೋ ಅವರಲ್ಲಿ ನಿವೇದನೆ ಜಾಣತನ. ಗಾಯ ನಮ್ಮ ಕಥೆಗಳನ್ನು ತೋಡಿಕೊಳ್ಳುವ ಆರಂಭದಿಂದಲೇ ಮಾಯುವುದು. ಯಾವುದರ ವಿರುದ್ಧ ನಾವೊಬ್ಬರೇ ಹೋರಾಡುತ್ತೇವೋ ಆ ಯುದ್ಧ ಎದುರಿಸಲು ಇನ್ನೊಬ್ಬ ಯೋಧ ಸಿಕ್ಕಾನು. ಇದನ್ನು ಏಕೆ ಒತ್ತಿ ಹೇಳಲಾಯಿತೆಂದರೆ ಆತ್ಮಹತ್ಯೆಗೆ ಕಾರಣ ಬರೆದಿಡುವವರಲ್ಲಿ ಅನೇಕರು ತಾವು ಪರರಿಗೆ ವೃಥಾ ಭಾರವಾದೆವೆಂದೇ ನಮೂದಿಸಿರುತ್ತಾರೆ.

‘ನಾನು ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳೆನು. ಸಾವು ಸಮಸ್ಯೆಗೆ ಪರಿಹಾರವಲ್ಲ. ಇತರರನ್ನು ಬೆದರಿಸುವ ಅಂಶಗಳು ನನ್ನನ್ನು ಬೆದರಿಸವು. ನಾನು ಇತರರಿಗಿಂತಲೂ ಸಮರ್ಥವಾಗಿ ನೋವು, ದುಃಖ ಅನುಭವಿಸಬಲ್ಲೆ’ ಎನ್ನುವ ಸಂಕಲ್ಪವನ್ನು ಜಗತ್ತು ಬಯಸುತ್ತದೆ. ಮರಣವನ್ನು ನಾವಾಗಿಯೇ ತಂದುಕೊಳ್ಳಬಾರದು. ಅದು ಪ್ರಕೃತಿ ಸಹಜವಾಗಿ ಒದಗಬೇಕು. ಸ್ವಹತ್ಯೆ ನಿಸರ್ಗವನ್ನು ಅಪಮಾನಿಸಿದಂತೆ. ಎಲ್ಲಕ್ಕಿಂತಲೂ ಬದುಕು ಹಿರಿಯದೆಂಬ ಮನೋಗತಿಯನ್ನು ತಳೆದರೆ ಆತ್ಮಹತ್ಯೆಯ ಆಲೋಚನೆ ಹತ್ತಿರ ಕೂಡ ಸುಳಿಯದು. ಬದುಕನ್ನು ಬದುಕಿರುವ ತನಕವೂ ಪ್ರೀತಿಸಬೇಕು. ಮರಣಕ್ಕಿಂತ ಜೀವನ ಮಿಗಿಲೆಂಬ ಧೋರಣೆಯಿರಬೇಕು. ಆತ್ಮವಿಶ್ವಾಸದ ಅಂತ್ಯವೇ ಆತ್ಮಹತ್ಯೆ. ಪ್ರತೀ ವರ್ಷ ಸೆಪ್ಟೆಂಬರ್ 10 ‘ಆತ್ಮಹತ್ಯೆ ತಡೆ ದಿನ’. ಇಂಥಲ್ಲಿ ಜೋಸೆಫ್ ಪಿನೊಲನ ಪುಟ್ಟ ಕವನ ಉಲ್ಲೇಖನೀಯ:

‘ನಾವು ಮುರಿದ ಹಡಗಿನ ಚೂರುಗಳಿಂದ ಕಟ್ಟಿದ

ದೀಪಸ್ತಂಭಗಳು

ಹಡಗುಗಳ ಡಿಕ್ಕಿ ತಪ್ಪಿಸಲು

ಸಂಕಲ್ಪಿಸಿರುವೆವು’.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು