ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಪ್ರಾಥಮಿಕ ಶಿಕ್ಷಣ: ಸಲ್ಲದ ಗೊಂದಲ

ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ವಿಭಾಗ ತೆರೆಯಲು ವಿರೋಧ ಮಾಡುತ್ತಿರುವವರು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಡಲಿಲ್ಲವೇಕೆ?
Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ವಿಭಾಗಗಳನ್ನು ತೆರೆಯುವ ಬಗ್ಗೆ ನಡೆಯುತ್ತಿರುವ ಚರ್ಚೆಗಳು, ಆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಅಲ್ಲದೆ, ಪೂರ್ಣ ಮಾಹಿತಿ ಇಲ್ಲದೆ ನಡೆಯುತ್ತಿರುವ ಈ ಚರ್ಚೆಗಳು ಗೊಂದಲವನ್ನೂ ಸೃಷ್ಟಿಸುತ್ತಿವೆ.

ನಮ್ಮ ಸಂವಿಧಾನದ ಜೊತೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು, ಮಕ್ಕಳ ಅಭಿವೃದ್ಧಿಯ ವಿಚಾರದಲ್ಲಿ ನೀತಿ-ಕಾನೂನುಗಳನ್ನು ರೂಪಿಸುವಾಗ ಮಕ್ಕಳ ಹಿತಾಸಕ್ತಿಯ ತತ್ವ ಪ್ರಧಾನವಾಗಬೇಕೆಂದು ಒತ್ತಿ ಹೇಳಿವೆ. ಇವುಗಳನ್ನು ಆಧರಿಸಿ ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಾಗಿದ್ದ ನೀತಿಗಳು ಮತ್ತು ಸಾಂಸ್ಥಿಕ ರಚನೆಗಳನ್ನು ಹೊಸ ಕಾನೂನು- ನೀತಿಗಳ ಚೌಕಟ್ಟಿನಲ್ಲಿ ಪುನರ್‌ ರಚಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ, ಈ ಹಿಂದೆ ಅನುಸರಿಸಿದ ಕಲ್ಯಾಣ ದೃಷ್ಟಿಕೋನದ ಬದಲು, ಹಕ್ಕು ಆಧಾರಿತ ದೃಷ್ಟಿಕೋನದಲ್ಲಿ ಮಕ್ಕಳ ಅಗತ್ಯ ಮತ್ತು ಅವಶ್ಯಕತೆಗಳಿಗೆ ಪೂರಕವಾಗಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಿದೆ.

ಈಗ ಪುನರ್‌ರಚನೆ ಆಗಬೇಕಾದ ವಿಚಾರಗಳು ಆಯಾ ಕಾಲಘಟ್ಟದಲ್ಲಿದ್ದ ಸಾಮಾಜಿಕ- ಆರ್ಥಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ರೂಪುಗೊಂಡಿದ್ದು, ಬದಲಾದ ಕಾಲಘಟ್ಟವನ್ನು ಗಮನದಲ್ಲಿ ಇರಿಸಿಕೊಂಡು ಹೊಸ ನೀತಿಗಳನ್ನು ರೂಪಿಸಬೇಕಾಗುತ್ತದೆ. ಇಂತಹ ನೀತಿಗಳ ಹಿಂದಿರುವ ಮಕ್ಕಳ ಹಕ್ಕುಗಳ ಔಚಿತ್ಯವನ್ನು ಅರ್ಥಮಾಡಿಕೊಳ್ಳದೆ, ಕೇವಲ ಸ್ವಪ್ರತಿಷ್ಠೆಗಾಗಿ ವಿರೋಧಿಸುವುದು ಮುಕ್ತ ಮನಃಸ್ಥಿತಿಯ ಕೊರತೆ ಹಾಗೂ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.

ಈ ಹಿನ್ನೆಲೆಯಲ್ಲಿ ವಿಷಯವನ್ನು ಅವಲೋಕಿಸಿ ದಾಗ, ಕೆಲವು ಬುದ್ಧಿಜೀವಿಗಳು ಮತ್ತು ಸಂಶೋಧಕರು ಹೇಳುವಂತೆ ಇದು ಹೊಸ ವಿಷಯವಲ್ಲ ಎಂಬುದು ತಿಳಿಯುತ್ತದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಲಹಾ ಮಂಡಳಿ, ಶಿಕ್ಷಣ ಆಯೋಗ, ರಾಷ್ಟ್ರೀಯ ಮಕ್ಕಳ ನೀತಿ, ರಾಷ್ಟ್ರೀಯ ಶಿಕ್ಷಣ ನೀತಿ, ಸರ್ವ ಶಿಕ್ಷಣ ಅಭಿಯಾನ, ಕರ್ನಾಟಕ ಸರ್ಕಾರಿ ಶಾಲೆಗಳ ಸಬಲೀಕರಣ ವರದಿ, ಸಮಗ್ರ ಶಿಕ್ಷಣ ಅಭಿಯಾನ ಎಲ್ಲವೂ ಪೂರ್ವಪ್ರಾಥಮಿಕ ಶಿಕ್ಷಣವು ಪ್ರಾಥಮಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂಬುದನ್ನು ಸ್ಪಷ್ಟವಾಗಿ ಪ್ರತಿಪಾದಿಸಿವೆ. ಪ್ರಾಥಮಿಕ ಶಿಕ್ಷಣದ ಭಾಗವಾಗುವ ಪೂರ್ವಪ್ರಾಥಮಿಕ ಶಿಕ್ಷಣದ ಸ್ವರೂಪ, ಉದ್ದೇಶ ಮತ್ತು ವಿಧಾನ ಏನೆಂಬುದರ ಬಗ್ಗೆ ಹಲವು ಸಂಶೋಧನೆಗಳಾಗಿವೆ. ಇವೆಲ್ಲವನ್ನೂ ಮರೆಮಾಚಿ, ಇದು ಕೇವಲ ಅಂಗನವಾಡಿಗಳನ್ನು ಮುಚ್ಚಲು ರೂಪಿಸಿರುವ ಷಡ್ಯಂತ್ರ ಎಂದು ಬಿಂಬಿಸುವುದು ಶೋಚನೀಯ.‌

ಹೀಗೆ ಹೇಳುತ್ತಿರುವವರು ಮತ್ತು ಅವರಿಗೆ ಆಶುಪಲ್ಲವಿಯಾಗಿ ಇರುವವರು, ಮಕ್ಕಳ ಆರೈಕೆ ಮತ್ತು ಶಿಕ್ಷಣದ ವಿಷಯಗಳು ಖಾಸಗೀಕರಣಗೊಂಡಿದ್ದು ಮಾರಾಟದ ಸರಕುಗಳಾಗಿರುವುದನ್ನು ಗಮನಿಸಬೇಕು. ಖಾಸಗಿ ಶಿಶುಪಾಲನಾ ಕೇಂದ್ರಗಳು, ಸರಣಿ ಸಮೂಹ ಉದ್ಯಮದ ಮೂಲಕ ನಡೆಯುತ್ತಿರುವ ನರ್ಸರಿ, ಕಿಂಡರ್‌ಗಾರ್ಟನ್‌, ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಡೆಯುತ್ತಿರುವ ನರ್ಸರಿ ಹಾಗೂ ಕಿಂಡರ್‌ ಗಾರ್ಟನ್‌ಗಳು 6 ವರ್ಷದೊಳಗಿನ ಮಕ್ಕಳನ್ನು ಅಂಗನವಾಡಿ ವ್ಯಾಪ್ತಿಯಿಂದ ಕಸಿಯುವ ಕೆಲಸವನ್ನು ಮೂರು ದಶಕಗಳಿಂದ ಮಾಡುತ್ತಲೇ ಬಂದಿವೆ. ಪರಿಣಾಮವಾಗಿ, ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಹಾಗಾದರೆ, ಈಗ ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ವಿಭಾಗಗಳನ್ನು ತೆರೆಯಲು ವಿರೋಧಿಸುತ್ತಿರುವವರು ಅಂಗನವಾಡಿಗೆ ಮಾರಕವಾಗಬಹುದಾದ ಈ ಎಲ್ಲ ಸಂಸ್ಥೆಗಳ ವಿರುದ್ಧ ಪ್ರಬಲ ಹೋರಾಟ ರೂಪಿಸಲಿಲ್ಲವೇಕೆ?

ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯ ವರದಿಯು ಅಂಗನವಾಡಿಗಳನ್ನು ಉಳಿಸಿ– ಬೆಳೆಸಲು ತ್ವರಿತವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದೆ. ಹೀಗಿರುವಾಗ ಅಂಗನವಾಡಿಗಳನ್ನು ಮುಚ್ಚುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬದಲಿಗೆ ಅಂಗನವಾಡಿಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ. ನರ್ಸರಿ ಶಿಕ್ಷಕರ ತರಬೇತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗುವ ಪೂರ್ವಪ್ರಾಥಮಿಕ ವಿಭಾಗಕ್ಕೆ ಕಾಯಂ ಶಿಕ್ಷಕರನ್ನಾಗಿ ನೇಮಿಸುವಂತೆ ಒತ್ತಾಯಿಸಬಹುದಾಗಿದೆ. ಇದಲ್ಲದೆ, 10ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಕಾರ್ಯಕರ್ತರಿಗೆ ಒಂದು ವರ್ಷದ ತರಬೇತಿ ನೀಡಿ, ಅವರನ್ನು ಕಾಯಂಗೊಳಿಸಬಹುದಾಗಿದೆ. ಈ ರೀತಿ ತೆರವಾದ ಹುದ್ದೆಗಳಿಗೆ, ಹೊಸ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳುವ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಉದ್ಯೋಗ ನೀಡಿ ಪವಿತ್ರ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಬಹುದಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮತ್ತು ಪ್ರಾಥಮಿಕ ಶಾಲೆಗಳಲ್ಲಿಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವಪ್ರಾಥಮಿಕ ವಿಭಾಗಗಳನ್ನು ಪ್ರಾರಂಭಿಸಲು ಸರ್ಕಾರವು ಬಜೆಟ್‌ನಲ್ಲಿ ಕಾರ್ಯಸೂಚಿ ಮತ್ತು ಸಂಪನ್ಮೂಲಗಳನ್ನು ಕಾದಿರಿಸಬೇಕಿದೆ. ಇದು ಸರ್ಕಾರದ ನಿಜವಾದ ರಚನಾತ್ಮಕ ಕೆಲಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT