ಮೇ ತಿಂಗಳಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರದ ಮುಂದೆ ನೀರಿನ ಸಮಸ್ಯೆ ಪೆಡಂಭೂತವಾಗಿ ನಿಂತಿತ್ತು. ಬೆಂಗಳೂರಿನ ಜನರ ಕುಡಿಯುವ ನೀರಿನ ಮೂಲ ನೆಲೆಗಳಾದ ಕೆಆರ್ಎಸ್, ಕಬಿನಿ ಜಲಾಶಯಗಳು ಪಾತಾಳ ಕಂಡಿದ್ದವು. ರಾಜಧಾನಿಯ ಜನ ಅದೆಲ್ಲಿ ಬಂಡೇಳುವರೋ ಎಂಬ ಆತಂಕದಿಂದ ಸರ್ಕಾರ, ಯಂತ್ರಗಳಿಂದ ಸಣ್ಣ ಹೊಳೆ ತೆಗೆಸಿ, ಕೆಆರ್ಎಸ್ನಲ್ಲಿ ಅಳಿದುಳಿದ ನೀರನ್ನೇ ಅಣೆಕಟ್ಟೆಯಿಂದಾಚೆ ಹರಿಸಿ, ಬೆಂಗಳೂರಿನ ಜನರಿಗೆ 20 ದಿನಕ್ಕೆ ನೀರು ಸಾಕಾಗುತ್ತದೆಂದು ಸಾರಿತು.

ಆಗ ರಾಜ್ಯದ ಪ್ರಮುಖ ಜಲಮೂಲಗಳಾದ ಲಿಂಗನಮಕ್ಕಿ, ಭದ್ರಾ, ತುಂಗಭದ್ರಾ, ಆಲಮಟ್ಟಿ ಮುಂತಾದ ಜಲಾಶಯಗಳು ಹಾಗೂ ನದಿಗಳು ಬತ್ತಿಹೋಗಿದ್ದವು. ಆ ಸಮಯದಲ್ಲೇ ತಮಿಳುನಾಡು ಕಾವೇರಿ ನೀರಿನ ತನ್ನ ಹಕ್ಕನ್ನು ಎತ್ತಿಕೊಂಡು ನೀರಿಗಾಗಿ ಕೇಂದ್ರ ಸರ್ಕಾರ, ಕೋರ್ಟಿನ ಮೂಲಕ ಅಬ್ಬರಿಸುತ್ತಿದ್ದರೆ, ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಬವಣೆ ತಪ್ಪಿಸಲು ಕೊಯ್ನಾದಿಂದ ಒಂದೂವರೆ ಟಿ.ಎಂ.ಸಿ ಅಡಿ ನೀರು ಬಿಡಲು ಮಹಾರಾಷ್ಟ್ರದ ಮುಂದೆ ಕರ್ನಾಟಕ ಸರ್ಕಾರ ಅಂಗಲಾಚತೊಡಗಿತ್ತು. ಅದೇ ಪರಿಸ್ಥಿತಿ ಇಲ್ಲಿಯವರೆಗೆ ಮುಂದುವರೆದಿದ್ದರೆ ಜನರಿರಲಿ, ಸರ್ಕಾರವೇ ಇನ್ನಿಲ್ಲದ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಆದರೆ, ಪ್ರಕೃತಿ ಅಂತಹದೆಲ್ಲಾ ಕಷ್ಟದ ಕ್ಷಣಗಳನ್ನು ಸರಾಗವಾಗಿ ಪರಿಹರಿಸಿಬಿಟ್ಟಿತು. ಜೂನ್, ಜುಲೈ ತಿಂಗಳು ಪೂರ್ತಿ ಸುರಿದ ವರ್ಷಧಾರೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿಹೋಗಿವೆ. ಮಲಪ್ರಭಾ, ಘಟಪ್ರಭಾ ಹೊರತುಪಡಿಸಿ, ಜಲವಿದ್ಯುತ್ ತಯಾರಿಸುವ ಪ್ರಮುಖ ಜಲಾಶಯವಾದ ಲಿಂಗನಮಕ್ಕಿಯೂ ಸದ್ಯದಲ್ಲೇ ತುಂಬುವ ಮೂಲಕ ಇತಿಹಾಸ ನಿರ್ಮಿಸಲಿದೆ.

ಆಲಮಟ್ಟಿ, ತುಂಗಭದ್ರಾ, ಕೆಆರ್ಎಸ್, ಕಬಿನಿ, ಹೇಮಾವತಿ ಜಲಾಶಯಗಳು ತುಂಬುವ ಮೂಲಕ ದಿನವೂ ಸಹಾಸ್ರರು ಕ್ಯೂಸೆಕ್ ನೀರನ್ನು ಹೊರಹಾಕುತ್ತಿವೆ. ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಾ ಜನ-ಜಾನುವಾರುಗಳಿಗೆ ತತ್ವಾರ ತಂದಿವೆ. ಎಲ್ಲ ಜಲಪಾತಗಳು ಭೋರ್ಗರೆದು ಸುರಿಯುತ್ತಾ ಮನಮೋಹಕ ದೃಶ್ಯಗಳನ್ನು ಸೃಷ್ಟಿಸಿ ಜನಮನವನ್ನು ಸೂರೆಗೊಳ್ಳುತ್ತಿವೆ. ಮುಖ್ಯಮಂತ್ರಿಗಳು ತುಂಬಿ ತುಳುಕುವ ಅಣೆಕಟ್ಟೆಗಳಲ್ಲಿ ಬಾಗಿನ ಅರ್ಪಿಸುತ್ತಾ ಸಂಭ್ರಮಪಡುತ್ತಿದ್ದಾರೆ. ಈ ವರ್ಷಧಾರೆಯ ಫಲವಾಗಿ ಹೊಸ ಜೀವ ಬಂದಂತಾಗಿ ಸರ್ಕಾರ ನಿಟ್ಟುಸಿರುಬಿಟ್ಟಿದೆ.

ಇಂತಹ ಸಂಭ್ರಮದ ಸಂದರ್ಭದಲ್ಲೂ ಕೆಲ ಕಡೆಯ ರೈತಾಪಿ ಜನರ ದಯನೀಯ ಸ್ಥಿತಿಯನ್ನು ಕಂಡು ಹೌಹಾರುವಂತಾಗಿದೆ. ದಕ್ಷಿಣ ಭಾಗದ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು ಮತ್ತು ಹಾಸನದ ಕೆಲ ಭಾಗ ಮಳೆಯಿಲ್ಲದೆ ತತ್ತರಿಸಿ ಹೋಗಿವೆ.

ಇಷ್ಟರಲ್ಲಿ ರಾಗಿ ಬೆಳೆ ಬಿತ್ತನೆ ಕಾರ್ಯ ನಡೆದು, ಕುಂಟೆ ಹೊಡೆಯುವ ಹಂತ ತಲುಪಬೇಕಿತ್ತು. ಕೆಲ ಕಡೆ ಒಂದೆರಡು ಬಾರಿ ಬಿದ್ದ ಸಣ್ಣ ಮಳೆಯಿಂದ ಅರ್ಧಂಬರ್ಧ ಬಿತ್ತನೆ ಕಾರ್ಯವಾಗಿದ್ದರೆ, ಮಿಕ್ಕ ಕಡೆ ಬಿತ್ತನೆಗಾಗಿ ರೈತರು ಕಾದು ಕುಳಿತಿರುವುದು ವಾಸ್ತವ ಸಂಗತಿ. ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳು ಕೂಡಾ ಇದೇ ಸ್ಥಿತಿಯನ್ನನುಭವಿಸುತ್ತಿವೆ.

ಕೇರಳ ಹಾಗೂ ಮಹಾರಾಷ್ಟ್ರ ಮತ್ತು ರಾಜ್ಯದ ಮಲೆನಾಡು, ಕೊಡಗು, ಕರಾವಳಿ ತೀರದ ಜಿಲ್ಲೆಗಳಲ್ಲಿ ಸತತವಾಗಿ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಪ್ರಮುಖ ಜಲಾಶಯಗಳನ್ನೆಲ್ಲಾ ತುಂಬಿಸುವ ಮೂಲಕ ಸರ್ಕಾರಕ್ಕೆ ನೆಮ್ಮದಿಯನ್ನು ತಂದುಕೊಟ್ಟಿರುವ ವರ್ಷಧಾರೆ ಅಲ್ಲೆಲ್ಲಾ ಜಲಮಯ ಮಾಡಿರುವುದು ವಿಶೇಷವಾದ ಸಂಗತಿಯಾಗಿದೆ. ಆದರೆ, ಅದೇ ವರ್ಷಧಾರೆಯ ತೀವ್ರ ಕೊರತೆಯಿಂದಾಗಿ ದಕ್ಷಿಣದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕಾರ್ಯವಿರಲಿ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರವುಂಟು ಮಾಡಿರುವುದು ವೈಪರೀತ್ಯವಾಗಿದೆ.

ಪ್ರತಿ ದಿನವೂ ಭಾರೀ ಮಳೆ, ಜಲಾಶಯಗಳಿಗೆ ಹೆಚ್ಚಿದ ಒಳಹರಿವು, ನದಿಗಳ ಪ್ರವಾಹ, ಜನಜೀವನ ಅಸ್ತವ್ಯಸ್ತ, ಶಾಲಾ-ಕಾಲೇಜುಗಳಿಗೆ ರಜೆ ಇಂತಹುದೇ ಸಂಗತಿಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿರುವ ಜನರಿಗೆ ಮಳೆಯೇ ಬೀಳದ, ಬಿತ್ತನೆ ಮಾಡಲಾಗದ, ಜಾನುವಾರುಗಳಿಗೆ ನೀರಿಲ್ಲದ ಜಿಲ್ಲೆಗಳ ಪರಿಸ್ಥಿತಿಯನ್ನು ಹೇಳಿದರೆ ನಂಬಲಿಕ್ಕಾಗದು. ಆದರೆ, ವರ್ಷಧಾರೆಯ ಇಂತಹ ಅಟ್ಟಹಾಸ ಮತ್ತು ತೀವ್ರ ಮಳೆ ಕೊರತೆಯ ವೈಪರೀತ್ಯಗಳ ಹಂತದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆಯಿಡಬೇಕಾಗಿತ್ತು. ಈ ಎರಡು ತಿಂಗಳ ಕಾಲವೂ ಸದನಗಳು ನಡೆಯುತ್ತಿದ್ದರೂ ಈ ಬರಪೀಡಿತ ಜಿಲ್ಲೆಗಳ ಬಗ್ಗೆ ಕಿಂಚಿತ್ ಕಾಳಜಿಯನ್ನೂ ತಾಳದಿದ್ದುದು ವಿಷಾದದ ಸಂಗತಿ.

ಕಳೆದ ವರ್ಷ ಪೂರ್ತಿ ಮಳೆಗಾಲ ಮುಗಿದಾಗಲೂ ಕೆಆರ್ಎಸ್ 110 ಅಡಿಯನ್ನು ದಾಟಿ ಮುಂದಕ್ಕೆ ತುಂಬಿರಲಿಲ್ಲ. ಹೇಮಾವತಿ ಬಹುತೇಕ ತುಂಬಿದ್ದಾಗಲೂ ಅದರ ನೀರನ್ನು ಜೋಪಾನವಾಗಿ ತುಮಕೂರು ಜಿಲ್ಲೆಯ ಎಲ್ಲ ಕೆರೆ ಕಟ್ಟೆಗಳಿಗೆ ತುಂಬಿಸುವ ಜವಾಬ್ದಾರಿಯನ್ನು ಹೊರಲಾರದೆ ಸರ್ಕಾರ ರೈತರ ಕಣ್ಣಲ್ಲಿ ರಕ್ತ ಬಸಿಯುವಂತೆ ಮಾಡಿತು. ಅತ್ತ ಮಳೆಯೂ ಕೈ ಕೊಟ್ಟಿತು. ಇತ್ತ ನಾಲೆಗೆ ಹರಿಸಿದ ಹೇಮೆಯ ನೀರನ್ನು ರೈತರು ಅಳಿದುಳಿದ ಬೆಳೆಯನ್ನು ಕಾಪಾಡಲು ಗಾಳಿ ಪೈಪುಗಳ (ಏರ್ ಪೈಪ್) ಮೂಲಕ ಬೆಳೆಗೆ ಹರಿಸಿದ್ದನ್ನೇ ಅಪರಾಧವೆಂಬಂತೆ ಪರಿಗಣಿಸಿ, ಕೆರೆಗಳಿಗೆ ನೀರು ತುಂಬಿಸುವುದನ್ನೇ ನಿಲ್ಲಿಸಿಬಿಟ್ಟಿತು.

ಅದರ ಫಲವಾಗಿ ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳು ಬೆತ್ತಲಾಗಿಯೇ ಉಳಿದವು. ಕೆರೆಗಳ ಹಿಂದಿನ ಸಹಸ್ರಾರು ಎಕರೆ ಭೂಪ್ರದೇಶವು ದಾವಾಗ್ನಿಯ ಒಡಲಾಗಿ ಪರಿವರ್ತನೆಗೊಂಡಿತು. ಯಾರನ್ನೋ ಉದ್ಧಾರ ಮಾಡಲು ಕಾಯ್ದಿಟ್ಟುಕೊಂಡಂತಿದ್ದ ಸುಮಾರು 4-5 ಟಿಎಂಸಿ ಅಡಿಯಷ್ಟು ಹೇಮೆಯ ನೀರನ್ನು ತಮಿಳುನಾಡು ತಕರಾರು ಮಾಡಿದಾಗ ಕಳೆದ ಬೇಸಿಗೆಯಲ್ಲಿ ಕನ್ನಂಬಾಡಿಗೆ ಹರಿಸಿ, ಅಲ್ಲಿಂದ ತಮಿಳುನಾಡಿಗೆ ಹರಿಸಿ ಪಾವನಗೊಂಡಿತು. ಅಂತಹ ತ್ಯಾಗ ಬುದ್ಧಿಯನ್ನು ಕಂಡ ನಮ್ಮ ರೈತರು ಕಣ್ಣೀರುಗರೆದರು.

ಈ ಬಾರಿಯೂ ಅದನ್ನೇ ಮಾಡಲು ಸರ್ಕಾರ ಹೊರಟಂತಿದೆ. ಇದುವರೆಗಿನ ಅದರ ನಡೆಯನ್ನು ಗಮನಿಸಿದರೆ ಅದು ಖಾತರಿಯೆನಿಸುತ್ತದೆ. ಕಳೆದ ಬಾರಿ ತುಂಬದೇ ಹೋಗಿದ್ದ ಹೇಮೆ (2 ಅಡಿ ಬಾಕಿಯಿತ್ತು) ಈ ಬಾರಿ ಜುಲೈ ಅಂತ್ಯಕ್ಕೇ ತುಂಬಿ ಸಂಭ್ರಮಿಸಿದಳು. 2922 ಅಡಿ ತುಂಬುತ್ತಿದ್ದಂತೆಯೇ ಅಣೆಯ 4 ಕ್ರೆಸ್ಟ್ ಗೇಟ್ಗಳನ್ನು ತೆಗೆದು ಭೋರ್ಗರೆವ ನೀರನ್ನು ಹರಿಸಿದ್ದು ಎಲ್ಲಿಗೆ ಗೊತ್ತೆ? ಈಗಾಗಲೇ ತುಂಬಿ ತುಳುಕುತ್ತಿದ್ದ ಕೆಆರ್ಎಸ್ಗೆ.

ಹೇಮೆ ತುಂಬಿದ್ದಾಳೆ, ನಮ್ಮ ಬರಿದಾದ ಕೆರೆ ಕಟ್ಟೆಗಳಿಗೆ ಈ ಕೂಡಲೇ ನೀರು ಹರಿಸುತ್ತಾರೆಂದು ಬಿಟ್ಟ ಕಣ್ಣು ಬಿಟ್ಟಂತೆಯೇ ಕಾದ ತುಮಕೂರು ಜಿಲ್ಲೆಯ ರೈತರಿಗೆ ಆಘಾತವೇ ಕಾದಿತ್ತು. ಈಗಾಗಲೇ ಒಂದೊಂದೇ ಅಡಿ ನೀರು ಹೇಮೆಯಲ್ಲಿ ಇಳಿಯುತ್ತಿದೆ. ಈ ಹೊತ್ತಿಗೂ ನಾಲೆಗಳ ಮೂಲಕ ತುಮಕೂರು ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ಹರಿಸುವ ಮನಸ್ಸೇ ಮಾಡದಿರುವುದಕ್ಕೆ ಯಾವ ಮಹತ್ತರ ಕಾರಣವಿದೆಯೋ, ತಿಳಿಯದು. ಇಂತಹುದೇ ತಿಂಗಳಲ್ಲಿ ನೀರು ಹರಿಕೆ ಪ್ರಾರಂಭಿಸಬೇಕೆಂದು ಅಧಿಕಾರಶಾಹಿ ಹಾಕಿಕೊಂಡಿರುವ ವೇಳಾಪಟ್ಟಿಯ ಪಿತೂರಿ ಇದರ ಹಿಂದಿರಬಹುದೆ?

ಈಗಷ್ಟೇ ಆಗಸ್ಟ್ ಆರಂಭವಾಗಿದೆ. ಅಣೆಗೆ ಸೆಪ್ಟೆಂಬರ್ ಅಂತ್ಯದವರೆಗೆ ಒಳಹರಿವಿನ ನೀರು ಬರುತ್ತಲೇ ಇರುತ್ತದೆ. ಅಷ್ಟರಲ್ಲಿ ಈ ಕೆರೆಕಟ್ಟೆಗಳನ್ನೆಲ್ಲಾ ತುಂಬಿಸಿದ್ದರೆ ಬಯಲುಸೀಮೆಯ ರೈತರ ಮೊಗದಲ್ಲಿ ಒಂದಿಷ್ಟು ಮಿಂಚುನಗು ಸುಳಿದಾಡಲು ಸಾಧ್ಯವಿತ್ತು. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ತನ್ನ ತರವಲ್ಲದ ನಡೆಯನ್ನು ತಿದ್ದಿಕೊಳ್ಳಬೇಕಿದೆ. ತಕ್ಷಣವೇ ಮಂಡ್ಯ ಜಿಲ್ಲೆಯ ಕೆಲ ಭಾಗದ, ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳಿಗೆ ಹೇಮೆಯ ನೀರನ್ನು ಹರಿಸಬೇಕಿದೆ. ಇಲ್ಲದಿದ್ದರೆ ಮಳೆಯಿಲ್ಲದೆ ತತ್ತರಿಸಿರುವ ಬಯಲುನಾಡಿನ ರೈತರ ಕಣ್ಣೀರು ಬೆಂಕಿಯುಂಡೆಯಾಗಿ ಪರಿವರ್ತನೆಗೊಂಡರೂ ಸೋಜಿಗವಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.